- Home
- News
- World News
- ಟ್ರಂಪ್ ಆಪ್ತ ಚಾರ್ಲಿ ಕಿರ್ಕ್ ಹತ್ಯೆಯಲ್ಲಿ ಇಸ್ರೇಲ್ ಕೈವಾಡ ಆರೋಪ, ಪ್ರಧಾನಿ ನೆತನ್ಯಾಹು ಕೆಂಡಾಮಂಡಲ
ಟ್ರಂಪ್ ಆಪ್ತ ಚಾರ್ಲಿ ಕಿರ್ಕ್ ಹತ್ಯೆಯಲ್ಲಿ ಇಸ್ರೇಲ್ ಕೈವಾಡ ಆರೋಪ, ಪ್ರಧಾನಿ ನೆತನ್ಯಾಹು ಕೆಂಡಾಮಂಡಲ
ಅಮೆರಿಕದ ಕಾರ್ಯಕರ್ತ ಚಾರ್ಲಿ ಕಿರ್ಕ್ ಹತ್ಯೆಯಲ್ಲಿ ಇಸ್ರೇಲ್ ಪಾತ್ರವಿದೆ ಎಂಬ ಆರೋಪವನ್ನು ಪ್ರಧಾನಿ ಬೆಂಜಮಿನ್ ನೆತನ್ಯಾಹು ತೀವ್ರವಾಗಿ ಖಂಡಿಸಿದ್ದಾರೆ. ಇದೊಂದು "ದೈತ್ಯಾಕಾರದ ದೊಡ್ಡ ಸುಳ್ಳು" ಎಂದು ಹೇಳಿದ ಅವರು, ಕಿರ್ಕ್ ಇಸ್ರೇಲ್‌ನ ಸಮರ್ಪಿತ ಬೆಂಬಲಿಗ ಎಂದು ಶ್ಲಾಘಿಸಿದರು.

ನೆತನ್ಯಾಹು ಖಂಡನೆ
ಅಮೆರಿಕದ ಪ್ರಮುಖ ಬಲಪಂಥೀಯ ಕಾರ್ಯಕರ್ತ ಹಾಗೂ ಸಂಪ್ರದಾಯವಾದಿ ಚಾರ್ಲಿ ಕಿರ್ಕ್ ಅವರ ಹತ್ಯೆಗೆ ಇಸ್ರೇಲ್‌ನ ಸಂಬಂಧವಿದೆ ಎಂಬ ಆರೋಪಗಳನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತೀವ್ರವಾಗಿ ತಿರಸ್ಕರಿಸಿದ್ದಾರೆ. ಎಕ್ಸ್ (ಹಳೆಯ ಟ್ವಿಟರ್) ಮೂಲಕ ಈ ಸಂಬಂಧ ಬಿಡುಗಡೆ ಮಾಡಿರುವ ನೆತನ್ಯಾಹು, ಈ ಆರೋಪವನ್ನು “ದೈತ್ಯಾಕಾರದ ದೊಡ್ಡ ಸುಳ್ಳು” ಎಂದು ಖಂಡಿಸಿದರು.
ಉತಾಹ್‌ನಲ್ಲಿ ನಡೆದ ದುರ್ಘಟನೆ
ಸೆಪ್ಟೆಂಬರ್ 10 ರಂದು ಅಮೆರಿಕದ ಉತಾಹ್ ವ್ಯಾಲಿ ವಿಶ್ವವಿದ್ಯಾಲಯದಲ್ಲಿ ನಡೆದ ದುರ್ಘಟನೆಯಲ್ಲಿ ಚಾರ್ಲಿ ಕಿರ್ಕ್ ನನ್ನು ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಈ ಪ್ರಕರಣದಲ್ಲಿ ಟೈಲರ್ ರಾಬಿನ್ಸನ್ ಎಂಬ ಶಂಕಿತನ ವಿರುದ್ಧ ಕೊಲೆ ಆರೋಪ ದಾಖಲಾಗಿದೆ. ಘಟನೆ ಬಳಿಕ ಕೆಲವು ವಲಯಗಳಲ್ಲಿ “ಈ ಹತ್ಯೆಗೆ ಇಸ್ರೇಲ್‌ನ ಕೈವಾಡವಿದೆ” ಎಂಬ ಸುದ್ದಿ ಹರಿದಾಡಿತ್ತು ಈ ಸಂಬಂಧ ನೆತನ್ಯಾಹು ಪ್ರತಿಕ್ರಿಯೆ ನೀಡಿದ್ದಾರೆ.
ನೆತನ್ಯಾಹು ಹೇಳಿದ್ದೇನು?
