ಇಂಗ್ಲೆಂಡ್‌ನಲ್ಲೂ ಕಾಂತಾರಾ ಮೋಡಿ, ಮ್ಯಾಂಚೆಸ್ಟರ್ ಸಿಟಿ ಫುಟ್ಬಾಲ್ ತಂಡದ ಪೋಸ್ಟರ್ ಭಾರಿ ಸದ್ದು ಮಾಡುತ್ತಿದೆ. ರಿಷಬ್ ಶೆಟ್ಟಿ ಜಾಗದಲ್ಲಿ ಮ್ಯಾಂಚೆಸ್ಟರ್ ಸಿಟಿ ಸ್ಟ್ರೈಕರ್ ಎರ್ಲಿಂಗ್ ಹಾಲಾಂಡ್ ಫೋಟೋ ಇರುವ ಕಾಂತಾರ ಸಿನಿಮಾ ಶೈಲಿಯ ಪೋಸ್ಟರ್‌ನ್ನು ಮ್ಯಾಂಚೆಸ್ಟರ್ ಸಿಟಿ ಪೋಸ್ಟ್ ಮಾಡಿದೆ.

ಲಂಡನ್ (ಅ.07) ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ನಟನೆಯ ಕಾಂತಾರಾ ಚಾಪ್ಟರ್ 1 ಸಿನಿಮಾ ದೇಶ ವಿದೇಶದಲ್ಲಿ ಭಾರಿ ಸದ್ದು ಮಾಡುತ್ತಿದೆ. ಭರ್ಜರಿ ಕಲೆಕ್ಷನ್ ಮೂಲಕ ಮುನ್ನುಗ್ಗುತ್ತಿದೆ. ಕತೆ, ನಟನೆ, ನಿರ್ದೇಶನ ಸೇರಿ ಇಡೀ ಚಿತ್ರ ತಂಡಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕರ್ನಾಟಕ ಸೇರಿದಂತೆ ಭಾರತದ ಹಲವು ಭಾಗದಲ್ಲಿ ಕಾಂತಾರಾ ಚಾಪ್ಟರ್ 1 ಸಿನಿಮಾ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟರ್,ಫೋಟೋ, ಚರ್ಚೆಗಳು ಭರ್ಜರಿಯಾಗಿ ನಡೆಯುತ್ತಿದೆ. ಆದರೆ ಕಾಂತಾರಾ 1 ಹೆಗ್ಗಳಿಗೆ, ಹಿರಿಮೆ ಇಲ್ಲಿಗೆ ಸೀಮಿತವಾಗಿಲ್ಲ. ದೂರದ ಇಂಗ್ಲೆಂಡ್‌ನಲ್ಲೂ ಕಾಂತಾರಾ ಚಾಪ್ಟರ್ 1 ಅಬ್ಬರ ಜೋರಾಗಿದೆ. ವಿಶ್ವದ ಅತ್ಯಂತ ಪ್ರಸಿದ್ದ ಫುಟ್ಬಾಲ್ ಲೀಗ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲೂ ಕಾಂತಾರಾ ಚಾಪ್ಟರ್ 1 ಅಬ್ಬರಿಸುತ್ತಿದೆ. ಪ್ರತಿಷ್ಠಿತ ಮ್ಯಾಂಚೆಸ್ಟರ್ ಸಿಟಿ ತಂಡ ತನ್ನ ಅಧಿಕೃತ ಖಾತೆಯಲ್ಲಿ ಕಾಂತಾರಾ ರೀತಿಯ ಪೋಸ್ಟರ್ ಹಾಕಿದೆ. ತಂಡದ ಪ್ರಮುಖ ಸ್ಟೈಕರ್ ಏರ್ಲಿಂಗ್ ಹಾಲೆಂಡ್ ಪೋಸ್ಟರ್ ರೆಡಿ ಮಾಡಿದೆ. ಒಂದು ದಂಕತೆ, ಇನ್ನು ರಚನೆಯಾಗುತ್ತದೆ ಎಂದು ಬರೆಯಲಾಗಿದೆ.

ರಿಷಬ್ ಶೆಟ್ಟಿ ಪೋಸ್ಟರ್ ರೀತಿಯಲ್ಲೇ ಮ್ಯಾಂಚೆಸ್ಟರ್ ಸಿಟಿ ಪೋಸ್ಟರ್

ರಿಷಬ್ ಶೆಟ್ಟಿ ಡೋಲು ಹಿಡಿದು ದೇವಾರಾಧನೆ, ಕುಣಿತದ ಪೋಸ್ಟರ್ ಭಾರಿ ವೈರಲ್ ಆಗಿದೆ. ಇದೇ ಪೋಸ್ಟರನ್ನು ಬಳಸಿಕೊಂಡು ಮ್ಯಾಂಚೆಸ್ಟರ್ ಸಿಟಿ ಫುಟ್ಬಾಲ್ ತಂಡ, ಏರ್ಲಿಂಗ್ ಹಾಲೆಂಡ್ ಫೋಟೋವನ್ನು ಪೋಸ್ಟ್ ಮಾಡಿದೆ. ಏರ್ಲಿಂಗ್ ಹಾಲೆಂಡ್ ಇತ್ತೀಚೆಗಷ್ಟೇ ಮ್ಯಾಂಚೆಸ್ಟರ್ ಸಿಟಿ ತಂಡ ಸೇರಿಕೊಂಡಿದ್ದಾರೆ. ಹಾಲೆಂಡ್‌ಗೆ ಮ್ಯಾಂಚೆಸ್ಟರ್ ಸಿಟಿ ಕಾಂತಾರಾ ಪೋಸ್ಟರ್ ಮೂಲಕ ಸ್ವಾಗತ ನೀಡಿದೆ. ಹಾಲೆಂಡ್, ದಿ ಲೆಜೆಂಡ್ ಎಂದು ಬರೆದಿರುವ ಈ ಪೋಸ್ಟರ್‌ನಲ್ಲಿ ಹಾಲೆಂಡ್ ಗೋಲು ಸೇರಿದಂತೆ ಸಾಧನೆಯನ್ನು ಹೇಳಲಾಗಿದೆ. ಇಂಗ್ಲೆಂಡ್‌ನಲ್ಲಿ ಕಾಂತಾರಾ ಚಾಪ್ಟರ್ 1 ಸಿನಿಮಾ ಬಾರಿ ಅಬ್ಬರಿಸುತ್ತಿದೆ. ಇದರ ಬೆನ್ನಲ್ಲೇ ಮ್ಯಾಂಚೆಸ್ಟರ್ ಸಿಡಿ ಈ ಪೋಸ್ಟರ್ ಹಾಕಿದ್ದು, ಅಭಿಮಾನಿಗಳು ಸಂಭ್ರಮಿಸಿದ್ದಾರೆ.

