ಅರ್ಜೆಂಟೀನಾ ಫುಟ್ಬಾಲ್ ತಂಡ ನವೆಂಬರ್‌ನಲ್ಲಿ ಕೇರಳದಲ್ಲಿ ಸೌಹಾರ್ದ ಪಂದ್ಯವನ್ನಾಡಲಿದೆ. ಆದರೆ ತಂಡದ ನಾಯಕ ಮೆಸ್ಸಿ ಆಗಮಿಸುವ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ. 2026ರ ಫಿಫಾ ವಿಶ್ವಕಪ್‌ನ ಡ್ರಾ ಸಮಾರಂಭವು ಅಮೆರಿಕದ ವಾಷಿಂಗ್ಟನ್‌ನಲ್ಲಿರುವ ಕೆನಡಿ ಸೆಂಟರ್‌ನಲ್ಲಿ ಡಿ.5ರಂದು ನಡೆಯಲಿದೆ.

ಕೊಚ್ಚಿ: ಹಾಲಿ ವಿಶ್ವ ಚಾಂಪಿಯನ್ ಅರ್ಜೇಂಟೀನಾ ತಂಡ ಕೇರಳದಲ್ಲಿ ಸೌಹಾರ್ದ ಫುಟ್ಬಾಲ್ ಪಂದ್ಯ ಆಡುವುದು ಖಚಿತವಾಗಿದೆ. ಈ ಬಗ್ಗೆ ಸ್ವತಃ ಅರ್ಜೆಂಟೀನಾ ತಂಡ ಮತ್ತು ಕೇರಳ ಸರ್ಕಾರ ಅಧಿಕೃತ ಮಾಹಿತಿ ನೀಡಿದೆ. ಆದರೆ ತಂಡದಲ್ಲಿ ದಿಗ್ಗಜ ಆಟಗಾರ ಲಿಯೋನಲ್‌ ಮೆಸ್ಸಿ ಇರಲಿದ್ದಾರೆಯೇ ಎನ್ನುವುದು ಖಚಿತವಾಗಿಲ್ಲ.

ನವೆಂಬರ್‌ 10-18ರ ನಡುವೆ ಕೇರಳದಲ್ಲಿ ಸೌಹಾರ್ಧ ಫುಟ್ಬಾಲ್‌ ಪಂದ್ಯ ಆಡುತ್ತೇವೆ ಎಂದು ಅರ್ಜೆಂಟೀನಾ ತಂಡ ಸಾಮಾಜಿಕ ತಾಣಗಳಲ್ಲಿ ಘೋಷಿಸಿದೆ. ಆದರೆ ಪಂದ್ಯದ ದಿನಾಂಕ, ಎದುರಾಳಿ ತಂಡದ ಬಗ್ಗೆ ಮಾಹಿತಿ ನೀಡಿಲ್ಲ. ಪಂದ್ಯ ಕೊಚ್ಚಿ ಅಥವಾ ತಿರುವನಂತಪುರಂನಲ್ಲಿ ನಡೆಯುವ ಸಾಧ್ಯತೆಯಿದೆ.

ಮತ್ತೊಂದೆಡೆ ಕೇರಳ ಕ್ರೀಡಾ ಸಚಿವ ವಿ.ಅಬ್ದುರಹಿಮಾನ್ ಮಾತನಾಡಿದ್ದು, ‘ಮೆಸ್ಸಿ ನೇತೃತ್ವದಲ್ಲಿ ವಿಶ್ವಕಪ್ ಗೆದ್ದ ಅರ್ಜೇಂಟಿನಾ ರಾಷ್ಟ್ರೀಯ ಫುಟ್ಬಾಲ್ ತಂಡ ನವೆಂಬರ್‌ನಲ್ಲಿ ಕೇರಳದಲ್ಲಿ ನಡೆಯಲಿರುವ ಫಿಫಾ ಪಂದ್ಯದಲ್ಲಿ ಆಡಲಿದೆ’ ಎಂದಿದ್ದಾರೆ. ಅರ್ಜೆಂಟೀನಾ ತಂಡ 2011ರಲ್ಲಿ ಕೊನೆ ಬಾರಿ ಭಾರತದಲ್ಲಿ ಆಡಿತ್ತು.

ಟ್ರಂಪ್‌ ಮುಂದಾಳತ್ವದಲ್ಲಿ, ಕೆನಡಿ ಸೆಂಟರ್‌ನಲ್ಲಿ ಫಿಫಾ ವಿಶ್ವಕಪ್ ಡ್ರಾ ಸಮಾರಂಭ!

ವಾಷಿಂಗ್ಟನ್‌: 2026ರ ಫಿಫಾ ವಿಶ್ವಕಪ್‌ನ ಡ್ರಾ ಸಮಾರಂಭವು ಅಮೆರಿಕದ ವಾಷಿಂಗ್ಟನ್‌ನಲ್ಲಿರುವ ಕೆನಡಿ ಸೆಂಟರ್‌ನಲ್ಲಿ ಡಿ.5ರಂದು ನಡೆಯಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಹೇಳಿದ್ದಾರೆ. ಸ್ವತಃ ಅವರೇ ಸಂಪೂರ್ಣ ಕಾರ್ಯಕ್ರಮದ ಹೊಣೆ ಹೊತ್ತುಕೊಳ್ಳಲಿದ್ದಾರೆ. ಶ್ವೇತ ಭವನದಲ್ಲಿ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತು ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೋ ಅವರೊಂದಿಗೆ ನಡೆಸಿದ ಸಭೆಯಲ್ಲಿ ಟ್ರಂಪ್ ಈ ಬಗ್ಗೆ ಘೋಷಿಸಿದ್ದಾರೆ. 2026ರ ಫಿಫಾ ವಿಶ್ವಕಪ್‌ಗೆ ಮೆಕ್ಸಿಕೋ, ಕೆನಡಾ ಜತೆಗೆ ಅಮೆರಿಕವೂ ಸಹ ಆತಿಥ್ಯ ವಹಿಸಲಿದೆ. ಕೆನಡಿ ಸೆಂಟರ್‌ನಲ್ಲಿ ನಡೆಯಲಿರುವ ಡ್ರಾ ಸಮಾರಂಭದಲ್ಲಿ, ವಿಶ್ವಕಪ್‌ನ ಪ್ರತಿ ತಂಡವು ಯಾವ ಗುಂಪಿನಲ್ಲಿರಲಿವೆ ಎಂಬುದರ ಬಗ್ಗೆ ನಿರ್ಧಾರವಾಗಲಿದೆ.

