ಅಂಬರೀಶ್, ಶಿವಣ್ಣ, ವಿಷ್ಣು.. ಸ್ಟಾರ್ ನಟರ ಸಿನಿಮಾ ಹಿಟ್ ಆಗಲು ಮೋಹನ್‌ಲಾಲ್ ಸಿನಿಮಾಗಳೇ ಕಾರಣ!
Dadasaheb Phalke Winner Mohanlals 5 Classic Films Remade Successfully in Kannada ಮಲಯಾಳಂ ನಟ ಮೋಹನ್‌ಲಾಲ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿದೆ. ಅವರ ಅನೇಕ ಕ್ಲಾಸಿಕ್ ಚಿತ್ರಗಳು ಕನ್ನಡದಲ್ಲಿ ರಿಮೇಕ್ ಆಗಿ ಭಾರಿ ಯಶಸ್ಸು ಕಂಡಿವೆ.

ಮಲಯಾಳಂನ ಹೆಸರಾಂತ ನಟ ಮೋಹನ್‌ಲಾಲ್ ಅವರಿಗೆ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಕೇಂದ್ರ ಸರ್ಕಾರ ಗೌರವಿಸಿದೆ. ಮಂಗಳವಾರ ಅವರಿಗೆ ಈ ಪ್ರಶಸ್ತಿ ನೀಡಿ ಗೌರವವಿಸಲಾಗುತ್ತದೆ.
ಮೋಹನ್‌ಲಾಲ್ ಅನ್ನೋ ಹೆಸರು ಕೇರಳದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಜನಪ್ರಿಯವಾಗಲು ಕಾರಣ ಅವರ ಸಿನಿಮಾಗಳು. ಪ್ರತಿ ಸಿನಿಮಾದಲ್ಲೂ ವಿಭಿನ್ನ ಕಥಾಹಂದರ, ಮನೋಜ್ಞ ನಟನೆಯ ಮೂಲಕ ಮನೆಮಾತಾಗಿರುವ ಮೋಹನ್ ಲಾಲ್ ಕನ್ನಡಲ್ಲೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಪುನೀತ್ ರಾಜ್‌ಕುಮಾರ್ ಅಭಿನಯದ ಮೈತ್ರಿ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಮೋಹನ್ ಲಾಲ್ ಅದಕ್ಕೂ ಮುನ್ನ ಆದಿತ್ಯ ನಟನೆಯ ಲವ್ ಸಿನಿಮಾದಲ್ಲೂ ಪ್ರಮುಖ ಪಾತ್ರ ಮಾಡಿದ್ದರು.
ಮೋಹನ್ ಲಾಲ್ ಸಿನಿಮಾಗಳು ಮೊದಲಿನಿಂದಲೂ ಕನ್ನಡಕ್ಕೆ ರಿಮೇಕ್ ಆಗುತ್ತಿತ್ತು. ಕನ್ನಡದಲ್ಲಿ ಯಶಸ್ವಿಯಾಗಿ ರಿಮೇಕ್ ಆದವ ಅವರ ಐದು ಕ್ಲಾಸಿಕ್ ಸಿನಿಮಾಗಳ ಲಿಸ್ಟ್ ಇಲ್ಲಿದೆ.
ಮೋಹನ್ ಲಾಲ್ ಅವರ ಕ್ಲಾಸಿಕ್ಸ್ ಮತ್ತು ಸೂಪರ್ ಹಿಟ್ ಸಿನಿಮಾಗಳು ಇತರ ಭಾಷೆಗಳಲ್ಲಿ ರಿಮೇಕ್ ಆದಾಗಲೂ ಅಷ್ಟೇ ಜನಪ್ರಿಯವಾಗಿದೆ. ಬೇರೆ ಭಾಷೆಗಳಲ್ಲೂ ಇದು ತನ್ನ ಕಮಾಲ್ ಮೂಡಿದೆ. ಕನ್ನಡದಲ್ಲಿ ಮೋಹನ್ ಲಾಲ್ ಅವರ 5 ಸಿನಿಮಾಗಳ ರಿಮೇಕ್ ಇಲ್ಲಿದೆ:
ಜಾಕಿ
ಮೋಹನ್ ಲಾಲ್ ಅವರ 'ಇರುಪತ್ತು ನೂಟಂಡು' ಚಿತ್ರದ ರೀಮೇಕ್. ಈ ಆಕ್ಷನ್ ಎಂಟರ್ಟೈನರ್ ಚಿತ್ರದಲ್ಲಿ ಅಂಬರೀಶ್, ಮೋಹನ್ ಲಾಲ್ ಅವರ ನಿರ್ದಯ ದರೋಡೆಕೋರನ ಪಾತ್ರದಲ್ಲಿ ನಟಿಸಿದ್ದರು. ನಿರ್ದಯ ವ್ಯಕ್ತಿ ಆಗಿದ್ದರೂ, ಹೃದಯಲ್ಲಿ ಮೃದು ವ್ಯಕ್ತಿತ್ವ ಹೊಂದಿದ್ದ ಪಾತ್ರವನ್ನು ನಿಭಾಯಿಸಿದ್ದರು. ರಾಜಕೀಯ ಮತ್ತು ಭೂಗತ ಲೋಕದ ನಡುವಿನ ಸಂಬಂಧವನ್ನು ತೋರಿಸುವ ಈ ದರೋಡೆಕೋರ ಚಿತ್ರ ಸೂಪರ್ ಹಿಟ್ ಆಗಿತ್ತು.
