ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರಿಗೆ ವಕೀಲನೊಬ್ಬ ಶೂ ಎಸೆದು ಅವಮಾನ ಮಾಡಿರುವ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಬೆಂಗಳೂರು (ಅ.07): ‘ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರಿಗೆ ವಕೀಲನೊಬ್ಬ ಶೂ ಎಸೆದು ಅವಮಾನ ಮಾಡಿರುವ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಮುಖ್ಯನ್ಯಾಯಮೂರ್ತಿಗಳು ಮತ್ತು ನ್ಯಾಯಾಲಯಕ್ಕೆ ಅವಮಾನ ಮಾಡಿರುವ ಕಿಡಿಗೇಡಿ ವಕೀಲನನ್ನು ತಕ್ಷಣ ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಜತೆಗೆ ನಾಥೂರಾಮ್ ಗೋಡ್ಸೆಯಂತಹ ಒಬ್ಬ ಕೊಲೆಗಡುಕನನ್ನು ದೇಶಪ್ರೇಮಿ ಎಂದು ಮೆರೆಸಲು ಹೊರಟಿರುವ ರೀತಿಯಲ್ಲೇ ಕೆಲ ಪುಂಡರು ವಕೀಲನ ಕುಕೃತ್ಯ ಸಂಭ್ರಮಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಇಂಥವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕಾದ ಅಗತ್ಯ ಇದೆ ಎಂದು ಹೇಳಿದ್ದಾರೆ. ಈ ಬಗ್ಗೆ ಅಧಿಕೃತ ಸಾಮಾಜಿಕ ಜಾಲತಾಣದ ಮೂಲಕ ಅಧಿಕೃತ ಹೇಳಿಕೆ ನೀಡಿರುವ ಅವರು, ದಲಿತ ಸಮುದಾಯಕ್ಕೆ ಸೇರಿರುವ ನ್ಯಾ.ಬಿ.ಆರ್.ಗವಾಯಿ ಅವರು ಸಾಮಾಜಿಕ ಪ್ರತಿರೋಧಗಳನ್ನು ಎದುರಿಸಿ ಅರ್ಹತೆ ಮತ್ತು ಸಾಧನೆ ಮೂಲಕ ಉನ್ನತ ಸ್ಥಾನಕ್ಕೇರಿದವರು.
ಇಂದಿನ ಘಟನೆ ಸಾಕ್ಷಿ: ಜಾತಿ ಮೂಲದ ಅಸಮಾನತೆ ಮತ್ತು ಅಸಹನೆ ಸಂವಿಧಾನ ಜಾರಿಗೆ ಬಂದ 75 ವರ್ಷಗಳ ನಂತರವೂ ಮನುವಾದಿಗಳ ಮನಸ್ಸಲ್ಲಿ ಭಧ್ರವಾಗಿ ಉಳಿದುಕೊಂಡಿದೆ ಎನ್ನುವುದಕ್ಕೆ ಇಂದಿನ ಘಟನೆ ಸಾಕ್ಷಿ ಎಂದು ಕಿಡಿ ಕಾರಿದ್ದಾರೆ. ಜಾತಿ ಮತ್ತು ಧರ್ಮದ ಹೆಸರಲ್ಲಿ ಸಮಾಜವನ್ನು ಒಡೆದು, ಪರಸ್ಪರ ದ್ವೇಷ ಮತ್ತು ಅಸಹನೆ ಹುಟ್ಟುಹಾಕಿರುವ ಕಾರಣಕ್ಕಾಗಿಯೇ ರಾಕೇಶ್ ಕಿಶೋರ್ ನಂತಹ ಮನುವಾದಿ ಮನಸ್ಸುಗಳು ಸಮಾಜದಲ್ಲಿ ಹುಟ್ಟಿಕೊಂಡಿವೆ ಎಂದು ಅವರು ಹೇಳಿದ್ದಾರೆ.
ಕಮ್ಮಿ ತೆರಿಗೆ ಹಂಚಿಕೆ ವಿರುದ್ಧ ಸಿಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಕೇಂದ್ರ ಸರ್ಕಾರ ₹3705 ಕೋಟಿ ತೆರಿಗೆ ಪಾಲು ಹಂಚಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಡಿದೆದ್ದಿದ್ದಾರೆ. ‘ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿಯೇ ಕರ್ನಾಟಕಕ್ಕೆ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿರುವ ಅವರು, ಅಗತ್ಯ ಬಿದ್ದರೆ ನ್ಯಾಯಾಲಯದ ಮೆಟ್ಟಿಲೇರಿ ನಮ್ಮ ಪಾಲನ್ನು ನಾವು ಪಡೆಯುತ್ತೇವೆ’ ಎಂದಿದ್ದಾರೆ. ‘ರಾಜ್ಯಕ್ಕೆ ಮೊದಲಿನಿಂದಲೂ ಕೇಂದ್ರದಿಂದ ಅನ್ಯಾಯವಾಗುತ್ತಿದೆ. ನಾವು ಕೊಟ್ಟಿದ್ದನ್ನು ನ್ಯಾಯ ಸಮ್ಮತವಾಗಿ ನಮಗೆ ವಾಪಸ್ ಕೊಡಿ ಎಂದು ಕೇಳುವುದು ತಪ್ಪಾ?’ ಎಂದು ಪ್ರಶ್ನಿಸಿದರು. ದಿನಬಳಕೆ ವಸ್ತುಗಳ ಮೇಲೆ ಜಿಎಸ್ಟಿ ಕಡಿಮೆ ಮಾಡಿದ್ದರಿಂದ ನಮಗೆ 15 ಸಾವಿರ ಕೋಟಿ ರು.ನಷ್ಟ ಆಗುತ್ತಿದೆ.
ಜಿಎಸ್ಟಿ ಕಡಿಮೆ ಮಾಡಿದ್ದನ್ನು ನಾವು ಸ್ವಾಗತಿಸಬೇಕು. ಆದರೆ, ನಷ್ಟವನ್ನೂ ನಾವೇ ಅನುಭವಿಸಬೇಕು. ಕಳೆದ 8 ವರ್ಷದಿಂದ ಕೇಂದ್ರ ಸರ್ಕಾರ ದಿನಬಳಕೆ ವಸ್ತುಗಳ ಮೇಲೆ ಜಿಎಸ್ಪಿಯನ್ನು ಹೆಚ್ಚಿಗೆ ಮಾಡಿ, ರಾಜ್ಯದಿಂದ ಅತಿ ಹೆಚ್ಚು ಜಿಎಸ್ಟಿ ವಸೂಲಿ ಮಾಡಿದೆ. ಆ ಹಣವನ್ನು ಈಗ ವಾಪಸ್ ಕೊಡುತ್ತಾರಾ?. ಜಾಸ್ತಿ ಮಾಡುವುದೂ ಇವರೇ, ಕಡಿಮೆ ಮಾಡುವುದೂ ಇವರೇ. ಇದರಲ್ಲಿ ಯಾವ ದೊಡ್ಡತನವೂ ಇಲ್ಲ. ಇದರಲ್ಲಿ ಬೆನ್ನು ತಟ್ಟಿಕೊಳ್ಳುವಂತದ್ದು ಏನಿದೆ?. ಬಿಹಾರದಲ್ಲಿ ಚುನಾವಣೆ ಇರುವ ಕಾರಣ, ಜಿಎಸ್ಟಿಯನ್ನು ಕಡಿತ ಮಾಡಿದ್ದಾರೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ಎಂದು ಆರೋಪಿಸಿದರು.