ರಾಷ್ಟ್ರೀಯ ಶಿಬಿರ: 35ರಲ್ಲಿ 25 ಫುಟ್ಬಾಲಿಗರಷ್ಟೇ ಭಾಗಿ!

ಬೆಂಗಳೂರು: ಮೋಹನ್‌ ಬಗಾನ್‌ ಕ್ಲಬ್‌ ತನ್ನ ಆಟಗಾರರನ್ನು ನೇಷನ್ಸ್‌ ಕಪ್‌ಗೆ ಮುಂಚಿತವಾಗಿ ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಶಿಬಿರಕ್ಕೆ ಕಳುಹಿಸಲು ಹಿಂದೇಟು ಹಾಕಿದ ಕಾರಣದಿಂದ 35 ಆಟಗಾರರ ಪೈಕಿ ಸದ್ಯ 25 ಮಂದಿ ಮಾತ್ರ ಶಿಬಿರದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಈ ಬಗ್ಗೆ ಕೋಚ್‌ ಖಾಲಿದ್‌ ಜಮಿಲ್ ಮಾಹಿತಿ ನೀಡಿದ್ದಾರೆ. ಆ.16ರಿಂದ ಆರಂಭವಾಗಿರುವ ರಾಷ್ಟ್ರೀಯ ಶಿಬಿರದಲ್ಲಿ 22 ಆಟಗಾರರು ಪಾಲ್ಗೊಂಡಿದ್ದರು. 6 ದಿನ ಕಳೆದರೂ ಉಳಿದ 11 ಆಟಗಾರರು ಶಿಬಿರವನ್ನು ಸೇರಿಕೊಂಡಿಲ್ಲ. ಆದರೆ ಈಗ ಮೂವರು ಸೇರ್ಪಡೆಯಾಗಿದ್ದು, ಸದ್ಯ 25 ಮಂದಿ ನೇಷನ್ಸ್ ಕಪ್‌ನ ಪೂರ್ವಸಿದ್ಧತಾ ಶಿಬಿರದಲ್ಲಿ ಮುಂದುವರಿದಿದ್ದಾರೆ. ಇತ್ತೀಚೆಗೆ ಕೋಚ್‌ 35 ಆಟಗಾರರ ಪಟ್ಟಿ ಸಿದ್ಧಪಡಿಸಿದ್ದರು.

ಅ.29ಕ್ಕೆ ಪ್ಯಾನ್ ಇಂಡಿಯಾ ಮಾದರಿಯಲ್ಲಿ ಕ್ರೀಡಾ ದಿನ

ನವದೆಹಲಿ: ಅ.29 ರಾಷ್ಟ್ರೀಯ ಕ್ರೀಡಾ ದಿನವನ್ನು ಪ್ಯಾನ್ ಇಂಡಿಯಾ ಮಾದರಿಯಲ್ಲಿ ದೇಶಾದ್ಯಂತ ಆಚರಿಸಲು ಕ್ರೀಡಾ ಸಚಿವಾಲಯ ಸಜ್ಜಾಗಿದ್ದು, ಶಾಲಾ ಹಂತದಿಂದ ಹಿಡಿದು ದೇಶವ್ಯಾಪಿ ಆಚರಿಸಲು ಮುಂದಾಗಿದೆ. ಅಂದು ಹಾಕಿ ದಂತಕತೆ ಮೇಜರ್‌ ಧ್ಯಾನ್ ಚಂದ್‌ ಜನ್ಮದಿನ ಕಾರಣ ಅವರ ಗೌರವಾರ್ಥವಾಗಿ ಸಚಿವಾಲಯ ಅರ್ಥಪೂರ್ಣ ಆಚರಣೆಗೆ ಸಜ್ಜಾಗಿದೆ. ಶಾಲೆ, ವಿಶ್ವವಿದ್ಯಾನಿಲಯ, ಬ್ಲಾಕ್, ತಾಲೂಕು, ಜಿಲ್ಲೆ ಹೀಗೆ ವಿವಿಧ ಹಂತಗಳಲ್ಲಿ ಜನರನ್ನು ಒಗ್ಗೂಡಿಸಿ ಅವರನ್ನು ಒಂದು ಗಂಟೆ ಅವಧಿಗೆ ಮೈದಾನದಲ್ಲಿ ವಿವಿಧ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡಲಿದೆ. ಈ ಬಗ್ಗೆ ಕ್ರೀಡಾ ಸಚಿವ ಮನ್ಸುಖ್‌ ಮಾಂಡವೀಯ ಮಾಹಿತಿ ನೀಡಿದ್ದು, ‘ದೇಶದ ಕ್ರೀಡಾ ಸಂಸ್ಕೃತಿಯನ್ನು ರಾಷ್ಟ್ರವ್ಯಾಪಿ ಆಂದೋಲವನ್ನಾಗಿ ಪರಿವರ್ತಿಸುವ ಗುರಿ ಹೊಂದಿದ್ದೇವೆ’ ಎಂದರು.