ಮೋದಿಯವರು ಕೆರಳುವುದಕ್ಕೆ ಸುದೀರ್ಘ 9 ಗಂಟೆಗಳ ಅವಧಿ ಬೇಕಾಯ್ತು: ಪ್ರಿಯಾಂಕ್ ಖರ್ಗೆ
Priyank Kharge on BR Gavai incident: ಸುಪ್ರೀಂ ಕೋರ್ಟ್ ನ್ಯಾಯಾಧೀಶ ಬಿ.ಆರ್. ಗವಾಯಿ ಅವರ ಮೇಲಿನ ಶೂ ಎಸೆತ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಮೋದಿಯವರ ವಿಳಂಬ ಪ್ರತಿಕ್ರಿಯೆಯನ್ನು ಟೀಕಿಸಿದ್ದಾರೆ.

ಶೂ ಎಸೆತ ಯತ್ನ ಪ್ರಕರಣ
ಸುಪ್ರೀಂ ಕೋರ್ಟ್ ನ್ಯಾಯಾಧೀಶ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆತ ಯತ್ನ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ. ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಈ ಘಟನೆಯನ್ನು ಖಂಡಿಸೋದರ ಜೊತೆಯಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ತೀಕ್ಷ್ಣವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. ಈ ಘಟನೆ ಸಂಬಂಧ ಪ್ರಧಾನಿ ಮೋದಿ ಅವರ ವಿಳಂಬ ಪ್ರತಿಕ್ರಿಯೆಯನ್ನು ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ಸುದೀರ್ಘ 9 ಗಂಟೆಗಳ ಅವಧಿ
ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ಮೇಲಿನ ಶೂ ದಾಳಿಯು ಪ್ರತಿಯೊಬ್ಬ ಭಾರತೀಯರನ್ನೂ ಕೆರಳಿಸಿದೆ ಎಂದಿದ್ದಾರೆ ಪ್ರಧಾನಿ. ಘಟನೆ ನಡೆದಿದ್ದು ಬೆಳಗ್ಗೆ 11.30 ಗಂಟೆ ಸುಮಾರಿಗೆ, ಮೋದಿಯವರು ಕೆರಳಿ ಪ್ರತಿಕ್ರಿಯೆ ನೀಡಿದ್ದು ರಾತ್ರಿ 8.29ಗಂಟೆಗೆ! ಮೋದಿಯವರು ಕೆರಳುವುದಕ್ಕೆ ಸುದೀರ್ಘ 9 ಗಂಟೆಗಳ ಅವಧಿ ಹಿಡಿಯಿತು. ಅದೇ ಕ್ರಿಕೆಟ್ ಪಂದ್ಯದ ವಿಷಯವಾಗಿದ್ದರೆ ಕೆಲವೇ ಕ್ಷಣಗಳಲ್ಲಿ ಟ್ವೀಟ್ ಮಾಡುತ್ತಿದ್ದರು. ಪ್ರತಿಯೊಬ್ಬ ಭಾರತೀಯರನ್ನೂ ಕೆರಳಿಸಿದೆ ಎಂದಿದ್ದಾರೆ, ಆದರೆ ದೇಶದ ಗೃಹ ಸಚಿವ ಅಮಿತ್ ಶಾ ಕೆರಳಲಿಲ್ಲ, ಖಂಡಿಸಲಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈಗೇಕೆ ಮೌನ?
ಬಿಜೆಪಿ ಪಕ್ಷ ಕೆರಳಲಿಲ್ಲ, ಖಂಡಿಸಲಿಲ್ಲ. ಯಾವೊಬ್ಬ ಕೇಂದ್ರ ಮಂತ್ರಿಯೂ ಕೆರಳಿ ಖಂಡಿಸಲಿಲ್ಲ. ಯಾವೊಬ್ಬ ಬಿಜೆಪಿಗರೂ ಕೆರಳಿ ಬೀದಿಗಿಳಿಯಲಿಲ್ಲ. ಬದಲಾಗಿ ಈ ಶೂ ದಾಳಿಯನ್ನು ಬಿಜೆಪಿ ಹಾಗೂ ಸಂಘಪಾರಿವಾರದ ಬೆಂಬಲಿಗರು ಸಂಭ್ರಮಿಸುತ್ತಿದ್ದಾರೆ, ಇವರನ್ನು ನೋಡಿ ಮೋದಿಯವರು ಕೆರಳಲಿಲ್ಲ. ಮತಗಳ್ಳತನದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾಗ ಮಳೆಗಾಲದ ಕಪ್ಪೆಗಳಂತೆ ವಟಗುಟ್ಟಿದ್ದ ಬಿಜೆಪಿಯವರು ಈಗೇಕೆ ಮೌನವಾಗಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.
