ಅಹಮ್ಮದಾಬಾದ್ ದುರಂತ ಬಳಿಕ 10,000 ಕೋಟಿ ನಷ್ಟ, ಟಾಟಾ ನೆರವು ಕೇಳಿದ ಏರ್ ಇಂಡಿಯಾ, ಆಗಸದಲ್ಲಿ ಏರ್ ಇಂಡಿಯಾ ಹಾರಾಟ ಮುಂದುವರಿಸಲು ಆರ್ಥಿಕ ನೆರವು ಅನಿವಾರ್ಯ ಎಂದಿದೆ. ಏನಾಗುತ್ತೆ ಏರ್ ಇಂಡಿಯಾ ಭವಿಷ್ಯ?

ನವದೆಹಲಿ (ಅ.31) ಅಹಮ್ಮದಾಬಾದ್ ವಿಮಾನ ದುರಂತ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಇನ್ನಿಲ್ಲದಂತೆ ಸಂಕಷ್ಟಕ್ಕೆ ದೂಡಿದೆ. ಭಾರಿ ನಷ್ಟದಲ್ಲಿದ್ದ ಸರ್ಕಾರದ ಏರ್ ಇಂಡಿಯಾವನ್ನು ಟಾಟಾ ಗ್ರೂಪ್ ಮರಳಿ ತನ್ನ ತೆಕ್ಕೆಗೆ ಪಡೆದುಕೊಂಡಿತ್ತು. ಭಾರಿ ನಷ್ಟದ ವಿಮಾನಯಾನ ಏರ್ ಇಂಡಿಯಾ ಖರೀದಿಸಿದ ಟಾಟಾ ನಿಧಾನವಾಗಿ ಚೇತರಿಕೆ ಕಾಣುತ್ತಿದ್ದಂತೆ ಅಹಮ್ಮದಾಬಾದ್ ವಿಮಾನ ದುರಂತ ಇಡೀ ದೇಶದ ವಿಮಾನಯಾನ ಸಂಸ್ಥೆಗಳನ್ನೇ ಅನುಮಾನದಿಂದ ನೋಡುವಂತೆ ಮಾಡಿತು. ಹಲವು ಸುರಕ್ಷತಾ ಕ್ರಮಗಳು ಜಾರಿಯಾಗಿದೆ. ಇದರ ನಡುವೆ ಏರ್ ಇಂಡಿಯಾ ಸಂಕಷ್ಟ ಹೆಚ್ಚಾಗಿದೆ. ಇದೀಗ ಏರ್ ಇಂಡಿಯಾ ಮತ್ತೆ ಎಂದಿನಂತೆ ಹಾರಾಟ ನಡೆಸಲು 10,000 ಕೋಟಿ ರೂಪಾಯಿ ಆರ್ಥಿಕ ನೆರವು ಕೇಳಿದೆ. ತನ್ನ ಮಾತೃಸಂಸ್ಥೆಯಾದ ಟಾಟಾ ಸೆನ್ಸ್ ಹಾಗೂ ಸಿಂಗಾಪುರ ಏರ್‌ಲೈನ್ಸ್ ಬಳಿ ನೆರವಿಗೆ ಮನವಿ ಮಾಡಿದೆ.

10,000 ಕೋಟಿ ರೂಪಾಯ ಯಾಕೆ?

