ಸಂಜೆ ಟೀ ಜೊತೆಗೆ ಮಾಡಿ ಸಾಬುದಾನ ಪಾಪ್‌ಕಾರ್ನ್, ತಿಂದೋರ್ ಹೇಳ್ತಾರೆ ವ್ಹಾವ್ ಅಂತ
ಈ ರೆಸಿಪಿ ಮಾಡುವುದು ತುಂಬಾ ಸಿಂಪಲ್. ರುಚಿಯ ಜೊತೆಗೆ ಆರೋಗ್ಯವನ್ನೂ ಸಹ ಹೆಚ್ಚಿಸುತ್ತದೆ.

ಈ ರೆಸಿಪಿ ಮಾಡುವುದು ತುಂಬಾ ಸಿಂಪಲ್
ಸಂಜೆಯಾಗುತ್ತಿದ್ದಂತೆ ಕೆಲವರು ಗರಿಗರಿಯಾದ, ರುಚಿಯಾದ, ಆರೋಗ್ಯಕರವಾದ ತಿಂಡಿ ತಿನ್ನಬೇಕೆಂದು ಇಷ್ಟಪಡ್ತಾರೆ. ನೀವು ಸಹ ಇದೇ ರೀತಿಯ ಖಾದ್ಯ ತಿನ್ನಲು ಬಯಸಿದರೆ ಸಾಬುದಾನ ಅಥವಾ ಸಬ್ಬಕ್ಕಿ ಪಾಪ್‌ಕಾರ್ನ್ ಉತ್ತಮ ಆಯ್ಕೆಯಾಗಿದೆ. ಈ ರೆಸಿಪಿ ಮಾಡುವುದು ತುಂಬಾ ಸಿಂಪಲ್. ರುಚಿಯ ಜೊತೆಗೆ ಆರೋಗ್ಯವನ್ನೂ ಸಹ ಹೆಚ್ಚಿಸುತ್ತದೆ. ಮತ್ತೇಕೆ ತಡ, ಮನೆಯಲ್ಲಿಯೇ ಇದನ್ನು ಸುಲಭವಾಗಿ ಮಾಡುವುದು ಹೇಗೆಂದು ತಿಳಿಯೋಣ...
ಇತರ ಭಕ್ಷ್ಯಗಳಲ್ಲಿಯೂ ಬಳಕೆ
ಬಿಳಿ ಮುತ್ತುಗಳಂತೆ ಕಾಣುವ ಸಾಬುದಾನ ತಿನ್ನುವುದರಿಂದ ಆರೋಗ್ಯ ಪ್ರಯೋಜನಗಳೂ ಇವೆ. ಬಹುತೇಕ ಎಲ್ಲಾ ಭಾರತೀಯರು ಉಪವಾಸ ಮಾಡುವಾಗ ಸಾಬುದಾನವನ್ನು ಹೆಚ್ಚಾಗಿ ಬಳಸುತ್ತಾರೆ. ಅದರಲ್ಲಿರುವ ಔಷಧೀಯ ಗುಣಗಳಿಂದಾಗಿ ಸಾಬುದಾನವನ್ನು ಇತರ ಭಕ್ಷ್ಯಗಳಲ್ಲಿಯೂ ಬಳಸಬಹುದು. ನೀವು ಸಾಬುದಾನವನ್ನು ಬಳಸಿಕೊಂಡು ಸಾಬುದಾನ ಖೀರ್, ಖಿಚಡಿ ಇತ್ಯಾದಿಗಳನ್ನು ಮಾಡಬಹುದು. ವಿಶೇಷವಾಗಿ ಉಪವಾಸದ ಸಮಯದಲ್ಲಿ ಶಕ್ತಿಯನ್ನು ಪಡೆಯಲು ಇದು ಪ್ರಮುಖ ಆಯ್ಕೆಗಳಲ್ಲಿ ಒಂದಾಗಿದೆ. ಸುಮಾರು 100 ಗ್ರಾಂ ಸಾಬುದಾನದಲ್ಲಿ 10.99 ಗ್ರಾಂ ನೀರು ಮತ್ತು 358 ಕ್ಯಾಲೊರಿಗಳಿವೆ.
