- Home
- Karnataka Districts
- ಗ್ಯಾಸ್ಟ್ರಿಕ್ ಸಮಸ್ಯೆ ಮುಚ್ಚಿಟ್ಟು ಮದುವೆಯಾದ ಹೆಂಡತಿಗೆ ಇಂಜೆಕ್ಷನ್ ಕೊಟ್ಟು ಕೊಲೆಗೈದ ಡಾಕ್ಟರ್ ಗಂಡ!
ಗ್ಯಾಸ್ಟ್ರಿಕ್ ಸಮಸ್ಯೆ ಮುಚ್ಚಿಟ್ಟು ಮದುವೆಯಾದ ಹೆಂಡತಿಗೆ ಇಂಜೆಕ್ಷನ್ ಕೊಟ್ಟು ಕೊಲೆಗೈದ ಡಾಕ್ಟರ್ ಗಂಡ!
ಬೆಂಗಳೂರಿನಲ್ಲಿ, ವೈದ್ಯ ಪತಿಯೊಬ್ಬ ತನ್ನ ಪತ್ನಿಯ ಆರೋಗ್ಯ ಸಮಸ್ಯೆಗಳಿಂದ ಬೇಸತ್ತು, ಇಂಜೆಕ್ಷನ್ ನೀಡಿ ಕೊಲೆ ಮಾಡಿದ್ದಾನೆ. ಸಹಜ ಸಾವು ಎಂದು ಬಿಂಬಿಸಲಾಗಿದ್ದ ಈ ಕೃತ್ಯವು, 6 ತಿಂಗಳ ನಂತರ ಎಫ್‌ಎಸ್‌ಎಲ್ ವರದಿಯಿಂದ ಬಯಲಾಗಿದ್ದು, ಮಾರತ್ ಹಳ್ಳಿ ಪೊಲೀಸರು ಆರೋಪಿ ಡಾ. ಮಹೇಂದ್ರ ರೆಡ್ಡಿಯನ್ನು ಬಂಧಿಸಿದ್ದಾರೆ.

ಹೆಂಡತಿಗೆ ಇಂಜೆಕ್ಷನ್ ನೀಡಿ ಕೊಲೆಗೈದ ಡಾ. ಗಂಡ
ಬೆಂಗಳೂರು (ಅ.15): ಬೆಂಗಳೂರಿನಲ್ಲಿ ನಡೆದ ಒಂದು ವೈದ್ಯಕೀಯ ಜ್ಞಾನವನ್ನೇ ಬಳಸಿ ಮಾಡಿದ ಕ್ರೂರ ಕೊಲೆಯ ಸತ್ಯ 6 ತಿಂಗಳ ಬಳಿಕ ಬೆಳಕಿಗೆ ಬಂದಿದೆ. ವೈದ್ಯ ದಂಪತಿಗಳ ನಡುವಿನ ಈ ಪ್ರಕರಣದಲ್ಲಿ, ಪತಿ ಡಾ. ಮಹೇಂದ್ರ ರೆಡ್ಡಿ ತನ್ನ ಪತ್ನಿ ಡಾ. ಕೃತಿಕಾ ರೆಡ್ಡಿ ಅವರನ್ನು ಇಂಜೆಕ್ಷನ್ ನೀಡಿ ಕೊಲೆ ಮಾಡಿ, ಅದನ್ನು ಸಹಜ ಸಾವು ಎಂದು ಬಿಂಬಿಸಿದ್ದ. ಇದೀಗ ಎಫ್‌ಎಸ್‌ಎಲ್ ವರದಿ ಆಧರಿಸಿ ಮಾರತ್ ಹಳ್ಳಿ ಪೊಲೀಸರು ಮಹೇಂದ್ರ ರೆಡ್ಡಿ ಅವರನ್ನು ಬಂಧಿಸಿದ್ದಾರೆ.
ಘಟನೆ ಮತ್ತು ಹಿನ್ನೆಲೆ:
ಡಾ. ಮಹೇಂದ್ರ ರೆಡ್ಡಿ (ಜನರಲ್ ಸರ್ಜನ್) ಮತ್ತು ಡಾ. ಕೃತಿಕಾ ರೆಡ್ಡಿ (ಡರ್ಮೆಟಾಲಜಿಸ್ಟ್) ಇಬ್ಬರೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಇವರ ಮದುವೆ 26/05/2024 ರಂದು ನಡೆದಿತ್ತು. ಮದುವೆಯಾಗಿ ಕೇವಲ 11 ತಿಂಗಳ ನಂತರ, ಅಂದರೆ 23/04/2025 ರಂದು ಕೃತಿಕಾ ರೆಡ್ಡಿ ತಮ್ಮ ತಂದೆಯ ಮನೆಯಲ್ಲಿದ್ದಾಗ ಜ್ಞಾನ ತಪ್ಪಿ ಸಾವನ್ನಪ್ಪಿದ್ದರು.
