ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮವಾಗಿರುತ್ತದೆ ಮತ್ತು ಬೆಳಗಿನ ಆರಂಭವು ಅವರ ಮನಸ್ಥಿತಿ, ಗಮನ ಮತ್ತು ಇಡೀ ದಿನದ ಕಾರ್ಯಕ್ಷಮತೆ ನಿರ್ಧರಿಸುತ್ತದೆ. ಹಾಗಾಗಿ ಬೆಳಗ್ಗೆ ಎಂದಿಗೂ ಮಾಡಬಾರದ ಆ 5 ದೊಡ್ಡ ತಪ್ಪುಗಳ ಬಗ್ಗೆ ತಿಳಿಯೋಣ ಬನ್ನಿ...
ಶಾಲೆಗೆ ಮಕ್ಕಳನ್ನು ಕಳುಹಿಸುವಾಗ ಆ ಮನೆಯ ಬೆಳಗಿನ ವಾತವರಣ ಹೇಗಿರುತ್ತದೆ ಎಂದು ಬಲ್ಲವರೇ ಬಲ್ಲರು. ಮಗು ತಿಂಡಿಯನ್ನೇ ಬಿಡಬಹುದು, ಕೆಲವು ಬುಕ್‌ಗಳು ಬ್ಯಾಗ್‌ನಲ್ಲಿರಲ್ಲ...ಇದೆಲ್ಲಾ ನೋಡಿದ ನಿಮಗೆ ಕಚೇರಿಗೆ ಎಲ್ಲಿ ಲೇಟಾಗಿ ಹೊರಡುತ್ತೇವೋ ಎಂಬ ಚಿಂತೆ. ಅಂತ ಟೈಂನಲ್ಲಿ ಮಕ್ಕಳ ಮೇಲೆ ಸಿಟ್ಟು ಮಾಡುವುದು ಅಥವಾ ಮಗ/ಮಗಳಿಗೆ ಕೇಳಿಸುವಂತೆ ಆತುರದಿಂದ ಏನನ್ನಾದರೂ ಹೇಳುವುದು ತುಂಬಾ ಸಾಮಾನ್ಯವಾಗಿದೆ. ಆದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ಮಾಡುವ ಈ ಸಣ್ಣ ತಪ್ಪುಗಳು ನಿಮ್ಮ ಮಕ್ಕಳ ಇಡೀ ದಿನವನ್ನು ಹಾಳುಮಾಡುತ್ತವೆ ಎಂದು ನಿಮಗೆ ತಿಳಿದಿದೆಯೇ?. ಹೌದು, ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮವಾಗಿರುತ್ತದೆ ಮತ್ತು ಬೆಳಗಿನ ಆರಂಭವು ಅವರ ಮನಸ್ಥಿತಿ, ಗಮನ ಮತ್ತು ಇಡೀ ದಿನದ ಕಾರ್ಯಕ್ಷಮತೆ ನಿರ್ಧರಿಸುತ್ತದೆ. ಹಾಗಾಗಿ ಬೆಳಗ್ಗೆ ಎಂದಿಗೂ ಮಾಡಬಾರದ ಆ 5 ದೊಡ್ಡ ತಪ್ಪುಗಳ ಬಗ್ಗೆ ತಿಳಿಯೋಣ ಬನ್ನಿ...
