ಎಡವಟ್ಟಿನಿಂದ 1 ಕೋಟಿ ಕಳೆದುಕೊಂಡ ಭಾರತೀಯ ರೈಲ್ವೆ; ಟೋಪಿ ಬಿದ್ದಿದ್ದೇಗೆ?
ಭಾರತೀಯ ರೈಲ್ವೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ರಕ್ತಚಂದನ ಎಂದು ಭಾವಿಸಿ ಒಂದು ಮರಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡಿತ್ತು. ಆದರೆ, ಆ ಮರ ಬಿಜಸಲ್ ಮರ ಎಂದು ಪರೀಕ್ಷೆಯಲ್ಲಿ ತಿಳಿದುಬಂದಿದ್ದು, ರೈಲ್ವೆ ಈಗ ಹಣ ವಾಪಸ್ ಪಡೆಯಲು ನ್ಯಾಯಾಲಯದ ಮೊರೆ ಹೋಗಿದೆ.

ಭಾರತೀಯ ರೈಲ್ವೆ ಮಾಡಿಕೊಂಡ ಒಂದು ಸಣ್ಣ ತಪ್ಪಿನಿಂದಾಗಿ ಬರೋಬ್ಬರಿ 1 ಕೋಟಿ ರೂಪಾಯಿ ಕಳೆದುಕೊಂಡಿದೆ. ಇದೀಗ ಹಣಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದೆ. 10 ಸಾವಿರ ಬದಲಾಗಿ ಇಂಡಿಯನ್ ರೈಲ್ವೇಸ್ 1 ಕೋಟಿ ರೂಪಾಯಿ ಪರಿಹಾರ ನೀಡಿ ಎಡವಟ್ಟು ಮಾಡಿಕೊಂಡಿದೆ.
ಮಹಾರಾಷ್ಟ್ರದ ಯಾವತ್ಮಲ್ ಜಿಲ್ಲೆಯಲ್ಲಿನ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಭಾರತೀಯ ರೈಲ್ವೆ ಹಣ ಕಳೆದುಕೊಂಡಿದೆ. ಯಾವತ್ಮಾಲ್ ಜಿಲ್ಲೆಯ ಖರ್ಶಿ ಗ್ರಾಮದ ರೈತ ಕೇಶವ್ ತುಕಾರಾಮ್ ಶಿಂಧೆ ಅವರ ಭೂಮಿಯನ್ನು 2018ರಲ್ಲಿ ಸ್ವಾಧೀನಪಡಿಸಿಕೊಂಡಿತ್ತು. ಈ ವೇಳೆ ವಾರ್ಧಾ-ಯವತ್ಮಾಲ್-ಪುಸಾದ್-ನಾಂದೇಡ್ ಮಾರ್ಗದ ಕಾಮಗಾರಿ ನಡೆಯುತ್ತಿತ್ತು.
ಕೇಶವ್ ತುಕಾರಮ್ ಶಿಂಧೆ ಅವರ ಜಮೀನಿನಲ್ಲಿ ಪ್ರಾಚೀನ ಮರವೊಂದನ್ನು ಗುರುತಿಸಲಾಗಿತ್ತು. ಜಮೀನಿನಂತೆ ಅಲ್ಲಿರುವ ಮರಗಳನ್ನು ಆಸ್ತಿ ಎಂದು ಪರಿಗಣಿಸಿ ಪರಿಹಾರ ನೀಡಬೇಕೆಂದು ಆಗ್ರಹಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಕೇಶವ್ ಜಮೀನಿನಲ್ಲಿರುವ ಮರವನ್ನು ದುಬಾರಿ ಮೌಲ್ಯದ ರಕ್ತಚಂದನ ಎಂದು ಗುರುತಿಸಲಾಗಿತ್ತು. ಈ ಮರಕ್ಕೆ ಮಧ್ಯಂತರ ಪರಿಹಾರವಾಗಿ 1 ಕೋಟಿ ರೂ. ನೀಡಬೇಕೆಂದು ನ್ಯಾಯಾಲಯ ರೈಲ್ವೆ ಇಲಾಖೆಗೆ ಆದೇಶಿಸಿತ್ತು.
ನ್ಯಾಯಾಲಯದ ಆದೇಶದ ಮೇರೆಗೆ ರೈತ ಕೇಶವ್ ತುಕಾರಮ್ ಶಿಂಧೆ ಅವರಿಗೆ ಪರಿಹಾರವನ್ನು ವಿತರಿಸಲಾಗಿತ್ತು. ಇತ್ತೀಚೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಈ ಮರದ ತುಂಡನ್ನು ಬೆಂಗಳೂರು ಮೂಲದ ಇನ್‌ಸ್ಟಿಟ್ಯೂಟ್ ಆಫ್ ವುಡ್ ಸೈನ್ಸ್ ಆಂಡ್ ಟೆಕ್ನಾಲಜಿಗೆ ಕಳುಹಿಸಲಾಗಿತ್ತು. ಈ ಪರೀಕ್ಷೆಯಲ್ಲಿ ಇದು ರಕ್ತಚಂದನ ಅಲ್ಲ, ಅದು ಬಿಜಸಲ್ ಮರ ಎಂದು ತಿಳಿದು ಬಂದಿದೆ. ಇದು ಸಾಮಾನ್ಯವಾದ ಮರವಾಗಿದ್ದು, ಇದರ ಮೌಲ್ಯ 10,981 ರೂಪಾಯಿ ಆಗಿತ್ತು.
ಇದೀಗ ರೈಲ್ವೆ ಇಲಾಖೆ ಈ ವರದಿಯನ್ನು ಆಧಾರವಾಗಿಟ್ಟುಕೊಂಡು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದ ಮುಂದೆ ಹೋಗಿದೆ. ತಪ್ಪಾಗಿ ಪಾವತಿಸಿದ 1 ಕೋಟಿ ರೂಪಾಯಿ ಹಣ ಹಿಂದಿರಗಿಸುವಂತೆ ಅರ್ಜಿ ಸಲ್ಲಿಸಿದೆ. ಮರಗಳ ಗುರುತಿನಲ್ಲಿ ತಪ್ಪಾಗಿದ್ದರಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ.