ಮಾಸ್ಕ್ ಮ್ಯಾನ್ ಚಿನ್ನಯ್ಯ ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡಿದ್ದು ಹೇಗೆ?
ಮಾಸ್ಕ್ ಮ್ಯಾನ್ ಚಿನ್ನಯ್ಯನ ಹೆಸರು, ಊರು ಸೇರಿದಂತೆ ಎಲ್ಲ ಮಾಹಿತಿ ಬಹಿರಂಗ. ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿದ್ದ ಚಿನ್ನಯ್ಯನನ್ನು ಮಹೇಶ್ ಶೆಟ್ಟಿ ತಿಮರೋಡಿ ಗ್ಯಾಂಗ್ ಬಳಸಿಕೊಂಡು ಬೆದರಿಸಿತ್ತು.

ಮಾಸ್ಕ್ ಮ್ಯಾನ್ ಚಿನ್ನಯ್ಯನ ಹೆಸರು, ಊರು ಸೇರಿದಂತೆ ಎಲ್ಲ ಮಾಹಿತಿಯೂ ಬಹಿರಂಗಗೊಂಡಿದೆ. ಚಿನ್ನಯ್ಯ ಮಂಡ್ಯ ಜಿಲ್ಲೆಯವನು. ಈತನ ತಂದೆ ತಮಿಳುನಾಡಿನವರಾಗಿದ್ದು, ಕೆಲಸ ಅರಸಿ ರಾಜ್ಯಕ್ಕೆ ಬಂದು ಇಲ್ಲೇ ಸೆಟಲ್ ಆಗಿದ್ದಾರೆ. ಚಿನ್ನಯ್ಯ ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದನು. ನಂತರ ಆತ ಧರ್ಮಸ್ಥಳದಿಂದ ತಮಿಳುನಾಡಿ ಇರೋಡ್‌ಗೆ ಹೋಗುತ್ತಾನೆ.
ಒಮ್ಮೆ ಇರೋಡ್‌ನಲ್ಲಿದ್ದ ಚಿನ್ನಯ್ಯನಿಗೆ ಈತನ ಸೋದರಿ ರತ್ನ ಕರೆ ಮಾಡಿ ಉಜಿರೆಗೆ ಬರುವಂತೆ ಹೇಳುತ್ತಾಳೆ. ಇಲ್ಲಿ ಕೆಲಸವೂ ಇದೆ ಹಾಗೆ ಒಳ್ಳೆಯ ಸಂಬಳ ನೀಡುವ ವಿಷಯ ತಿಳಿಸುತ್ತಾಳೆ. ಇದನ್ನರಿತ ಚಿನ್ನಯ್ಯ ಮತ್ತೆ ಉಜಿರೆಗೆ ಬಂದು ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡಲು ಆರಂಭಿಸುತ್ತಾನೆ. ಈ ಸಂದರ್ಭದಲ್ಲಿ ಚಿನ್ನಯ್ಯನನ್ನು ಸೌಜನ್ಯ ಸೋದರಮಾವ ವಿಠಲ್ ಗೌಡ ಗುರುತಿಸುತ್ತಾನೆ. ನದಿ ತೀರದಲ್ಲಿ ಬಂದ ಅನಾಥ ಶವಗಳನ್ನು ಚಿನ್ನಯ್ಯನ ಹೂಳುತ್ತಿರುವ ವಿಷಯ ವಿಠಲ್ ಗೌಡನಿಗೆ ಗೊತ್ತಿರುತ್ತದೆ.
470 ಲೆಕ್ಕ ಹಾಕೊಂಡಿದ್ರು
ಈ ಚಿನ್ನಯ್ಯನನ್ನು ಕರೆದುಕೊಂಡು ವಿಠಲ್ ಗೌಡ ನೇರವಾಗಿ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಕಾನೂನುಬದ್ಧವಾಗಿ, ಗ್ರಾಮ ಪಂಚಾಯ್ತಿ ಸಮ್ಮುಖದಲ್ಲಿಯೇ ಅನಾಥ ಶವಗಳನ್ನು ಹೂತಿರುವ ವಿಷಯವನ್ನು ಚಿನ್ನಯ್ಯ ಹೇಳುತ್ತಾನೆ. ಎಷ್ಟು ಹೆಣ ಎಂದಾಗ ಚಿನ್ನಯ್ಯ ಹೇಳುತ್ತಾ ಹೋಗುತ್ತಾನೆ. ಆಗ ಮಹೇಶ್ ಶೆಟ್ಟಿ ತಿಮರೋಡಿ ಆಂಡ್ ಗ್ಯಾಂಗ್ ಲೆಕ್ಕ ಹಾಕಲು ಆರಂಭಿಸುತ್ತದೆ. ಈ ಲೆಕ್ಕದ ಪ್ರಕಾರ 476 ಶವ ಎಂದು ಆಗುತ್ತದೆ.