ಕೊಲೆಗೆ ಕಾರಣ:
ಮದುವೆಗೂ ಮುನ್ನ ಕೃತಿಕಾ ರೆಡ್ಡಿಯವರಿಗೆ ಅಜೀರ್ಣ, ಗ್ಯಾಸ್ಟಿಕ್ ಮತ್ತು ಲೋ ಶುಗರ್‌ನಂತಹ ಆರೋಗ್ಯ ಸಮಸ್ಯೆಗಳಿದ್ದವು. ಈ ವಿಷಯವನ್ನು ಯುವಕನಿಗೆ (ಮಹೇಂದ್ರ) ತಿಳಿಸದೆ ಮದುವೆ ಮಾಡಲಾಗಿತ್ತು. ಮದುವೆಯ ಬಳಿಕ ಈ ವಿಚಾರ ತಿಳಿದ ಮಹೇಂದ್ರ ರೆಡ್ಡಿ, ಪತ್ನಿಗೆ ನಿತ್ಯ ವಾಂತಿ ಹಾಗೂ ಇತರ ಸಮಸ್ಯೆಗಳು ಆಗುತ್ತಿದ್ದರಿಂದ ಬೇಸತ್ತು ಕೊಲೆಗೆ ಸಂಚು ರೂಪಿಸಿದ್ದನು.
ವೈದ್ಯಕೀಯ ಜ್ಞಾನದ ದುರ್ಬಳಕೆ:
ಮನೆಯಲ್ಲಿ ಹುಷಾರಿಲ್ಲದೆ ಮಲಗಿದ್ದ ಕೃತಿಕಾ ರೆಡ್ಡಿ ಅವರ ತಂದೆ ಮನೆಯಲ್ಲಿಯೇ ಆರೋಪಿ ಮಹೇಂದ್ರ ರೆಡ್ಡಿ ಆಕೆಗೆ ಇಂಜೆಕ್ಷನ್ ಮೂಲಕ ಒಂದಷ್ಟು ಮೆಡಿಸಿನ್ ನೀಡಿದ್ದ. ಎರಡು ದಿನ ನಿರಂತರವಾಗಿ ಈ ಔಷಧಿಯನ್ನು ಐವಿ ಇಂಜೆಕ್ಷನ್ ಮೂಲಕ ನೀಡಲಾಗಿತ್ತು.
ಅನಾರೋಗ್ಯದಿಂದ ಮನೆಯಲ್ಲೇ ಸಾವು:
ಅನಾರೋಗ್ಯ ಮತ್ತು ಗಂಡನ ಇಂಜೆಕ್ಷನ್‌ನಿಂದ ಬಳಲಿದ ಡಾ. ಕೃತಿಕಾ 23/04/2025 ರಂದು ಜ್ಞಾನ ತಪ್ಪಿದ್ದಾರೆ. ಕೂಡಲೇ, ಮನೆಯವರು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ, ಆಸ್ಪತ್ರೆಗೆ ಬರುವ ಮೊದಲೇ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದರು.
ಕುಟುಂಬದ ಹಿಂದೇಟು, ಪೊಲೀಸರ ಯುಡಿಆರ್:
ಘಟನೆ ಬಳಿಕ ಆಸ್ಪತ್ರೆಯಿಂದ ಡೆತ್ ಮೆಮೊ ಬಂದಿತ್ತು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ದೂರು ನೀಡುವಂತೆ ಕುಟುಂಬಕ್ಕೆ ತಿಳಿಸಿದ್ದರು. ಆದರೆ, ಇದು ಸಹಜ ಸಾವು ಎಂದು ನಂಬಿದ್ದ ಕುಟುಂಬ ದೂರು ನೀಡಲು ಹಿಂದೇಟು ಹಾಕಿತ್ತು. ಈ ವೇಳೆ, ಮಾರತ್ ಹಳ್ಳಿ ಪೊಲೀಸರು ಕುಟುಂಬದಿಂದ ದೂರು ಪಡೆದು, ಅಸಹಜ ಸಾವು (UDR) ಎಂದು ಪ್ರಕರಣ ದಾಖಲಿಸಿಕೊಂಡು, ಮರಣೋತ್ತರ ಪರೀಕ್ಷೆ ನಡೆಸಿ ಸ್ಯಾಂಪಲ್‌ಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದರು.
ಎಫ್‌ಎಸ್‌ಎಲ್ ವರದಿಯಲ್ಲಿ ಕೊಲೆ ಸತ್ಯ:
ಆರು ತಿಂಗಳ ಬಳಿಕ ಬಂದ ಎಫ್‌ಎಸ್‌ಎಲ್ (FSL) ವರದಿಯಲ್ಲಿ, ಮೃತಳ ದೇಹದಲ್ಲಿ ಅನಸ್ತೇಶಿಯಾ (Anesthesia) ಅಂಶಗಳು ಕಂಡುಬಂದಿದ್ದು, ಸಾವಿಗೆ ಇದೇ ಕಾರಣ ಎಂದು ಖಚಿತಪಡಿಸಲಾಗಿದೆ. ವರದಿ ಆಧರಿಸಿ, ಯುಡಿಆರ್ ಆಗಿದ್ದ ಪ್ರಕರಣವನ್ನು ಕೊಲೆ (Murder) ಎಂದು ಪರಿವರ್ತಿಸಿ ಮಾರತ್ ಹಳ್ಳಿ ಪೊಲೀಸರು ಕೇಸ್ ದಾಖಲಿಸಿದರು.
ಆರೋಪಿ ಡಾ. ಮಹೇಂದ್ರ ಬಂಧನ:
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಬೆಂಗಳೂರಿನಿಂದ ಮಣಿಪಾಲಕ್ಕೆ ತೆರಳಿದ್ದ ಆರೋಪಿ ಡಾ. ಮಹೇಂದ್ರ ರೆಡ್ಡಿ ಅವರನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ. ಸದ್ಯ ಆರೋಪಿಯ ತೀವ್ರ ವಿಚಾರಣೆ ಮುಂದುವರಿದಿದೆ.