ನ್ಯಾಯಾಲಯದ ಪಾವಿತ್ರ್ಯತೆ
ಸಂವಿಧಾನದ ಘನತೆ, ನ್ಯಾಯಾಲಯದ ಪಾವಿತ್ರ್ಯತೆ ಬಿಜೆಪಿಗೆ ಮುಖ್ಯವಲ್ಲವೇ? ಇದು ಕೇವಲ ವ್ಯಕ್ತಿಯೊಬ್ಬ ವ್ಯಕ್ತಿಯ ಮೇಲೆ ನಡೆಸಿದ ದಾಳಿಯಲ್ಲ, ಮೋದಿಯವರೇ ಪಾಲಿಸಿ ಪೋಷಿಸುತ್ತಿರುವ ವಿಚಾರಧಾರೆಯು ಸಂವಿಧಾನದ ಮೇಲೆ ನಡೆಸಿದ ದಾಳಿ. ಮೋದಿಯವರು ನಿಜಕ್ಕೂ ಕೆರಳುವುದಿದ್ದರೆ ತಾವು ಪ್ರತಿನಿಧಿಸುವ ವಿಚಾರಧಾರೆಯ ವಿರುದ್ಧ ಕೆರಳಬೇಕು ಎಂದಿದ್ದಾರೆ.
ಮನುವಾದದ ಪ್ರವರ್ತಕರು
ಮನುವಾದದ ಪ್ರವರ್ತಕರು ಇಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮೇಲೆಯೇ ತನ್ನ 'ಶೂ' ಎಸೆದಿದ್ದಾರೆ. ಇದು ವ್ಯಕ್ತಿಯೊಬ್ಬರ ಮೇಲೆ ನಡೆದ ದಾಳಿಯಲ್ಲ, ನ್ಯಾಯದ ಮೇಲಿನ ದಾಳಿ, ಸಂವಿಧಾನದ ಮೇಲಿನ ದಾಳಿ. ಮನುವಾದಿಗಳ ಈ ಮನಸ್ಥಿತಿಯ ಪ್ರೋತ್ಸಾಹಕರು ಯಾರು ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಇದು ಕೇವಲ ಶೂ ದಾಳಿಯಲ್ಲ, ಮನುವಾದದ ಮತಾಂಧರು ನಡೆಸಿದ ಸಂವಿಧಾನದ ಮೌಲ್ಯಗಳ ಮೇಲಿನ ಭಯೋತ್ಪಾದಕ ದಾಳಿ ಎಂದು ಪ್ರಿಯಾಂಕ್ ಖರ್ಗೆ ವ್ಯಾಖ್ಯಾನಿಸಿದ್ದಾರೆ.
ಸಂವಿಧಾನ ಅಪಾಯದಲ್ಲಿದೆ
ಸಂವಿಧಾನದ ಮೇಲೆ ಮನುವಾದಿಗಳಿಗೆ ಇರುವ ಅಸಹನೆಗೆ ಹಾಗೂ ದೇಶದ ಅತ್ಯುನ್ನತ ಸ್ಥಾನದಲ್ಲಿದ್ದರೂ ಶೋಷಿತರ ಶೋಷಣೆ ತಪ್ಪಿದ್ದಲ್ಲ ಎನ್ನುವುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆ. “ಸಂವಿಧಾನ ಅಪಾಯದಲ್ಲಿದೆ“ ಎಂಬ ನಮ್ಮ ಆತಂಕಕ್ಕೆ ಇಂದು ನೇರ ಪುರಾವೆ ಸಿಕ್ಕಿದೆ.
ಇದನ್ನೂ ಓದಿ: ಸುಪ್ರೀಂ ನ್ಯಾಯಮೂರ್ತಿ ಮೇಲೆ ಶೂ ಎಸೆದ ವಕೀಲನ ಬಂಧನಕ್ಕೆ ಸಿದ್ದರಾಮಯ್ಯ ಆಗ್ರಹ
ಮನುವಾದಿಗಳ ಈ ಕಪ್ಪು ಚುಕ್ಕೆ
ಈ ದೇಶದ ಆಡಳಿತ ಇಂದು ಸಂವಿಧಾನದ ಮೌಲ್ಯಗಳಿಗೆ ಅನುಗುಣವಾಗಿ ನಡೆಯುತ್ತಿಲ್ಲವೇ? ಆರೆಸ್ಸೆಸ್ ಪ್ರತಿಪಾದಿಸುವ ಮನುಸ್ಮೃತಿಯ ಆಧಾರದಲ್ಲಿ ನಡೆಯುತ್ತಿದೆಯೇ? ಈ ಘಟನೆಯ ಹೊಣೆಯನ್ನು ಕೇಂದ್ರ ಸರ್ಕಾರ ಹೊರುತ್ತದೆಯೇ? ದೇಶದ ಇತಿಹಾಸದಲ್ಲಿ ಎಂದೂ ನಡೆಯದ ಈ ಮಾದರಿಯ ಕೃತ್ಯ ಈಗ ನಡೆದಿದೆ. ಮನುವಾದಿಗಳ ಈ ಕಪ್ಪು ಚುಕ್ಕೆಯನ್ನು ಎಂದಿಗೂ ಅಳಿಸಲು ಸಾಧ್ಯವಿಲ್ಲ ಎಂದು ಪ್ರಿಯಾಂಕ್ ಖರ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಜಡ್ಜ್ ಮೇಲೆ ಶೂ ಎಸೆತ ಯತ್ನ: ಮನುವಾದಿ ಮನಸ್ಸುಗಳು ಸಮಾಜದಲ್ಲಿ ಹುಟ್ಟಿಕೊಂಡಿವೆ ಎಂದ ಸಿಎಂ ಸಿದ್ದರಾಮಯ್ಯ