ಇಂದು ಅನಂತ್ ನಾಗ್ ಜನ್ಮದಿನ, ಎಂದಿಗೂ ಬೋರ್ ಆಗದ ಅವರ 10 ಸಿನಿಮಾಗಳು!
ಹಿರಿಯ ನಟ ಅನಂತ್ ನಾಗ್ ಅವರು ಇಂದು ತಮ್ಮ 77ನೇ ವರ್ಷದ ಜನ್ಮದಿನ ಆಚರಿಸಿಕೊಂಡಿದ್ದಾರೆ. 250ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಅನಂತ್ ನಾಗ್‌ಗೆ ಇತ್ತೀಚಿಗಷ್ಟೇ ಕೇಂದ್ರ ಸರ್ಕಾರ ಪದ್ಮಭೂಷಣ ನೀಡಿ ಗೌರವ ಸಲ್ಲಿಸಿತ್ತು.

ಬೆಳದಿಂಗಳ ಬಾಲೆ
ಭಾರತದ ಚೆಸ್ ಗ್ರ್ಯಾಂಡ್‌ಮಾಸ್ಟರ್ ರೇವಂತ್ ಅವರ ದೊಡ್ಡ ಅಭಿಮಾನಿ ಎಂದು ಹೇಳಿಕೊಳ್ಳುವ ಅನಾಮಧೇಯ, ನಿಗೂಢ ಕರೆ ಮಾಡುವ ಯುವತಿ, ಅವರಿಗೆ ಹಲವು ವಿಧಗಳಲ್ಲಿ ಸವಾಲು ಹಾಕುತ್ತಾಳೆ. ಇದು ರೇವಂತ್‌ನ ಆಂತರಿಕ ಅನ್ವೇಷಣೆಯಾಗಿ ಪರಿಣಿಸುತ್ತದೆ. ಕೊನೆಗೆ ತನಗೆ ಕರೆ ಮಾಡುತ್ತಿದ್ದ ಯುವತಿಯನ್ನು ಪತ್ತೆಹಚ್ಚಲು ಹೊರಡುವ ಕಥೆ.
ನಾರದ ವಿಜಯ
ಭಗವಾನ್ ನಾರಾಯಣನು ತನ್ನ ಭಕ್ತನಾದ ನಾರದನನ್ನು ತನ್ನ ಮಾನವ ಭಕ್ತನ ಇಚ್ಛೆಯನ್ನು ಪರೀಕ್ಷಿಸಲು ಮತ್ತು ಕೆಲವು ಘರ್ಷಣೆಗಳನ್ನು ಪ್ರಾರಂಭಿಸಲು ಭೂಮಿಗೆ ಕಳಿಸುವ ಕಥೆ. ಕಾಮಿಡಿಯಾಗಿ ಸಾಗುವ ಕಥೆ. ಅದ್ಭುತ ಹಾಡುಗಳು ಸಿನಿಮಾದ ಮತ್ತೊಂದು ಶಕ್ತಿ.
ಆಕ್ಸಿಡೆಂಟ್
ಕುಡಿದು ವಾಹನ ಚಲಾಯಿಸುತ್ತಾ ಫುಟ್‌ಪಾತ್‌ನಲ್ಲಿ ಮಲಗಿದ್ದ ಜನರ ಮೇಲೆ ಪ್ರಭಾವಿ ಯುವಕನೊಬ್ಬ ಕಾರು ಹಾಯಿಸುತ್ತಾರೆ. ಯುವಕನ ಪ್ರಭಾವಿ ತಂದೆ, ಪೊಲೀಸ್ ತನಿಖೆ ಮತ್ತು ಮಾಧ್ಯಮ ವರದಿಯನ್ನು ಮೌನಗೊಳಿಸಲು ಹೆಣಗಾಡುವ ಕಥೆ.
ಗೌರಿ ಗಣೇಶ
ಲಂಬೋದರನಾಗಿ ಅನಂತ್ ನಾಗ್ ಅವರ ಎವರ್‌ಗ್ರೀನ್ ಸಿನಿಮಾ. ನಿರುದ್ಯೋಗಿ ಯುವಕ, ತನ್ನ ಲಾಭಕ್ಕಾಗಿ ವ್ಯಕ್ತಿಗಳ ದೌರ್ಬಲ್ಯವನ್ನೇ ಲಾಭವನ್ನಾಗಿ ಮಾಡಿಕೊಳ್ಳುವ ಕಥೆ.