“ಚಾರ್ಲಿ ಕಿರ್ಕ್ ಅವರ ಭೀಕರ ಹತ್ಯೆಯಲ್ಲಿ ಇಸ್ರೇಲ್‌ಗೆ ಸಂಬಂಧವಿದೆ ಎಂಬ ಸುಳ್ಳನ್ನು ಯಾರೋ ಉದ್ದೇಶಪೂರ್ವಕವಾಗಿ ಸೃಷ್ಟಿಸಿದ್ದಾರೆ. ಇದು ಕೇವಲ ಸುಳ್ಳು ಅಲ್ಲ, ಒಂದು ಭೀಕರ ದೊಡ್ಡ ಸುಳ್ಳು. ಇಂತಹ ಅಪವಾದಗಳು ಸಂಪೂರ್ಣ ಅಸಂಬದ್ಧ” ಎಂದು ನೆತನ್ಯಾಹು ವೀಡಿಯೋದಲ್ಲಿ ಸ್ಪಷ್ಟಪಡಿಸಿದರು. ಅವರು ಜರ್ಮನ್ ನಾಜಿ ಪ್ರಚಾರಕ ಜೋಸೆಫ್ ಗೋಬೆಲ್ಸ್ ಅವರನ್ನು ಉಲ್ಲೇಖಿಸಿ, “ಸುಳ್ಳು ದೊಡ್ಡದಾದಷ್ಟೂ ಅದು ವೇಗವಾಗಿ ಹರಡುತ್ತದೆ. ಇದೇ ರೀತಿಯಲ್ಲಿ ಚಾರ್ಲಿ ಕಿರ್ಕ್ ಹತ್ಯೆಗೆ ಇಸ್ರೇಲ್ ಹೊಣೆ ಎಂಬ ಸುಳ್ಳು ಕೂಡಾ ಹರಡುತ್ತಿದೆ” ಎಂದು ಹೇಳಿದರು.
ಕಿರ್ಕ್ ಬಗ್ಗೆ ನೆತನ್ಯಾಹು ಶ್ರದ್ಧಾಂಜಲಿ
ಕಿರ್ಕ್ ಅವರನ್ನು “ಇಸ್ರೇಲ್‌ನ ಸಮರ್ಪಿತ ಬೆಂಬಲಿಗ ಮತ್ತು ಸ್ವಾತಂತ್ರ್ಯದ ನಿಸ್ವಾರ್ಥ ರಕ್ಷಕ” ಎಂದು ನೆತನ್ಯಾಹು ಹೊಗಳಿ, ಚಾರ್ಲಿ ಕಿರ್ಕ್ ಒಬ್ಬ ದೈತ್ಯ. ಅವರು ಶತಮಾನದಲ್ಲಿ ಒಮ್ಮೆ ಕಾಣಸಿಗುವ ಪ್ರತಿಭೆ. ಸ್ವಾತಂತ್ರ್ಯವನ್ನು ರಕ್ಷಿಸಿದರು, ಅಮೆರಿಕವನ್ನು ರಕ್ಷಿಸಿದರು ಮತ್ತು ನಮ್ಮ ಸಾಮಾನ್ಯ ಜೂಡೋ-ಕ್ರಿಶ್ಚಿಯನ್ ನಾಗರಿಕತೆಯನ್ನು ಕಾಪಾಡಿದರು ಎಂದು ಹೇಳಿದರು. ನೆತನ್ಯಾಹು ಮುಂದುವರಿದು, “ಇದು ಹುಚ್ಚುತನ, ಇದು ಸುಳ್ಳು, ಇದು ಅತಿರೇಕದ ಸಂಗತಿ. ಕಿರ್ಕ್ ಅವರಂತಹ ವ್ಯಕ್ತಿಯ ಹತ್ಯೆಗೆ ಇಸ್ರೇಲ್ ಅನ್ನು ಮಧ್ಯೆ ತೂರಿಸುವುದು ಸಂಪೂರ್ಣ ಅಸಂಬದ್ಧ” ಎಂದು ಮತ್ತೆ ಒತ್ತಿ ಹೇಳಿದರು.
MAGA ವ್ಯಾಖ್ಯಾನಕಾರರ ಆರೋಪ
ಅಮೆರಿಕದ ಕೆಲವು MAGA ಪರ ವಲಯಗಳು, ಚಾರ್ಲಿ ಕಿರ್ಕ್ ಇತ್ತೀಚೆಗೆ ನೆತನ್ಯಾಹು ಸರ್ಕಾರವನ್ನು ಬಹಿರಂಗವಾಗಿ ಟೀಕಿಸಿದ್ದರು ಎಂಬುದರಿಂದ ಈ ಆರೋಪಗಳು ಮೂಡಿವೆ . ಇದಕ್ಕೆ ಪ್ರತಿಕ್ರಿಯೆಯಾಗಿ, ನೆತನ್ಯಾಹು “ವೈಯಕ್ತಿಕ ಅಭಿಪ್ರಾಯ ಮತ್ತು ಟೀಕೆಗಳು ಒಂದು ವಿಷಯ, ಆದರೆ ಇಂತಹ ಭಯಾನಕ ಹತ್ಯೆಗೆ ಇಸ್ರೇಲ್ ಸಂಬಂಧವಿದೆ ಎಂದು ದೂಷಿಸುವುದು ಇನ್ನೊಂದು ವಿಷಯ. ಇದು ಸಂಪೂರ್ಣ ಸುಳ್ಳು ಎಂದು ಸ್ಪಷ್ಟಪಡಿಸಿದರು.