ಹೆಣ್ಣುಮಕ್ಕಳಿಗೆ ಮನೆಯಲ್ಲಿ ಮೋದಕ ಮಾಡುವುದೆಂದರೆ ಬಹಳ ಇಷ್ಟವಾದರೂ, ಅದನ್ನು ಗರಿಗರಿಯಾಗಿ ಮಾಡುವುದು ಹೇಗೆಂಬುದೇ ಚಿಂತೆ. ಹಾಗಾಗಿ ಇಂದು ಮೋದಕ ಕ್ರಿಸ್ಪಿಯಾಗಿ ಬರಲು ಯಾವ ಪದಾರ್ಥ ಸೇರಿಸಬೇಕು? ಎಂದು ನೋಡೋಣ…

ಮೋದಕ ಒಂದು ಸಿಹಿಯಾದ ಖಾದ್ಯವಾಗಿದ್ದು, ಗಣೇಶ ಚತುರ್ಥಿಯಂದು ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲೂ ಮಾಡಲಾಗುತ್ತದೆ. ಗಣೇಶನಿಗೆ ಮೋದಕಗಳು ತುಂಬಾ ಇಷ್ಟ ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಗಣಪತಿ ಹಬ್ಬದಂದು ಬಪ್ಪನಿಗೆ 21 ಮೋದಕಗಳನ್ನು ಅರ್ಪಿಸುವುದು ಪ್ರತೀತಿ. ಮೋದಕವನ್ನು ವಿವಿಧ ರೀತಿ ತಯಾರಿಸುತ್ತಾರೆ. ಆವಿಯಲ್ಲಿ ಬೇಯಿಸಿದ ಮೋದಕ, ಹುರಿದ ಮೋದಕ, ಚಾಕೊಲೇಟ್ ಮೋದಕ ಮತ್ತು ಒಣ ಹಣ್ಣಿನ ಮೋದಕ ಇಂದು ಮಾರುಕಟ್ಟೆಯಲ್ಲಿಯೂ ಲಭ್ಯವಿದೆ. ಎಲ್ಲವೂ ತಮ್ಮದೇ ಆದ ವಿಶಿಷ್ಟ ರುಚಿಯನ್ನು ಹೊಂದಿರುತ್ತವೆ.

ಆದರೆ ಬಹುತೇಕ ಹೆಣ್ಣುಮಕ್ಕಳಿಗೆ ಮನೆಯಲ್ಲಿ ಮೋದಕ ಮಾಡುವುದೆಂದರೆ ಬಹಳ ಇಷ್ಟವಾದರೂ, ಅದನ್ನು ಗರಿಗರಿಯಾಗಿ ಮಾಡುವುದು ಹೇಗೆಂಬುದೇ ಚಿಂತೆ. ಹಾಗಾಗಿ ಇಂದು ಮೋದಕ ಮಾಡುವುದು ಹೇಗೆಂದು ತಿಳಿಸುವುದರ ಜೊತೆಗೆ, ಮೋದಕ ಗರಿಗರಿಯಾಗಿ, ರುಚಿಯಾಗಿ, ಡಿಫರೆಂಟ್ ಆಗಿ ಬರಲು ಯಾವ ಪದಾರ್ಥ ಸೇರಿಸಬೇಕು? ಎಂದು ನೋಡೋಣ.

ಮೋದಕ ಮಾಡುವ ವಿಧಾನ
ಕಣಕ ಮಾಡಲಿಕ್ಕೆ 100 ಗ್ರಾಂ ಚಿರೋಟಿ ರವೆ, ಎರಡು ಟೇಬಲ್ ಸ್ಪೂನ್ ಮೈದಾ, ಎರಡು ಟೇಬಲ್ ಸ್ಪೂನ್ ತುಪ್ಪ, ಒಂದು ಚಿಟಿಕೆ ಉಪ್ಪು ಸೇರಿಸಿ ನೀರು ಹಾಕಿಕೊಳ್ಳದೆ ಕಲಸಿಕೊಳ್ಳಬೇಕು. ಕಲಸಿದಾಗ ಹಿಟ್ಟು ಗಂಟು ಬರಬೇಕು, ಆಗ ನೀರು ಹಾಕಿ ಕಲಸಬೇಕು. ನಂತರ ಮೇಲೆ ಮೈದಾ ಹಿಟ್ಟನ್ನು ಉದುರಿಸಿ ಬಿಡಬೇಕು. ಈಗ ಹೂರಣ ರೆಡಿ ಮಾಡಿಕೊಳ್ಳೋಣ.

