ನಜ್ಮಾ ನಜೀರ್-ಸಸಿಕಾಂತ್ ಸೆಂಥಿಲ್-ಸಮೀರ್: ಮೂವರಿಗೂ ಲಿಂಕ್ ಇದೆ ಎಂದ ವಸಂತ್ ಗಿಳಿಯಾರ್
ಧರ್ಮಸ್ಥಳ ಪ್ರಕರಣದಲ್ಲಿ ಷಡ್ಯಂತ್ರದ ಶಂಕೆ ವ್ಯಕ್ತಪಡಿಸಿರುವ ವಸಂತ್ ಗಿಳಿಯಾರ್, ಸಂಸದ ಸಸಿಕಾಂತ್ ಸೆಂಥಿಲ್ ಮತ್ತು ನಜ್ಮಾ ನಜೀರ್ ಚಿಕ್ಕನೇರಳೆ ಕೈವಾಡದ ಬಗ್ಗೆ ತನಿಖೆಗೆ ಆಗ್ರಹಿಸಿದ್ದಾರೆ.

ಸಾಮಾಜಿಕ ಹೋರಾಟಗಾರ ವಸಂತ್ ಗಿಳಿಯಾರ್, ಧರ್ಮಸ್ಥಳ ಪ್ರಕರಣದಲ್ಲಿ ತಮಿಳುನಾಡಿನ ಸಂಸದ ಸಸಿಕಾಂತ್ ಸೆಂಥಿಲ್ ಜೊತೆಯಲ್ಲಿ ರಾಜ್ಯದ ಕಾಂಗ್ರೆಸ್ ವಕ್ತಾರೆಯಾಗಿರುವ ನಜ್ಮಾ ನಜೀರ್ ಚಿಕ್ಕನೇರಳೆಯ ಕೈವಾಡವಿದೆ. ಹಾಗಾಗಿ ಈ ಸಂಬಂಧ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ. ರಾಜ್ಯದ ಎಲ್ಲಾ ಸಂಸದರು ಪ್ರಕರಣವನ್ನು ಎನ್‌ಐಎ ಗೆ ವರ್ಗಾಯಿಸಬೇಕು ಎಂದು ಒತ್ತಾಯಿಸಬೇಕು ಎಂದು ಮನವಿ ಮಾಡಿಕೊಂಡರು.
ಇಂದಿನ ಏಷ್ಯಾನೆಸ್ ಸುವರ್ಣ ನ್ಯೂಸ್ ಡಿಬೇಟ್‌ನಲ್ಲಿ ವಸಂತ್ ಗಿಳಿಯಾರ್ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಸಾಮಾಜಿಕ ಹೋರಾಟಗಾರ ವಸಂತ್ ಗಿಳಿಯಾರ್, ನೂರಕ್ಕೆ ನೂರರಷ್ಟು ಷಡ್ಯಂತ್ರ ಅನ್ನೋದು ನಮ್ಮ ಬಲವಾದ ಅನುಮಾನ. ಈ ಪ್ರಕರಣದಲ್ಲಿ ಕಾಣಿಸುತ್ತಿರೋದು ಕೆಲವು ಮುಖಗಳು. ಕಾಣಿಸದ ಮುಖಗಳು ಹಲವು. ಹಾಗಾಗಿ ಹೋರಾಟ ಈಗ ಆರಂಭ ಎಂದು ಹೇಳಿದರು.
