ಈ 3 ಪಾತ್ರಗಳ ಮೂಲಕ ಸ್ಟ್ರಾಂಗ್ ಮೆಸೇಜ್ ಕೊಟ್ಟ ಲಕ್ಷ್ಮೀನಿವಾಸ ನಿರ್ದೇಶಕರು
Social message in Lakshmi Nivasa : ಇದೀಗ ವೀಕ್ಷಕರ ಆಸೆಯನ್ನ ನಿರಾಸೆ ಮಾಡಬಾರದು ಎಂಬ ಕಾರಣಕ್ಕಾಗಿಯೋ, ಅಥವಾ ಕಥೆಯೋ ಹಾಗೆ ಹೋಗುತ್ತಿದೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ಧಾರಾವಾಹಿಯಲ್ಲಿ ಈ ಮೂವರ ಮೂಲಕ ನಿರ್ದೇಶಕರು ಮಹತ್ವದ ಸಂದೇಶ ಸಾರಿದ್ದಾರೆ. ಅದೇನು?, ಯಾರ ಮೂಲಕ? ಒಂದೊಂದಾಗಿ ನೋಡೋಣ ಬನ್ನಿ...

ಮಹತ್ವದ ಸಂದೇಶ
'ಲಕ್ಷ್ಮೀನಿವಾಸ' ಧಾರಾವಾಹಿಯಲ್ಲಿ ಜಯಂತ್-ಜಾಹ್ನವಿ, ಸಿದ್ದೇಗೌಡ್ರು-ಭಾವನಾ, ಮಗ ಸಂತೋಷ್-ಅಪ್ಪ ಶ್ರೀನಿವಾಸ ಇವರ ಬಗ್ಗೆ ತೋರಿಸುವಾಗ ವೀಕ್ಷಕರು ಅದೇನು ತೋರಿಸಿದ್ದೇ ತೋರಿಸುತ್ತೀರಾ?. ಭಾವನಾ ನೋಡಿದ್ರೆ ಅಳುಮುಂಜಿ, ಇನ್ನು ಸಂತೋಷ್ ಜಿಪುಣ, ಅಮ್ಮ-ಅಪ್ಪನನ್ನೇ ಮನೆಯಿಂದ ಆಚೆ ಹಾಕುವಷ್ಟು ನೀಚ. ಇನ್ನು ಆ ಚಿನ್ನುಮರಿ ಜಾಹ್ನವಿ-ಜಯಂತ್ ಈ ಜನ್ಮಕ್ಕೆ ಒಬ್ಬರ ಮುಖವನ್ನ ಇನ್ನೊಬ್ಬರು ನೋಡಲ್ಲ ಬಿಡಿ ಎಂದು ಕಾಮೆಂಟ್ಸ್ ಮಾಡಿದ್ದೇ ಮಾಡಿದ್ದು, ಇದೀಗ ವೀಕ್ಷಕರ ಆಸೆಯನ್ನ ನಿರಾಸೆ ಮಾಡಬಾರದು ಎಂಬ ಕಾರಣಕ್ಕಾಗಿಯೋ, ಅಥವಾ ಕಥೆಯೋ ಹಾಗೆ ಹೋಗುತ್ತಿದೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ಧಾರಾವಾಹಿಯಲ್ಲಿ ಈ ಮೂವರ ಮೂಲಕ ನಿರ್ದೇಶಕರು ಮಹತ್ವದ ಸಂದೇಶ ಸಾರಿದ್ದಾರೆ. ಅದೇನು?, ಯಾರ ಮೂಲಕ? ಒಂದೊಂದಾಗಿ ನೋಡೋಣ ಬನ್ನಿ…
ಸಂತೋಷ್
ಅಪ್ಪ-ಅಮ್ಮನಿಗೆ ಬಿಡಿಗಾಸು ಕೊಡದೆ, ದುಡ್ಡು ಜೋಡಿಸುತ್ತಾ ದೊಡ್ಡ ಮನೆಯನ್ನೇ ಕಟ್ಟಿರುವ ಸಂತೋಷ್, ಈಗ ದುರಾಸೆಗೆ ಬಿದ್ದಿದ್ದಾನೆ. ಹಣವನ್ನು ಡಬಲ್ ಮಾಡುವ ದಂಧೆಗೆ ಕೈ ಹಾಕಿರುವ ಸಂತೋಷ್ ಮೂಲಕ ನಿರ್ದೇಶಕರು ಬೇಗ ದುಡ್ಡು ಮಾಡಲು ಹೋದರೆ ಮುಂದೇನಾಗುತ್ತದೆ ಕಥೆ ಎಂಬುದನ್ನು ತೋರಿಸಿದ್ದಾರೆ. ಇಂತಹ ಘಟನೆಗಳು ಸಮಾಜದಲ್ಲಿ ಪ್ರಸ್ತುತ ನಡೆಯುತ್ತಿರುವುದು ನಿಮಗೂ ಗೊತ್ತಿದೇ. ಹಾಗಾಗಿ ಮುಂದಿನ ದಿನಗಳಲ್ಲಿ ದುಡ್ಡನ್ನ ಕಳೆದುಕೊಳ್ಳುವ ಸಂತೋಷ್‌ಗೆ ಅಪ್ಪ-ಅಮ್ಮನ ಬೆಲೆಯೂ ಅರ್ಥವಾಗಲಿದೆ.
