Ganapati dream : ಗಣೇಶ ಚತುರ್ಥಿ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಭಕ್ತರು ಗಣಪತಿ ಭಕ್ತಿಯಲ್ಲಿ ತಲ್ಲೀನರಾಗ್ತಿದ್ದಾರೆ. ಚೌತಿ ದಿನ ಗಣೇಶ ಕನಸಿನಲ್ಲಿ ಬಂದ್ರೆ ಏನು ಅರ್ಥ ಗೊತ್ತಾ? 

ಮೋದಕ ಪ್ರಿಯ ಗಣೇಶ (Ganesha)ನನ್ನು ಎಲ್ಲ ಶುಭ ಕಾರ್ಯಕ್ಕೆ ಮುನ್ನ ಪೂಜೆ ಮಾಡ್ತೇವೆ. ವಿಘ್ನ ವಿನಾಯಕ ಎಂದೇ ಪ್ರಸಿದ್ಧಿ ಪಡೆದಿರುವ ಗಣಪತಿ, ಭಕ್ತಿಯಿಂದ ಪೂಜೆ ಮಾಡಿದ ಭಕ್ತರನ್ನು ಎಂದೂ ಕೈ ಬಿಡೋದಿಲ್ಲ ಅಂತ ನಂಬಲಾಗಿದೆ. ಸಂಕಟಹರ ಗಣೇಶನನ್ನು ಪೂಜೆ ಮಾಡಿದ್ರೆ ಜೀವನದ ಎಲ್ಲ ಅಡೆತಡೆ ದೂರವಾಗಿ, ಜೀವನದಲ್ಲಿ ಸುಖ – ಸಂತೋಷ ಪ್ರಾಪ್ತಿಯಾಗುತ್ತೆ. ಗಣಪತಿ ಬಪ್ಪನನ್ನು ಪೂಜಿಸುವುದು ಮತ್ತು ಉಪವಾಸವನ್ನು ಆಚರಿಸುವುದು ಜ್ಞಾನ ಮತ್ತು ಸಮೃದ್ಧಿ ಪಡೆಯಲು ಕಾರಣವಾಗುತ್ತದೆ ಎಂಬ ಧಾರ್ಮಿಕ ನಂಬಿಕೆ (Religious belief) ಇದೆ. ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಗಣೇಶ ದರ್ಶನ ಮಾಡೋದ್ರಿಂದ ಇಡೀ ದಿನ ಚೆನ್ನಾಗಿ ಕಳೆಯುತ್ತದೆ. ಗಣೇಶ ಬರೀ ದೇವಸ್ಥಾನ, ದೇವರ ಮನೆಯಲ್ಲಿ ಮಾತ್ರ ಕಾಣಿಸೋದಿಲ್ಲ. ಕೆಲವೊಮ್ಮೆ ನಮ್ಮ ಸ್ವಪ್ನದಲ್ಲಿಯೂ ಬರ್ತಾನೆ. ನಿಮ್ಮ ಕನಸಿನಲ್ಲಿ ಗಣೇಶ ಬಂದ್ರೆ ಏನರ್ಥ ಎಂಬುದನ್ನು ಸ್ವಪ್ನ ಶಾಸ್ತ್ರದಲ್ಲಿ ಹೇಳಲಾಗಿದೆ.

