ಸರಯೂ ನದಿ ಜನ್ಮ ರಹಸ್ಯ ಇದು, ರಾಮನೆಂದರೆ ಪ್ರಕೃತಿ, ಪ್ರಾಣಿಗೂ ವಿಶೇಷ ಸ್ಥಾನ! ಈ ನದಿ ಮೇಲಾಕೆ ಶಿವಂಗೆ ಕೋಪ?
ಭಗವಾನ್ ರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ಸರಯೂ ನದಿ ಹರಿಯುತ್ತದೆ. ಸರಯೂ ನದಿಯನ್ನು ಪವಿತ್ರ ನದಿಯೆಂದು ಪೂಜಿಸಲಾಗುತ್ತದೆ. ಭಗವಾನ್ ರಾಮನು ಸರಯೂ ನದಿಯಲ್ಲಿಯೇ ಜಲಸಮಾಧಿ ಹೊಂದಿದನು ಎನ್ನಲಾಗಿದೆ. ಸರಯೂ ನದಿಗೆ ಸಂಬಂಧಿಸಿದ ವಿಶೇಷ, ಮತ್ತು ಅಚ್ಚರಿಯ ವಿಷ್ಯಗಳನ್ನು ತಿಳಿಯೋಣ.
ದೇಶದ ಜನರೆಲ್ಲರೂ ರಾಮನ ಪ್ರತಿಷ್ಟಾಪನೆಯ ಸಂಭ್ರಮದಲ್ಲಿದ್ದಾರೆ. ಭಗವಾನ್ ರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಪೂರ್ಣಗೊಂಡಿದೆ. ಎಲ್ಲೆಡೆ ಅಯೋಧ್ಯೆಯದ್ದೇ ಸುದ್ದಿ, ಆದರೆ ಸರಯೂ ಬಗ್ಗೆ ಮಾತನಾಡದೇ ಇದ್ದರೆ ಆದೀತೆ?. ಸರಯೂ ನದಿ ಇಲ್ಲದೆ ಅಯೋಧ್ಯೆಯ ಕಥೆ ಅಪೂರ್ಣವಾಗಿದೆ. ಭಗವಾನ್ ಶ್ರೀ ರಾಮನ (Sri Ram) ಜನ್ಮಸ್ಥಳವಾದ ಅಯೋಧ್ಯೆಯಿಂದ ಹರಿಯುವ ಈ ನದಿಗೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ. ಸರಯೂ ನದಿಯ ಮಹತ್ವವನ್ನು ತಿಳಿದುಕೊಳ್ಳೋಣ.
ಭಗವಾನ್ ರಾಮನು ಲಕ್ಷ್ಮಣನಿಗೆ ಸರಯೂ ನದಿಯ ಮಹತ್ವವನ್ನು ಹೇಳಿದನು
ಸರಯೂ ನದಿಯಲ್ಲಿ (Sarayu River) ಸ್ನಾನ ಮಾಡುವ ಮಹತ್ವವನ್ನು ರಾಮಚರಿತ ಮಾನಸದಲ್ಲಿ ವಿವರಿಸಲಾಗಿದೆ. ಸರಯೂ ನದಿಯು ಅಯೋಧ್ಯೆಯ ಉತ್ತರ ದಿಕ್ಕಿನಲ್ಲಿ ಹರಿಯುತ್ತದೆ. ಒಮ್ಮೆ ಭಗವಾನ್ ರಾಮನು ಲಕ್ಷ್ಮಣನಿಗೆ ಸರಯೂ ನದಿಯು ಎಷ್ಟು ಪವಿತ್ರವಾಗಿದೆಯೆಂದರೆ ಎಲ್ಲಾ ತೀರ್ಥಯಾತ್ರೆಗಳು ದರ್ಶನ ಪಡೆದ ಭಾಗ್ಯ ಸಿಗುವುದು ಎಂದಿದ್ದರು. ಅಂದರೆ ಸರಯೂ ನದಿಯಲ್ಲಿ ಸ್ನಾನ ಮಾಡುವ ಮೂಲಕ, ಎಲ್ಲಾ ತೀರ್ಥಯಾತ್ರ ಸ್ಥಳಗಳಿಗೆ ಭೇಟಿ ನೀಡುವ ಅರ್ಹತೆಯನ್ನು ಪಡೆಯಬಹುದು.