ಒತ್ತಡದ ವಾತಾವರಣ ಸೃಷ್ಟಿಸುವುದು
ಬೆಳಗ್ಗೆ ಮಕ್ಕಳ ಮೇಲೆ ಒತ್ತಡದ ವಾತಾವರಣವನ್ನು ಸೃಷ್ಟಿಸುವುದು ಅತ್ಯಂತ ದೊಡ್ಡ ಮತ್ತು ಸಾಮಾನ್ಯ ತಪ್ಪು. "ಬೇಗ ರೆಡಿಯಾಗು", "ಯಾವಾಗಲೂ ಲೇಟಾಗಿ ಮಾಡಿಕೊಳ್ಳುತ್ತೀಯಾ", " ಇನ್ನೂ ಏಕೆ ಹೀಗಿದ್ದಿ?" ಮುಂತಾದ ಮಾತುಗಳು ಮಕ್ಕಳ ಮನಸ್ಸಿನಲ್ಲಿ ಒತ್ತಡವನ್ನು ತುಂಬುತ್ತವೆ. ಇದರಿಂದಾಗಿ, ಮಗು ಶಾಲೆಗೆ ಒತ್ತಡದಲ್ಲಿ ಹೋಗುತ್ತದೆ, ಅವನಿಗೆ ಅಧ್ಯಯನದ ಮೇಲೆ ಗಮನಹರಿಸಲು ಸಾಧ್ಯವಾಗುವುದಿಲ್ಲ ಮತ್ತು ಒತ್ತಡದಲ್ಲಿಯೇ ಇರುತ್ತದೆ. ಅಧ್ಯಯನ ಮಾಡುವ ಬದಲು, ಅವನ ಮನಸ್ಸು ಬೆಳಗ್ಗೆ ನಡೆದ ಮಾತಿನಚಕಮಕಿಯನ್ನೇ ನೆನಪಿಸಿಕೊಳ್ಳುತ್ತದೆ.
ಪರಿಹಾರ: ಇಂತಹ ಒತ್ತಡ ತಪ್ಪಿಸಲು ರಾತ್ರಿಯಿಂದಲೇ ತಯಾರಿ ಪ್ರಾರಂಭಿಸಿ. ಬ್ಯಾಗ್ ಪ್ಯಾಕ್ ಮಾಡುವುದು, ಸಮವಸ್ತ್ರ ತೆಗೆದಿಡುವುದು, ಟಿಫಿನ್ ಪ್ಲಾನ್ ಮಾಡುವುದು ಇತ್ಯಾದಿಗಳನ್ನು ರಾತ್ರಿಯೇ ಮಾಡಿ, ಇದರಿಂದ ಬೆಳಗ್ಗೆ ಎದ್ದ ನಂತರ ನೀವು ಆತುರಪಡಬೇಕಾಗಿಲ್ಲ.
ಉಪಾಹಾರ ಬಿಡುವುದು ಅಥವಾ ಬಲವಂತವಾಗಿ ತಿನ್ನಿಸುವುದು
ಈ ಎರಡೂ ಸನ್ನಿವೇಶಗಳು ಹಾನಿಕಾರಕ. ಅನೇಕ ಪೋಷಕರು ಆತುರದಲ್ಲಿ ತಮ್ಮ ಮಗುವನ್ನು ಉಪಾಹಾರವಿಲ್ಲದೆ ಶಾಲೆಗೆ ಕಳುಹಿಸುತ್ತಾರೆ. ಖಾಲಿ ಹೊಟ್ಟೆಯು ಶಕ್ತಿಯ ಕೊರತೆ, ಕಿರಿಕಿರಿ ಮತ್ತು ಅಧ್ಯಯನದಲ್ಲಿ ಏಕಾಗ್ರತೆಯ ಕೊರತೆಯನ್ನು ಉಂಟುಮಾಡುತ್ತದೆ. ಮತ್ತೊಂದೆಡೆ, ಬಲವಂತವಾಗಿ ಆಹಾರ ನೀಡುವುದು ಅಷ್ಟೇ ಹಾನಿಕಾರಕವಾಗಿದೆ. ಇದು ಮಗುವಿನ ಮನಸ್ಸಿನಲ್ಲಿ ಆಹಾರದ ಬಗ್ಗೆ ನಕಾರಾತ್ಮಕತೆಯನ್ನು ಉಂಟುಮಾಡುತ್ತದೆ ಮತ್ತು ಕೆಲವೊಮ್ಮೆ ವಾಂತಿಗೆ ಕಾರಣವಾಗುತ್ತದೆ.