ಅಹಮ್ಮದಾಬಾದ್ ದುರಂತದಿಂದ ಏರ್ ಇಂಡಿಯಾ ವಿಮಾನ ಅತೀವ ನಷ್ಟ ಅನುಭವಿಸಿದೆ. ಇದನ್ನು ಸರಿದೂಗಿಸಲು ಏರ್ ಇಂಡಿಯಾ ಹೆಣಗಾಡುತ್ತಿದೆ. ಇದರ ಜೊತೆಗೆ ಭಾರತೀಯ ವಿಮಾನಯಾನ ಸಚಿವಾಲಯ ಪ್ರಯಾಣಿಕರು ಸರಕ್ಷತೆಗೆ ಹಲವು ಕಟ್ಟು ನಿಟ್ಟಿನ ಕ್ರಮ ಜಾರಿಗೊಳಿಸಿದೆ. ಹೀಗಾಗಿ ಏರ್ ಇಂಡಿಯಾದ ಪ್ರತಿ ವಿಮಾನವನ್ನು ಅಪ್‌ಗ್ರೇಡ್ ಮಾಡಬೇಕಿದೆ. ಸುರಕ್ಷತಾ ಫೀಚರ್ಸ್, ಸಿಸ್ಟಮ್ ಅಪ್‌ಗ್ರೇಡ್, ನಿರ್ವಹಣೆಗಾಗಿ ಆರ್ಥಿಕ ನೆರವು ಬೇಕು ಎಂದು ಮನವಿ ಮಾಡಿದೆ. ಟಾಟಾ ಸನ್ಸ್ (74.9%) ಹಾಗೂ ಸಿಂಗಾಪುರ ಏರ್‌ಲೈನ್ಸ್ ( 25.1%) ಪಾಲುಹೊಂದಿದೆ. ಸಾಲದ ರೂಪದಲ್ಲಿ ನೀಡುವಂತೆ ಏರ್ ಇಂಡಿಯಾ ಏರ್‌ಲೈನ್ಸ್ ಕೇಳಿದೆ. ಈ ಸಾಲ ಬಡ್ಡಿರಹಿತವಾಗಿ ನೀಡುವಂತೆ ಕೋರಿದೆ.

ಭಾರತದಲ್ಲಿ ವಿಮಾನಯಾನ ಸಂಸ್ಥೆಗೆ ಲಾಭಕ್ಕಿಂತ ನಷ್ಟವೇ ಹೆಚ್ಚು

ಭಾರತದಲ್ಲಿ ವಿಮಾನಯಾನ ಸಂಸ್ಥೆಗಳು ಲಾಭಕ್ಕಿಂತ ನಷ್ಟವೇ ಹೆಚ್ಚು. ಭಾರತದ ಬಹುತೇಕ ವಿಮಾನಯಾನ ಸಂಸ್ಥೆಗಳು ನಷ್ಟದಲ್ಲಿದೆ. ಹಲವು ಸಂಸ್ಥೆಗಳೇ ಇದೇ ಕಾರಣದಿಂದ ಬಾಗಿಲು ಮುಚ್ಚಿದೆ. ಈ ಪೈಕಿ ಇಂಡಿಗೋ ಏರ್‌ಲೈನ್ಸ್ ಭಾರತದಲ್ಲಿ ಶೇಕಡಾ 64ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಇಷ್ಟೇ ಅಲ್ಲ ಇಂಡಿಗೋ ಏರ್‌ಲೈನ್ಸ್ ಲಾಭದಲ್ಲಿದೆ.

ಏರ್ ಇಂಡಿಯಾ ಆರಂಭಿಸಿದ್ದು ಟಾಟಾ

ಏರ್ ಇಂಡಿಯಾ ಆರಂಭಿಸಿದ್ದು ಟಾಟಾ. ಸ್ವಾತಂತ್ರ್ಯ ಬಳಿಕ ಭಾರತದಲ್ಲಿ ವಿಮಾನಯಾನನ್ನು ಸರ್ಕಾರಿಕರಣಗೊಳಿಸಲಾಗಿತ್ತು. ಈ ವೇಳೆ ಟಾಟಾದ ಏರ್ ಇಂಡಿಯಾ ಸರ್ಕಾರದ ಭಾಗವಾಗಿತ್ತು. ಅಲ್ಲಿಂದ ಮರಳಿ ಟಾಟಾ ಸಂಸ್ಥೆ ಏರ್ ಇಂಡಿಯಾ ಖರೀದಿಸುವವರೆಗೆ ಏರ್ ಇಂಡಿಯಾ ನೆಟ್ಟಗೆ ಲಾಭ ಮಾಡಿದ ಉದಾಹರಣೆಯೇ ಇಲ್ಲ.