Major Fire in Amritsar-Saharsa Garib Rath Express near Sirhind ಪಂಜಾಬ್‌ನ ಸಿರ್ಹಿಂದ್ ಜಂಕ್ಷನ್ ಬಳಿ ಅಮೃತಸರ-ಸಹರ್ಸಾ ಗರೀಬ್ ರಥ ಎಕ್ಸ್‌ಪ್ರೆಸ್ ರೈಲಿನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಈ ದುರ್ಘಟನೆಯಲ್ಲಿ ಮೂರು ಬೋಗಿಗಳು ಸಂಪೂರ್ಣವಾಗಿ ಸುಟ್ಟುಹೋಗಿದೆ.

ಅಮೃತ್‌ಸರ (ಅ.18): ಪಂಜಾಬ್‌ನ ಅಮೃತಸರ-ಸಹರ್ಸಾ ಗರೀಬ್ ರಥ ಎಕ್ಸ್‌ಪ್ರೆಸ್ ರೈಲಿನಲ್ಲಿ ಶನಿವಾರ (ಅಕ್ಟೋಬರ್ 18, 2025) ಭಾರಿ ಬೆಂಕಿ ಕಾಣಿಸಿಕೊಂಡಿದೆ. ವರದಿಗಳ ಪ್ರಕಾರ, ಶಾರ್ಟ್ ಸರ್ಕ್ಯೂಟ್‌ನಿಂದ ಸಿರ್ಹಿಂದ್ ಜಂಕ್ಷನ್ ಬಳಿ ಈ ಘಟನೆ ಸಂಭವಿಸಿದೆ. ಬೆಂಕಿಯಲ್ಲಿ ಮೂರು ಬೋಗಿಗಳು ಸಂಪೂರ್ಣವಾಗಿ ಸುಟ್ಟುಹೋಗಿದೆ. ಒಬ್ಬ ಮಹಿಳೆಗೆ ಸುಟ್ಟ ಗಾಯಗಳಾಗಿದ್ದು ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರಯಾಣದ ಮಧ್ಯದಲ್ಲಿ ರೈಲು ಲುಧಿಯಾನದಿಂದ ದೆಹಲಿಗೆ ತೆರಳುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿದೆ.

19ನೇ ಕೋಚ್ ನಿಂದ ಹೊಗೆ ಹೊರಬರಲು ಪ್ರಾರಂಭಿಸಿದಾಗ ಹಲವಾರು ಉದ್ಯಮಿಗಳು ಈ ಟ್ರೇನ್‌ನಲ್ಲಿ ಪ್ರಯಾಣ ಮಾಡುತ್ತಿದ್ದರು ಎಂದು ವರದಿಯಾಗಿದೆ. ಬೆಂಕಿ ತಾಗಿಕೊಳ್ಳುತ್ತಿದ್ದಂತೆ ಪ್ರಯಾಣಿಕರು ಭೀತಿಯಲ್ಲಿ ಇದ್ದ ಬದ್ ಜಾಗಕ್ಕೆ ಓಡಿಹೋಗಲು ಆರಂಭಿಸಿದರು. ಬಳಿಕ ಚೈನ್‌ ಎಳೆದು ಟ್ರೇನ್‌ಅನ್ನು ನಿಲ್ಲಿಸಿದ್ದಾರೆ. ಅಂಬಾಲಾದಿಂದ ಕೇವಲ ಅರ್ಧ ಕಿಲೋಮೀಟರ್ ಮುಂದೆ ರೈಲು ನಿಂತಿತು ಎಂದು ವರದಿಗಳು ತಿಳಿಸಿವೆ. ಲೋಕೋ ಪೈಲಟ್ ತುರ್ತು ಬ್ರೇಕ್‌ಗಳನ್ನು ಸಹ ಹಾಕಿದರು ಮತ್ತು ಎಲ್ಲಾ ಪ್ರಯಾಣಿಕರನ್ನು ರೈಲಿನಿಂದ ಇಳಿಯುವಂತೆ ಆದೇಶಿಸಿದರು.

Scroll to load tweet…

ಯಾವುದೇ ಸಾವು-ನೋವು ಆಗಿಲ್ಲ

ಮಾಹಿತಿ ತಿಳಿದ ಕೂಡಲೇ ರೈಲ್ವೆ ಅಧಿಕಾರಿಗಳು, ಸಿಬ್ಬಂದಿ, ಜಿಆರ್‌ಪಿ, ಆರ್‌ಪಿಎಫ್ ಮತ್ತು ಪೊಲೀಸ್ ತಂಡಗಳು ಸ್ಥಳಕ್ಕೆ ಆಗಮಿಸಿದವು. ಸುಮಾರು ಒಂದು ಗಂಟೆಯ ನಂತರ, ಅಗ್ನಿಶಾಮಕ ದಳ ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು. ಸಿರ್ಹಿಂದ್ ಜಿಆರ್‌ಪಿ ಎಸ್‌ಎಚ್‌ಒ ರತನ್ ಲಾ ಅವರ ಪ್ರಕಾರ, ಅಪಘಾತದಲ್ಲಿ ಯಾವುದೇ ಸಾವುನೋವುಗಳು ಸಂಭವಿಸಿಲ್ಲ ಎಂದು ವರದಿಯಾಗಿದೆ.

ಬೆಂಕಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ. ಅವ್ಯವಸ್ಥೆಯಿಂದ ಭಯಭೀತರಾಗಿ ರೈಲಿನಿಂದ ಓಡಿಹೋಗುವಾಗ ಹಲವಾರು ಪ್ರಯಾಣಿಕರು ಗಾಯಗೊಂಡರು, ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವೀಡಿಯೊಗಳು ಹಳಿಗಳ ಬಳಿ ತಮ್ಮ ಲಗೇಜ್‌ಗಳೊಂದಿಗೆ ನಿಂತಿರುವುದನ್ನು ತೋರಿಸಿವೆ.

"ಇಂದು ಮುಂಜಾನೆ ಪಂಜಾಬ್‌ನ ಸಿರ್ಹಿಂದ್ ನಿಲ್ದಾಣದಲ್ಲಿ ಅಮೃತಸರ-ಸಹರ್ಸಾ ರೈಲು ಸಂಖ್ಯೆ 12204 ರ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಬೆಂಕಿಯನ್ನು ನಂದಿಸಲಾಗಿದೆ" ಎಂದು ರೈಲ್ವೆ ಸಚಿವಾಲಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.