ಪ್ರಧಾನಿ ಅಥವಾ ಮುಖ್ಯಮಂತ್ರಿಯಾದವರು ಜೈಲಿನಿಂದಲೇ ಅಧಿಕಾರ ನಡೆಸಬೇಕೇ? ಬೇಡವೇ ಎಂಬುದರ ಬಗ್ಗೆ ದೇಶದ ಜನತೆ ತೀರ್ಮಾನಿಸಬೇಕಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ನವದೆಹಲಿ: ಪ್ರಧಾನಿ ಅಥವಾ ಮುಖ್ಯಮಂತ್ರಿಯಾದವರು ಜೈಲಿನಿಂದಲೇ ಅಧಿಕಾರ ನಡೆಸಬೇಕೇ? ಬೇಡವೇ ಎಂಬುದರ ಬಗ್ಗೆ ದೇಶದ ಜನತೆ ತೀರ್ಮಾನಿಸಬೇಕಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ಬುಧವಾರ ಲೋಕಸಭೆಯಲ್ಲಿ ಮಸೂದೆ ಮಂಡಿಸಿದ ಮಾತನಾಡಿದ ಶಾ, ‘ಒಂದೆಡೆ ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ತಾವೇ ಕಾನೂನಿನ ವ್ಯಾಪ್ತಿಯೊಳಗೆ ತರಲು ಸಾಂವಿಧಾನಿಕ ತಿದ್ದುಪಡಿ ಕಾಯ್ದೆಗೆ ಜಾರಿಗೆ ಮುಂದಾಗಿದ್ದರೆ, ಮತ್ತೊಂದೆಡೆ ವಿಪಕ್ಷಗಳು ಒಂದಾಗಿ ಕಾನೂನಿನ ವ್ಯಾಪ್ತಿಯಿಂದ ತಮ್ಮನ್ನು ತಾವು ಹೊರಗಿಡುವ ಬಗ್ಗೆ ಹೋರಾಟ ಮಾಡುತ್ತಿದ್ದಾರೆ. ಈ ಮೂಲಕ ಜೈಲಿನಿಂದಲೇ ಅಧಿಕಾರ ನಡೆಸುವ ಮತ್ತು ಅಧಿಕಾರದ ಕುರ್ಚಿಗೇ ಅಂಟಿಕೊಂಡಿರುವ ನಿಲವು ಪ್ರದರ್ಶಿಸುತ್ತಿದ್ದಾರ ಎಂದು ಕಿಡಿಕಾರಿದ್ದಾರೆ.

ರಾಜಕೀಯ ಭ್ರಷ್ಟಾಚಾರ ನಿರ್ಮೂಲನೆ ಕುರಿತಾದ ಮೋದಿ ಸರ್ಕಾರದ ಬದ್ಧತೆ, ಸಾರ್ವಜನಿಕ ಜೀವನದಲ್ಲಿ ಕುಸಿಯುತ್ತಿರುವ ನೈತಿಕತೆ ಗುಣಮಟ್ಟವನ್ನು ಮತ್ತೆ ಹೆಚ್ಚಿಸುವ ಮತ್ತು ರಾಜಕೀಯದಲ್ಲಿ ಸಮಗ್ರತೆ ಕಾಪಾಡುವ ಉದ್ದೇಶವು ಇಂಥದ್ದೊಂದು ಕಾಯ್ದೆ ಜಾರಿಗೆ ಕಾರಣವಾಗಿದೆ ಎಂದು ಶಾ ಹೇಳಿದ್ದಾರೆ.

ನಮ್ಮ ಸಂವಿಧಾನ ರಚನೆಕಾರರು ಕಾನೂನು ರೂಪಿಸುವಾಗ ದೇಶದ ರಾಜಕೀಯ ಈ ಮಟ್ಟಕ್ಕೆ ಕುಸಿಯುತ್ತದೆ ಎಂದು ಭಾವಿಸಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿಗಳು, ಸಚಿವರು ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಸೇರಿದರೂ ರಾಜೀನಾಮೆ ನೀಡದೆ ಅಲ್ಲಿಂದಲೇ ಅನೈತಿಕವಾಗಿ ಅಧಿಕಾರ ನಡೆಸುವ ಘಟನೆಗಳು ನಡೆದಿವೆ. ಹೀಗಾಗಿ ಇಂಥದ್ದೊಂದು ಕಾನೂನು ರೂಪಿಸಲಾಗಿದೆ ಎಂದರು.

