ಭಾರತ ಪುರುಷರ ಹಾಕಿ ತಂಡವು ಏಷ್ಯಾಕಪ್‌ನಲ್ಲಿ ದಕ್ಷಿಣ ಕೊರಿಯಾವನ್ನು 4-1 ಗೋಲುಗಳಿಂದ ಸೋಲಿಸಿ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದೆ. ಈ ಗೆಲುವಿನೊಂದಿಗೆ 2026ರ ಹಾಕಿ ವಿಶ್ವಕಪ್‌ಗೆ ನೇರ ಅರ್ಹತೆ ಪಡೆದಿದೆ. ಇದು ಭಾರತದ ನಾಲ್ಕನೇ ಏಷ್ಯಾಕಪ್ ಪ್ರಶಸ್ತಿಯಾಗಿದೆ.

ರಾಜ್ಗಿರ್ (ಬಿಹಾರ): ಈ ಬಾರಿ ಪುರುಷರ ಹಾಕಿ ಏಷ್ಯಾಕಪ್‌ನಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದ ಭಾರತ ತಂಡ, 2026ರ ಹಾಕಿ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಭಾನು ವಾರ ನಡೆದ ಫೈನಲ್‌ನಲ್ಲಿ ಆತಿಥೇಯ ತಂಡಕ್ಕೆ ದಕ್ಷಿಣ ಕೊರಿಯಾ ವಿರುದ್ಧ 4-1 ಗೋಲುಗಳ ಅಂತರದಲ್ಲಿ ಗೆಲುವು ಲಭಿಸಿತು.

ಸುಖ್‌ಜೀತ್ 1ನೇ ನಿಮಿಷದಲ್ಲೇ ಗೋಲು ಬಾರಿಸಿ ಮುನ್ನಡೆ ಒದಗಿಸಿದರು. ದಿಲ್‌ ಪ್ರೀತ್ (28, 45ನೇ ನಿಮಿಷ), ಅಮಿತ್ ರೋಹಿದಾಸ್ (50ನೇ ನಿಮಿಷ) ಹೊಡೆದ ಗೋಲಿ ನಿಂದಾಗಿ ಭಾರತ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. ಬಳಿಕ ಕೊರಿಯಾ 51ನೇ ನಿಮಿಷದಲ್ಲಿ ಏಕೈಕ ಗೋಲು ದಾಖಲಿಸಿತು. ಈ ಗೆಲುವಿನೊಂದಿಗೆ ಭಾರತ ವಿಶ್ವಕಪ್‌ಗೆ ನೇರ ಪ್ರವೇಶ ಪಡೆಯಿತು. ದ.ಕೊರಿಯಾ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಆಡಬೇಕಿದೆ. ವಿಶ್ವಕಪ್ 2026 ಆಗಸ್ಟ್‌ 14ರಿಂದ ಬೆಲ್ಡಿಯಂ, ನೆದರ್‌ಲೆಂಡ್ಸ್‌ನಲ್ಲಿ ನಡೆಯಲಿದೆ.

Scroll to load tweet…

ಭಾರತ ನಾಲ್ಕನೇ ಸಲ ಚಾಂಪಿಯನ್

ಭಾರತ ಪುರುಷರ ಏಷ್ಯಾಕಪ್‌ನಲ್ಲಿ 4ನೇ ಬಾರಿ ಚಾಂಪಿಯನ್ ಆಗಿದೆ. ತಂಡ ಈ ಮೊದಲು 2003, 2007, 2017ರಲ್ಲಿ ಪ್ರಶಸ್ತಿ ಗೆದ್ದಿತ್ತು. ಈ 4 ಟ್ರೋಫಿಗಳ ಪೈಕಿ 2ರಲ್ಲಿ ಫೈನಲ್‌ನಲ್ಲಿ ಕೊರಿಯಾವನ್ನು ಸೋಲಿಸಿದೆ. ದ.ಕೊರಿಯಾ ಒಟ್ಟು 5 ಬಾರಿ ಟ್ರೋಫಿ ಜಯಿಸಿದ್ದು, 2 ಬಾರಿ ಫೈನಲ್‌ನಲ್ಲಿ ಸೋತಿದೆ.

