ಶೀತ ತಪ್ಪಿಸಲು, ಪದೇ ಪದೇ ಚಹಾ ಕುಡಿತೀರಾ? ಹುಷಾರ್!
ಚಳಿಗಾಲದಲ್ಲಿ ಶೀತವನ್ನು ತಪ್ಪಿಸಲು ಅಗತ್ಯಕ್ಕಿಂತ ಹೆಚ್ಚು ಚಹಾ ಸೇವಿಸ್ತಿರಾ, ಹಾಗಿದ್ರೆ ನಿಮ್ಮ ಅಭ್ಯಾಸವನ್ನು ತಕ್ಷಣವೇ ಬದಲಾಯಿಸಿಕೊಳ್ಳಿ. ಹೆಚ್ಚು ಚಹಾ ಕುಡಿಯುವ ಹವ್ಯಾಸವು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ ಮತ್ತು ನಿಮ್ಮನ್ನು ಅನಾರೋಗ್ಯಕ್ಕೆ ದೂಡುತ್ತೆ.
ಚಹಾ(Tea) ಕುಡಿಯೋದರ ಅಡ್ಡಪರಿಣಾಮ: ಚಳಿಗಾಲ ಪ್ರಾರಂಭವಾದ ತಕ್ಷಣ, ಅನೇಕ ಜನರಿಗೆ ಚಹಾ ಕುಡಿಯಲು ಒಂದು ನೆಪದ ಅಗತ್ಯವಿದೆ. ಶೀತ ತಪ್ಪಿಸಲು ನೀವು ಅಗತ್ಯಕ್ಕಿಂತ ಹೆಚ್ಚು ಚಹಾ ಕುಡಿತ್ತೀರಾ, ಹಾಗಿದ್ರೆ ಆ ಅಭ್ಯಾಸವನ್ನು ತಕ್ಷಣ ಬದಲಾಯಿಸಿ. ಹೆಚ್ಚು ಚಹಾ ಕುಡಿಯುವ ಅಭ್ಯಾಸವು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ. ಅದು ಹೇಗೆಂದು ತಿಳಿಯೋಣ.
ಹೊಟ್ಟೆಗೆ(Stomach) ಹಾನಿಕಾರಕ: ಹೆಚ್ಚು ಚಹಾ ಕುಡಿಯೋದರಿಂದ ವ್ಯಕ್ತಿಯಲ್ಲಿ ಹೊಟ್ಟೆಯ ಸಮಸ್ಯೆಗಳು ಉಂಟಾಗಬಹುದು. ಹೆಚ್ಚು ಚಹಾ ಸೇವನೆ ಮಾಡೋದರಿಂದ, ವ್ಯಕ್ತಿಯ ಜೀರ್ಣಕ್ರಿಯೆ ಮೇಲೆ ಕೆಟ್ಟ ಪರಿಣಾಮ ಬೀಳುತ್ತೆ. ಇದು ಹೊಟ್ಟೆಯಲ್ಲಿ ಗ್ಯಾಸ್, ಹೊಟ್ಟೆ ಉಬ್ಬರ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವ ಜನರ ವಿಷಯದಲ್ಲಿ ಇದು ವಿಶೇಷವಾಗಿ ಕಂಡುಬರುತ್ತೆ.
ಗರ್ಭಿಣಿಯರಿಗೆ (Pregnant): ಗರ್ಭಿಣಿಯರು ಹೆಚ್ಚು ಚಹಾ ಕುಡಿಯೋದನ್ನು ತಪ್ಪಿಸಬೇಕು. ಹೆಚ್ಚು ಚಹಾ ಸೇವನೆಯಿಂದ ತಾಯಿ ಆರೋಗ್ಯದ ಮೇಲೆ ಮಾತ್ರವಲ್ಲದೆ ಹುಟ್ಟಲಿರುವ ಮಗುವಿನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತೆ. ಚಹಾದ ಅತಿಯಾದ ಸೇವನೆಯು ಅನೇಕ ತೊಡಕುಗಳಿಗೆ ಕಾರಣವಾಗಬಹುದು ಮತ್ತು ಕೆಲವು ತೀವ್ರ ಸಂದರ್ಭಗಳಲ್ಲಿ ಗರ್ಭಪಾತದ ಅಪಾಯವನ್ನು ಸಹ ಹೆಚ್ಚಿಸಬಹುದು.
