ಆಂಧ್ರಪ್ರದೇಶದ ಪಾಲ್ನಾಡುವಿನ ಸರ್ಕಾರಿ ಕಾಲೇಜು ಹಾಸ್ಟೆಲ್‌ನಲ್ಲಿ ಸೀನಿಯರ್ ವಿದ್ಯಾರ್ಥಿಗಳು ಜೂನಿಯರ್ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಐವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಹುತೇಕ ಮಕ್ಕಳನ್ನು ಪೋಷಕರೇ ಓದಿಸ್ತಿರ್ತಾರೆ. ಮಕ್ಕಳದ್ದು ಅಂತ ಸ್ವಂತ ದುಡಿಮೆ ಬಹುತೇಕ ಮಕ್ಕಳಿಗೆ ಇರುವುದಿಲ್ಲ, ಬಹುತೇಕ ಮಕ್ಕಳು ಪೋಷಕರ ಹಣದಲ್ಲೇ ಓದುತ್ತಿರುತ್ತಾರೆ. ಮಕ್ಕಳ ಶಿಕ್ಷಣಕ್ಕಾಗಿ ಪೋಷಕರು ಹೊಟ್ಟೆ ಬಟ್ಟೆ ಕಟ್ಟಿ ದುಡಿಯುವ ಜೊತೆಗೆ ತಮ್ಮೆಲ್ಲಾ ಆಸೆಗಳನ್ನು ಗಾಳಿಗೆ ತೂರಿ ಬಿಡುತ್ತಾರೆ. ಆದರೆ ಈ ಪೋಷಕರ ತ್ಯಾಗಗಳನ್ನು ಈಗಿನ ಬಹುತೇಕ ಮಕ್ಕಳಂತೂ ಸ್ವಲ್ಪವೂ ಅರ್ಥ ಮಾಡಿಕೊಳ್ಳುವುದೇ ಇಲ್ಲ, ಬಹುತೇಕ ಮಕ್ಕಳು ಪೋಷಕರ ಕಷ್ಟವನ್ನು ಮರೆಮಾಚಿ ರಾಯಲ್ ಆಗಿ ಬದುಕೋಕೆ ನೋಡ್ತಾರೆ. ಪ್ರೀತಿ ಪ್ರೇಮ ಫ್ರೆಂಡ್ಸ್ ಅಂತ ಅಪ್ಪ ಅಮ್ಮ ಕಷ್ಟಪಟ್ಟು ದುಡಿದ ದುಡ್ಡನ್ನು ಹಾಳು ಮಾಡ್ತಾರೆ. ಜೊತೆಗೆ ಶಿಕ್ಷಣದ ಕಡೆಗೂ ಗಮನ ಕೊಡದೇ ತಮ್ಮ ತಲೆಮೇಲೆ ತಾವೇ ಚಪ್ಪಡಿ ಕಲ್ಲು ಹಾಕಿಕೊಳ್ಳುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಕಾಲೇಜು ಓದುವ ಹುಡುಗರ ತ್ರಿಕೋನ ಪ್ರೇಮ ದೊಡ್ಡ ಗಲಾಟೆಗೆ ಕಾರಣವಾಗಿದೆ.

ಜೂನಿಯರ್‌ಗೆ ಕೊಠಡಿಯಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿದ ಸೀನಿಯರ್

ಕಾಲೇಜು ಹಾಸ್ಟೆಲ್‌ನಲ್ಲಿ ಸೀನಿಯರ್‌ ಹುಡುಗರು ಸೇರಿಕೊಂಡು ಜೂನಿಯರ್ ಹುಡುಗನೋರ್ವನಿಗೆ ಕೊಠಡಿಯಲ್ಲಿ ಕೂಡಿ ಹಾಕಿ ಬಾರಿಸಿದ್ದಾರೆ. ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆತಂಕ ಸೃಷ್ಟಿಸಿದೆ. ಆಗಸ್ಟ್ 7ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, ಈಗ ವಿಡಿಯೋ ವೈರಲ್ ಆಗ್ತಿದೆ. ವೀಡಿಯೋದಲ್ಲಿ ಸಣ್ಣ ಹುಡುಗನೋರ್ವನಿಗೆ 4 ರಿಂದ 5 ಜನರಿರುವ ಹುಡುಗರು ಹಾಸ್ಟೆಲ್ ಕೋಣೆಯೊಳಗೆ ರಾಡ್‌ನಿಂದ ಹಲ್ಲೆ ಮಾಡುವುದನ್ನು ಕಾಣಬಹುದಾಗಿದೆ. ಅಂದಹಾಗೆ ಈ ಘಟನೆ ನಡೆದಿರುವುದು ಆಂಧ್ರಪ್ರದೇಶದ ಪಾಲ್ನಾಡುವಿನ ಸರ್ಕಾರಿ ಕಾಲೇಜು ಹಾಸ್ಟೆಲ್‌ನಲ್ಲಿ.