ವಿಶ್ವ ಆರ್ಚರಿ: ಐತಿಹಾಸಿಕ ಸ್ವರ್ಣ ಗೆದ್ದ ಭಾರತ ತಂಡ

ಗ್ವಾಂಜು(ದಕ್ಷಿಣ ಕೊರಿಯಾ): ಆರ್ಚರಿ ವಿಶ್ವ ಚಾಂಪಿಯನ್ ಶಿಪ್‌ನಲ್ಲಿ ಭಾರತ ಪುರುಷರ ತಂಡ ಕಾಂಪೌಂಡ್ ವಿಭಾಗದಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದಿದೆ. ರಿಷಭ್ ಯಾದವ್, ಅಮನ್ ಸೈನಿ, ಪ್ರಥಮೇಶ್ ಇದ್ದ ತಂಡ ಫೈನಲ್‌ನಲ್ಲಿ ಫ್ರಾನ್ಸ್ ವಿರುದ್ಧ 235-233 ಅಂಕಗಳಿಂದ ಸೋಲಿಸಿ, ಮೊದಲ ಬಾರಿ ಚಿನ್ನ ಗೆದ್ದಿತು. ಮಿಶ್ರ ತಂಡ ವಿಭಾಗದಲ್ಲಿ ರಿಷಭ್-ಜ್ಯೋತಿ ಸುರೇಖಾ ಇದ್ದ ತಂಡಕ್ಕೆ ಬೆಳ್ಳಿ ಲಭಿಸಿತು. ಆದರೆ 2017ರಿಂದ ಸತತವಾಗಿ ಪದಕ ಗೆಲ್ಲುತ್ತಿದ್ದ ಮಹಿಳಾ ತಂಡ ಪ್ರಿ ಕ್ವಾರ್ಟರಲ್ಲೇ ಸೋತಿದೆ.

ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಮತ್ತೆ ನೀರಜ್-ನದೀಂ ಸೆಣಸಾಟ

ನವದೆಹಲಿ: ಭಾರತದ ತಾರಾ ಜಾವೆಲಿನ್ ಎಸೆತಗಾರ, ಹಾಲಿ ವಿಶ್ವ ಚಾಂಪಿಯನ್ ನೀರಜ್ ಚೋಪ್ರಾ ಹಾಗೂ ಪ್ಯಾರಿಸ್ ಒಲಿಂಪಿಕ್ಸ್‌ ಚಾಂಪಿಯನ್, ಪಾಕಿಸ್ತಾನದ ಅರ್ಶದ್ ನದೀಂ ಮುಂಬರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ.

ಇದು ಪ್ಯಾರಿಸ್ ಒಲಿಂಪಿಕ್ ಬಳಿಕ ಅವರ ಮೊದಲ ಮುಖಾಮುಖಿ. ಒಲಿಂಪಿಕ್ಸ್‌ನಲ್ಲಿ ಅರ್ಶದ್ ನದೀಂ 92.97 ಮೀಟರ್ ದೂರ ದಾಖಲಿಸಿ ಚಿನ್ನ ಗೆದ್ದಿದ್ದರೆ, ನೀರಜ್ (89.45 ಮೀ.) ಬೆಳ್ಳಿ ಪಡೆದಿದ್ದರು. ಸೆ.17ರಂದು ಜಾವೆಲಿನ್ ಅರ್ಹತಾ ಸುತ್ತು, ಮರುದಿನ ಫೈನಲ್ ನಡೆಯಲಿದೆ.

ಪಾಕಿಸ್ತಾನ ವಿರುದ್ಧ ಕ್ರಿಕೆಟ್: ಕೇಂದ್ರ ಸರ್ಕಾರ ರೂಪಿಸಿದ ನೀತಿಗೆ ಬದ್ಧ ಎಂದ ಬಿಸಿಸಿಐ

ನವದೆಹಲಿ: ಏಷ್ಯಾಕಪ್‌ನಲ್ಲಿ ಭಾರತವು ಪಾಕಿಸ್ತಾನ ಸೇರಿದಂತೆ ಎಲ್ಲಾ ತಂಡಗಳ ವಿರುದ್ಧ ಆಡಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಸ್ಪಷ್ಟಪಡಿಸಿ ದ್ದಾರೆ. ಈ ಬಗ್ಗೆ ಸಂದರ್ಶನದಲ್ಲಿ ಮಾತನಾಡಿರುವ ಅವರು, 'ಕೇಂದ್ರ ಸರ್ಕಾರವು ಯಾವ ನಿಯಮ ರೂಪಿಸುತ್ತದೆಯೋ ಅದನ್ನು ನಾವು ಅನುಸರಿಸುತ್ತೇವೆ. ಭಾರತದೊಂದಿಗೆ ಉತ್ತಮ ಸಂಬಂಧವಿಲ್ಲದ ದೇಶಗಳೊಂದಿಗೆ ನಾವು ಆಡುವುದರ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ನಿರ್ಬಂಧ ವಿಧಿಸಿಲ್ಲ. ಹೀಗಾಗಿ ನಾವು ಎಲ್ಲಾ ದೇಶಗಳ ವಿರುದ್ಧ ಆಡುತ್ತೇವೆ' ಎಂದಿದ್ದಾರೆ. ಸೆ.14ರಂದು ಭಾರತ-ಪಾಕಿಸ್ತಾನ ಪಂದ್ಯ ನಡೆಯಲಿದೆ.