ಬೆಂಗಳೂರು ಖಾಸಗಿ ಕಾಲೇಜಿನ ಜೂನಿಯರ್ಸ್ vs ಸೀನಿಯರ್ಸ್ ಫೈಟ್: ನಿಮ್ಮ ಮಕ್ಕಳಿದ್ದಾರಾ ಒಮ್ಮೆ ನೋಡಿ!
ಬೆಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಓಣಂ ಹಬ್ಬದ ನಂತರ ಕೇರಳ ಮೂಲದ ಜೂನಿಯರ್ ಮತ್ತು ಸೀನಿಯರ್ ವಿದ್ಯಾರ್ಥಿಗಳ ನಡುವೆ ಬೀದಿ ಕಾಳಗ ನಡೆದಿದೆ. ಇದರಲ್ಲಿ ನಿಮ್ಮ ಮಕ್ಕಳೂ ಇದ್ದಾರಾ ಒಮ್ಮೆ ನೋಡಿ..

ಬೆಂಗಳೂರಲ್ಲಿ ಮಲೆಯಾಳಿ ವಿದ್ಯಾರ್ಥಿಗಳ ಫೈಟ್
ಬೆಂಗಳೂರು (ಸೆ.18): ನಗರದ ಹೊರವಲಯದಲ್ಲಿರುವ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಓಣಂ ಹಬ್ಬದ ನಂತರ ಪರಸ್ಪರ ಹೊಡೆದಾಡಿಕೊಂಡ ಘಟನೆ ನಡೆದಿದೆ. ಕೇರಳ ಮೂಲದ ಜೂನಿಯರ್ ಮತ್ತು ಸೀನಿಯರ್ ವಿದ್ಯಾರ್ಥಿಗಳ ನಡುವೆ ನಡೆದ ಈ ಮಾರಾಮಾರಿಯಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಘಟನೆ ವಿವರ
ನಿನ್ನೆ ಮಧ್ಯಾಹ್ನ, ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕಾಲೇಜಿನ ಮುಂಭಾಗದಲ್ಲಿ ಈ ಘಟನೆ ನಡೆದಿದೆ. ಓಣಂ ಹಬ್ಬದ ನಂತರ ಕ್ಷುಲ್ಲಕ ಕಾರಣಕ್ಕೆ ಜೂನಿಯರ್ ಮತ್ತು ಸೀನಿಯರ್ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಘಟನೆಯ ಕುರಿತು ದೂರು ದಾಖಲಾಗದಿದ್ದರೂ, ಪೊಲೀಸರು ಮತ್ತು ಕಾಲೇಜು ಆಡಳಿತ ಮಂಡಳಿ ಮಧ್ಯ ಪ್ರವೇಶಿಸಿ ವಿದ್ಯಾರ್ಥಿಗಳಿಂದ ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡಿದ್ದಾರೆ.
ಎರಡು ಗುಂಪುಗಳಾಗಿ ಭಾರೀ ಫೈಟ್
ವಿದ್ಯಾರ್ಥಿಗಳು ಸಿನಿಮಾ ಶೈಲಿಯಲ್ಲಿ ಎರಡು ಗುಂಪುಗಳಾಗಿ ಭಾರೀ ಫೈಟ್ ಮಾಡಿದ್ದಾರೆ. ಗೂಳಿ ಕಾಳಗದಂತೆ ನೂರಾರು ವಿದ್ಯಾರ್ಥಿಗಳು ರಸ್ತೆಯಲ್ಲಿ ಪರಸ್ಪರ ಮಾರಾಮಾರಿಯಾಗಿ ಹೊಡೆದಾಡಿಕೊಂಡಿದ್ದಾರೆ. ಇದರಿಂದ ಸ್ಥಳೀಯರಲ್ಲಿ ಆತಂಕ ಮೂಡಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ವಿದ್ಯಾರ್ಥಿಗಳು ಪುಂಡಾಟಿಕೆ ಮೆರೆಯದಂತೆ ಕಡಿವಾಣ ಹಾಕಲು ಮನವಿ ಮಾಡಿದ್ದಾರೆ.
Street fight breaks out in #Bengaluru!
Students of a private college in Avalahalli, near KR Puram, clashed over Onam celebrations on Wednesday. No major injuries.
College tells police the matter is resolved. @timesofindia (Video 1👇) pic.twitter.com/CJVDJTnjfU— TOI Bengaluru (@TOIBengaluru) September 18, 2025
ಪೊಲೀಸರ ಮಧ್ಯಸ್ಥಿಕೆ:
ಗಲಾಟೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಈ ಘಟನೆಯಿಂದ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಬಹುದು ಎಂದು ಕಾಲೇಜು ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿ ಆತಂಕ ವ್ಯಕ್ತಪಡಿಸಿದ್ದಾರೆ. ಹಾಗಾಗಿ, ಯಾವುದೇ ಅಧಿಕೃತ ದೂರು ದಾಖಲಿಸದೆ, ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಮುಂದೆ ಈ ರೀತಿ ಮಾಡುವುದಿಲ್ಲ ಎಂದು 'ತಪ್ಪೊಪ್ಪಿಗೆ ಪತ್ರ' ಬರೆಸಿಕೊಳ್ಳಲಾಗಿದೆ.
ಶಿಸ್ತು ಕಾಪಾಡುವಲ್ಲಿ ಕಾಲೇಜು ವಿಫಲ
ಪೊಲೀಸರು ಈ ವಿದ್ಯಾರ್ಥಿಗಳನ್ನು ತೀವ್ರ ವಿಚಾರಣೆ ನಡೆಸಿದ್ದು, ಹೊಡೆದಾಟಕ್ಕೆ ಕಾರಣವೇನೆಂದು ಪರಿಶೀಲಿಸುತ್ತಿದ್ದಾರೆ. ಈ ಘಟನೆಯು ಕಾಲೇಜು ಆವರಣದಲ್ಲಿ ಶಿಸ್ತು ಮತ್ತು ಸೌಹಾರ್ದತೆ ಕಾಪಾಡುವಲ್ಲಿ ಕಾಲೇಜು ಆಡಳಿತ ಮಂಡಳಿ ವಿಫಲವಾಗಿರುವುದನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.