ಐಪಿಎಲ್ ಫ್ಯಾನ್ಸ್‌ಗೆ ಕೇಂದ್ರ ಸರ್ಕಾರ ಬಿಗ್ ಶಾಕ್! ಮ್ಯಾಚ್ ಟಿಕೆಟ್ ಮತ್ತಷ್ಟು ದುಬಾರಿ!
ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಿಎಸ್‌ಟಿ ತೆರಿಗೆ ಪದ್ದತಿಯಲ್ಲಿ ಮಹತ್ವದ ಬದಲಾವಣೆ ತಂದಿದ್ದು, ಹಾಲಿ ಇರುವ 4 ಸ್ತರದ ತೆರಿಗೆಯನ್ನು ಎರಡು ಸ್ತರಕ್ಕೆ ಇಳಿಸಲಾಗಿದೆ. ಇದು ಸಾಮಾನ್ಯ ಜನರಿಗೆ ಪ್ರಯೋಜನಕಾರಿಯಾದರೂ, ಐಪಿಎಲ್ ಫ್ಯಾನ್ಸ್‌ಗೆ ಬಿಸಿ ತುಪ್ಪ ಎನಿಸಲಿದೆ.

ಮುಂಬರುವ ಐಪಿಎಲ್ ಸೀಸನ್‌ನ ಪಂದ್ಯಗಳನ್ನು ನೇರವಾಗಿ ಮೈದಾನದಲ್ಲಿ ವೀಕ್ಷಿಸಲು ಅಭಿಮಾನಿಗಳಿಗೆ ದುಬಾರಿಯಾಗಲಿದೆ.
ಐಪಿಎಲ್ ಟಿಕೆಟ್‌ಗಳು ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮಗಳಿಗೆ ಶೇ.40ರಷ್ಟು ಜಿಎಸ್‌ಟಿ ವಿಧಿಸಿರುವುದೇ ಇದಕ್ಕೆ ಕಾರಣ.
ಐಪಿಎಲ್ ಪಂದ್ಯಗಳು, ಕ್ಯಾಸಿನೊಗಳು, ಲಾಟರಿ, ಬೆಟ್ಟಿಂಗ್, ಹಾರ್ಸ್ ರೇಸಿಂಗ್, ಗ್ಯಾಂಬ್ಲಿಂಗ್ ಮತ್ತು ಆನ್‌ಲೈನ್ ಹಣದ ಆಟಗಳಿಗೆ ಪರಿಷ್ಕೃತ ಜಿಎಸ್‌ಟಿ ಸ್ಲ್ಯಾಬ್ ಪ್ರಕಾರ ಐಷಾರಾಮಿ ತೆರಿಗೆ ಸೆಪ್ಟೆಂಬರ್ 22 ರಿಂದ ಜಾರಿಗೆ ಬರಲಿದೆ.
ಐಪಿಎಲ್ ಪಂದ್ಯಗಳಿಗೆ ಈ ಹಿಂದೆ ಶೇ.28ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿತ್ತು. ಬುಧವಾರ ನಡೆದ 56ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಜಿಎಸ್‌ಟಿ ಸ್ಲ್ಯಾಬ್‌ಗಳಲ್ಲಿ ಬದಲಾವಣೆಗೆ ಅನುಮೋದನೆ ನೀಡಲಾಗಿದ್ದು, ಐಪಿಎಲ್ ಮ್ಯಾಚ್ ಟಿಕೆಟ್ ಜಿಎಸ್‌ಟಿ 28% ನಿಂದ ನೇರವಾಗಿ 40%ಗೆ ಏರಿಕೆಯಾಗಿದೆ.
