- Home
- News
- State
- ರಸ್ತೆಗುಂಡಿ ಮುಚ್ಚಲು ಬಿಬಿಎಂಪಿ ಅಧಿಕಾರಿಗಳಿಗೆ ತರಬೇತಿ; ಇವ್ರು ಗುಂಡಿ ಮುಚ್ಚೋದ್ರೊಳಗೆ ಅದೆಷ್ಟು ಜನ ಗುಂಡಿ ಸೇರ್ತಾರೋ?
ರಸ್ತೆಗುಂಡಿ ಮುಚ್ಚಲು ಬಿಬಿಎಂಪಿ ಅಧಿಕಾರಿಗಳಿಗೆ ತರಬೇತಿ; ಇವ್ರು ಗುಂಡಿ ಮುಚ್ಚೋದ್ರೊಳಗೆ ಅದೆಷ್ಟು ಜನ ಗುಂಡಿ ಸೇರ್ತಾರೋ?
ಬಿಬಿಎಂಪಿ ವತಿಯಿಂದ ರಸ್ತೆ ಗುಂಡಿಗಳನ್ನು ಮುಚ್ಚಲು ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಇವರು ತರಬೇತಿ ಪಡೆದು, ಪ್ರಾಕ್ಟೀಸ್ ಮಾಡಿ ಗುಂಡಿ ಮುಚ್ಚೋದರೊಳಗೆ ಅದೆಷ್ಟು ಜನರು ರಸ್ತೆ ಗುಂಡಿಯಲ್ಲಿ ಬಿದ್ದು, ಶಾಶ್ವತ ಗುಂಡಿ ಸೇರುತ್ತಾರೋ? ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿಬಂದಿದೆ.

ಬೆಂಗಳೂರು (ಆ.19): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಸ್ತೆಗುಂಡಿಗಳನ್ನು ಮುಚ್ಚುವುದಕ್ಕೆ ಬಿಬಿಎಂಪಿ ವತಿಯಿಂದ ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಈಗ ಕಾರ್ಯಾಗಾರದಲ್ಲಿ ರಸ್ತೆಗುಂಡಿ ಮುಚ್ಚುವುದನ್ನು ಕಲಿತುಕೊಂಡು, ಪ್ರಾಕ್ಟೀಸ್ ಮಾಡಿ, ಗುಂಡಿ ಮುಚ್ಚೋ ಹೊತ್ತಿಗೆ ಅದೆಷ್ಟು ಜನರು ಗುಂಡಿಯಲ್ಲಿ ಬಿದ್ದು ಶಾಶ್ವತ ಗುಂಡಿ ಸೇರುತ್ತಾರೋ ಅನ್ನುವ ಭಯ ಕಾಡುತ್ತಿದೆ.
ಪ್ರತಿವರ್ಷ ಗುಂಡಿ ಮುಚ್ಚುತ್ತಲೇ ಬಂದಿದ್ದರೂ, ಮಳೆಗಾಲದಲ್ಲಿ ಪುನಃ ಇಂತಹ ಕಾರ್ಯಕ್ರಮ ಆಯೋಜನೆ ಮಾಡುತ್ತಾ ಕಾಲಹರಣ ಮಾಡುವುದು ಬೇಕಾ ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ.
ನಗರದಲ್ಲಿನ ರಸ್ತೆ ಗುಂಡಿಗಳನ್ನು ಪರಿಣಾಮಕಾರಿಯಾಗಿ ಮುಚ್ಚುವ ಸಲುವಾಗಿ ಪುಟ್ಟಣ ಚೆಟ್ಟಿ ಪುರಭವನದಲ್ಲಿ (ಟೌನ್‌ಹಾಲ) ಮಂಗಳವಾರ ಬಿಬಿಎಂಪಿ ಇಂಜಿನಿಯರ್‌ಗಳಿಗೆ ತರಬೇತಿ ಕಾರ್ಯಗಾರವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ನಿರಂತರವಾಗಿ ಮಾಡಲಾಗುತ್ತಿದ್ದರೂ, ಮಳೆಗಾಲದಲ್ಲಿ ಗುಂಡಿ ಮುಚ್ಚಲು ಸಮಸ್ಯೆ ಆಗುತ್ತಿದೆ. ಹೀಗಾಗಿ, ಮಳೆ ಬೀಳುವ ಸಮಯದಲ್ಲಿ ಕೋಲ್ಡ್ ಮಿಕ್ಸ್ ಹಾಗೂ ಇಕೋಫಿಕ್ಸ್ ಬಳಸಿಕೊಂಡು ರಸ್ತೆ ಗುಂಡಿಗಳನ್ನು ಮುಚ್ಚಲು ಅಧಿಕಾರಿಗಳಿಗೆ ಸೂಚಿಸಿದರು.
