ಕಿತ್ತೂರು ಉತ್ಸವದಲ್ಲಿ ಬಿಗ್‌ಬಾಸ್ ವಿನ್ನರ್ ಹನುಮಂತ್‌ಗೆ ಅವಮಾನ? ವಿಡಿಯೋ ವೈರಲ್
ಕಿತ್ತೂರು ಉತ್ಸವದಲ್ಲಿ ಗಾಯಕ ಹಾಗೂ ಬಿಗ್‌ಬಾಸ್ ವಿನ್ನರ್ ಹನುಮಂತ್ ಅವರಿಗೆ ಅವಮಾನವಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಸಂಬಂಧಿತ ವಿಡಿಯೋ ವೈರಲ್ ಆಗಿದೆ. ಸಮಯಾವಕಾಶ ಮೀರಿದರೂ ಹನುಮಂತ್ ಹಾಡಲು ಅವಕಾಶ ನೀಡಿದ್ದಕ್ಕೆ ಇಬ್ಬರು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.

ಕಿತ್ತೂರು ಉತ್ಸವ
ಕಿತ್ತೂರು ಉತ್ಸವದಲ್ಲಿ ಗಾಯಕ, ಬಿಗ್‌ಬಾಸ್ ವಿನ್ನರ್ ಆಗಿರುವ ಹನುಮಂತ್ ಅವರಿಗೆ ಅವಮಾನ ಆಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ಕಿತ್ತೂರು ಉತ್ಸವದಲ್ಲಿನ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು, ಕಾರ್ಯಕ್ರಮ ಆಯೋಜಕರ ವಿರುದ್ದ ಬೇಸರ ವ್ಯಕ್ತಪಡಿಸಿದ್ದಾರೆ.
ಗ್ರಾಮೀಣ ಪ್ರತಿಭೆ ಹನುಮಂತ
ಹನುಮಂತ್ ಅವರು ಖಾಸಗಿ ವಾಹಿನಿಯ ಸಿಂಗಿಂಗ್ ರಿಯಾಲಿಟಿ ಶೋ ರನ್ನರ್ ಅಪ್ ಆಗಿದ್ದರು. ಹಾಗೆಯೇ ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 11ರ ವಿನ್ನರ್ ಆಗಿದ್ದಾರೆ. ತಮ್ಮದೇ ಆದ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಗ್ರಾಮೀಣ ಪ್ರತಿಭೆ ಹನುಮಂತ್. ಇಂತಹ ಕಲಾವಿದನಿಗೆ ಅವಮಾನವಾಗಿದೆ ಎಂಬ ವಿಷಯ ಕೇಳಿ ಅಭಿಮಾನಿಗಳು ಅಸಮಾಧಾನ ಹೊರ ಹಾಕಿದ್ದಾರೆ.
ಕಿತ್ತೂರು ಉತ್ಸವದಲ್ಲಿ ಆಗಿದ್ದೇನು?
ಕಿತ್ತೂರು ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿತ್ತು. ವೇದಿಕೆ ಮೇಲೆ ಹನುಮಂತ್ ಅವರು ಹಾಡು ಹೇಳುತ್ತಿರುತ್ತಾರೆ. ಈ ವೇಳೆಯೇ ಹನುಮಂತ ಕೊನೆಯ ಹಾಡು ಎಂದು ಹೇಳುವುದನ್ನು ಕೇಳಿಸಿಕೊಳ್ಳಬಹುದು. ಇದೇ ವಿಡಿಯೋದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಮತ್ತು ಎಸ್‌ಪಿ ಭೀಮಾಶಂಕರ್ ಗುಳೇದ್ ನಡುವೆ ಮಾತಿನ ಚಕಮಕಿ ನಡೆಯುತ್ತದೆ.
ಅಧಿಕಾರಿಗಳ ನಡುವೆ ಮಾತನ ಚಕಮಕಿ
ಸಮಯಾವಕಾಶ ಮೀರಿದ್ರೂ ಎರಡನೇ ಬಾರಿ ಹನುಮಂತ್ ಅವರಿಗೆ ಹಾಡಲು ಅವಕಾಶ ನೀಡಿದ್ದಕ್ಕೆ ಭೀಮಾಶಂಕರ್ ಗುಳೇದ್ ಕೋಪಗೊಂಡಿದ್ದರಂತೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಭೀಮಾಶಂಕರ್ ಮತ್ತು ವಿದ್ಯಾವತಿ ಭಜಂತ್ರಿ ನಡುವೆ ಜಗಳ ನಡೆಯಿತು ಎಂದು ಹೇಳಲಾಗುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಇಬ್ಬರು ಅಧಿಕಾರಿಗಳ ನಡುವೆ ಮಾತನ ಚಕಮಕಿ ನಡೆಯುತ್ತಿರೋದು ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ.
ವಿಡಿಯೋ ವೈರಲ್
ಇಬ್ಬರು ಅಧಿಕಾರಿಗಳ ನಡುವೆ ಇದೇ ವಿಷಯಕ್ಕೆ ವಾಗ್ವಾದ ನಡೆಯಿತಾ ಅಥವಾ ಬೇರೆ ವಿಷಯ ಇತ್ತಾ ಎಂಬುದರ ಬಗ್ಗೆಯೂ ಸ್ಪಷ್ಟತೆ ಇಲ್ಲ. ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಹನುಮಂತ್ ಅವರಿಗೆ ಅವಮಾನ ಎಂಬ ಶೀರ್ಷಿಕೆಯಡಿಯಲ್ಲಿ ವೈರಲ್ ಆಗುತ್ತಿದೆ. ಅಧಿಕಾರಿಗಳ ಸೂಚನೆ ಮೇರೆ ಹನುಮಂತ್ ಅರ್ಧಕ್ಕೆ ಹಾಡು ನಿಲ್ಲಿಸಿ ವೇದಿಕೆಯಿಂದ ನಿರ್ಗಮಿಸಿದರು ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.
ವಿಡಿಯೋದಲ್ಲಿ ಸ್ಪಷ್ಟತೆ ಇಲ್ಲ
ವಿಡಿಯೋದಲ್ಲಿ ನಡೆದ ಸಂಭಾಷಣೆ ಏನು ಅನ್ನೋದು ಸ್ಪಷ್ಟವಾಗಿಲ್ಲ. ಇಬ್ಬರು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯುತ್ತಿರುವ ಸಂದರ್ಭದಲ್ಲಿ ಸ್ಥಳೀಯ ಶಾಸಕ ಬಾಬಾ ಸಾಹೇಬ್ ಪಾಟೀಲ್ ಸಹ ಇದ್ರು ಎನ್ನಲಾಗಿದೆ. ಆದ್ರೆ ಈ ಬಗ್ಗೆ ವಿಡಿಯೋದಲ್ಲಿ ಸ್ಪಷ್ಟತೆ ಇಲ್ಲ. ಅಂತಿಮವಾಗಿ ಗಾಯಕರಾದ ಬಾಳು ಬೆಳಗುಂದಿ ಮತ್ತು ಹನುಮಂತ್ ಇಬ್ಬರು ಕಲಾವಿದರನ್ನು ಶಾಸಕ ಬಾಬಾ ಸಾಹೇಬ್ ಪಾಟೀಲ್ ಸನ್ಮಾನಿಸಿದ್ದಾರೆ.
ವೈರಲ್ ವಿಡಿಯೋ ನೋಡಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