ಹುಡುಗಿ ಜೊತೆಗೆ ಸ್ನೇಹದ ಕಾರಣಕ್ಕೆ ಹಲ್ಲೆ

ಹುಡುಗಿ ಜೊತೆಗಿನ ಸ್ನೇಹದ ಕಾರಣಕ್ಕೆ ಪ್ರಥಮ ಪಿಯುಸಿ ಓದುತ್ತಿದ್ದ ಹುಡುಗನ ಮೇಲೆ ಹಾಸ್ಟೆಲ್‌ನಲ್ಲಿ ಸೀನಿಯರ್‌ಗಳು ಹಲ್ಲೆ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪಾಲ್ನಾಡು ಸರ್ಕಾರಿ ಕಾಲೇಜಿನ ಐವರು ಹಿರಿಯ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದಂತೆ, ಕಾಲೇಜಿನಲ್ಲಿ ಕಿರಿಯ ವಿದ್ಯಾರ್ಥಿಗೆ ಹಿರಿಯ ವಿದ್ಯಾರ್ಥಿಗಳು ಹೀಗೆ ಕ್ರೂರವಾಗಿ ರಾಗಿಂಗ್ ಮಾಡ್ತಿದ್ದಾರೆ ಎಂದು ಸುದ್ದಿ ಹಬ್ಬಿ ಭಾರಿ ಸಂಚಲನ ಸೃಷ್ಟಿಸಿತ್ತು.

ತ್ರಿಕೋನ ಪ್ರೇಮ ಕಾರಣ

ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಪೊಲೀಸರು ಇದು ತ್ರಿಕೋನ ಪ್ರೇಮಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆ ಎಂದಿದ್ದಾರೆ. ಹಲ್ಲೆಗೊಳಗಾದ ವಿದ್ಯಾರ್ಥಿ ಪ್ರಥಮ ಪಿಯುಸಿಯ ಹುಡುಗಿ ಜೊತೆ ಸ್ನೇಹ ಹೊಂದಿದ್ದ, ಇದು ಆಕೆಯನ್ನು ಇಷ್ಟಪಡುತ್ತಿದ್ದ ಮತ್ತೊಬ್ಬ ವಿದ್ಯಾರ್ಥಿಯನ್ನು ಕೆರಳುವಂತೆ ಮಾಡಿತ್ತು. ಇದಾದ ಆ ಮತ್ತೊಬ್ಬ ವಿದ್ಯಾರ್ಥಿ ತನ್ನ ಸೀನಿಯರ್‌ಗಳ ಸಹಾಯ ಪಡೆದು ಒತ್ತಾಯಪೂರ್ವಕವಾಗಿ ಈ ಹುಡುಗನನ್ನು ಹಾಸ್ಟೆಲ್‌ಗೆ ಎಳೆದುಕೊಂಡು ಹೋಗಿ ರೂಮ್‌ನಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿದ್ದಾರೆ. ಆದರೆ ಅವರು ಯಾರು ಕೂಡ ಆ ಹಾಸ್ಟೆಲ್‌ನಲ್ಲಿ ವಾಸವಿದ್ದ ವಿದ್ಯಾರ್ಥಿಗಳು ಅಲ್ಲಾ ಎಂದು ತಿಳಿದು ಬಂದಿದೆ. ಘಟನೆಯನ್ನು ವಿದ್ಯಾರ್ಥಿಯೊಬ್ಬ ತನ್ನ ಮೊಬೈಲ್ ಕ್ಯಾಮ್‌ನಲ್ಲಿ ಚಿತ್ರಿಸಿದ್ದು ವೈರಲ್ ಆಗಿದೆ.

ಎಸ್‌ಸಿಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಕೇಸ್:

ಘಟನೆಯ ಬಳಿಕ ಹಲ್ಲೆಗೊಳಗಾದ ವಿದ್ಯಾರ್ಥಿಯ ಪೋಷಕರು ಶನಿವಾರ ಪೊಲೀಸರಿಗೆ ದೂರು ನೀಡಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (ದೌರ್ಜನ್ಯ ತಡೆ) ಕಾಯ್ದೆಯಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅವರ ಮೇಲೆ ಕ್ರಿಮಿನಲ್ ಹಲ್ಲೆ, ಬೆದರಿಕೆ, ಬಲವಂತದ ಬಂಧನ ಮತ್ತು ಅಪಹರಣದ ಆರೋಪಗಳನ್ನು ಸಹ ಹೊರಿಸಲಾಗಿದೆ. ಘಟನೆಯ ಬಗ್ಗೆ ತನಿಖೆಗೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

Scroll to load tweet…