ಪಾಪ್‌ಕಾರ್ನ್ ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು
1 ಕಪ್ ಸಾಬುದಾನ (ನೆನೆಸಿದ್ದು)
2 ಚಮಚ ಕಡಲೆಕಾಯಿ (ಹುರಿದ)
1 ಚಮಚ ದೇಸಿ ತುಪ್ಪ ಅಥವಾ ಕಡಲೆಕಾಯಿ ಎಣ್ಣೆ
ಕರಿಬೇವು - 8-10
ರುಚಿಗೆ ತಕ್ಕಷ್ಟು ಕಲ್ಲುಪ್ಪು
ಹಸಿಮೆಣಸಿನಕಾಯಿ (ನುಣ್ಣಗೆ ಕತ್ತರಿಸಿದ್ದು)
ನಿಂಬೆ ರಸ (ಬೇಕಾದರೆ)
ಮಾಡುವುದು ಹೇಗೆ?
ಸಾಬುದಾನವನ್ನು ಚೆನ್ನಾಗಿ ತೊಳೆದು 4-5 ಗಂಟೆಗಳ ಕಾಲ ನೆನೆಸಿಡಿ.
ಆ ನಂತರ ನೆನೆಸಿಟ್ಟ ಸಾಬುದಾನದ ಹೆಚ್ಚುವರಿ ನೀರನ್ನು ತೆಗೆದು ಒಣಗಲು ಬಿಡಿ.
ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಕರಿಬೇವು ಮತ್ತು ಹಸಿ ಮೆಣಸಿನಕಾಯಿಗಳನ್ನು ಹಾಕಿ ಹುರಿಯಿರಿ.
ಈಗ ಇದಕ್ಕೆ ಸಾಬುದಾನ ಸೇರಿಸಿ, ಮಧ್ಯಮ ಉರಿಯಲ್ಲಿ ನಿರಂತರವಾಗಿ ಬೆರೆಸಿ ಅದು ಗರಿಗರಿಯಾಗುವವರೆಗೆ ಹುರಿಯಿರಿ.
ಈಗ ಅದಕ್ಕೆ ಕಡಲೆಕಾಯಿ ಮತ್ತು ಕಲ್ಲುಪ್ಪು ಸೇರಿಸಿ ಸ್ವಲ್ಪ ಸಮಯ ಹುರಿಯಿರಿ.
ಗ್ಯಾಸ್ ಆಫ್ ಮಾಡಿ, ನೀವು ಬಯಸಿದರೆ ಮೇಲೆ ಸ್ವಲ್ಪ ನಿಂಬೆ ರಸವನ್ನು ಸಿಂಪಡಿಸಿ.
ಈಗ ಬಿಸಿ ಬಿಸಿ ಸಾಬುದಾನ ಪಾಪ್‌ಕಾರ್ನ್ ಸಿದ್ಧವಾಗಿದೆ.
ಇದನ್ನು ಚಹಾದೊಂದಿಗೆ ಸೇವಿಸಿ.
ಪ್ರಮುಖ ಸಲಹೆಗಳು
ಸಾಬುದಾನವನ್ನು ಹುರಿಯುವ ಮೊದಲು ಸರಿಯಾಗಿ ಒಣಗಿಸಿ, ಇಲ್ಲದಿದ್ದರೆ ಅದು ಜಿಗುಟಾಗಬಹುದು.
ನೀವು ಇದಕ್ಕೆ ಡ್ರೈ ಫ್ರೂಟ್ಸ್ ಕೂಡ ಸೇರಿಸಬಹುದು.
ಚಾಟ್ ಮಸಾಲ ಸೇರಿಸುವ ಮೂಲಕವೂ ಇದರ ರುಚಿಯನ್ನು ಹೆಚ್ಚಿಸಬಹುದು.