ಬಹುತೇಕರ ಸಮಸ್ಯೆಯೆಂದರೆ ಪಕೋಡ ಹೆಚ್ಚು ಎಣ್ಣೆ ಹೀರಿಕೊಳ್ಳುತ್ತದೆ. ಇದರಿಂದಾಗಿ ಅವು ಆರೋಗ್ಯಕ್ಕೆ ಹಾನಿಕಾರಕ. ಅಷ್ಟೇ ಅಲ್ಲ, ರುಚಿಯೂ ಹಾಳಾಗುತ್ತದೆ.
ಭಾರತದಲ್ಲಿ ಪಕೋಡವನ್ನ ಬೇರೆ ಬೇರೆ ಹೆಸರಿನಿಂದ ಕರೆಯಲಾಗುತ್ತದೆ. ಇದನ್ನು ಯಾವ ಹೆಸರಿನಿಂದ ಕರೆದರೆ ನಮಗೇನು ಟೇಸ್ಟ್ ಮುಖ್ಯ ಅಂತೀರಾ. ಯೆಸ್. ಬಿಸಿ ಬಿಸಿ ಪಕೋಡದ ರುಚಿ ಬಲ್ಲವನೇ ಬಲ್ಲ. ಕೆಲವರಿಗಂತೂ ಹೆಸರು ಕೇಳುತ್ತಿದ್ದಂತೆ ಬಾಯಲ್ಲಿ ನೀರು ಬರಲು ಪ್ರಾರಂಭಿಸುತ್ತದೆ. ಮಳೆಗಾಲದಲ್ಲಿ ಬಿಸಿ ಪಕೋಡದ ರುಚಿಯೇ ಭಿನ್ನ. ವಿಶೇಷವಾಗಿ ಹಬ್ಬಗಳಲ್ಲಿ ಪಕೋಡ ತಿನ್ನುವುದು ಸಹ ಖುಷಿ ನೀಡುತ್ತದೆ. ಆದರೆ ಬಹುತೇಕರ ಸಮಸ್ಯೆಯೆಂದರೆ ಪಕೋಡ ಹೆಚ್ಚು ಎಣ್ಣೆ ಹೀರಿಕೊಳ್ಳುತ್ತದೆ. ಇದರಿಂದಾಗಿ ಅವು ಆರೋಗ್ಯಕ್ಕೆ ಹಾನಿಕಾರಕ. ಅಷ್ಟೇ ಅಲ್ಲ, ರುಚಿಯೂ ಹಾಳಾಗುತ್ತದೆ. ನಿಮಗೂ ಪ್ರತಿ ಬಾರಿ ಪಕೋಡ ಮಾಡುವಾಗ ಇದೇ ಸಮಸ್ಯೆ ಕಾಡುತ್ತಿದ್ದರೆ ಈಗ ಚಿಂತಿಸುವ ಅಗತ್ಯವಿಲ್ಲ. ಎಣ್ಣೆ ಹೆಚ್ಚು ಹೀರದಂತೆ, ರುಚಿ ರುಚಿಯಾಗಿ, ಗರಿಗರಿಯಾಗಿ ಪಕೋಡ ಮಾಡುವುದು ಹೇಗೆಂದು ನಾವು ನಿಮಗೆ ಹೇಳಲಿದ್ದೇವೆ.
ವೈಟ್ ಮ್ಯಾಜಿಕ್ ಫುಡ್
ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಸ್ವೀಟ್ ಶಾಪ್ ಅಥವಾ ಸ್ಟ್ರೀಟ್ ಫುಡ್ ಸವಿಯುವಾಗ ಪಕೋಡಗಳು ತುಂಬಾ ಗರಿಗರಿಯಾಗಿ ಮತ್ತು ಒಣಗಿರುವುದನ್ನು ನೀವು ಹೆಚ್ಚಾಗಿ ನೋಡಿರಬಹುದು. ಇದರ ಹಿಂದಿನ ರಹಸ್ಯವೇನಿರಬಹುದು ಎಂದು ನೀವೂ ತಲೆಕೆಡಿಸಿಕೊಂಡಿರಬಹುದು. ಆದರೆ ಅದು ಬೇರೇನೂ ಅಲ್ಲ, ಅಕ್ಕಿ ಹಿಟ್ಟು. ಹೌದು, ಅಕ್ಕಿ ಹಿಟ್ಟು ಪಕೋಡ ಎಣ್ಣೆಯನ್ನು ಹೀರಿಕೊಳ್ಳುವುದನ್ನು ತಡೆಯುವ ಮತ್ತು ಅವುಗಳನ್ನು ಸಂಪೂರ್ಣವಾಗಿ ಗರಿಗರಿಯಾಗಿಸಲು ಸಹಾಯ ಮಾಡುವ ಮ್ಯಾಜಿಕ್ ಪದಾರ್ಥವಾಗಿದೆ. ನೀವೂ ಮುಂದಿನ ಬಾರಿ ಮನೆಯಲ್ಲಿ ಪಕೋಡ ಮಾಡುತ್ತಿದ್ದರೆ ಕಡಲೆ ಹಿಟ್ಟಿಗೆ ಸ್ವಲ್ಪ ಅಕ್ಕಿ ಹಿಟ್ಟನ್ನು ಸೇರಿಸಿ. ಹೀಗೆ ಮಾಡುವುದರಿಂದ ಅಕ್ಕಿ ಹಿಟ್ಟು ಒಂದು ಪದರವನ್ನು ರೂಪಿಸುತ್ತದೆ. ಈ ಪದರವು ಪಕೋಡಗೆ ಎಣ್ಣೆ ಪ್ರವೇಶಿಸುವುದನ್ನು ತಡೆಯುತ್ತದೆ. ಇದಲ್ಲದೆ, ಅಕ್ಕಿ ಹಿಟ್ಟು ಪಿಷ್ಟವನ್ನು ಹೊಂದಿರುತ್ತದೆ, ಹಾಗಾಗಿ ಫ್ರೈ ಮಾಡುವಾಗ ಇದು ಪಕೋಡ ಗರಿಗರಿಯಾಗುವಂತೆ ನೋಡಿಕೊಳ್ಳುತ್ತದೆ.