ಭಾವನಾ
ಮೊದಲೆಲ್ಲಾ ಭಾವನಾ ಅಂದ್ರೆ ಅಳುಮುಂಜಿ ಪಾತ್ರ ಎನ್ನುವಷ್ಟು ಬ್ರಾಂಡ್ ಆಗಿತ್ತು. ಆದರೀಗ ಅತ್ತೆ-ಅಕ್ಕ ಮಾಡುತ್ತಿರುವ ಮೋಸ ಆಕೆಗೆ ತಿಳಿದಿದೆ. ಹಾಗಾಗಿ ಅವರಿಗೆ ಬುದ್ಧಿ ಕಲಿಸಲು ಟೊಂಕ ಕಟ್ಟಿ ನಿಂತಾಗಿದೆ. ಒಂದು ಹೆಣ್ಣಿಗೆ ಸಹನೆ ಎಂಬುದು ಇರುತ್ತದೆ. ಆದರೆ ಅದನ್ನ ದುರುಪಯೋಗ ಮಾಡಿಕೊಂಡರೆ ಭಾವನಾರಂತಹ ಹೆಣ್ಣು ಮಕ್ಕಳು ಹೇಗೆ ತಿರುಗಿಬೀಳುತ್ತಾರೆ. ಬುದ್ಧಿ ಕಲಿಸುತ್ತಾರೆ ಎಂಬದನ್ನ ನಿರ್ದೇಶಕರು ತೋರಿಸಿರುವುದನ್ನ ನೀವಿಲ್ಲಿ ಗಮನಿಸಬಹುದು.
ಜಯಂತ್
ಜಯಂತ್ ಎಂದರೆ ಸೈಕೋ. ಅವನು ಏನೇ ಮಾಡಿದರೂ ನಡೆಯುತ್ತದೆ. ಕೊಲೆ ಮಾಡಿದರೂ ಯಾರಿಗೂ ಗೊತ್ತಾಗಲ್ಲ ಎನ್ನುವಷ್ಟರ ಮಟ್ಟಿಗೆ ತೋರಿಸಲಾಗಿತ್ತು. ಆದರೀಗ ಇವನ ವಿರುದ್ಧ ಜಾಹ್ನವಿ ಸಿಡಿದೆದ್ದಾಗಿದೆ. ಜೊತೆಗೆ ಗೆಳೆಯ ವಿಶ್ವ ಕೂಡ ಸಾಥ್ ನೀಡುತ್ತಿದ್ದಾನೆ. ಹಾಗಾಗಿ ಯಾವಾಗಲೂ ಸನ್ನಿವೇಶಗಳು ಒಬ್ಬರ ಪರವಾಗಿಯೇ ಇರುವುದಿಲ್ಲ. ಸಮಯ ಕಾಯಬೇಕು ಎಂಬುದನ್ನ ತೋರಿಸಲಾಗಿದೆ.
ವೀಕ್ಷಕರು ಏನಂತಾರೆ?
ಇಷ್ಟು ದಿನ ಒಂದೇ ತೆರೆನಾದ ಧಾರವಾಹಿ ನೋಡಿ ನೋಡಿ ಬೇಸತ್ತಿದ್ದವರಿಗೆ ಈಗ ಮಜಾ ಬರುತ್ತಿದೆ. ಭಾವನಾ ಮುಂದೆ ಏನ್ ಮಾಡ್ತಾಳೆ?, ಜಯಂತ್ ಬುದ್ಧಿ ಕಲಿಯುತ್ತಾನಾ?, ಸಂತೋಷ್‌ಗೆ ತನ್ನ ತಪ್ಪಿನ ಅರಿವಾಗುತ್ತಾ? ಎಂಬುದನ್ನ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.
ಹೀಗಿರಲಿ ಕಥೆ
ನಾನಾ ಕಾರಣಗಳಿಗಾಗಿ ಪಾತ್ರಗಳ ಕಥೆಯನ್ನೇ ಚೇಂಜ್ ಮಾಡಿದರೆ, ಯದ್ವಾ-ತದ್ವಾ ಓಡಿಸಿದರೆ ಯಾರಿಗಾದ್ರೂ ಇಷ್ಟವಾಗಲ್ಲ. ಅದೇ ಈ ರೀತಿ ಪಾತ್ರಗಳ ಮೂಲಕ ಸಂದೇಶ ಕಟ್ಟರೆ ಜನರಿಗೂ ಮತ್ತೆ ಮತ್ತೆ ನೋಡಬೇಕೆನಿಸುವುದಂತೂ ಸುಳ್ಳಲ್ಲ ಎಂಬುದು ವೀಕ್ಷಕರ ಅನಿಸಿಕೆ.