ಪರಿಹಾರ: ಇದನ್ನು ತಪ್ಪಿಸಲು ಮಗುವಿಗೆ ಲೈಟಾಗಿರುವ ಮತ್ತು ಪೌಷ್ಟಿಕ ಉಪಹಾರ ನೀಡಿ, ಅದನ್ನು ಅವರು ಸಂತೋಷದಿಂದ ತಿನ್ನುತ್ತಾರೆ. ಒಂದು ವೇಳೆ ತಿನ್ನಲು ಹಿಂಜರಿಯುತ್ತಿದ್ದರೆ ಗದರಿಸಬೇಡಿ, ಬದಲಿಗೆ ಪ್ರೀತಿಯಿಂದ ವಿವರಿಸಿ. ಸ್ಮೂಥಿ, ಪರಾಠ, ಸ್ಯಾಂಡ್‌ವಿಚ್, ಉಪ್ಮಾ ಮುಂತಾದ ಆಯ್ಕೆಗಳನ್ನು ಇಟ್ಟುಕೊಳ್ಳಿ.
ಓದಲು ಅಥವಾ ಹೋಂವರ್ಕ್ ಮಾಡಲು ಒತ್ತಡ
ಶಾಲೆಗೆ ಹೋಗುವಾಗ, ಬಾಗಿಲಲ್ಲಿ ನಿಂತು, "ಇಂದು ಶಿಕ್ಷಕರು ನಿನಿಗೆ ಏನು ಕಲಿಸುತ್ತಾರೋ ಅದನ್ನು ಎಚ್ಚರಿಕೆಯಿಂದ ಆಲಿಸು, ಇಲ್ಲದಿದ್ದರೆ...", "ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಬೇಕು"..ಇಂತಹ ವಿಷಯಗಳು ಮಕ್ಕಳ ಮೇಲೆ ಒತ್ತಡವನ್ನುಂಟುಮಾಡುತ್ತವೆ. ಆಗ ಮಕ್ಕಳು ಶಾಲೆಯನ್ನು ಪರೀಕ್ಷಾ ಕೊಠಡಿಯಾಗಿ ನೋಡಲು ಪ್ರಾರಂಭಿಸುತ್ತಾನೆ. ಇದು ಅಧ್ಯಯನದ ಒತ್ತಡವನ್ನು ಹೆಚ್ಚಿಸುತ್ತದೆ ಮತ್ತು ಕಲಿಯುವ ಬದಲು ಕಂಠಪಾಠ ಮಾಡುವ ಅಭ್ಯಾಸವನ್ನು ಬೆಳೆಸುತ್ತದೆ.
ಪರಿಹಾರ: ಇದನ್ನು ತಪ್ಪಿಸಲು ಮಕ್ಕಳನ್ನು ಸಕಾರಾತ್ಮಕತೆಯಿಂದ ಶಾಲೆಗೆ ಕಳುಹಿಸಿ. "ಇಂದು ಚೆನ್ನಾಗಿ ಎಂಜಾಯ್ ಮಾಡು", "ಹೊಸ ಸ್ನೇಹಿತರನ್ನು ಮಾಡಿಕೊ", "ಏನೇ ಕಲಿತರೂ ಮನೆಗೆ ಬಂದು ನನಗೂ ಕಲಿಸೂ" ಮುಂತಾದ ವಿಷಯಗಳು ಮಕ್ಕಳ ಆತ್ಮವಿಶ್ವಾಸ ಮತ್ತು ಉತ್ಸಾಹವನ್ನು ಹೆಚ್ಚಿಸುತ್ತವೆ.
