ಸೆ.21ರವರೆಗೆ ರಾಜ್ಯದಲ್ಲಿ ಮಳೆಯ ಅಬ್ಬರ, ಉತ್ತರ ಕರ್ನಾಟಕದ ಈ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ಘೋಷಣೆ!
ಕರ್ನಾಟಕದಲ್ಲಿ ಮಳೆ ಮತ್ತೆ ಚುರುಕುಗೊಂಡಿದ್ದು, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮುಂದಿನ ಏಳು ದಿನಗಳವರೆಗೆ ಮಳೆಯ ಅಬ್ಬರ ಮುಂದುವರಿಯುವ ಸಾಧ್ಯತೆ ಇದೆ.

ಬೆಂಗಳೂರು (ಸೆ.15): ಕರ್ನಾಟಕದಲ್ಲಿ ಮಳೆ ಮತ್ತೊಮ್ಮೆ ಚುರುಕುಗೊಂಡಿದ್ದು, ರಾಜ್ಯದ ಹಲವೆಡೆ ಮುಂದಿನ ಏಳು ದಿನಗಳವರೆಗೆ ಮಳೆಯ ಅಬ್ಬರ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ನೈರುತ್ಯ ಮಾನ್ಸೂನ್ ಚುರುಕಾದ ಹಿನ್ನೆಲೆ ಹವಾಮಾನ ಇಲಾಖೆ ಹಲವು ಜಿಲ್ಲೆಗಳಿಗೆ ಮಳೆ ಮುನ್ಸೂಚನೆ ನೀಡಿದೆ. ವಿಶೇಷವಾಗಿ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 21ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಉತ್ತರ ಒಳನಾಡಿನಲ್ಲಿ ಭಾರಿ ಮಳೆ ಎಚ್ಚರಿಕೆ
ಬಾಗಲಕೋಟೆ, ಬೆಳಗಾವಿ, ಬೀದರ್, ಕಲಬುರಗಿ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಈ ಭಾಗಗಳಲ್ಲಿ ಯೆಲ್ಲೋ ಅಲರ್ಟ್ ಜಾರಿಯಲ್ಲಿದೆ. ಗಾಳಿಯ ವೇಗ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಹಾಗೂ ರೈತರು ಎಚ್ಚರಿಕೆಯಿಂದ ಇರಬೇಕೆಂದು ಇಲಾಖೆ ಸೂಚಿಸಿದೆ.
ದಕ್ಷಿಣ ಒಳನಾಡು ಹಾಗೂ ಕರಾವಳಿಯಲ್ಲಿ ಸಾಧಾರಣ ಮಳೆ
ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ತುಮಕೂರು, ದಾವಣಗೆರೆ, ಚಾಮರಾಜನಗರ, ಕೋಲಾರ, ಮೈಸೂರು, ಮಂಡ್ಯ, ಶಿವಮೊಗ್ಗ, ಹಾಸನ, ಚಿತ್ರದುರ್ಗ, ರಾಮನಗರ, ವಿಜಯನಗರ, ಬಳ್ಳಾರಿ ಮುಂತಾದ ಕಡೆಗಳಲ್ಲಿ ಚದುರಿದ ರೀತಿಯಲ್ಲಿ ಸಾಧಾರಣ ಮಳೆಯಾಗಲಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿಯೂ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಹವಾಮಾನ
ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಹಗುರದಿಂದ ಮಧ್ಯಮ ಮಟ್ಟದ ಮಳೆಯಾಗುವ ನಿರೀಕ್ಷೆಯಿದೆ. ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇದೆ.
ಮಳೆ ದಾಖಲೆ
- ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ 6 ಸೆಂ.ಮೀ. ಮಳೆಯಾಗಿದೆ.
- ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ 4 ಸೆಂ.ಮೀ. ಮಳೆ ದಾಖಲಾಗಿದೆ.
- ಕೊಪ್ಪಳದಲ್ಲಿ 3 ಸೆಂ.ಮೀ. ಮಳೆಯಾಗಿದೆ.