ಬ್ರಹ್ಮ ಮುಹೂರ್ತದಲ್ಲಿ ಸರಯೂ ನದಿಯಲ್ಲಿ ಸ್ನಾನ ಮಾಡುವ ವ್ಯಕ್ತಿಯು ಎಲ್ಲಾ ತೀರ್ಥಯಾತ್ರೆಗಳ ದರ್ಶನದ ಫಲವನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ. ಪುರಾಣಗಳ ಪ್ರಕಾರ, ಸರಯೂ ಮತ್ತು ಶಾರದಾ ನದಿಗಳ ಸಂಗಮವು ಈಗಾಗಲೇ ಸಂಭವಿಸಿದೆ, ಸರಯೂ ಮತ್ತು ಗಂಗಾ ನದಿಗಳ ಸಂಗಮವನ್ನು ಶ್ರೀ ರಾಮನ ಪೂರ್ವಜ ಭಗೀರಥನು ಮಾಡಿದನು.
ಸರಯೂ ನದಿಯು ಹೇಗೆ ಉಗಮವಾಯಿತು?
ಪುರಾಣಗಳ ಪ್ರಕಾರ, ಸರಯೂ ನದಿಯ ಉಗಮವು ವಿಷ್ಣುವಿನ (Lord Vishnu) ಕಣ್ಣುಗಳ ಮೂಲಕ ಉಧ್ಭವವಾಯಿತು . ಪ್ರಾಚೀನ ಕಾಲದಲ್ಲಿ, ಶಂಖಾಸುರ ರಾಕ್ಷಸನು ವೇದಗಳನ್ನು ಕದ್ದು ಸಮುದ್ರಕ್ಕೆ ಎಸೆದು ಅಲ್ಲಿ ಅಡಗಿಕೊಂಡನು. ಇದರ ನಂತರ, ವಿಷ್ಣುವು ಮತ್ಸ್ಯ ಅವತಾರದಲ್ಲಿ ಬಂದು ಆ ರಾಕ್ಷಸನನ್ನು ಕೊಂದನು. ನಂತರ ವಿಷ್ಣುವು ವೇದಗಳನ್ನು ಬ್ರಹ್ಮನಿಗೆ ಹಸ್ತಾಂತರಿಸುವ ಮೂಲಕ ತನ್ನ ನಿಜವಾದ ರೂಪವನ್ನು ಪಡೆದುಕೊಂಡನಂತೆ.
ಈ ಸಮಯದಲ್ಲಿ, ವಿಷ್ಣು ಸಂತೋಷಗೊಂಡು, ಅವನ ಕಣ್ಣುಗಳಿಂದ ಆನಂದದ ಕಣ್ಣೀರು ಸುರಿಯಿತು. ಬ್ರಹ್ಮ ಆ ಪ್ರೀತಿಯ ಕಣ್ಣಿರನ್ನು ಮಾನಸ ಸರೋವರದಲ್ಲಿ ಇರಿಸಿ ಅದನ್ನು ಭದ್ರಪಡಿಸಿದರು. ಈ ನೀರನ್ನು ಪರಾಕ್ರಮಿಯಾದ ವೈವಸ್ವತ ಮಹಾರಾಜರು ಬಾಣದ ಹೊಡೆತದಿಂದ ಮಾನಸ ಸರೋವರದಿಂದ (Manasa Sarovar) ಹೊರ ತೆಗೆದರು. ಈ ನೀರಿನ ತೊರೆಯನ್ನು ಸರಯೂ ನದಿ ಎಂದು ಕರೆಯಲಾಗುತ್ತಿತ್ತು.
ಸರಯೂ ನದಿ ಯಾರ ಮಗಳು?
