ಬಿಹಾರ ಚನಾವಣೆಗೆ ಬಿಜೆಪಿ-ಜೆಡಿಯು ಸೀಟು ಹಂಚಿಕೆ ಫೈನಲ್, ಇಬ್ಬರಿಗೂ ತಲಾ 101 ಕ್ಷೇತ್ರ ನೀಡಲಾಗಿದೆ. ಇನ್ನು ಚಿರಾಗ್ ಪಾಸ್ವಾನ್ ಎಲ್‌ಜೆಪಿಗೆ 29 ಸ್ಥಾನ ನೀಡಲಾಗಿದೆ. ಎನ್‌ಡಿಎ ಮೈತ್ರಿಕೂಟದಲ್ಲಿ ಯಾರಿಗೆ ಎಷ್ಟು ಸೀಟು?
ದೆಹಲಿ (ಅ.12) ಹಗ್ಗಜಗ್ಗಾಟಕ್ಕೆ ಕಾರಣವಾಗಿದ್ದ ಎನ್‌ಡಿಎ,ಜೆಡಿಯು ಹಾಗೂ ಎಲ್‌ಜೆಪಿ ಬಿಹಾರ ಚುನಾವಣೆಯ ಸೀಟು ಹಂಚಿಕೆ ಮಾತುಕತೆ ಕೊನೆಗೆ ಸುಖಾಂತ್ಯಗೊಂಡಿದೆ. ಹಲವು ಸುತ್ತಿನ ಮಾತುಕತೆ ಬಳಿಕ ಆಡಳಿತರೂಢ ಬಿಜೆಪಿ ಹಾಗೂ ಜೆಡಿಯು ಮೈತ್ರಿ ತಲಾ 101 ಸ್ಥಾನ ಹಂಚಿಕೆ ಮಾಡಿದೆ. ಬಿಜೆಪಿಗೆ 101 ಹಾಗೂ ನಿತೀಶ್ ಕುಮಾರ್ ಜೆಡಿಯುಗೆ 101 ಸ್ಥಾನ ನೀಡಲಾಗಿದೆ. ಮೈತ್ರಿ ಪಕ್ಷವಾಗಿರು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿಗೆ 29 ಸ್ಥಾನ ನೀಡಲಾಗಿದೆ. ಇನ್ನು ಎನ್‌ಡಿಎ ಮಿತ್ರಿ ಪಕ್ಷಗಳಾಗಿರುವ ರಾಷ್ಟ್ರೀಯ ಲೋಕ ಮೋರ್ಚಾ ಹಾಗೂ ಹಿಂದುಸ್ತಾನಿ ಅವಾಮ್ ಮೋರ್ಚಾ ಪಕ್ಷಗಳಿಗೆ ತಲಾ 6 ಸೀಟು ನೀಡಲಾಗಿದೆ.
ಬಿಹಾರ ಚುನಾವಣೆಗೆ ಎನ್‌ಡಿಎ ಮೈತ್ರಿಕೂಟದ ಸೀಟು ಹಂಚಿಕೆ
ಬಿಜೆಪಿ : 101
ಜೆಡಿಯು: 101
ಎಲ್‌ಜೆಪಿ: 29
ರಾಷ್ಟ್ರೀಯ ಲೋಕ ಮೋರ್ಚಾ: 06
ಹಿಂದುಸ್ತಾನಿ ಅಮಾಮ್ ಮೋರ್ಚಾ: 06
ಮೈತ್ರಿ ಸಭೆಯಲ್ಲಿ ಭಾರಿ ಚರ್ಚೆ ಬಳಿಕ ಎಲ್ಲಾ ಮೈತ್ರಿ ಪಕ್ಷಗಳು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಸೀಟು ಹಂಚಿಕೆಯಲ್ಲಿ ಎನ್‌ಡಿಎ ಮೈತ್ರಿ ಪಕ್ಷಗಳ ಬಿಗಿ ಪಟ್ಟು ಹೆಚ್ಚಾಗುತ್ತಿದ್ದಂತೆ ಹೊಸ ಸೂತ್ರವನ್ನು ಬಿಜೆಪಿ ಮುಂದಿಟ್ಟಿತ್ತು. ಈ ಸೂತ್ರಕ್ಕೆ ಪಕ್ಷಗಳು ಸಮ್ಮತಿ ಸೂಚಿಸಿದೆ. ದೆಹಲಿಯಲ್ಲಿ ನಡೆದ ಈ ಸಭೆಯ ಯಶಸ್ವಿಯಾಗಿದ್ದು, ಎಲ್ಲಾ ಪಕ್ಷಗಳು ಒಗ್ಗಟ್ಟಾಗಿ ಚುನಾವಣೆ ಎದುರಿಸುವ ಮಂತ್ರ ಪಠಿಸಿದೆ.
ಕೇಂದ್ರ ಚುನಾವಣಾ ಸಮಿತಿ ಸಭೆ
ದೆಹಲಿಯಲ್ಲಿ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಸೀಟು ಹಂಚಿಕೆ ಫೈನಲ್ ಆಗಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವಾ ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಹಲವು ಪ್ರಮುಖರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ಆಡಳಿತ ವಿರೋಧಿ ಅಲೆ ಚಿಂತೆ
ಬಿಜೆಪಿ ಮೈತ್ರಿಯ ನಿತೀಶ್ ಕುಮಾರ್ ಸರ್ಕಾರ ಭಾರಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ. ಕಾಂಗ್ರೆಸ್ ಹಾಗೂ ಇಂಡಿಯಾ ಮೈತ್ರಿಕೂಟ ನಿತೀಶ್ ಕುಮಾರ್ ಮೇಲೆ ಹಲವು ಆರೋಪ ಮಾಡಿದೆ. ಪ್ರಮುಖವಾಗಿ ಬಿಹಾರದ ವೋಟಿಂಗ್ ಲಿಸ್ಟ್ ಪರಿಷ್ಕರಣೆಯಿಂದ ಹಿಡಿದು, ನಿರುದ್ಯೋಗ, ಕಳಪೆ ಅಭಿವೃದ್ಧಿ ಕಾಮಗಾರಿಗೆ ಸೇರಿದಂತೆ ಹಲವು ಆರೋಪ ಮಾಡಿದ್ದಾರೆ.
ಬಿಹಾರ ಚುನಾವಣೆ
ಬಿಹಾರ ಚನಾವಣಾ ಮತದಾನ ಎರಡು ಹಂತದಲ್ಲಿ ನಡೆಯಲಿದೆ ಮೊದಲ ನವೆಂಬರ್ 6ರಂದು ನಡೆಯಲಿದೆ. ಇನ್ನು ಎರಡನೇ ಹಂತ ನವೆಂಬರ್ 11ಕ್ಕೆ ನಡೆಯಲಿದೆ. ನವೆಂಬರ್ 14ರಂದು ಫಲಿತಾಂಶ ಘೋಷಣೆಯಾಗಲಿದೆ.