ಈ ಹಿಂದೆ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ವೇಳೆ ಸಂವಿಧಾನಕ್ಕೆ ತಿದ್ದುಪಡಿ ತಂದು ತಮ್ಮ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳದಂತೆ ಕಾಯ್ದೆ ರೂಪಿಸಿದ್ದರು. ಆದರೆ ಬಿಜೆಪಿಯಲ್ಲಿ ಅಂಥದಕ್ಕೆ ಅವಕಾಶವಿಲ್ಲ. ಎಲ್‌.ಕೆ.ಅಡ್ವಾಣಿ ತಮ್ಮ ಮೇಲೆ ಆರೋಪ ಕೇಳಿಬರುತ್ತಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನನ್ನ ವಿರುದ್ಧ ಸುಳ್ಳು ಕೇಸು ದಾಖಲಿಸಿದಾಗ ನನ್ನ ಬಂಧನಕ್ಕೂ ಮೊದಲೇ ನಾನು ರಾಜೀನಾಮೆ ನೀಡಿದ್ದೆ ಎಂದು ಅಮಿತ್‌ ಶಾ, ಕಾಂಗ್ರೆಸ್‌ಗೆ ತಿರುಗೇಟು ನೀಡಿದರು.

ಅಮಿತ್‌ ಶಾ- ವೇಣುಗೋಪಾಲ್‌ ಜಟಾಪಟಿ

ಚರ್ಚೆ ವೇಳೆ ಒಂದು ಹಂತದಲ್ಲಿ ವೇಣುಗೋಪಾಲ್‌ ಅವರು ಗುಜರಾತ್‌ ಗೃಹ ಸಚಿವರಾಗಿದ್ದಾಗ ಅಮಿತ್ ಶಾ ಅವರ ಬಂಧನ ವಿಚಾರ ಪ್ರಸ್ತಾಪಿಸಿದ್ದು, ರಾಜಕೀಯದಲ್ಲಿನ ನೈತಿಕತೆ ಕುರಿತ ಅವರ ವಾದವನ್ನು ಪ್ರಶ್ನಿಸಿದರು. ಈ ವೇಳೆ ತಿರುಗೇಟು ನೀಡಿದ ಶಾ, ನನ್ನ ಮೇಲೆ ಸುಳ್ಳು ಆರೋಪದಲ್ಲಿ ಸಿಲುಕಿಸಲಾಗಿತ್ತು. ಆದರೂ ಬಂಧನಕ್ಕೂ ಮೊದಲು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ನ್ಯಾಯಾಲಯ ನನ್ನನ್ನು ನಿರ್ದೋಷಿ ಎಂದು ಘೋಷಿಸಿದ ಬಳಿಕವಷ್ಟೇ ಮತ್ತೆ ವಾಪಸ್‌ ಆ ಹುದ್ದೆ ಅಲಂಕರಿಸಿದೆ. ಗಂಭೀರ ಅಪರಾಧಗಳನ್ನು ಎದುರಿಸುತ್ತಿರುವಾಗ ನಾವು ಸಾಂವಿಧಾನಿಕ ಹುದ್ದೆಗಳಲ್ಲಿ ಮುಂದುವರಿಯುವಷ್ಟು ನಾಚಿಗೆಗೇಡು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದರು.

ಸದನದ ಬಾವಿಯಲ್ಲಿ ಉದ್ವಿಗ್ನ ಸ್ಥಿತಿ

ಅಮಿತ್‌ ಶಾ ಸದನದಲ್ಲಿ ವಿಧೇಯಕ ಮಂಡಿಸುತ್ತಿದ್ದ ಟಿಎಂಸಿಯ ಕಲ್ಯಾಣ್‌ ಬ್ಯಾನರ್ಜಿ, ಸದನದ ಭಾವಿಗೆ ಧುಮುಕಿ ವಿಧೇಯಕದ ಪ್ರತಿಗಳನ್ನು ಹರಿದು ಎಸೆದರು. ಜೊತೆಗೆ ಅಮಿತ್‌ ಶಾ ಅವರ ಮುಂದಿದ್ದ ಮೈ ತಿರುಗಿಸಿ ಅದರ ಮೂಲಕ ಮಾತನಾಡಲು ಮುಂದಾದರು. ಈ ವೇಳೆ ಅವರೊಂದಿಗೆ ವಿಪಕ್ಷಗಳ ಇನ್ನಷ್ಟು ಸದಸ್ಯರು ಸೇರಿಕೊಂಡು ವಿಧೇಯಕದ ಪ್ರತಿ ಹರಿದು ಘೋಷಣೆ ಕೂಗಲು ಆರಂಭಿಸಿದರು. ಈ ವೇಳೆ ಸಚಿವ ಕಿರಣ್‌ ರಿಜಿಜು, ಬಿಜೆಪಿ ಸದಸ್ಯ ರವನೀತ್‌ ಸಿಂಗ್‌ ಶಾ ಮುಂದೆ ಧಾವಿಸಿ, ವಿಪಕ್ಷ ಸದಸ್ಯರಿಗೆ ಹಿಂದೆ ಸರಿಯುವಂತೆ ಎಚ್ಚರಿಸಿದರು. ಈ ವೇಳೆ ಉಭಯ ಬಣಗಳ ನಡುವೆ ಮಾತಿನ ಚಕಮಕಿ ನಡೆದು ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.