ಏರ್ ಇಂಡಿಯಾ ತನ್ನ ಪೈಲಟ್‌ಗಳ ನಿವೃತ್ತಿ ವಯಸ್ಸನ್ನು 58 ರಿಂದ 65ಕ್ಕೆ ಮತ್ತು ಇತರ ಸಿಬ್ಬಂದಿಗಳ ನಿವೃತ್ತಿ ವಯಸ್ಸನ್ನು 58 ರಿಂದ 60ಕ್ಕೆ ಹೆಚ್ಚಿಸಿದೆ. ವಿಸ್ತಾರಾ ವಿಲೀನದ ನಂತರ ಸಮಾನತೆ ಕಾಯ್ದುಕೊಳ್ಳಲು ಈ ನಿರ್ಧಾರ ಕೈಗೊಳ್ಳಲಾಗಿದೆ.
ದೆಹಲಿ: ಏರ್ ಇಂಡಿಯಾ ತನ್ನ ಪೈಲಟ್‌ಗಳ ನಿವೃತ್ತಿ ವಯಸ್ಸನ್ನು 58ರಿಂದ 65 ವರ್ಷಗಳಿಗೆ, ಮತ್ತು ಇತರ ಎಲ್ಲಾ ಸಿಬ್ಬಂದಿಗಳ ನಿವೃತ್ತಿ ವಯಸ್ಸನ್ನು 58ರಿಂದ 60 ವರ್ಷಗಳಿಗೆ ಏರಿಸಿದೆ. ಮೂಲಗಳ ಪ್ರಕಾರ, ಹಿಂದೆ ವಿಸ್ತಾರಾ ಏರ್‌ಲೈನ್ಸ್‌ನಲ್ಲಿ ಪೈಲಟ್‌ಗಳ ನಿವೃತ್ತಿ ವಯಸ್ಸು ಈಗಾಗಲೇ 65 ಆಗಿತ್ತು. ಕಳೆದ ನವೆಂಬರ್‌ನಲ್ಲಿ ವಿಸ್ತಾರಾ ಏರ್ ಇಂಡಿಯಾಗೆ ವಿಲೀನಗೊಂಡ ಹಿನ್ನೆಲೆಯಲ್ಲಿ, ಸಮಾನತೆ ಕಾಯ್ದುಕೊಳ್ಳುವ ಉದ್ದೇಶದಿಂದ ಈ ತಿದ್ದುಪಡಿ ಜಾರಿಗೊಳಿಸಲಾಗಿದೆ ಎಂದು ಮೂಲವೊಂದು ತಿಳಿಸಿದೆ.
ಏರ್ ಇಂಡಿಯಾದಲ್ಲಿ ಒಟ್ಟು 24,000ಕ್ಕೂ ಹೆಚ್ಚು ಉದ್ಯೋಗಿಗಳಿದ್ದು, ಇವರಲ್ಲಿ 3,600 ಪೈಲಟ್‌ಗಳು ಮತ್ತು 9,500 ಕ್ಯಾಬಿನ್ ಸಿಬ್ಬಂದಿ ಸದಸ್ಯರಿದ್ದಾರೆ. ಕ್ಯಾಬಿನ್ ಸಿಬ್ಬಂದಿಯ ನಿವೃತ್ತಿ ವಯಸ್ಸನ್ನೂ ಪೈಲಟ್‌ಗಳಿಗೆ ಸಮಾನವಾಗಿ 65 ವರ್ಷಗಳಿಗೆ ಹೆಚ್ಚಿಸಲಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ನಿವೃತ್ತಿ ವಯಸ್ಸು ಹೆಚ್ಚಿಸುವ ಕುರಿತು ಏರ್ ಇಂಡಿಯಾ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಕ್ಯಾಂಪ್‌ಬೆಲ್ ವಿಲ್ಸನ್ ಅವರು ಸಂಸ್ಥೆಯ ಟೌನ್‌ಹಾಲ್ ಸಭೆಯಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ನಿಯಮಾವಳಿಯ ಪ್ರಕಾರ, ವಾಣಿಜ್ಯ ಪೈಲಟ್‌ಗಳಿಗೆ ಗರಿಷ್ಠ 65 ವರ್ಷ ವಯಸ್ಸಿನವರೆಗೆ ಹಾರಾಟ ನಡೆಸಲು ಅನುಮತಿ ಇದೆ. "ಹಿಂದಿನ ಏರ್ ಇಂಡಿಯಾ ಮತ್ತು ವಿಸ್ತಾರಾ ಪೈಲಟ್‌ಗಳ ನಡುವಿನ ನಿವೃತ್ತಿ ವಯಸ್ಸು ಸೇರಿದಂತೆ ಕೆಲವು ವಿಷಯಗಳಲ್ಲಿ ಅಸಮಾಧಾನವಿತ್ತು. ಈ ನಿರ್ಧಾರದ ಮೂಲಕ ಆ ಸಮಸ್ಯೆಯನ್ನು ಪರಿಹರಿಸಲಾಗಿದೆ" ಎಂದು ಮೂಲಗಳು ತಿಳಿಸಿವೆ.