ಮುಂದುವರಿದು ಮಾತನಾಡಿದ ವಸಂತ್ ಗಿಳಿಯಾರ್, ಷಡ್ಯಂತ್ರದ ಪಾಲುದಾರರಾಗಿರುವ ಎಲ್ಲಾ ದುಷ್ಟರ ಮುಖಗಳು ಸಾರ್ವಜನಿಕರಿಗೆ ಕಾಣಿಸಬೇಕಿದೆ. ಇವರೆಲ್ಲರಿಗೂ ಕಾನೂನಿನ ಪ್ರಕಾರ ಶಿಕ್ಷೆಯಾಗಬೇಕು. ಮಾಜಿ ಅಧಿಕಾರಿಯಾಗಿರುವ ವ್ಯಕ್ತಿ ಕೊಪ್ಪದಲ್ಲಿ ಆದಿವಾಸಿಗಳ ಜಾಗದಲ್ಲಿ ರೆಸಾರ್ಟ್ ಮಾಡಿಕೊಂಡಿದ್ದಾನೆ. ಈ ರೆಸಾರ್ಟ್‌ನಲ್ಲಿ ಇಂತಹ ಭಯೋತ್ಪಾದಕ ಚಟುವಟಿಕೆ ನಡೆಸೋರು ಅಲ್ಲಿಗೆ ಬಂದು ಹೋಗ್ತಿರೋ ಮಾಹಿತಿ ನಮಗೆ ಸಿಕ್ಕಿದೆ ಎಂದು ಹೇಳಿದರು.
ಈ ರೆಸಾರ್ಟ್‌ನಲ್ಲಿಯೇ ಇವರೆಲ್ಲರ ಮೀಟಿಂಗ್ ನಡೆಯುತ್ತದೆ. ಮಾಸ್ಕ್ ಮ್ಯಾನ್ ಚಿನ್ನಯ್ಯ, ಸುಜಾತ್ ಭಟ್ ಮತ್ತು ವಕೀಲರನ್ನು ದೆಹಲಿಗೆ ಕಳುಹಿಸಿದ್ದಾರೆ. ದೆಹಲಿ ಇವರ ಟ್ರೈನಿಂಗ್ ಸೆಂಟರ್ ಆಗಿದೆ. ಸಸಿಕಾಂತ್ ಸೆಂಥಿಲ್ ಇದೆಲ್ಲದರ ಸೂತ್ರಧಾರ ಅನ್ನೋದು ನಮ್ಮ ಬಲವಾದ ಗುಮಾನಿ. ನೂರಕ್ಕೆ ನೂರರಷ್ಟು ಇದು ಷಡ್ಯಂತ್ರ ಎಂದು ವಸಂತ್ ಗಿಳಿಯಾರ್ ಅನುಮಾನ ವ್ಯಕ್ತಪಡಿಸಿದರು.
ಇವರೆಲ್ಲರೂ ದೆಹಲಿಯಲ್ಲಿ ಎಲ್ಲಿ ಹೋದರು ಮತ್ತು ಅಲ್ಲಿ ಏನು ಮಾಡಿದರು ಎಂಬುದರ ಬಗ್ಗೆ ತಿಳಿಯಬೇಕಿದೆ. ಆದ್ದರಿಂದ ಈ ಪ್ರಕರಣವನ್ನು ಎನ್‌ಐಎಗೆ ವರ್ಗಾಯಿಸಬೇಕು ಎಂದು ವಸಂತ್ ಗಿಳಿಯಾರ್ ಒತ್ತಾಯಿಸಿದರು. ಈ ನಜ್ಮಾ ನಜೀರ್ ಎಂಬ ಹುಡುಗಿಯನ್ನು ಪ್ರಮೋಟ್ ಮಾಡಿದವರು ಸಮೀರ್. ಈಕೆಯ ಸಮೀರ್‌ನನ್ನು ಸಸಿಕಾಂತ್ ಸೆಂಥಿಲ್‌ಗೆ ಪರಿಚಯ ಮಾಡಿಸಿಕೊಟ್ಟಿರಬಹುದು ಅಥವಾ ತದ್ವಿರುದ್ಧ ಆಗಿರಲೂಬಹುದು. ಈ ಪ್ರಕರಣದಲ್ಲಿ ಸಸಿಕಾಂತ್ ಸೆಂಥಿಲ್ ಸೂತ್ರಧಾರ ಅನ್ನೋದು ನಮ್ಮ ಅನುಮಾನ ಎಂದು ವಸಂತ್ ಗಿಳಿಯಾರ್ ಹೇಳುತ್ತಾರೆ.