ಟೀಂ ಇಂಡಿಯಾಗೆ ಬಿಗ್ ಶಾಕ್; ಗಾಯಾಳು ರಿಷಭ್ ಪಂತ್ ಇಂಗ್ಲೆಂಡ್ ಸರಣಿಯಿಂದಲೇ ಔಟ್!
ಬರ್ಮಿಂಗ್‌ಹ್ಯಾಮ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾಗೆ ಬಿಗ್ ಶಾಕ್ ಎದುರಾಗಿದ್ದು, ತಂಡದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಗಾಯದ ಸಮಸ್ಯೆಯಿಂದಾಗಿ ಸರಣಿಯಿಂದಲೇ ಹೊರಬಿದ್ದಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ಆಂಡರ್‌ಸನ್-ತೆಂಡುಲ್ಕರ್ ಟೆಸ್ಟ್ ಸರಣಿಯಲ್ಲಿ ಶುಭ್‌ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾಗೆ ಗಾಯದ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತಿದೆ. ಸರಣಿಯಲ್ಲಿ ಭಾರತ ಈಗಾಗಲೇ 1-2ರ ಹಿನ್ನಡೆಯಲ್ಲಿದೆ.
ಇನ್ನೊಂದೆಡೆ ಜುಲೈ 23ರಿಂದ ಇಲ್ಲಿನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ಆರಂಭವಾಗಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿರುವ ಟೀಂ ಇಂಡಿಯಾ ಮೊದಲ ದಿನದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 264 ರನ್ ಕಲೆಹಾಕಿದೆ.
ಇನ್ನು ಮೊದಲ ದಿನದಾಟದಲ್ಲಿ ಟೀಂ ಇಂಡಿಯಾ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, 48 ಎಸೆತಗಳಲ್ಲಿ ಆಕರ್ಷಕ 37 ರನ್ ಗಳಿಸಿದ್ದಾಗ ರಿಟೈರ್ಡ್ ಹರ್ಟ್ ಆಗಿ ಕಾರ್ಟ್‌ನಲ್ಲಿ ಕರೆದೊಯ್ಯಲಾಯಿತು.
37 ರನ್ ಗಳಿಸಿದ್ದಾಗ ಕ್ರಿಸ್ ವೋಕ್ಸ್ ಎಸೆತದಲ್ಲಿ ರಿವರ್ಸ್ ಸ್ವೀಪ್ ಮಾಡಲು ಯತ್ನಿಸುವಾಗ ರಿಷಭ್ ಪಂತ್ ಕಾಲಿಗೆ ಪೆಟ್ಟಾಯಿತು. ಪಂತ್ ಕಾಲಿನ ಬೆರಳಿಗೆ ಪೆಟ್ಟಾಗಿದ್ದು, ಊದಿಕೊಂಡು ರಕ್ತ ಸೋರಿತು. ನಡೆಯಲು ಕಷ್ಟಪಟ್ಟ ಪಂತ್‌ರನ್ನು ಕಾರ್ಟ್‌ನಲ್ಲಿ ಕರೆದೊಯ್ಯಲಾಯಿತು.
ಇದೀಗ ರಿಷಭ್ ಪಂತ್ ಅವರ ಗಾಯದ ಕುರಿತಂತೆ ಮಹತ್ವದ ಅಪ್‌ಡೇಟ್ ಹೊರಬಿದ್ದಿದ್ದು, ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಮುಂದಿನ ಆರು ವಾರಗಳ ಕಾಲ ಕ್ರಿಕೆಟ್‌ನಿಂದ ಹೊರಬಿದ್ದಿದ್ದಾರೆ ಎನ್ನಲಾಗಿದೆ.
ಕಾಲು ಬೆರಳಿನ ಗಾಯಕ್ಕೆ ತುತ್ತಾಗಿರುವ ರಿಷಭ್ ಪಂತ್‌ಗೆ ಆರು ವಾರಗಳ ಕಾಲ ವಿಶ್ರಾಂತಿ ಪಡೆಯಲು ಬಿಸಿಸಿಐ ವೈದ್ಯಕೀಯ ಸಿಬ್ಬಂದಿ ಸಲಹೆ ನೀಡಿದೆ ಎಂದು ವರದಿಯಾಗಿದೆ.
🚨 RISHABH PANT ADVISED FOR 6 WEEK REST 🚨
- Medical team is checking if Pant can bat after taking a pain-killer if need be but chances are slim. [Devendra Pandey from Express Sports]
Ishan Kishan set to be added to the squad for the 5th Test. pic.twitter.com/hDVbtJzLLj— Johns. (@CricCrazyJohns) July 24, 2025
ಇಂದಿನ ಪಂದ್ಯದಲ್ಲಿ ನೋವು ನಿವಾರಕ ಇಂಜೆಕ್ಷನ್ ಪಡೆದು ರಿಷಭ್ ಪಂತ್ ಅವರನ್ನು ಬ್ಯಾಟಿಂಗ್ ಮಾಡಲು ಕಣಕ್ಕಿಳಿಸುವ ಸಾಧ್ಯತೆ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆಯಾದರೂ, ಆ ಸಾಧ್ಯತೆ ತೀರಾ ಕಡಿಮೆ ಎಂದು ವರದಿಯಾಗಿದೆ.
ಹೀಗಾಗಿ ಇಂಗ್ಲೆಂಡ್ ಎದುರಿನ ಐದನೇ ಟೆಸ್ಟ್‌ಗೆ ರಿಷಭ್ ಪಂತ್ ಬದಲಿಗೆ ಇಶಾನ್ ಕಿಶನ್ ಭಾರತ ಟೆಸ್ಟ್ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.