- Home
- Karnataka Districts
- ಚಿತ್ರದುರ್ಗ ವರ್ಷಿತಾ ಕೊಲೆ ಕೇಸ್ ರಿವೀಲ್: 3ನೇ ಸ್ಟೇಜ್ ಕ್ಯಾನ್ಸರ್ ರೋಗಿ ಪ್ರೀತಿ ಮಾಡದಿದ್ದಕ್ಕೆ ಮರ್ಡರ್!
ಚಿತ್ರದುರ್ಗ ವರ್ಷಿತಾ ಕೊಲೆ ಕೇಸ್ ರಿವೀಲ್: 3ನೇ ಸ್ಟೇಜ್ ಕ್ಯಾನ್ಸರ್ ರೋಗಿ ಪ್ರೀತಿ ಮಾಡದಿದ್ದಕ್ಕೆ ಮರ್ಡರ್!
ಚಿತ್ರದುರ್ಗದಲ್ಲಿ ನಡೆದ 19 ವರ್ಷದ ವಿದ್ಯಾರ್ಥಿನಿ ವರ್ಷಿತಾ ಕೊಲೆ ಪ್ರಕರಣದ ಆರೋಪಿ ಚೇತನ್‌ನನ್ನು ಪೊಲೀಸರು ಬಂಧಿಸಿದ್ದಾರೆ. 3ನೇ ಸ್ಟೇಜ್ ಕ್ಯಾನ್ಸರ್ ಪೇಷಂಟ್‌ನ ಪ್ರೀತಿ ನಿರಾಕರಿಸಿದ್ದಕ್ಕೆ ಕೊಲೆ ಮಾಡಿ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾನೆ.

ಚಿತ್ರದುರ್ಗ (ಆ.21): ನಗರದಲ್ಲಿ ಇತ್ತೀಚೆಗೆ ನಡೆದ ವಿದ್ಯಾರ್ಥಿನಿ ವರ್ಷಿತಾ (19) ಕೊಲೆ ಪ್ರಕರಣದ ರಹಸ್ಯವನ್ನು ಚಿತ್ರದುರ್ಗ ಪೊಲೀಸರು ಭೇದಿಸಿದ್ದು, ವರ್ಷಿತಾಳನ್ನು ಕೊಲೆ ಮಾಡಿದ್ದ ಆರೋಪಿ ಚೇತನ್‌ನನ್ನು ಬಂಧಿಸಿದ್ದಾರೆ.
ಆರೋಪಿ ಚೇತನ್‌ನನ್ನು ಪ್ರೀತಿಸಲು ನಿರಾಕರಿಸಿದ ಕಾರಣಕ್ಕೆ ಹಾಗೂ ತನ್ನ ಅನಾರೋಗ್ಯದ ವಿಷಯ ತಿಳಿದ ನಂತರ ದೂರವಾಗಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಈ ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ತಿಳಿಸಿದ್ದಾರೆ.
ಕೊಲೆಗೂ ಮುನ್ನ ಪೆಟ್ರೋಲ್ ಖರೀದಿಸಿದ್ದ ಆರೋಪಿ: ಚಿತ್ರದುರ್ಗದ ಎಸ್ಪಿ ರಂಜಿತ್ ಕುಮಾರ್ ಬಂಡಾರು ಅವರು ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಕೆಳಗೋಟೆ ಬಡಾವಣೆಯ ನಿವಾಸಿ, ಖಾಸಗಿ ಕಂಪನಿಯ ಉದ್ಯೋಗಿ ಚೇತನ್ (20) ಎಂಬಾತನನ್ನು ಬಂಧಿಸಲಾಗಿದೆ.
ಕಳೆದ 11 ತಿಂಗಳ ಹಿಂದೆ ಚೇತನ್‌ಗೆ ವರ್ಷಿತಾಳ ಪರಿಚಯವಾಗಿತ್ತು. ಕೆಲಸ ಕೊಡಿಸುವುದಾಗಿ ನಂಬಿಸಿದ್ದ ಚೇತನ್, ಆಕೆಯೊಂದಿಗೆ ಪ್ರೇಮ ಬೆಳೆಸಿದ್ದನು. ಆದರೆ, ಆತನಗೆ ಕ್ಯಾನ್ಸರ್ 3ನೇ ಹಂತದಲ್ಲಿದೆ ಎಂದು ವರ್ಷಿತಾಗೆ ತಿಳಿದ ನಂತರ, ಆಕೆ ಚೇತನ್‌ನನ್ನು ಅವಾಯ್ಡ್ ಮಾಡಲು ಶುರುಮಾಡಿದ್ದಳು. ಬೇರೆ ಯುವಕನೊಂದಿಗೆ ಮಾತನಾಡಲು ಆರಂಭಿಸಿದ್ದಳು.
ಈ ನಡುವೆ, ವರ್ಷಿತಾ ಗರ್ಭಿಣಿಯಾಗಿದ್ದಳು. ಈ ವಿಷಯ ತಿಳಿದ ಆಕೆಯ ಚಿಕ್ಕಮ್ಮ ಚೇತನ್‌ಗೆ ಕರೆ ಮಾಡಿ ಮದುವೆಯಾಗುವಂತೆ ಒತ್ತಡ ಹಾಕಿದ್ದರು. ಇದರಿಂದ ಕೋಪಗೊಂಡ ಚೇತನ್, ವರ್ಷಿತಾಳನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದನು.
ಆಗಸ್ಟ್ 18ರಂದು ವರ್ಷಿತಾಳಿಗೆ ಕರೆ ಮಾಡಿ ಚಿತ್ರದುರ್ಗಕ್ಕೆ ಬರುವಂತೆ ತಿಳಿಸಿದ್ದನು. ವರ್ಷಿತಾ ಬರುವ ಮೊದಲೇ ಚೇತನ್ ಪೆಟ್ರೋಲ್ ಖರೀದಿಸಿದ್ದನು. ಗೋನೂರು ಗ್ರಾಮದ ಬಳಿಗೆ ಕರೆದೊಯ್ದು ಆಕೆಯ ಕುತ್ತಿಗೆ ಹಿಸುಕಿ ಕೊಲೆ ಮಾಡಿ, ನಂತರ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಎಂದು ಎಸ್ಪಿ ತಿಳಿಸಿದರು.
ಸ್ಥಳ ಮಹಜರು ನಡೆಸಿದ ಪೊಲೀಸರು: ಕೊಲೆ ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಸಿಪಿಐ ಮುದ್ದುರಾಜ್ ಅವರ ನೇತೃತ್ವದಲ್ಲಿ ಆರೋಪಿ ಚೇತನ್‌ನನ್ನು ಗೋನೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 48ರ ಬಳಿ ಕರೆದೊಯ್ದು ಸ್ಥಳ ಮಹಜರು ನಡೆಸಿದರು.
ಆರೋಪಿ ಚೇತನ್ ಕೊಲೆ ಮಾಡಿದ ಸ್ಥಳವನ್ನು ತೋರಿಸಿ, ಕೃತ್ಯದ ಕುರಿತು ಮಾಹಿತಿ ನೀಡಿದ್ದಾನೆ. ಪೊಲೀಸರು ಆರೋಪಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ. ಈ ಘಟನೆ ಚಿತ್ರದುರ್ಗದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.