ರಕ್ತಹೀನತೆಯ(Anemia) ಅಪಾಯ: ಆರೋಗ್ಯ ತಜ್ಞರ ಪ್ರಕಾರ, ದಿನಕ್ಕೆ 3 ರಿಂದ 4 ಕಪ್ ಗಿಂತ ಹೆಚ್ಚು ಚಹಾ ಕುಡಿಯೋದರಿಂದ ಆರೋಗ್ಯಕ್ಕೆ ಹಾನಿಯಾಗುತ್ತೆ. ಇದರಿಂದ, ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರೋದರ ಜೊತೆಗೆ, ದೇಹದಲ್ಲಿ ಕ್ರಮೇಣ ಕಬ್ಬಿಣದ ಕೊರತೆ ಉಂಟಾಗುತ್ತೆ ಮತ್ತು ಜನರು ರಕ್ತಹೀನತೆಗೆ ಬಲಿಯಾಗಬಹುದು.
ನಿದ್ರಾಹೀನತೆಯ(Sleeplessness) ಸಮಸ್ಯೆ: ಚಹಾದಲ್ಲಿರುವ ಕೆಫೀನ್ ಮತ್ತು ಟ್ಯಾನಿನ್ ನಿದ್ರೆಯ ಗುಣಮಟ್ಟವನ್ನು ಹಾಳುಮಾಡುವ ಮೂಲಕ ನಿದ್ರೆಗೆ ಭಂಗವನ್ನುಂಟುಮಾಡುತ್ತವೆ. ಇದರಿಂದಾಗಿ ವ್ಯಕ್ತಿ ರಾತ್ರಿಯಲ್ಲಿ ಸರಿಯಾಗಿ ನಿದ್ರೆ ಮಾಡೋದಿಲ್ಲ ಮತ್ತು ಅವನು ಬೆಳಿಗ್ಗೆ ಎದ್ದು ಕಿರಿಕಿರಿ ಅನುಭವಿಸಬಹುದು. ವಾಸ್ತವವಾಗಿ, ಕೆಫೀನ್ ಮೆದುಳನ್ನು ಎಚ್ಚರಿಸುವ ಉತ್ತೇಜಕವಾಗಿ ಕಾರ್ಯನಿರ್ವಹಿಸುತ್ತೆ. ಇದರ ಅತಿಯಾದ ಸೇವನೆಯು ವ್ಯಕ್ತಿಯಲ್ಲಿ ಮನಸ್ಥಿತಿಯ ಏರಿಳಿತಗಳಿಗೆ ಕಾರಣವಾಗಬಹುದು.
ಎದೆಯುರಿ: ಹೆಚ್ಚು ಚಹಾ ಕುಡಿಯೋದರಿಂದ, ಅನೇಕ ಜನರು ಎದೆಯುರಿ, ಹೊಟ್ಟೆಯ ಗ್ಯಾಸ್(Gas), ಅಜೀರ್ಣ ಮತ್ತು ಹುಳಿ ತೇಗು ಇಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ. ನಿಮಗೆ ಈ ಮೊದಲೇ ಆಸಿಡಿಟಿ ಮೊದಲಾದ ಸಮಸ್ಯೆ ಇದ್ದರೆ, ಸಾಧ್ಯವಾದಷ್ಟು ಇದನ್ನು ಅವಾಯ್ಡ್ ಮಾಡಿ. ಇಲ್ಲವಾದರೆ ಎದೆಯುರಿ, ಬರ್ನಿಂಗ್ ಮೊದಲಾದ ಸಮಸ್ಯೆ ಅನುಭವಿಸಬಹುದು.
ಕರುಳುಗಳ ಮೇಲೆ ಪರಿಣಾಮ: ಚಹಾ ಸೇವನೆಯಿಂದ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಚಹಾ ಕುಡಿಯೋದರಿಂದ ಕರುಳುಗಳು ಸಹ ಹಾಳಾಗುತ್ತವೆ. ಈ ಕಾರಣದಿಂದಾಗಿ ಆಹಾರದ ಜೀರ್ಣಕ್ರಿಯೆಯಲ್ಲಿ(Digestion) ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ. ಹಾಗಾಗಿ ಚಳಿಗಾಲ ಅಂತ ಯದ್ವಾ ತದ್ವಾ ಚಹಾ ಕುಡಿಯೋ ಬದಲು ಹಿತಮಿತವಾಗಿ ಕುಡೀಯೋದು ಉತ್ತಮ.
ನರ್ವಸ್ (Nervous) ಆಗೋದು: ಚಹಾದಲ್ಲಿರುವ ಕೆಫೀನ್ ಮತ್ತು ಟ್ಯಾನಿನ್ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಮೂಲಕ ನರವ್ಯೂಹವನ್ನು ಹಾನಿಗೊಳಿಸುತ್ತವೆ. ಹಾಗಾಗಿ ಹಾಲಿನ ಚಹಾವನ್ನು ಹೆಚ್ಚು ಸೇವಿಸಿದ್ರೆ, ನೀವು ಹೆಚ್ಚು ನರ್ವಸ್ ಆಗಬಹುದು, ಹುಷಾರ್!