ಮೋಡದ ಮರೆಯಲ್ಲಿ
'ಕಿರೀಡಂ' ಚಿತ್ರದ ರೀಮೇಕ್. ಮೂಲ ಚಿತ್ರದಲ್ಲಿ ಮೋಹನ್ ಲಾಲ್ ಅವರ ಅಭಿನಯವು ಅವರಿಗೆ ಅನೇಕ ಪ್ರಶಸ್ತಿಗಳು ಮತ್ತು ಗೌರವಗಳನ್ನು ತಂದುಕೊಟ್ಟಿತು. ರೀಮೇಕ್‌ನಲ್ಲಿ, ಶಿವರಾಜ್‌ಕುಮಾರ್ ಮೂಲವನ್ನು ಹಾಳು ಮಾಡದೆ ಉತ್ತಮವಾಗಿ ಅಭಿನಯ ನೀಡಿದ್ದರು. ಪೊಲೀಸ್ ಆಗುವ ಹಾದಿಯಲ್ಲಿರುವ ವ್ಯಕ್ತಿ ತನ್ನ ದುರಾದೃಷ್ಟದಿಂದಾಗಿ ರೌಡಿಯಾಗುವ ಕಥೆ ಈ ಸಿನಿಮಾದಲ್ಲಿತ್ತು. ಇದು ದೊಡ್ಡ ಮಟ್ಟದ ಯಶಸ್ಸನ್ನು ಇಂಡಸ್ಟ್ರೀಗೆ ನೀಡಿತ್ತು.
ರಾಯರು ಬಂದರು ಮಾವನ ಮನೆಗೆ
ಮೂಲ 'ಚಿತ್ರಂ' ಚಿತ್ರವು ಭಾರಿ ಬ್ಲಾಕ್‌ಬಸ್ಟರ್ ಆಗಿದ್ದು, ಹಲವು ಭಾಷೆಗಳಿಗೆ ರೀಮೇಕ್ ಆಗಿತ್ತು. ಕನ್ನಡ ರಿಮೇಕ್‌ನಲ್ಲಿ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ನಟಿಸಿದ್ದರು. ಇಬ್ಬರು ಬಹಳ ಸಮಯದ ನಂತರ ಒಟ್ಟಿಗೆ ನಟಿಸಿದ್ದ ಸಿನಿಮಾ ಇದಾಗಿತ್ತು. ವಿಷ್ಣುವರ್ಧನ್ ಅವರ ಅದ್ಭುತ ಅಭಿನಯವು ಪ್ರೇಕ್ಷಕರನ್ನು ತಮ್ಮ ಭಾವನಾತ್ಮಕ ನಟನೆಯಿಂದ ಗಮನಸೆಳೆದಿದ್ದರಿಂದ ಈ ರಿಮೇಕ್ ಬಹಳ ಯಶಸ್ವಿಯಾಯಿತು.
ಆಪ್ತಮಿತ್ರ
'ಆಪ್ತಮಿತ್ರ' ಚಿತ್ರದ ಬಗ್ಗೆ ಎಲ್ಲರಿಗೂ ತಿಳಿದಿದೆ, ಕನ್ನಡದಲ್ಲಿ ಈ ಚಿತ್ರಕ್ಕೆ ಸಿಕ್ಕಿರುವ ಗೌರವ ಅಪರಿಮಿತವಾದದ್ದು. ಪಿ ವಾಸು ಮೂಲ 'ಮಣಿಚಿತ್ರತಾಳು' ಚಿತ್ರದಿಂದ ಸ್ಫೂರ್ತಿ ಪಡೆದು ಕನ್ನಡ ಪ್ರೇಕ್ಷಕರಿಗೆ ಸರಿಹೊಂದುವಂತೆ ರಿಮೇಕ್‌ನಲ್ಲಿ ಹಲವು ಬದಲಾವಣೆಗಳನ್ನು ಮಾಡಿದರು. 'ಆಪ್ತಮಿತ್ರ' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಗಳಿಕೆ ಕಂಡಿತು.
ದೃಶ್ಯ
ಈ ಕೌಟುಂಬಿಕ ಥ್ರಿಲ್ಲರ್ ಚಿತ್ರವನ್ನು ಹಲವು ಭಾಷೆಗಳಲ್ಲಿ ರೀಮೇಕ್ ಮಾಡಲಾಯಿತು, ಅಲ್ಲಿ ಮೋಹನ್ ಲಾಲ್ ಅವರ ಅಭಿನಯವು ಮತ್ತೊಂದು ಮಟ್ಟದಲ್ಲಿತ್ತು. ರಿಮೇಕ್‌ನಲ್ಲಿ ಎಲ್ಲರೂ ಕೂಡ ಮೋಹನ್‌ಲಾಲ್‌ಪಾತ್ರವನ್ನು ನಿಭಾಯಿಸಲು ಕಷ್ಟಪಟ್ಟರಾದರೂ, ಕನ್ನಡ ಆವೃತ್ತಿಯಲ್ಲಿ ರವಿಚಂದ್ರನ್ ಈ ಪಾತ್ರವನ್ನು ಲೀಲಾಜಾಲವಾಗಿ ಮಾಡಿದ್ದರು. ಚಿತ್ರ ಸೂಪರ್‌ಹಿಟ್ ಆಗಿತ್ತು. ದೃಶ್ಯದ 2ನೇ ಭಾಗ ಅಷ್ಟು ಹೆಸರು ಮಾಡುವಲ್ಲಿ ಯಶಸ್ವಿಯಾಗಲಿಲ್ಲ. ಆದರೆ, ಮಲಯಾಳಂನಲ್ಲಿ ದೃಶ್ಯಂ-2 ದೊಡ್ಡ ಯಶಸ್ಸು ಕಂಡಿದೆ.