ಪಕ್ಷ ವಿರೋಧಿ ಚಟುವಟಿಕೆಗಳಿಂದ ಅಮಾನತಾದ ಬಳಿಕ ಕವಿತಾ ಬಿಆರ್‌ಎಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ಸೋದರ ಸಂಬಂಧಿಗಳ ವಿರುದ್ಧ ಆರೋಪ ಮಾಡಿದ್ದಾರೆ.
ಹೈದರಾಬಾದ್: ಪಕ್ಷವಿರೋಧಿ ಚಟುವಟಿಗೆಗಳ ಕಾರಣದಿಂದ ಅಮಾನತಾದ ಬೆನ್ನಲ್ಲೇ, ಕೆ. ಕವಿತಾ ಅವರು ಬಿಆರ್‌ಎಸ್ ಪಕ್ಷ ಹಾಗೂ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಕವಿತಾ, ‘ನಾನು ಯಾವ ಹುದ್ದೆಯನ್ನೂ ಬಯಸಿಲ್ಲ. ವಿಧಾನ ಪರಿಷತ್ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವ ತೊರೆಯುತ್ತಿದ್ದು, ರಾಜೀನಾಮೆ ಪತ್ರ ಕಳಿಸುವೆ’ ಎಂದು ಹೇಳಿದರು. ಜತೆಗೆ, ‘ನನ್ನ ವಿರುದ್ಧ ಅಮಾನತು ಕ್ರಮಕ್ಕೆ ನನ್ನ ತಂದೆ ಮೇಲೆ ಒತ್ತಡವಿತ್ತು. ಹಾಗೆಂದು ನಾನು ಬೇರಾವ ಪಕ್ಷವನ್ನೂ ಸೇರುವುದಿಲ್ಲ. ಬೆಂಬಲಿಗರೊಂದಿಗೆ ಚರ್ಚಿಸಿ ಮುಂದಿನ ನಡೆಯನ್ನು ನಿರ್ಧರಿಸುವೆ’ ಎಂದೂ ಕವಿತಾ ಹೇಳಿದ್ದಾರೆ.
ಇದೇ ವೇಳೆ, ತಮ್ಮ ಸೋದರ ಸಂಬಂಧಿಗಳ ವಿರುದ್ಧ ಮತ್ತೆ ಆರೋಪ ಮಾಡಿದ ಕವಿತಾ, ‘ಸಿಎಂ ರೇವಂತ್ ರೆಡ್ಡಿ ಜತೆ ಸೇರಿಕೊಂಡು ಹರೀಶ್ ರಾವ್, ಕೆಸಿಆರ್ ಪರಿವಾರದ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ. ಅವರ ಬಗ್ಗೆ ಪಕ್ಷದ ಕಾರ್ಯಕಾರಿ ಅಧ್ಯಕ್ಷರೂ ಆಗಿರುವ ಸಹೋದರ ಕೆ.ಟಿ. ರಾಮರಾವ್ ಎಚ್ಚರಿಕೆಯಿಂದಿರಬೇಕು. ನನ್ನ ವಿರುದ್ಧ ದುರುದ್ದೇಶಪೂರಿತ ಅಭಿಯಾನ ನಡೆದಾಗ ಒಡಹುಟ್ಟಿದವರು ನನ್ನ ಬೆಂಬಲಕ್ಕೆ ನಿಂತಿರಲಿಲ್ಲ’ ಎಂದು ಹೇಳಿದ್ದಾರೆ.
ಹರೀಶ್ ಕಟ್ಟಪ್ಪನಂತೆ ನಿಷ್ಠ
‘ಹರೀಶ್ ಕೆಸಿಆರ್ ಅವರಿಗೆ ಬಾಹುಬಲಿಯ ಕಟ್ಟಪ್ಪನಂತೆ ನಿಷ್ಠರಾಗಿದ್ದರು. 2018ರ ವಿಧಾನಸಭಾಚುನಾವಣೆಯಲ್ಲಿ 20-25 ಶಾಸಕರಿಗೆ ಹರೀಶ್ ರಾವ್ ಹೆಚ್ಚುವರಿ ಹಣ ನೀಡಿದ್ದರು. ಚುನಾವಣೆಯಲ್ಲಿ ಸ್ಪಷ್ಟ ಫಲಿತಾಂಶ ಬರದಿದ್ದರೆ ಆ ಎಲ್ಲಾ ಶಾಸಕರನ್ನು ತಮ್ಮ ಕಡೆ ಇಟ್ಟುಕೊಳ್ಳುವ ಸಂಚು ಅವರದ್ದಾಗಿತ್ತು. ಆದರೆ ಅಷ್ಟು ಹಣ ಅವರ ಬಳಿ ಹೇಗೆ ಬಂತು? ಕಾಳೇಶ್ವರಂ ಯೋಜನೆಯಲ್ಲಿನ ಅಕ್ರಮದಿಂದಲೇ ಈ ಹಣ ದೊರಕಿರುವುದು ಖಚಿತ’ ಎಂದು ಕವಿತಾ ಹೇಳಿದ್ದಾರೆ.