ಹಾಲೆಂಡ್, ದಿ ಲೆಜೆಂಡ್ ಪೋಸ್ಟರ್‌ಗೆ ಭಾರಿ ಮೆಚ್ಚುಗೆ

ಮ್ಯಾಂಚೆಸ್ಟರ್ ಸಿಟಿ ಪೋಸ್ಟ್ ಮಾಡಿರುವ ಕಾಂತಾರಾ ಶೈಲಿಯ ಪೋಸ್ಟರ್‌ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅಭಿಮಾನಿಗಳು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮ್ಯಾಂಚೆಸ್ಟರ್ ಹೊಸ ಪೋಸ್ಟರ್ ಹಾಗೂ ಪ್ರದರ್ಶನ ಕುರಿತು ಅಭಿಮಾನಿಗಳು ಖುಷಿಯಾಗಿದ್ದಾರೆ. ಅಕ್ಟೋಬರ್ 5 ರಂದು ಬ್ರೆಂಟ್‌ಫೋರ್ಟ್ ನಡೆದಿರುವ ಲೀಗ್ ಪಂದ್ಯದಲ್ಲಿ ಮ್ಯಾಂಚೆಸ್ಟರ್ ರೋಚಕ ಗೆಲುವು ಸಾಧಿಸಿತ್ತು. ಮ್ಯಾಂಚೆಸ್ಟರ್ 1-0 ಅಂತರದಿಂದ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಹಾಲೆಂಡ್ ಸಿಡಿಸಿದ ಗೋಲು ಮ್ಯಾಂಚೆಸ್ಟರ್ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿತು.

30 ದೇಶಗಳಲ್ಲಿ ಕಾಂತಾರಾ ರಿಲೀಸ್

ಭಾರತೀಯ ಭಾಷೆ ಜೊತೆಗೆ ಹಲವು ಇತರ ಭಾಷೆಗಳಲ್ಲೂ ಕಾಂತಾರಾ ಚಾಪ್ಟರ್ 1 ಸಿನಿಮಾ ಬಿಡುಗಡೆಯಾಗಿದೆ. ವಿಶೇಷ ಅಂದರೆ 30 ದೇಶಗಳಲ್ಲಿ ಕಾಂತಾರಾ ಚಾಪ್ಟರ್ 1 ಸಿನಿಮಾ ಬಿಡುಗಡೆಯಾಗಿದ್ದು ಮಾತ್ರವಲ್ಲ, ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಪೈಕಿ ಇಂಗ್ಲೆಂಡ್‌‌ನಲ್ಲಿ ಕಾಂತಾರಾ ಉತ್ತಮ ಪ್ರದರ್ಶನ ಕಾಣುತ್ತಿದೆ.

ಕಾಂತಾರಾ ಚಾಪ್ಟರ್ 1 ಸಿನಿಮಾ ಕದಂಬರ ಕಾಲದಲ್ಲಿ ನಡೆದ ಕತೆಯನ್ನು ಆಧರಿಸಿ ನಿರ್ಮಾಣ ಮಾಡಲಾಗಿದೆ. ಜನಪದ, ಸಂಸ್ಕೃತಿ, ನಂಬಿಕೆ, ಧರ್ಮ-ಅಧರ್ಮಗಳ ತಿಕ್ಕಾಟ ಸೇರಿದಂತೆ ಕಾಡಿನ ಮುಗ್ಗ ಜನರ ಬದುಕು, ಯುದ್ಧ ಸೇರಿದಂತೆ ಹೊಸ ಮಾಯಾಲೋಕವನ್ನೇ ಕಾಂತಾರಾ ಚಾಪ್ಟರ್ 1 ಕಟ್ಟಿಕೊಡುತ್ತಿದೆ. ರಿಷಬ್ ಶೆಟ್ಟಿ ನಟನೆ ಹಾಗೂ ನಿರ್ದೇಶನದಲ್ಲಿ ಮತ್ತೆ ಗೆದ್ದಿದ್ದಾರೆ. ಹಾಲಿವುಡ್‌ನಲ್ಲಿ ತೆರೆಗೆ ಬಂದಿರುವ ಹಲವು ಇತಿಹಾಸ ಆಧಾರಿತ ಸಿನಿಮಾಗಳ ಸಾಲಿನಲ್ಲಿ ಇದೀಗ ಕಾಂತಾರಾ ಕೂಡ ಕಾಣಿಸಿಕೊಳ್ಳುತ್ತಿದೆ.

View post on Instagram