ಯಾರಿಗೂ ಹೇಳ್ಬೇಡಿ
ಬೆಂಗಳೂರಿನ ವಿಚಾರದಲ್ಲಿ ಇಂದಿಗೂ ಪ್ರಸ್ತುತವಾಗಿರುವ ಸಿನಿಮಾ. ಬೆಂಗಳೂರಿನಲ್ಲಿ ಒಂದು ಸೈಟ್, ಮನೆ ಕಟ್ಟಿಸಿಕೊಳ್ಳುವ ತವಕದಲ್ಲಿ ಆಗುವ ಮೋಸಗಳು ನಮ್ಮೆಲ್ಲರ ಬದುಕಿನಲ್ಲಿ ಸಿಗುವ ಗೋವಿಂದಣ್ಣನ ಪಾತ್ರ ಇದರಲ್ಲಿದೆ.
ಉಂಡು ಹೋದ ಕೊಂಡು ಹೋದ
ಕೌ ಇನ್ಸ್‌ಪೆಕ್ಟರ್ ಆಗಿ ಮುಗ್ಧ ಹಳ್ಳಿ ಜನರನ್ನು ಮೂರ್ಖರನ್ನಾಗಿ ಮಾಡುವ ಕಥೆ ಇದರಲ್ಲಿದೆ. ಇಂದಿಗೂ ಹಳ್ಳಿಗಾಡಿನ ಜನರಲ್ಲಿ ಇಂಥ ವಂಚಕರು ಸಿಗುತ್ತಾರೆ.
ಉದ್ಭವ
ಗಣೇಶ ಮೂರ್ತಿ ಉದ್ಭವಿಸಿದ ದೇವಸ್ಥಾನದ ಧರ್ಮದರ್ಶಿಯ ಮಗನ ಕಥೆ. ಜನರು ಮತ್ತು ಪ್ರಭಾವಿ ವ್ಯಕ್ತಿಗಳನ್ನು ಗಣೇಶನ ಕಥೆಯ ಮೂಲಕ ಹೇಗೆ ಮೂರ್ಖರನ್ನಾಗಿ ಮಾಡುತ್ತಾರೆ ಮತ್ತು ದೇವರ ಮೇಲಿನ ಕುರುಡು ನಂಬಿಕೆಗಳ ಸಮಸ್ಯೆಗಳನ್ನು ಪ್ರದರ್ಶಿಸುತ್ತದೆ.
ಮಿಂಚಿನ ಓಟ
ಎರಡು ಸಣ್ಣ ಪ್ರಮಾಣದ ಕಳ್ಳರು ಶ್ರೀಮಂತರಾಗುವ ಪ್ಲ್ಯಾನ್ ಮಾಡುತ್ತಾರೆ.ಆರ್ಥಿಕ ತೊಂದರೆಯಲ್ಲಿರುವ ಅವರು ಕಾರುಗಳನ್ನು ಕದಿಯಲು ಸಹಾಯ ಮಾಡಲು ಒಬ್ಬ ಆಟೋಮೊಬೈಲ್ ಮೆಕ್ಯಾನಿಕ್ ಅನ್ನು ನೇಮಿಸಿಕೊಳ್ಳುತ್ತಾರೆ.
ಜನ್ಮ ಜನ್ಮದ ಅನುಬಂಧ
ತನ್ನ ಹಿಂದಿನ ಜನ್ಮದ ನೆನಪುಗಳಿಂದ ಸಮಸ್ಯೆ ಒಳಗಾಗುವ ವ್ಯಕ್ತಿ, ತನಿಖೆ ಮಾಡಿ ಸತ್ಯವನ್ನು ಹೊರತೆಗೆಯಲು ಇಚ್ಛೆಪಡುವ ಕಥೆ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು, ಕೊಡುಗೆ: ರಾಮಣ್ಣ ರೈ
ಈಗ ಕೇರಳ ಜಿಲ್ಲೆಯಲ್ಲಿರುವ ಕಾಸರಗೋಡಿನಲ್ಲಿ ಕನ್ನಡ ಕಲಿಸುವ ಸರ್ಕಾರಿ ಶಾಲೆಯನ್ನು ಉಳಿಸಿಕೊಳ್ಳುವ ಹೋರಾಟದ ಕಥೆ. ಕನ್ನಡ ಭಾಷೆ, ಗಡಿನಾಡ ಕನ್ನಡಿಗರ ಸಮಸ್ಯೆಯನ್ನು ಮನೋಜ್ಞವಾಗಿ ಚಿತ್ರಿಸಲಾಗಿದೆ. ಅನಂತ್‌ನಾಗ್ ಅವರ ಪಾತ್ರ ಮನಮುಟ್ಟುವಂತಿದೆ.