ರಸ್ತೆ ಗುಂಡಿಗಳನ್ನು ಯಾವ ರೀತಿ ಮುಚ್ಚಬೇಕು ಎಂಬುದರ ಕುರಿತು ಈಗಾಗಲೇ ತರಬೇತಿ ಮೂಲಕ ಮಾಹಿತಿ ನೀಡಲಾಗಿದ್ದು, ಆಯಾ ವಲಯಗಳಲ್ಲಿ ಯೋಜನೆ ರೂಪಿಸಿಕೊಂಡು ತ್ವರಿತಗತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಬೇಕು. ಜೊತೆಗೆ ಅಗತ್ಯವಿರುವ ಕಡೆ ಜೆಟ್ ಪ್ಯಾಚರ್ ಯಂತ್ರವನ್ನು ಬಳಸಿಕೊಂಡು ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮವಹಿಸಬೇಕು. ರಸ್ತೆ ಗುಂಡಿಗಳನ್ನು ಮುಚ್ಚುವ ವಿಚಾರದಲ್ಲಿ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು. ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್.ಒ.ಪಿ)ದ ಪ್ರಕಾರ ರಸ್ತೆ ಗುಂಡಿಗಳನ್ನು ಮುಚ್ಚಿ, ಗುಣಮಟ್ಟ ಪರಿಶೀಲನೆ ಮಾಡಬೇಕು ಎಂದು ತಿಳಿಸಿದರು.
ಗುಂಡಿ ಮುಚ್ಚುವ ಕಾರ್ಯ ಪರಿಶೀಲಿಸಿ:
ವಲಯ ಆಯುಕ್ತರುಗಳು, ವಲಯ ಜಂಟಿ ಆಯುಕ್ತರುಗಳು, ಮುಖ್ಯ ಅಭಿಯಂತರರು ರಸ್ತೆ ಗುಂಡಿಗಳುನ್ನು ಮುಚ್ಚು ವೇಳೆ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಜೊತೆಗೆ ರಸ್ತೆ ಗುಂಡಿ ಮುಚ್ಚುವ ಕಾರ್ಯವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕು. ಜೊತೆಗೆ, ಸ್ವಚ್ಛತಾ ಕಾರ್ಯ ಪರಿಣಾಮಕಾರಿಯಾಗಿ ನಡೆಯಬೇಕು. ಈ ಸಂಬಂಧ ಆಯಾ ವಲಯಗಳಲ್ಲಿ ವಾರ್ಡ್‌ವಾರು ಒಂದು ವಾರದದಲ್ಲಿ ಸ್ವಚ್ಛತೆ ಮಾಡುವ ಸ್ಥಳಗಳ ವೇಳಾಪಟ್ಟಿಯನ್ನು ಸಿದ್ಧಪಡಿಸಬೇಕು. ಆ ವೇಳಾಪಟ್ಟಿಯ ಅನುಸಾರ ಶಿಲ್ಟ್ & ಟ್ರ್ಯಾಕ್ಟರ್ ಗಳ ಮೂಲಕ ಪಾದಚಾರಿ ಮಾರ್ಗ ಸ್ವಚ್ಛತೆ, ತ್ಯಾಜ್ಯ, ಕಟ್ಟಡ ಭಗ್ನಾವಶೇಷಗಳನ್ನು ಬೆಳಗ್ಗೆಯಿಂದಲೇ ಸ್ವಚ್ಛತಾ ಕಾರ್ಯವನ್ನು ಪ್ರಾರಂಭಿಸಲು ಸೂಚಿಸಿದರು.
ಪ್ರಾತ್ಯಕ್ಷಿಕೆ ಮೂಲಕ ತರಬೇತಿ:
ನಗರದಲ್ಲಿ ರಸ್ತೆ ಗುಂಡಿ ಮುಚ್ಚಲು ಅನುಸರಿಸಬೇಕಾದ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್.ಒ.ಪಿ) ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಎಲ್ಲಾ ಇಂಜಿನಿಯರ್ ಗಳಿಗೆ ಸಮಗ್ರ ಮಾಹಿತಿಯನ್ನು ನೀಡಲಾಯಿತು. ರಸ್ತೆ ಗುಂಡಿ ಮುಚ್ಚುವ ವೇಳೆ 4 ಮೂಲೆಗಳನ್ನು ಕತ್ತರಿಸುವುದು, ಧೂಳನ್ನು ಸ್ವಚ್ಛಗೊಳಿಸಿ, ಗಾಳಿ ಸ್ಪ್ರೇ ಮಾಡಿ, ಟ್ಯಾಕ್ ಕೋಟ್, ಬಿಟಮಿನ್ ಹಾಕಿದ ಬಳಿಕ ರೋಲಿಂಗ್ ಮಾಡಿ ಗುಂಡಿಗಳನ್ನು ಮುಚ್ಚಲು ಸೂಚಿಸಿದರು.
ಈ ವೇಳೆ ಯೋಜನಾ ವಿಭಾಗದ ವಿಶೇಷ ಆಯುಕ್ತರಾದ ಕರೀಗೌಡ, ವಲಯ ಆಯುಕ್ತರಾದ ಸತೀಶ್, ರಮೇಶ್, ಜಂಟಿ ಆಯುಕ್ತರಾದ ಸಂಗಪ್ಪ, ದಾಕ್ಷಾಯಿಣಿ, ಎಲ್ಲಾ ವಲಯ ಮುಖ್ಯ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.