ವಿಶ್ವ ಆಹಾರ ಸುರಕ್ಷತಾ ದಿನ: ಯಾಕೆ ಆಚರಿಸಲಾಗುತ್ತೆ?
ಪ್ರತಿ ವರ್ಷ ಜೂನ್ 7 ರಂದು ವಿಶ್ವ ಆಹಾರ ಸುರಕ್ಷತಾ ದಿನವನ್ನು ಆಚರಿಸಲಾಗುತ್ತೆ. ಕೆಟ್ಟ ಮತ್ತು ಕಲುಷಿತ ಆಹಾರದ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ. ಈ ದಿನದ ಇತಿಹಾಸ ಏನು? ಇದನ್ನು ಯಾಕೆ ಆಚರಣೆ ಮಾಡಲಾಗುತ್ತೆ ಅನ್ನೋದನ್ನು ತಿಳಿದುಕೊಳ್ಳೋಣ.
ದೇಹವನ್ನು ಆರೋಗ್ಯಕರವಾಗಿಡುವಲ್ಲಿ ನಾವು ಸೇವಿಸುವಂತಹ ಆಹಾರದ (Food) ಪಾತ್ರವು ಅತ್ಯಂತ ಮುಖ್ಯ. ಆದರೆ ಜನರ ಆಹಾರ ಪದ್ಧತಿ ಮತ್ತು ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಅನೇಕ ವಸ್ತುಗಳನ್ನು ತಯಾರಿಸುವ ಮತ್ತು ಬೆಳೆಸುವ ವಿಧಾನವು ಈಗ ಬದಲಾಗಿದೆ. ಅವುಗಳಿಗೆ ವಿವಿಧ ರೀತಿಯ ಕೆಮಿಕಲ್‌ಗಳನ್ನು ಸಹ ಸೇರಿಸಲಾಗುತ್ತಿದೆ. ಆದ್ದರಿಂದ ಜನರಿಗೆ ಕಲುಷಿತ ಆಹಾರ ಮತ್ತು ನೀರಿನ ನಷ್ಟದ ಬಗ್ಗೆ ಅರಿವು ಮೂಡಿಸಲು ಪ್ರತಿ ವರ್ಷ ಜೂನ್ 7 ರಂದು ವಿಶ್ವ ಆಹಾರ ಸುರಕ್ಷತಾ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಆಹಾರ ಸುರಕ್ಷತಾ ದಿನದ ಇತಿಹಾಸ (World Food Safety Day)
ಡಿಸೆಂಬರ್ 2017 ರಲ್ಲಿ, ವಿಶ್ವ ಆರೋಗ್ಯ ಸಂಸ್ಥೆ (WHO) ಜುಲೈ 2017ರಲ್ಲಿ ನಡೆದ ಆಹಾರ ಮತ್ತು ಕೃಷಿ ಸಂಸ್ಥೆ (FIO) ಸಮ್ಮೇಳನದ 40ನೇ ಅಧಿವೇಶನದಲ್ಲಿ ವಿಶ್ವ ಆಹಾರ ಸುರಕ್ಷತಾ ದಿನದ ನಿರ್ಣಯಕ್ಕೆ ತನ್ನ ಬೆಂಬಲವನ್ನು ವ್ಯಕ್ತಪಡಿಸಿತು. ನಂತರ ಈ ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 73 ನೇ ಅಧಿವೇಶನದ ಎರಡನೇ ಸಮಿತಿಯ ಮುಂದೆ ಇರಿಸಲಾಯಿತು, ಇದನ್ನು ಸಾಮಾನ್ಯ ಸಭೆ ( UNGA) ಅಂಗೀಕರಿಸಿತು ಮತ್ತು ಪ್ರತಿ ವರ್ಷ ಜೂನ್ 7 ರಂದು ವಿಶ್ವ ಆಹಾರ ಸುರಕ್ಷತಾ ದಿನವನ್ನು 2018 ರ ಡಿಸೆಂಬರ್ 20 ರಂದು ಆಚರಿಸುವುದಾಗಿ ಘೋಷಿಸಿತು.
ಡಬ್ಲ್ಯುಎಚ್ಒ, ಎಫ್ಎಒ ಜೊತೆಗೆ ಜಂಟಿಯಾಗಿ, ಜಾಗತಿಕವಾಗಿ ಎಲ್ಲರಿಗೂ ಸುರಕ್ಷಿತ ಆಹಾರವನ್ನು ಖಚಿತಪಡಿಸಿಕೊಳ್ಳಲು ಈ ಪ್ರಮುಖ ದಿನವನ್ನು ಆಚರಿಸಲು ಕರೆ ನೀಡಿತು. ಅಂದಿನಿಂದ ಪ್ರತಿವರ್ಷ ಜೂನ್ 7 ರಂದು ವಿಶ್ವ ಆಹಾರ ದಿನವನ್ನು World food day) ಆಚರಿಸಲಾಗುತ್ತದೆ.