ಪರಿಷ್ಕೃತ ಜಿಎಸ್‌ಟಿ ಪಟ್ಟಿಯಲ್ಲಿ 12 ಮತ್ತು 28 ಸ್ಲ್ಯಾಬ್‌ಗಳನ್ನು ತೆಗೆದುಹಾಕಿರುವುದರಿಂದ ಹೆಚ್ಚಿನ ಸರಕು ಮತ್ತು ಸೇವೆಗಳ ಬೆಲೆ ಇಳಿಕೆಯಾಗಲಿದೆ. 175 ದಿನಬಳಕೆ ವಸ್ತುಗಳ ಬೆಲೆ ಕಡಿಮೆಯಾಗಲಿದೆ.
75 ಉತ್ಪನ್ನಗಳ ಬೆಲೆ ಕಡಿಮೆಯಾಗುವುದರಿಂದ ಕೃಷಿ, ಆರೋಗ್ಯ, ಜವಳಿ, ರಸಗೊಬ್ಬರ, ವಾಹನ, ವಿಮೆ ಮುಂತಾದ ಎಂಟು ಕ್ಷೇತ್ರಗಳಿಗೆ ಹೆಚ್ಚಿನ ಲಾಭವಾಗಲಿದೆ. ಆರೋಗ್ಯ ಜೀವ ವಿಮಾ ತೆರಿಗೆ ರದ್ದಾಗಿರುವುದರಿಂದ ಪ್ರೀಮಿಯಂನಲ್ಲಿ ಗಣನೀಯ ಇಳಿಕೆಯಾಗಲಿದೆ.
ಎಲ್ಲಾ ಔಷಧಿಗಳ ಬೆಲೆಯೂ ಕಡಿಮೆಯಾಗುವುದು ರೋಗಿಗಳಿಗೆ ಸಮಾಧಾನ ತರುವ ಸಂಗತಿ. 33 ಜೀವರಕ್ಷಕ ಔಷಧಿಗಳ ತೆರಿಗೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿರುವುದು ಗಮನಾರ್ಹ.
ಕ್ಯಾನ್ಸರ್ ಮತ್ತು ಅಪರೂಪದ ಕಾಯಿಲೆಗಳಿಗೆ ಬಳಸುವ ಔಷಧಿಗಳ ಶೇ.5ರಷ್ಟು ತೆರಿಗೆಯನ್ನು ರದ್ದುಗೊಳಿಸಲಾಗಿದೆ. ಇತರ ಎಲ್ಲಾ ಔಷಧಿಗಳ ತೆರಿಗೆಯನ್ನು ಶೇ.12 ರಿಂದ 5ಕ್ಕೆ ಇಳಿಸಲಾಗಿದೆ.
ಕಾರುಗಳ ಬೆಲೆಯಲ್ಲಿ ಒಂದು ಲಕ್ಷ ರೂಪಾಯಿವರೆಗೆ ಕಡಿಮೆಯಾಗುವ ಸಾಧ್ಯತೆಯಿದೆ. ತೆರಿಗೆಯನ್ನು ಶೇ.28 ರಿಂದ 18ಕ್ಕೆ ಇಳಿಸಲಾಗಿದೆ. ಸಿಮೆಂಟ್‌ನ ತೆರಿಗೆಯನ್ನು ಶೇ.28 ರಿಂದ 18ಕ್ಕೆ ಇಳಿಸಿರುವುದು ನಿರ್ಮಾಣ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ನೀಡಲಿದೆ.
ಸಾಮಾನ್ಯ ಜನರನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಆದರೆ ಐಪಿಎಲ್ ಅಭಿಮಾನಿಗಳಿಗೆ ಜಿಎಸ್‌ಟಿ ಪರಿಷ್ಕರಣೆ ಅಷ್ಟೇನೂ ಸಂತಸದ ಸುದ್ದಿಯಲ್ಲ. ಪ್ರಸಕ್ತ ದರದಲ್ಲಿ ಮುಂಬರುವ ಋತುವಿನಲ್ಲಿ ಐಪಿಎಲ್ ಟಿಕೆಟ್‌ಗಳನ್ನು ಒದಗಿಸಲು ಬಿಸಿಸಿಐ ಏನಾದರೂ ಕ್ರಮ ಕೈಗೊಳ್ಳುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.