ಹೂರಣ ರೆಡಿ ಮಾಡಿಕೊಳ್ಳಲಿಕ್ಕೆ…
ಬಾಣಲೆಗೆ ಒಂದು ಟೇಬಲ್ ಸ್ಪೂನ್ ತುಪ್ಪ ಹಾಕಿ.
ಸ್ವಲ್ಪ ಗೋಡಂಬಿ, ಬಾದಾಮಿ ನಿಮ್ಮ ಶಕ್ತಿಯಾನುಸಾರ ಹಾಕಬಹುದು. ಕಂದು ಬಣ್ಣ ಬರುವವರೆಗೆ ಹುರಿಯಿರಿ.
ಅರ್ಧ ಹೋಳು ಕಾಯಿತುರಿ ಸೇರಿಸಿಕೊಳ್ಳಿ. ಕಾಯಿ ಹುರಿತಿದ್ದ ಹಾಗೆ ಬೆಲ್ಲ ಸೇರಿಸಿಕೊಳ್ಳಬೇಕು.
ಎರಡು ನಿಮಿಷವಾಗುತ್ತಿದ್ದ ಹಾಗೆ ಅದು ನೀರು ಬಿಟ್ಟುಕೊಳ್ಳುತ್ತೆ. ಮತ್ತೆ ನೀರು ಸೇರಿಸಿಕೊಳ್ಳೋದು ಬೇಡ. 
ನಂತರ ಒಂದು ಟೇಬಲ್ ಸ್ಪೂನ್ ಚಿರೋಟೆ ರವೆ ಸೇರಿಸಿಕೊಂಡರೆ ಹೂರಣ ಸಿದ್ಧವಾಗುತ್ತದೆ. ಮೇಲೆ ಚಿಟಿಕೆ ಏಲಕ್ಕಿ ಪುಡಿ ಉದುರಿಸಿ ತಟ್ಟೆಯಲ್ಲಿ ಹಾಕಿ ಆರುವುದಕ್ಕೆ ಬಿಡಬೇಕು. ಇಲ್ಲಿ ತಿಳಿಸಿರುವ ಪ್ರಮಾಣದಲ್ಲಿ ಮಾಡಿದರೆ ನಿಮಗೆ 10-11 ಮೋದಕ ಬರುತ್ತದೆ. 

ಕರಿಯಲು...

ಆಗಲೇ ಕಲಸಿಟ್ಟಿದ್ದ ಹಿಟ್ಟನ್ನು ಮತ್ತು ಮೇಲೆ ಉದುರಿಸಿದ ಮೈದಾವನ್ನು ಮತ್ತೊಮ್ಮೆ ಪೂರಿ ಹಿಟ್ಟಿನ ಹದಕ್ಕೆ ಕಲಸಿ. ಈಗ ಸಣ್ಣ ಸಣ್ಣ ಉಂಡೆಗಳಾಗಿ ಮಾಡಿಕೊಳ್ಳೋಣ. ಸಣ್ಣುಂಡೆಯನ್ನು ಸ್ವಲ್ಪ ಅಗಲ ಮಾಡಿ, ಅದರೊಳಗೆ ಸ್ವಲ್ಪ ಹೂರಣ ತುಂಬಿ ಸೀರೆ ಮಡಚಿದ ಹಾಗೆ ಮಡಚುತ್ತಾ ಬರಬೇಕು. ನಿಮಗೆ ನೀಟಾಗಿ ಬರಬೇಕೆಂದರೆ, ಅಂಗಡಿಯಲ್ಲಿ ಸಿಗುವ ಅಚ್ಚು ಉಪಯೋಗಿಸಿ. ನಂತರ ಜಾಮೂನು ಕರಿವ ಹದಕ್ಕೆ ಕರಿದರೆ ಗರಿಗರಿಯಾದ, ರುಚಿರುಚಿಯಾದ ಮೋದಕ ನೈವೇದ್ಯಕ್ಕೆ ಸಿದ್ಧ.

ಮೋದಕ ತಯಾರಿಸಲು ಕೆಲವು ಸಲಹೆಗಳು
* ಮೋದಕಗಳನ್ನು ತಯಾರಿಸಲು ಉತ್ತಮ ಗುಣಮಟ್ಟದ ತಾಜಾ ಹಿಟ್ಟನ್ನು ಮಾತ್ರ ಬಳಸಿ.
* ತುಂಬಾ ನೀರು ಹಾಕದೆ ಪೂರಿ ಹಿಟ್ಟಿನ ಹದಕ್ಕೆ ಕಲಸಬೇಕು.
* ಮೈದಾ ಸೇರಿಸುವುದರಿಂದ ನಿಮಗೆ ಮೋದಕ ಗರಿಗರಿಯಾಗಿ ಬರುತ್ತೆ.
* ಚಿರೋಟೆ ರವೆ ಸೇರಿಸಿಕೊಂಡರೆ ಗಟ್ಟಿಯಾಗಿ ಚೆನ್ನಾಗಿ ಬರುತ್ತದೆ ಹೂರಣ. ಅಂಟಿಕೊಳ್ಳಲ್ಲ
* ಎಣ್ಣೆ ಹೆಚ್ಚು ಕಾಯಿಸುವುದು ಬೇಡ, ಮೀಡಿಯಂ ಹದಕ್ಕೆ ಬಂದ ನಂತರ ಕರಿದರೆ ಸೂಕ್ತ.
* ಪರ್‌ಫೆಕ್ಟ್ ಮೋದಕ ತಯಾರಿಸಲು ಅಚ್ಚು ಯಾವುದೇ ಅಂಗಡಿಯಲ್ಲಿ ಈಗ ಸುಲಭವಾಗಿ ಲಭ್ಯ.
* ನಾವಿಲ್ಲಿ ಇಂದು ಹೇಳಿರುವುದು ಕರಿದ ಮೋದಕ, ಇದನ್ನೇ ಹಬೆಯಲ್ಲಿ ಬೇಯಿಸಿ ಮಾಡಬಹುದು. ಆದರೆ ಹಬೆಯಲ್ಲಿ ಬೇಯಿಸಿದ್ದು ಅವತ್ತಿನ ದಿನಕ್ಕೆ ಮಾತ್ರ ಸೇವಿಸಿದರೆ ಚೆನ್ನ. ಕರಿದದ್ದು ಬಹಳ ದಿನಗಳವರೆಗೆ ಇರುತ್ತದೆ.