ಇತರ ಮಕ್ಕಳೊಂದಿಗೆ ಹೋಲಿಕೆ
ನೀವು ಬೆಳಗ್ಗೆನೇ ಎದ್ದು, "ನಿನ್ನ ಸ್ನೇಹಿತನನ್ನು ನೋಡು ಎಷ್ಟು ಚೆನ್ನಾಗಿ ಡ್ರೆಸ್ ಮಾಡಿದ್ದಾನೆ, ಆದರೆ ನೀನು..." ಎಂದು ಹೇಳಿದರೆ, "ನಿನ್ನ ಸ್ನೇಹಿತೆ ನೋಡು ಯಾವಾಗಲೂ ಮೊದಲು ಬರುತ್ತಾಳೆ, ನೀನ್ಯಾಕೆ ಹಾಗೆ ಮಾಡಬಾರದು?" ಈ ಹೋಲಿಕೆ ಮಗುವಿನ ಹೃದಯ ಮತ್ತು ಮನಸ್ಸನ್ನು ಹೆಚ್ಚು ನೋಯಿಸುತ್ತದೆ. ಇದು ಅವನಲ್ಲಿ ಕೀಳರಿಮೆಯ ಭಾವನೆ ಉಂಟುಮಾಡುತ್ತದೆ, ಆತ್ಮವಿಶ್ವಾಸವು ಕುಗ್ಗುತ್ತದೆ. ಅಷ್ಟೇ ಅಲ್ಲ, ಸ್ನೇಹಿತರ ಬಗ್ಗೆಯೂ ಅಸೂಯೆಯ ಭಾವನೆ ಬೆಳೆಯಬಹುದು.
ಪರಿಹಾರ: ಇದನ್ನು ತಪ್ಪಿಸಲು ಯಾವಾಗಲೂ ನಿಮ್ಮ ಮಕ್ಕಳನ್ನು ಹೊಗಳಿ ಮತ್ತು ಸ್ಪೆಷಲ್ ಅನಿಸುವಂತೆ ಮಾಡಿ. ಸಣ್ಣ ಸಣ್ಣ ಸಾಧನೆಗಳನ್ನು ಶ್ಲಾಘಿಸಿ.
ಸುಳ್ಳು ಹೇಳುವುದು ಅಥವಾ ಬೆದರಿಸುವುದು
ಅನೇಕ ಬಾರಿ ಪೋಷಕರು ತಮ್ಮ ಮಕ್ಕಳಿಗೆ ಅರ್ಥವಾಗುವಂತೆ ಸುಳ್ಳುಗಳನ್ನು ಹೇಳುತ್ತಾ ಇರುತ್ತಾರೆ. ಉದಾಹರಣೆಗೆ "ಬೇಗ ಮಾಡು, ಇಲ್ಲದಿದ್ದರೆ ಶಿಕ್ಷಕರು ನಿನ್ನನ್ನು ಗದರಿಸುತ್ತಾರೆ." ಅಥವಾ "ಶಾಲೆಗೆ ಹೋಗು, ಅಲ್ಲಿ ನಿನಗೆ ಐಸ್ ಕ್ರೀಮ್ ಸಿಗುತ್ತದೆ". ಒಂದು ವೇಳೆ ನೀವು ಸುಳ್ಳು ಹೇಳಿ ಸಿಕ್ಕಿಬಿದ್ದಾಗ, ಮಕ್ಕಳು ನಿಮ್ಮ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ. ಮತ್ತೊಂದೆಡೆ, ಬೆದರಿಸುವ ತಂತ್ರಗಳು ಮಗುವಿನ ಮನಸ್ಸಿನಲ್ಲಿ ಶಾಲೆಯ ಬಗ್ಗೆ ಭಯವನ್ನು ಉಂಟುಮಾಡುತ್ತವೆ, ಇದರಿಂದಾಗಿ ಮಕ್ಕಳು ಅಲ್ಲಿಗೆ ಹೋಗಲು ಇಷ್ಟಪಡುವುದಿಲ್ಲ.
ಪರಿಹಾರ: ಇದನ್ನು ತಪ್ಪಿಸಲು ನಿಮ್ಮ ಮಕ್ಕಳನ್ನು ಪ್ರೀತಿಯಿಂದ ಶಾಲೆಗೆ ಸಿದ್ಧಪಡಿಸಿ ಮತ್ತು ಅವರೊಂದಿಗೆ ತಾಳ್ಮೆಯಿಂದಿರಿ.
