ಐತಿಹಾಸಿಕ ಯೋಧನಾಗಿ ಡಾಲಿ ಧನಂಜಯ: ‘ಹಲಗಲಿ’ ಚಿತ್ರದ ವಿಶೇಷತೆಗಳೇನು ಗೊತ್ತಾ?
‘ಹಲಗಲಿ’ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಿದೆ. ನಟ ಡಾಲಿ ಧನಂಜಯ ಅವರ ವೃತ್ತಿ ಪಯಣದಲ್ಲಿ ಮತ್ತೊಂದು ಮೈಲುಗಲ್ಲಿನ ಚಿತ್ರವಿದು ಅನ್ನೋದು ವಿಶೇಷ.

ಡಾಲಿ ಧನಂಜಯ ನಟನೆಯ ‘ಹಲಗಲಿ’ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಿದೆ. ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಫಸ್ಟ್ ಲುಕ್ ಜೊತೆಗೆ ಟೀಸರ್ ಬಿಡುಗಡೆ ಮಾಡಿಕೊಂಡಿರುವ ಈ ಐತಿಹಾಸಿಕ ಚಿತ್ರದ ನಾಯಕಿಯಾಗಿ ‘ಕಾಂತಾರ’ ಬೆಡಗಿ ಸಪ್ತಮಿ ಗೌಡ ನಟಿಸುತ್ತಿದ್ದಾರೆ.
ಸುಕೇಶ್ ಡಿ ಕೆ ನಿರ್ದೇಶನ, ಕಲ್ಯಾಣ್ ಚಕ್ರವರ್ತಿ ಧೂಳಿಪಾಳ್ಳ ನಿರ್ಮಾಣದ ಬಹು ತಾರಾಗಣದ ಅದ್ಧೂರಿ ಬಜೆಟ್‌ನ ಈ ಚಿತ್ರದ ಮೂಲಕ ಸ್ವಾತಂತ್ರ್ಯ ಪೂರ್ವದ ಹಲಗಲಿ ಊರಿನ ವೀರರ ಕತೆಯನ್ನು ಹೇಳಲಾಗುತ್ತಿದೆ.
ಎರಡು ಭಾಗಗಳಲ್ಲಿ ಮೂಡಿ ಬರಲಿರುವ ಈ ಸಿನಿಮಾ, ಕನ್ನಡ ಸೇರಿ ಐದು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ವಾಸುಕಿ ವೈಭವ್ ಸಂಗೀತ, ವಿಕ್ರಮ್ ಮೋರ್ ಸಾಹಸ ಚಿತ್ರಕ್ಕಿದೆ. ಸದ್ಯ ಬೆಂಗಳೂರಿನ ಬಳಿ ಹಲಗಲಿ ಊರಿನ ಬೃಹತ್ ಸೆಟ್ ಹಾಕಿದ್ದು, ಶೇ.40 ಭಾಗ ಚಿತ್ರೀಕರಣ ಮಾಡಲಾಗಿದೆ.
ನಟ ಡಾಲಿ ಧನಂಜಯ ಅವರ ವೃತ್ತಿ ಪಯಣದಲ್ಲಿ ಮತ್ತೊಂದು ಮೈಲುಗಲ್ಲಿನ ಚಿತ್ರವಿದು ಅನ್ನೋದು ವಿಶೇಷ. ಇಲ್ಲಿವರೆಗೂ ಅವರನ್ನು ತೆರೆ ಮೇಲೆ ವಿಭಿನ್ನ ಪಾತ್ರಗಳಲ್ಲಿ ನೋಡಿ ಮೆಚ್ಚಿದ್ದ ಪ್ರೇಕ್ಷಕರು, ಈಗ ವಾರಿಯರ್ ಪಾತ್ರದಲ್ಲಿ ನೋಡಲಿದ್ದಾರೆ.
ಇವರ ಕೈಗೆ ಬಿಲ್ಲು, ಬಾಣ, ಮದ್ದು- ಗುಂಡುಗಳನ್ನು ಕೊಟ್ಟು ಯುದ್ಧದ ಅಖಾಡಕ್ಕೆ ಇಳಿಸಿರುವುದು ಕನ್ನಡ ನಾಡಿನ ಇತಿಹಾಸ ಪುಟಗಳಲ್ಲಿ ಅಚ್ಚಳಿಯದೆ ದಾಖಲಾಗಿರುವ ಒಂದು ರೋಚಕ ಇತಿಹಾಸ.
ಬ್ರಿಟಿಷರ ವಿರುದ್ಧ ಮೊದಲ ಗೆರಿಲ್ಲಾ ವಾರ್ ಮಾಡಿದ ನಮ್ಮದೇ ರಾಜ್ಯದ ಹಲಗಲಿಯ ಊರಿನ ಬೇಡರ ಕುರಿತು ನಾವು ಓದಿರುವ ಮತ್ತು ಕೇಳಿರುವ ಸಂಗತಿಗಳು ಬಹು ರೋಚಕ. ಕನ್ನಡ ನಾಡಿನ ಈ ವೀರರ ಆಚಾರ- ವಿಚಾರ ಹಾಗೂ ಅವರ ಹೋರಾಟದ ಹೆಜ್ಜೆ ಗುರುತುಗಳನ್ನು ತೆರೆ ಮೇಲೆ ತರುವುದಕ್ಕೆ ಹೊರಟಿದ್ದಾರೆ ನಿರ್ದೇಶಕ ಸುಕೇಶ್.