ಮಾನಸ ಖಂಡದಲ್ಲಿ, ಸರಯೂಗೆ ಗಂಗಾ ನದಿಯ ಸ್ಥಾನ ಮತ್ತು ಗೋಮತಿ ನದಿಗೆ ಯಮುನಾ ನದಿಯ ಸ್ಥಾನಮಾನವನ್ನು ನೀಡಲಾಗಿದೆ. ಧಾರ್ಮಿಕ ಗ್ರಂಥಗಳ ಪ್ರಕಾರ, ಭಾಗೀರಥಿ ಗಂಗಾ ನದಿಯನ್ನು ಭೂಮಿಗೆ ತಂದ ರೀತಿಯಂತೆಯೇ, ಸರಯೂ ನದಿಯನ್ನು ಸಹ ಭೂಮಿಗೆ ತರಲಾಯಿತು. ವಿಷ್ಣುವಿನ ಮಗಳಾದ ಸರಯೂ ನದಿಯನ್ನು ಭೂಮಿಗೆ ತಂದ ಕೀರ್ತಿ ಬ್ರಹ್ಮರ್ಷಿ ವಸಿಷ್ಠನಿಗೆ (Vashistha) ಸಲ್ಲುತ್ತದೆ.
ಸರಯೂ ನದಿಯನ್ನು ಶಪಿಸಿದ ಶಿವ
ಭಗವಾನ್ ರಾಮನು ಸರಯೂ ನದಿಯಲ್ಲಿ ಜಲ ಸಮಾಧಿಯಾದನು. ಸರಯೂ ನದಿಯಲ್ಲಿ ರಾಮನು ತನ್ನ ಲೀಲೆಯನ್ನು ಪೂರ್ಣಗೊಳಿಸಿದನು. ಈ ಕಾರಣದಿಂದಾಗಿ ಭಗವಾನ್ ಶಿವನು ಸರಯೂ ನದಿ ಮೇಲೆ ತುಂಬಾ ಕೋಪಗೊಂಡನು ಮತ್ತು ನಿನ್ನ ನೀರನ್ನು ದೇವಾಲಯದಲ್ಲಿ ಅರ್ಪಿಸಲು, ಪೂಜೆಯಲ್ಲಿ ಬಳಸಲಾಗದಂತೆ ಆಗಲಿ ಎಂದು ಸರಯೂಗೆ ಶಾಪ ನೀಡಿದನು.
ಇದರ ನಂತರ, ಸರಯೂ ಭಗವಾನ್ ಶಿವನ ಪಾದಗಳಿಗೆ ಬಿದ್ದು, ಪ್ರಭು, ಇದರಲ್ಲಿ ನನ್ನ ತಪ್ಪೇನು ಎಂದು ಕೇಳಿದಳಂತೆ. ಇದು ಜಗದ ನಿಯಮ. ನಾನೇನು ಮಾಡಕಾಗತ್ತೆ? ಎಂದು ಸರಯೂ ಬೇಡಿಕೊಂಡಳಂತೆ. ಮಾತಾ ಸರಯೂ ಬೇಡಿದಾಗ, ಶಿವನ ಕೋಪ ಕಡಿಮೆಯಾಗಿ , ಪರಿಸ್ಥಿತಿ ಅರ್ಥವಾಯಿತು, ಶಿವ ತಾಯಿ ಸರಯೂಗೆ, ನಾನು ನನ್ನ ಶಾಪವನ್ನು ಹಿಂದೆಗೆದುಕೊಳ್ಳಲು ಸಾಧ್ಯವಿಲ್ಲ, ಆದರೆ, ನಿನ್ನ ನೀರಿನ್ನು ಪೂಜೆಗೆ ಬಳಸಲಾಗುವುದಿಲ್ಲ, ಆದರೆ ನಿನ್ನ ನೀರಿನಲ್ಲಿ ಸ್ನಾನ ಮಾಡುವುದರಿಂದ ಜನರ ಪಾಪಗಳು ತೊಳೆದು ಹೋಗುತ್ತವೆ ಎಂದು ಹೇಳಿ ವರ ನೀಡಿದನಂತೆ, ಹಾಗೆ ಸರಯೂ ನದಿ ಇಂದಿಗೂ ಪವಿತ್ರ ನದಿಯಾಗಿ (sacred river) ಜನರ ಪಾಪ ನಿವಾರಣೆ ಮಾಡುತ್ತಾಳೆ.