ಜೈಲಿನಲ್ಲಿರುವ ದರ್ಶನ್: ‘ದಿ ಡೆವಿಲ್’ಗೂ ‘ಸಾರಥಿ’ ಮ್ಯಾಜಿಕ್ ಬರಲಿದೆಯಾ?
ಕೌಟುಂಬಿಕ ಕಲಹದ ವಿಚಾರದಲ್ಲಿ ನಟ ದರ್ಶನ್ ಅವರು 2011 ಸೆಪ್ಟೆಂಬರ್ 8ರಂದು ಅರೆಸ್ಟ್ ಆಗಿದ್ದರು. 29 ದಿನಗಳ ಕಾಲ ಜೈಲಿನಲ್ಲಿದ್ದರು. ಸದ್ಯ ‘ದಿ ಡೆವಿಲ್’ ಚಿತ್ರದ ಭವಿಷ್ಯದ ಬಗ್ಗೆ ಲೆಕ್ಕಾಚಾರ ಶುರುವಾಗಿದೆ.

ಕೊಲೆ ಆರೋಪಿತರಾಗಿರುವ ದರ್ಶನ್ ಅವರ ಜಾಮೀನು ರದ್ದಾಗಿ ಗುರುವಾರ (ಆ.14) ಜೈಲಿಗೆ ಹೋಗಿರುವ ಬೆನ್ನೆಲ್ಲೇ ಅವರ ನಟನೆಯ ‘ದಿ ಡೆವಿಲ್’ ಚಿತ್ರದ ಭವಿಷ್ಯದ ಬಗ್ಗೆ ಲೆಕ್ಕಾಚಾರ ಶುರುವಾಗಿದೆ. ಮತ್ತೊಂದು ಕಡೆ ‘ಸಾರಥಿ’ ಚಿತ್ರದ ಅದೃಷ್ಟವೇ ‘ದಿ ಡೆವಿಲ್’ ಚಿತ್ರಕ್ಕೂ ವರ್ಕ್ ಆಗಲಿದೆ ಎನ್ನುವ ನಂಬಿಕೆ ಅಭಿಮಾನಿಗಳದ್ದು.
ಸಾರಥಿ ಸಮಯದಲ್ಲೇ ಏನಾಗಿತ್ತು?: ಕೌಟುಂಬಿಕ ಕಲಹದ ವಿಚಾರದಲ್ಲಿ ನಟ ದರ್ಶನ್ ಅವರು 2011 ಸೆಪ್ಟೆಂಬರ್ 8ರಂದು ಅರೆಸ್ಟ್ ಆಗಿದ್ದರು. 29 ದಿನಗಳ ಕಾಲ ಜೈಲಿನಲ್ಲಿದ್ದರು. ಆದರೆ, ದರ್ಶನ್ ಅವರು ಜೈಲಿಗೆ ಹೋಗುವ ಮುನ್ನವೇ ದಿನಕರ್ ತೂಗದೀಪ್ ನಿರ್ದೇಶಿಸಿ, ದರ್ಶನ್ ಅವರು ನಾಯಕನಾಗಿ ನಟಿಸಿದ್ದ ‘ಸಾರಥಿ’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗಿತ್ತು.
ಅತ್ತ ದರ್ಶನ್ ಅವರು ಜೈಲಿಗೆ ಹೋಗುತ್ತಿದ್ದಂತೆಯೇ ಇತ್ತ 2011 ಸೆಪ್ಟೆಂಬರ್ 30ಕ್ಕೆ ‘ಸಾರಥಿ’ ತೆರೆಕಂಡಿತು. ತಮ್ಮ ನಟನೆಯ ಸಿನಿಮಾ ತೆರೆಕಂಡ 15 ದಿನಗಳ ನಂತರ ದರ್ಶನ್ ಅವರು ಜೈಲಿನಿಂದ ಆಚೆ ಬಂದರು. ‘ಸಾರಥಿ’ ಸಿನಿಮಾ ಎಲ್ಲಾ ನಿರೀಕ್ಷೆಗಳನ್ನು ಮೀರಿ ಸೂಪರ್ ಹಿಟ್ ಆಯಿತು.100 ದಿನಗಳ ಪ್ರದರ್ಶನಕಂಡು ಶತದಿನೋತ್ಸವ ಆಚರಿಸಿಕೊಂಡಿತ್ತು.
ಸಾರಥಿ ಮ್ಯಾಜಿಕ್ ಡೆವಿಲ್‌ಗೂ ವರ್ಕ್ ಆಗುತ್ತಾ?: ಮಿಲನ ಪ್ರಕಾಶ್ ನಿರ್ದೇಶನದ ‘ದಿ ಡೆವಿಲ್’ ಚಿತ್ರ ಅಕ್ಟೋಬರ್ 30 ಅಥವಾ 31ಕ್ಕೆ ತೆರೆಗೆ ಬರಲಿದೆ ಎನ್ನಲಾಗುತ್ತಿದೆ. ಇದರ ನಡುವೆ ಇಂದು (ಆಗಸ್ಟ್ 15) ಚಿತ್ರದ ಮೊದಲ ಹಾಡು ಬಿಡುಗಡೆ ಆಗುತ್ತಿದೆ. ಈ ಹೊತ್ತಿನಲ್ಲಿ ದರ್ಶನ್ ಅವರ ಜಾಮೀನು ರದ್ದಾಗಿ ಜೈಲು ಸೇರಿದ್ದಾರೆ.
‘ಸಾರಥಿ’ ಚಿತ್ರದಂತೆಯೇ ‘ದಿ ಡೆವಿಲ್’ ಚಿತ್ರದ ಭವಿಷ್ಯ ದರ್ಶನ್ ಅವರ ಅಭಿಮಾನಿಗಳ ಕೈಯಲ್ಲೇ ಇದೆ ಎನ್ನುವ ಮಾತು ಕೇಳಿಬರುತ್ತಿದೆ. ಅಂದು ‘ಸಾರಥಿ’ ಚಿತ್ರಕ್ಕೆ ಆದ ಮ್ಯಾಜಿಕ್ ಈಗ ‘ದಿ ಡೆವಿಲ್’ ಚಿತ್ರಕ್ಕೂ ಕೂಡಿ ಬರಲಿದೆಯೇ?