ಬೀದರ್, ಗೋಕಾಕ್, ಕುಷ್ಟಗಿ, ಕಾರ್ಕಳ, ಗಂಗಾವತಿ, ಭಾಲ್ಕಿ, ಸೇಡಬಾಳ, ರಬಕವಿ, ಮುದಗಲ್, ಮುದ್ದೇಬಿಹಾಳ, ಮಸ್ಕಿ, ಮಧುಗಿರಿ, ಹಿರಿಯೂರು, ಚಿತ್ತಾಪುರ, ಭಾಗಮಂಡಲ, ಬಾದಾಮಿ, ಆನವಟ್ಟಿ ಮತ್ತು ಆಲಮಟ್ಟಿ ಭಾಗಗಳಲ್ಲಿಯೂ ಮಳೆಯ ವರದಿ ಲಭ್ಯವಾಗಿದೆ.
ಉಷ್ಣಾಂಶ ವರದಿ
- ಬೆಂಗಳೂರಿನ ಎಚ್‌ಎಎಲ್‌ನಲ್ಲಿ ಗರಿಷ್ಠ 28.1°ಸೆ. ಮತ್ತು ಕನಿಷ್ಠ 20.0°ಸೆ. ಉಷ್ಣಾಂಶ ದಾಖಲಾಗಿದೆ.
- ಕೆಐಎಎಲ್‌ನಲ್ಲಿ ಗರಿಷ್ಠ 28.7°ಸೆ. ತಾಪಮಾನ ದಾಖಲಾಗಿದೆ.
- ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಗರಿಷ್ಠ 27.2°ಸೆ. ಮತ್ತು ಕನಿಷ್ಠ 19.6°ಸೆ. ಉಷ್ಣಾಂಶ ದಾಖಲಾಗಿದೆ.
- ವಿಜಯಪುರದಲ್ಲಿ ಗರಿಷ್ಠ 25.6°ಸೆ. ಹಾಗೂ ಕನಿಷ್ಠ 21.4°ಸೆ. ತಾಪಮಾನ ದಾಖಲಾಗಿದೆ.
- ಕಲಬುರಗಿಯಲ್ಲಿ ಗರಿಷ್ಠ 27.8°ಸೆ. ಮತ್ತು ಕನಿಷ್ಠ 23.0°ಸೆ. ಉಷ್ಣಾಂಶ ದಾಖಲೆಯಾಗಿದೆ.
- ಕರಾವಳಿಯ ಕಾರವಾರದಲ್ಲಿ ಗರಿಷ್ಠ 29.2°ಸೆ. ಹಾಗೂ ಕನಿಷ್ಠ 24.0°ಸೆ. ತಾಪಮಾನ ದಾಖಲಾಗಿದೆ.
ಚಂಡಮಾರುತ ಪರಿಣಾಮ ನಿಲ್ಲದ ಮಳೆ
ಪಶ್ಚಿಮ ರಾಜಸ್ಥಾನದ ಕೆಲವು ಭಾಗಗಳಲ್ಲಿ ನೈರುತ್ಯ ಮಾನ್ಸೂನ್ ಹಿಂದೆ ಸರಿದಿದೆ. ಆದರೆ, ಮಹಾರಾಷ್ಟ್ರ ಕರಾವಳಿಯ ಕಡಿಮೆ ಒತ್ತಡದ ಪ್ರದೇಶಕ್ಕೆ ಸಂಬಂಧಿಸಿದ ಚಂಡಮಾರುತದ ಪರಿಣಾಮದಿಂದ ಕರ್ನಾಟಕದ ಉತ್ತರ ಒಳನಾಡಿನಲ್ಲಿ ಮಳೆಯ ಚಟುವಟಿಕೆ ತೀವ್ರಗೊಂಡಿದೆ. ಮತ್ತೊಂದೆಡೆ, ದಕ್ಷಿಣ ಒಳನಾಡಿನಿಂದ ತಮಿಳುನಾಡಿನ ಮನ್ನಾರ್ ಕೊಲ್ಲಿಯವರೆಗೆ ಕಡಿಮೆ ಒತ್ತಡದ ತಗ್ಗು ಪ್ರದೇಶವು ಸಕ್ರಿಯವಾಗಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಮುಂದಿನ ಒಂದು ವಾರ ರಾಜ್ಯದ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮಳೆ ಚಟುವಟಿಕೆ ಮುಂದುವರಿಯಲಿದ್ದು, ಕೃಷಿ ಹಾಗೂ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿರುವವರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.