ವಿಶ್ವ ಆಹಾರ ಸುರಕ್ಷತಾ ದಿನ 2022 ರ ಉದ್ದೇಶ
ಅಷ್ಟಕ್ಕೂ ಈ ವಿಶ್ವ ಆಹಾರ ಸುರಕ್ಷತಾ ದಿನವನ್ನು ಯಾಕೆ ಆಚರಿಸಲಾಗುತ್ತೆ? ಇದರ ಹಿಂದೆಯೂ ಕಾರಣಗಳಿವೆ. ಅದೇನೆಂದರೆ ನಮ್ಮ ದೈನಂದಿನ ಜೀವನದಲ್ಲಿ ಅಸುರಕ್ಷಿತ ಆಹಾರ ಪದಾರ್ಥಗಳ ಸೇವನೆಯಿಂದ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಕಾಯಿಲೆಗಳು(Diseases) ಉಂಟಾಗುತ್ತವೆ. ಈ ಸಮಸ್ಯೆಯ ಬಗ್ಗೆ ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತೆ.
ವಿಶ್ವ ಆಹಾರ ಸುರಕ್ಷತಾ ದಿನವನ್ನು ಆಚರಿಸುವ ಉದ್ದೇಶವು ಪ್ರತಿಯೊಬ್ಬ ವ್ಯಕ್ತಿಗೆ ಪೌಷ್ಟಿಕ (Nutrition)ಮತ್ತು ಸಮತೋಲಿತ ಆಹಾರವನ್ನು ಒದಗಿಸುವುದು. ಅಷ್ಟೇ ಅಲ್ಲ, ಈ ದಿನವನ್ನು ಆಚರಿಸುವ ವಿಶೇಷ ಉದ್ದೇಶವೆಂದರೆ ಕೆಟ್ಟ ಆಹಾರಗಳ ಅಪಾಯಗಳನ್ನು ನಿಲ್ಲಿಸುವುದು, ಕಲಬೆರಕೆ ವಸ್ತುಗಳನ್ನು ಕಂಡು ಹಿಡಿಯುವುದು ಮತ್ತು ಅವುಗಳ ಬಗ್ಗೆ ಜನರಿಗೆ ತಿಳಿಸುವ ಮೂಲಕ ಜನರಿಗೆ ಅರಿವು ಮೂಡಿಸುವುದು.
ವಿಶ್ವ ಆಹಾರ ಸುರಕ್ಷತಾ ದಿನದ ಮಹತ್ವ
ಟೈಫಾಯಿಡ್ ರೋಗವು ಕಲುಷಿತ ನೀರು (Polluted Water) ಮತ್ತು ಆಹಾರದಿಂದ ಉಂಟಾಗುವ ರೋಗ. ಇದು ಪ್ರತಿ ವರ್ಷ ನೂರಾರು ಜನರ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹಿರಿಯರ ಜೊತೆಗೆ, ಮಕ್ಕಳು ಸಹ ಕೆಟ್ಟ ಆಹಾರದಿಂದ ಉಂಟಾಗುವ ಸಮಸ್ಯೆಗಳಿಂದ ನರಳುತ್ತಾರೆ, ಅಷ್ಟೇ ಅಲ್ಲದೇ ಇದರಿಂದ ಎಷ್ಟೋ ಮಕ್ಕಳು ಸಾವನ್ನಪ್ಪಿದ ಘಟನೆಗಳು ಸಹ ನಡೆದಿದೆ. ಆದುದರಿಂದ ಈ ಬಗ್ಗೆ ಜಾಗೃತರಾಗಿರುವುದು ಮುಖ್ಯ.
ವಿಶ್ವ ಆಹಾರ ಸುರಕ್ಷತಾ ದಿನದ ಧ್ಯೇಯವಾಕ್ಯ
ಈ ವರ್ಷ ವಿಶ್ವ ಆಹಾರ ಸುರಕ್ಷತಾ ದಿನ 2022 ರ ಧ್ಯೇಯವಾಕ್ಯವು 'ಸುರಕ್ಷಿತ ಆಹಾರ, ಉತ್ತಮ ಆರೋಗ್ಯ' ಆಗಿದೆ. (Safer Food, Better Health). ಅಂದರೆ ಉತ್ತಮ ಆಹಾರ ಸೇವನೆ ಮಾಡಿದ್ರೆ ಮಾತ್ರ ಉತ್ತಮ ಆರೋಗ್ಯವನ್ನು ಪಡೆಯಲು ಸಾಧ್ಯವಾಗುತ್ತೆ ಎಂದು ಅರ್ಥ.