ಗೂಗಲ್‌ನ 1.3 ಲಕ್ಷ ಕೋಟಿ ರು. ಮೌಲ್ಯದ ಡೇಟಾ ಹಾಗೂ ಎಐ ಹಬ್‌ ಆಂಧ್ರಪ್ರದೇಶದ ಪಾಲಾಗಿದೆ. ಈ ಬಗ್ಗೆ ಮಾತನಾಡಿದ ಪಳನಿಸ್ವಾಮಿ ಹಾಗೂ ಉದಯಕುಮಾರ್, ‘ಗೂಗಲ್‌ನ ಸಿಇಒ ಸುಂದರ್‌ ಪಿಚೈ ಅವರು ತಮಿಳುನಾಡಿನ ಮದುರೈನರಾದರೂ ಹೂಡಿಕೆಗೆ ಆಂಧ್ರವನ್ನು ಆರಿಸಿಕೊಂಡರು ಎಂದಿದ್ದಾರೆ.

ಅಮರಾವತಿ : ಹೂಡಿಕೆ ವಿಚಾರದಲ್ಲಿ ಈಗ ಕರ್ನಾಟಕದ ಬಳಿಕ ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ನಡುವೆ ವಾಕ್ಸಮರ ಆರಂಭವಾಗಿದೆ.

ಗೂಗಲ್‌ನ 1.3 ಲಕ್ಷ ಕೋಟಿ ರು. ಮೌಲ್ಯದ ಡೇಟಾ ಹಾಗೂ ಎಐ ಹಬ್‌ ಆಂಧ್ರಪ್ರದೇಶದ ಪಾಲಾಗಿದೆ. ಈ ಬಗ್ಗೆ ಮಾತನಾಡಿದ ಅಣ್ಣಾಡಿಎಂಕೆ ನೇತಾರರಾದ ಎಡಪ್ಪಾಡಿ ಪಳನಿಸ್ವಾಮಿ ಹಾಗೂ ಉದಯಕುಮಾರ್, ‘ಗೂಗಲ್‌ನ ಸಿಇಒ ಸುಂದರ್‌ ಪಿಚೈ ಅವರು ತಮಿಳುನಾಡಿನ ಮದುರೈನರಾದರೂ ಹೂಡಿಕೆಗೆ ಆಂಧ್ರವನ್ನು ಆರಿಸಿಕೊಂಡರು. ಅವರನ್ನು ಆಕರ್ಷಿಸಲು ಸಿಎಂ ಸ್ಟಾಲಿನ್‌ ವಿಫಲರಾದರು. ಇದು ಡಿಎಂಕೆ ಸರ್ಕಾರದ ವೈಫಲ್ಯ’ ಎಂದಿದ್ದಾರೆ.

ಇದಕ್ಕೆ, ಗೂಗಲ್‌ ಅನ್ನು ಆಂಧ್ರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಆಂಧ್ರ ಸಚಿವ ನಾರಾ ಲೋಕೇಶ್‌ ಮಾರ್ಮಿಕವಾಗಿ ಪ್ರತಿಕ್ರಿಯಿಸಿ, ‘ಅವರು (ಪಿಚೈ) ಭಾರತವನ್ನು ಆರಿಸಿಕೊಂಡರು’ ಎಂದು ತಿರುಗೇಟು ನೀಡಿದ್ದಾರೆ.

ಈ ಮುನ್ನ ನಾರಾ ಹಾಗೂ ಕರ್ನಾಟಕ ಐಟಿ ಸಚಿವ ಪ್ರಿಯಾಂಕ್‌ ಖರ್ಗೆ ನಡುವೆ ಇದೇ ವಿಷಯಕ್ಕೆ ಸಂಬಂಧಿಸಿ ವಾಕ್ಸಮರ ನಡೆದಿತ್ತು.