ಅಕ್ಕಿಹಿಟ್ಟು ಬದಲಿಗೆ..
"ನಮಗೆ ಅಕ್ಕಿಹಿಟ್ಟು ಇಷ್ಟವಾಗಲ್ಲಪ್ಪ..." ಎನ್ನುವವರಿಗೂ ಮತ್ತೊಂದು ಐಡಿಯಾ ಇದೆ. ಅದೇನೆಂದರೆ ನೀವು ಎಣ್ಣೆಗೆ ಒಂದು ಚಿಟಿಕೆ ಉಪ್ಪನ್ನು ಸೇರಿಸಬೇಕು. ಇದು ಎಣ್ಣೆಯ ಅಣುಗಳನ್ನು ಒಟ್ಟಿಗೆ ಬಂಧಿಸುತ್ತದೆ. ಇದು ಎಣ್ಣೆಯ ಮೇಲೆ ತೆಳುವಾದ ಪದರವನ್ನು ರೂಪಿಸುತ್ತದೆ, ಇದು ಪಕೋಡ ಎಣ್ಣೆಯನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ. ವಿಶೇಷವೆಂದರೆ ಉಪ್ಪು ಸೇರಿಸುವುದರಿಂದ ಮತ್ತೊಂದು ಪ್ರಯೋಜನವಿದೆ. ಪಕೋಡ ಬಿಸಿ ಎಣ್ಣೆಯಲ್ಲಿ ಹಾಕಿದ ತಕ್ಷಣ ಒಂದಕ್ಕೊಂದು ಅಂಟಿಕೊಳ್ಳುತ್ತೆ ಅಲ್ವಾ, ಅದೇ ಉಪ್ಪು ಸೇರಿಸಿದ್ರೆ ಈ ಸಮಸ್ಯೆ ಬಹಳ ಮಟ್ಟಿಗೆ ಕಡಿಮೆಯಾಗುತ್ತದೆ. ಹೌದು, ಉಪ್ಪು ಎಣ್ಣೆಯಲ್ಲಿ ಮೃದುವಾದ ಪದರವನ್ನು ಸೃಷ್ಟಿಸುತ್ತದೆ. ಇದರಿಂದಾಗಿ ಪಕೋಡವನ್ನು ಬಾಣಲೆಯಲ್ಲಿ ಸುಲಭವಾಗಿ ತಿರುಗಿಸಬಹುದು ಮತ್ತು ಅಂಟಿಕೊಳ್ಳುವುದಿಲ್ಲ.
ನೀವು ಈ ಟಿಪ್ಸ್ ಕೂಡ ಫಾಲೋ ಮಾಡಿ…
* ಪಕೋಡ ತಯಾರಿಸಲು ದೊಡ್ಡ ದೊಡ್ಡ ಪ್ಯಾನ್ ಅಥವಾ ಕಡಾಯಿ ಬಳಸಬೇಕು. ಒಂದು ವೇಳೆ ಸಣ್ಣ ಪ್ಯಾನ್ ಅಥವಾ ಕಡಾಯಿಯಾದ್ರೂ ಸರಿಯಾಗಿ ಫ್ರೈ ಮಾಡಬಹುದು.
* ಪಕೋಡ ಚೆನ್ನಾಗಿ ಬೇಯಬೇಕೆಂದರೆ ಹೆಚ್ಚು ಎಣ್ಣೆ ಬೇಕಾಗುತ್ತದೆ. ಕಡಿಮೆ ಎಣ್ಣೆಯಲ್ಲಿ ಪಕೋಡಗಳು ಅಂಟಿಕೊಳ್ಳುತ್ತವೆ ಮತ್ತು ಸರಿಯಾಗಿ ಬೇಯುವುದಿಲ್ಲ.
* ನೆನಪಿಡಿ, ಪಕೋಡವನ್ನು ಎಂದಿಗೂ ಕಡಿಮೆ ಉರಿಯಲ್ಲಿ ಫ್ರೈ ಮಾಡಬೇಡಿ. ಯಾವಾಗಲೂ ಗ್ಯಾಸ್ ಸ್ಟವ್ ಅನ್ನು ಮೀಡಿಯಂ ಫ್ಲೇಮ್‌ನಲ್ಲಿ ಇರಿಸಿ. ಪ್ಯಾನ್‌ನ ತಾಪಮಾನ ಸರಿಯಾಗಿ ಗಮನಿಸದಿದ್ರೆ ಪಕೋಡ ಎಣ್ಣೆಯುಕ್ತವಾಗುತ್ತವೆ.
* ತಣ್ಣನೆಯ ಪ್ಯಾನ್‌ನಲ್ಲಿ ಪಕೋಡ ಹಾಕುವ ತಪ್ಪನ್ನು ಎಂದಿಗೂ ಮಾಡಬೇಡಿ. ಎಣ್ಣೆ ಚೆನ್ನಾಗಿ ಬಿಸಿಯಾಗುವುದು ಬಹಳ ಮುಖ್ಯ.
