ಗೋವು ಕೇವಲ ಧಾರ್ಮಿಕ ಪ್ರಾಣಿಯಲ್ಲ, ಭಾರತದ ಕೃಷಿ ಆರ್ಥಿಕತೆಯ ಅವಿಭಾಜ್ಯ ಅಂಗ. ಗೋಹತ್ಯೆ ಪ್ರಕರಣದಲ್ಲಿ ಆರೋಪಿಗಳ ನಿರೀಕ್ಷಣಾ ಜಾಮೀನು ರದ್ದುಗೊಳಿಸಿದ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್, ಬಹುಸಂಖ್ಯಾತರ ನಂಬಿಕೆಗೆ ಧಕ್ಕೆಯಾದಾಗ ಶಾಂತಿಗೆ ಧಕ್ಕೆ ಎಂದು ಅಭಿಪ್ರಾಯಪಟ್ಟಿದೆ.
ಚಂಡೀಗಢ (ಆ.27): ಭಾರತೀಯ ಸಮಾಜದಲ್ಲಿ ಗೋವಿಗೆ ವಿಶಿಷ್ಟ ಸ್ಥಾನಮಾನವಿದೆ. ಗೋವು ಭಾವನಾತ್ಮಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನೂ ಹೊಂದಿದೆ. ಕೆಲವು ಕೃತ್ಯಗಳು ಬಹುಸಂಖ್ಯಾತರ ನಂಬಿಕೆಗಳನ್ನು ಕೆರಳಿಸಿದಾಗ ಶಾಂತಿಯ ಮೇಲೆ ತೀವ್ರ ಪರಿಣಾಮ ಉಂಟಾಗುತ್ತದೆ ಎಂದು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ವಧೆಗಾಗಿ ರಾಜಸ್ಥಾನಕ್ಕೆ ಗೋವುಗಳನ್ನು ಸಾಗಿಸಿದ ಆರೋಪದ ಮೇಲೆ ನೂಹ್ ನಿವಾಸಿ ಆಸಿಫ್ ಹಾಗೂ ಇತರ ಇಬ್ಬರ ಮೇಲೆ ಪ್ರಕರಣ ದಾಖಲಾಗಿತ್ತು. ಅವರಿಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನನ್ನು ವಜಾಗೊಳಿಸಿದ ಪೀಠ ಈ ರೀತಿ ಅಭಿಪ್ರಾಯಪಟ್ಟಿದೆ.
‘ಗೋವು ಕೇವಲ ಧಾರ್ಮಿಕ ಪ್ರಾಣಿಯಲ್ಲ, ಬದಲಾಗಿ ಭಾರತದ ಕೃಷಿ ಆರ್ಥಿಕತೆಯ ಅವಿಭಾಜ್ಯ ಅಂಗವಾಗಿದೆ. ಭಾರತೀಯ ಸಮಾಜದಲ್ಲಿ ಹಸುವಿಗೆ ಇರುವ ವಿಶಿಷ್ಟ ಸ್ಥಾನಮಾನವನ್ನು ಗಮನಿಸಿದರೆ, ಪ್ರಸ್ತುತ ಅಪರಾಧವು ಅದರ ಕಾನೂನು ಪರಿಣಾಮಗಳ ಜೊತೆಗೆ, ಭಾವನಾತ್ಮಕ ಮತ್ತು ಸಾಂಸ್ಕೃತಿಕ ಅಂಶಗಳನ್ನೂ ಹೊಂದಿದೆ. ನಮ್ಮಂತಹ ಬಹುತ್ವ ಸಮಾಜದಲ್ಲಿ, ಕೆಲವು ಕೃತ್ಯಗಳು ಖಾಸಗಿಯಾಗಿದ್ದರೂ, ಗಮನಾರ್ಹ ಜನಸಂಖ್ಯೆಯುಳ್ಳ ಸಮಾಜದ ಆಳವಾದ ನಂಬಿಕೆಗಳನ್ನು ಕೆರಳಿಸಿದಾಗ ಸಾರ್ವಜನಿಕ ಶಾಂತಿಯ ಮೇಲೆ ತೀವ್ರ ಪರಿಣಾಮಗಳನ್ನು ಬೀರಬಹುದು. ಸಂವಿಧಾನವು ಕೇವಲ ಅಮೂರ್ತ ಹಕ್ಕುಗಳನ್ನು ರಕ್ಷಿಸುವುದಿಲ್ಲ, ಬದಲಾಗಿ ನ್ಯಾಯಯುತ, ಸಹಾನುಭೂತಿಯುಳ್ಳ ಮತ್ತು ಒಗ್ಗಟ್ಟಿನ ಸಮಾಜವನ್ನು ನಿರ್ಮಿಸಲು ಪ್ರಯತ್ನಿಸುತ್ತದೆ’ ಎಂದು ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