ತಂದೆ, ಸೋದರಗೆ ಸವಾಲ್
2009ರ ಚುನಾವಣೆಯಲ್ಲಿ ಸಿರ್ಸಿಲ್ಲಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೆ.ಟಿ. ರಾಮರಾವ್ ಅವರನ್ನು ಸೋಲಿಸಲು ಕೂಡ ಹರೀಶ್ ರಾವ್ ಹಣ ನೀಡಿದ್ದರು. ಈಗಲೂ ಚಂದ್ರಶೇಖರ್ ರಾವ್ ವಿರುದ್ಧ ಸಿಬಿಐ ತನಿಖೆಗೆ ಆದೇಶವಾಗಿರುವುದರ ಹಿಂದೆ ಹರೀಶ್ ರಾವ್ ಮತ್ತು ಸಂತೋಷ್ ರಾವ್ ಎಸಗಿದ ಭ್ರಷ್ಟಾಚಾರವೇ ಕಾರಣ. ಇಂತಹ ಜನರಿದ್ದರೆ ಪಕ್ಷ ಒಳ್ಳೆಯ ಸ್ಥಾನದಲ್ಲಿರಲು ಸಾಧ್ಯವೇ? ಸತ್ಯ ಹೇಳಿದ್ದಕ್ಕಾಗಿ ನನ್ನನ್ನು ಹೊರಹಾಕಿದ್ದೀರಲ್ಲ’ ಎಂದು ತಮ್ಮ ತಂದೆ ಹಾಗೂ ಸಹೋದರರಿಗೆ ಸವಾಲು ಹಾಕಿದ್ದಾರೆ.
ಇದನ್ನೂ ಓದಿ: ವಿಮಾನದಲ್ಲಿ ಬಂದ ತನ್ನ ಪೋಷಕರಿಗೆ ಪೈಲಟ್ ಮಗಳ ಭಾವುಕ ಸ್ವಾಗತ : ಹೆಮ್ಮೆಯಿಂದ ಎದೆಯುಬ್ಬಿಸಿದ ಅಪ್ಪ..!
ಅಣ್ಣಾ, ಅಪ್ಪಾ ಹುಶಾರಾಗಿರಿ
ಹರೀಶ್ ಮತ್ತು ಸಂತೋಷ್ ನಂಬಿಕೆಗೆ ಯೋಗ್ಯರಲ್ಲ ಎಂದು ತಮ್ಮ ಸಹೋದರ ಕೆ.ಟಿ. ರಾಮರಾವ್ ಅವರಿಗೆ ಎಚ್ಚರಿಸಿರುವ ಕವಿತಾ, ‘ಅವರಿಬ್ಬರೂ ಇಂದು ಒಳ್ಳೆಯವರಂತೆ ನಟಿಸಬಹುದು. ಆದರೆ ಅವರೆಂದೂ ನಮ್ಮ ಅಥವಾ ತೆಲಂಗಾಣ ಜನತೆಯ ಹಿತೈಶಿಗಳಲ್ಲ. ಅವರನ್ನು ಆದಷ್ಟು ದೂರವಿಟ್ಟು ಆಂದೋಲನಗಳನ್ನು ಸಂಘಟಿಸಲು ಬಿಆರ್‌ಎಸ್‌ನ ಕಾರ್ಯಕರ್ತರನ್ನು ಒಟ್ಟುಗೂಡಿಸಿ, ತಂದೆಯವರ ಗೌರವಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳಿ’ ಎಂದಿದ್ದಾರೆ.
- ಸತ್ಯ ಹೇಳಿದ್ದಕ್ಕೆ ನನ್ನನ್ನು ಪಕ್ಷದಿಂದ ಹೊರ ಹಾಕಿದರು
- ಕೆಸಿಆರ್ ವಿರುದ್ಧಸಿಎಂ ರೇವಂತ್ - ಹರೀಶ್ ಪಿತೂರಿ
- 2018, 2009 ಚುನಾವಣೆಯಲ್ಲಿ ಹರೀಶ್ ರಾವ್ ಅಕ್ರಮ
- ಕೆಸಿಆರ್ ವಿರುದ್ಧದ ತನಿಖೆಗೆ ಅವರ ಅಕ್ರಮವೇ ಕಾರಣ
- ಬೇರೆ ಪಕ್ಷ ಸೇರೋದಿಲ್ಲ, ಮುಂದಿನ ನಡೆ ನಿರ್ಧಾರವಾಗಿಲ್ಲ