ಈ ಲೆಕ್ಕದ ಬಳಿಕ ಮಹೇಶ್ ಶೆಟ್ಟಿ ತಿಮರೋಡಿ ಗ್ಯಾಂಗ್ ತಮ್ಮ ಪ್ಲಾನ್‌ನ್ನು ಚಿನ್ನಯ್ಯನ ಮುಂದೆ ಹೇಳುತ್ತದೆ. ಚಿನ್ನಯ್ಯ ಮೊದಲು ಈ ಕೆಲಸ ಮಾಡಲು ಒಪ್ಪಲ್ವಂತೆ. ಆಗ ತಿಮರೋಡಿ ಗ್ಯಾಂಗ್, ಹಣದ ಆಮಿಷವನ್ನು ಒಡ್ಡುತ್ತದೆ. ನಂತರ ನಮ್ಮ ಮಾತು ಕೇಳದಿದ್ರೆ ನೀನೇ ರೇ*ಪ್ ಮಾಡಿ ಕೊಂದು ಹೆಣ ಹೂತಿರೋದಾಗಿ ಹೇಳಿ ನಿನ್ನನ್ನು ಸಿಲುಕಿಸುತ್ತೇವೆ ಎಂದು ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸುತ್ತಾರೆ.
ಚಿನ್ನಯ್ಯ ಹೇಳಿದ ಮಾಹಿತಿಯನ್ನೇ ಪಡೆದುಕೊಂಡು ಆತನನ್ನೇ ಸಿಲುಕಿಸುವ ಖತರ್ನಾಕ್ ಪ್ರಯತ್ನವನ್ನು ತಿಮರೋಡಿ ಗ್ಯಾಂಗ್ ಮಾಡುತ್ತದೆ. ಇಲ್ಲಿಗೆ ತಿಮರೋಡಿ ಆಂಡ್ ಗ್ಯಾಂಗ್‌ಗೆ ಹಗ್ಗ ನೀಡಿ ಕೈ ಕಟ್ಟಿಸಿಕೊಳ್ಳುತ್ತಾನೆ ಮಾಸ್ಕ್ ಮ್ಯಾನ್ ಖ್ಯಾತಿಯ ಚಿನ್ನಯ್ಯ. ಇದೀಗ ನ್ಯಾಯಾಧೀಶರ ಮುಂದೆ ಚಿನ್ನಯ್ಯ ತಪ್ಪೊಪ್ಪಿಗೆ ಹೇಳಿಕೆ ದಾಖಲಿಸಿ, ಸರ್ಕಾರಿ ವಕೀಲರನ್ನು ನೀಡುವಂತೆ ಮನವಿ ಮಾಡಿಕೊಂಡಿದ್ದಾನೆ.
ತಿಮರೋಡಿಯಿಂದ ಬೆದರಿಕೆ!
ಸಾಮಾಜಿಕ ಹೋರಾಟಗಾರ ವಸಂತ್ ಗಿಳಿಯಾರ್ ಅವರ ಪ್ರಕಾರ, ಚಿನ್ನಯ್ಯನಿಗೆ ಪ್ರಾಣ ಬೆದರಿಕೆ ಇತ್ತು. ಏಷ್ಯಾನೆಟ್ ಸುವರ್ಣ ನ್ಯೂಸ್ ಡಿಬೇಟ್‌ನಲ್ಲಿ ಭಾಗಿಯಾದ ವೇಳೆ ವಸಂತ್ ಗಿಳಿಯಾರ್ ಹೇಳಿದ್ದಾರೆ. ಬಾಹುಬಲಿ ಬೆಟ್ಟದ ಬಳಿಕ ಕನ್ಯಾಡಿ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸುವ ಸಂದರ್ಭದಲ್ಲಿ ಅಲ್ಲಿದ್ದ ವ್ಯಕ್ತಿಯೊಬ್ಬರಿಗೆ ಚಿನ್ನಯ್ಯ ತನ್ನನ್ನು ಕಾಪಾಡುವಂತೆ ಮನವಿ ಮಾಡಿಕೊಂಡಿದ್ದನು ಎಂದು ವಸಂತ್ ಗಿಳಿಯಾರ್ ಹೇಳಿಕೊಂಡಿದ್ದಾರೆ.