ವಕೀಲ ಜಗದೀಶ್ ಬಂಧನಕ್ಕೆ ತೆರಳಿದ ಪೊಲೀಸರು ಬರಿಗೈಲಿ ವಾಪಸ್; ಜಪ್ಪಯ್ಯ ಅಂದ್ರೂ ಬಾಗಿಲು ತೆಗೀಲಿಲ್ಲ!
ಜಾತಿ ನಿಂದನೆ ಆರೋಪದ ಮೇಲೆ ವಕೀಲ ಜಗದೀಶ್ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲು ತೆರಳಿದ ಪೊಲೀಸರು ಬರಿಗೈಲಿ ವಾಪಸ್ಸಾಗಿದ್ದಾರೆ. ಜಗದೀಶ್ ಮನೆ ಬಾಗಿಲು ತೆರೆಯಲು ಮತ್ತು ನೋಟಿಸ್ ಸ್ವೀಕರಿಸಲು ನಿರಾಕರಿಸಿದ್ದಾರೆ.

ಬೆಂಗಳೂರು (ಆ.21): ಸಾಮಾಜಿಕ ಜಾಲತಾಣಗಳಲ್ಲಿ ಜಾತಿ ನಿಂದನೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಆರೋಪದ ಮೇಲೆ ವಕೀಲನೆಂದು ಹೇಳಿಕೊಳ್ಳುವ ಜಗದೀಶ್ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗೆ ಸಂಬಂಧಿಸಿದಂತೆ, ಅವರನ್ನು ಬಂಧಿಸಲು ತೆರಳಿದ್ದ ಪೊಲೀಸರು ಬರಿಗೈಲಿ ವಾಪಸ್ಸಾಗಿದ್ದಾರೆ. ಜಗದೀಶ್ ಮನೆ ಬಾಗಿಲು ತೆರೆಯಲು ಮತ್ತು ನೋಟಿಸ್ ಸ್ವೀಕರಿಸಲು ನಿರಾಕರಿಸಿದ ಕಾರಣ ಈ ಪರಿಸ್ಥಿತಿ ಉಂಟಾಗಿದೆ.
ಮನೆ ಬಾಗಿಲು ತೆರೆಯಲು ನಿರಾಕರಿಸಿದ ಜಗದೀಶ್:
ಜಗದೀಶ್ ವಿರುದ್ಧ ದೂರು ದಾಖಲಾಗಿದ್ದ ಹಿನ್ನೆಲೆ ಅವರನ್ನು ಬಂಧಿಸಲು ಬೆಂಗಳೂರಿನ ಕೊಡಿಗೆಹಳ್ಳಿ ಠಾಣಾ ಪೊಲೀಸರು ಅವರ ಮನೆಗೆ ತೆರಳಿದ್ದರು. ಆದರೆ, ಜಗದೀಶ್ ತಮ್ಮ ಮನೆಯ ಬಾಗಿಲು ತೆಗೆಯಲಿಲ್ಲ. ಪೊಲೀಸರು ನೋಟಿಸ್ ನೀಡಲು ಪ್ರಯತ್ನಿಸಿದಾಗ, ಅದನ್ನೂ ಪಡೆದುಕೊಳ್ಳಲು ನಿರಾಕರಿಸಿದ್ದಾರೆ. ಇದರಿಂದ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗದೆ ವಾಪಸ್ಸಾಗಿದ್ದಾರೆ.
ಜಾತಿ ನಿಂದನೆ ಆರೋಪದಡಿ ಪ್ರಕರಣ ದಾಖಲು
ಜಾತಿ ನಿಂದನೆ ಬಗ್ಗೆ ಜಗದೀಶ್ ನೀಡಿದ ಹೇಳಿಕೆಗಳ ವಿರುದ್ಧ ಮಂಜುನಾಥ್ ಎಂಬ ವ್ಯಕ್ತಿ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ, ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 196 (ಧಾರ್ಮಿಕ, ಜನಾಂಗೀಯ, ಭಾಷಾ ಸಮುದಾಯಗಳ ನಡುವೆ ದ್ವೇಷ ಪ್ರಚೋದಿಸುವುದು) ಮತ್ತು 299ರ (ಗಾಯ ಅಥವಾ ಹಲ್ಲೆಗೆ ಸಂಬಂಧಿಸಿದ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.
ಸದ್ಯ, ಆರೋಪಿ ಜಗದೀಶ್ ಬಂಧನಕ್ಕೆ ಸಹಕರಿಸದಿರುವುದರಿಂದ, ಪೊಲೀಸರು ಮುಂದಿನ ಕಾನೂನು ಕ್ರಮಗಳ ಬಗ್ಗೆ ನಿರ್ಧರಿಸಲಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.