ಗಣೇಶ ಚತುರ್ಥಿ (Ganesh Chaturthi )ಯಿಂದ ಹತ್ತು ದಿನಗಳ ಕಾಲ ನಿಮ್ಮ ಕನಸಿನಲ್ಲಿ ಗಣಪತಿ ಬಂದ್ರೆ ಏನರ್ಥ? : ಈಗ ಗಣೇಶ ಚೌತಿ ಸಂಭ್ರಮ ಮನೆ ಮಾಡಿದೆ. ಗಣೇಶ ಚತುರ್ಥಿಯಂದು ಗಣಪತಿ ಭೂಲೋಕಕ್ಕೆ ಬಂದು ಭಕ್ತರ ಕಷ್ಟ – ನೋವುಗಳನ್ನು ಪರಿಹರಿಸ್ತಾನೆ. ಗಣೇಶ ಚತುರ್ಥಿಯಿಂದ ಹತ್ತು ದಿನಗಳಲ್ಲಿ ಒಂದು ದಿನ ಗಣಪತಿ ನಿಮ್ಮ ಕನಸಿನಲ್ಲಿ ಬಂದ್ರೆ ಅದನ್ನು ಶುಭವೆಂದು ನಂಬಲಾಗುತ್ತದೆ. ಶೀಘ್ರದಲ್ಲಿಯೇ ಒಳ್ಳೆಯ ಸುದ್ದಿ ನಿಮಗೆ ಸಿಗಲಿದೆ ಎಂದರ್ಥ. ಬರೀ ಈ ಹತ್ತು ದಿನ ಮಾತ್ರವಲ್ಲ, ಯಾವ ದಿನ ಗಣೇಶ ಕನಸಿನಲ್ಲಿ ಬಂದ್ರೂ ಅದು ಮಂಗಳಕರ. ಗಣಪತಿ ಕನಸಿನಲ್ಲಿ ಕಾಣಿಸಿಕೊಂಡ್ರೆ ಅಥವಾ ಗಣಪತಿಯನ್ನು ನೀವು ಪೂಜೆ ಮಾಡಿದಂತೆ ಕಂಡ್ರೆ ಸುಖ – ಸಂತೋಷ ಪ್ರಾಪ್ತಿಯಾಗುತ್ತದೆ.

ಬೆಳಗಿನ ಜಾವದಲ್ಲಿ ಗಣಪ : ಸ್ವಪ್ನ ಶಾಸ್ತ್ರದ ಪ್ರಕಾರ, ಬೆಳಗಿನ ಜಾವ ಬೀಳುವ ಎಲ್ಲ ಕನಸುಗಳು ನಿಜವಾಗುತ್ತವೆ. ಇನ್ನು ಬೆಳಗಿನ ಜಾವ ನಿಮ್ಮ ಕನಸಿನಲ್ಲಿ ಗಣಪತಿ ಬಂದ್ರೆ, ಅದು ಅತ್ಯಂತ ಶುಭಕರ. ಗಣಪತಿ ನಿಮ್ಮ ಆಸೆಗಳನ್ನು ಈಡೇರಿಸುತ್ತಾನೆ ಎಂದರ್ಥ.

ಗಣಪತಿ ಮೂರ್ತಿ ಕಾಣಿಸಿದ್ರೆ : ನಿಮ್ಮ ಕನಸಿನಲ್ಲಿ ಗಣಪತಿ ಮೂರ್ತಿ ಕಾಣಿಸಿದ್ರೆ, ನಿಮ್ಮ ಮನೆಯಲ್ಲಿ ಧಾರ್ಮಿಕ ಕಾರ್ಯ ನಡೆಯಲಿದೆ ಇಲ್ಲವೆ ಶುಭ ಕಾರ್ಯ ನಡೆಯಲಿದೆ ಎನ್ನುವ ಸೂಚನೆಯಾಗಿದೆ. ಬಹಳ ದಿನಗಳಿಂದ ನೀವು ಮಾಡ್ಬೇಕು ಅಂದ್ಕೊಂಡಿದ್ದ ಧಾರ್ಮಿಕ ಕಾರ್ಯ ಶೀಘ್ರವೇ ನಡೆಯಲಿದೆ ಎನ್ನುವ ಅರ್ಥವನ್ನೂ ಇದು ಸೂಚಿಸುತ್ತದೆ.

ಗಣೇಶನ ಜೊತೆ ಮೋಷಕನ ದರ್ಶನ : ಗಣೇಶನ ಜೊತೆ ಮೋಷಕನನ್ನು ನೋಡಿದ್ರೆ ಅದು ಕೂಡ ಮಂಗಳಕರವೆಂದು ಸ್ವಪ್ನ ಶಾಸ್ತ್ರದಲ್ಲಿ ಹೇಳಲಾಗಿದೆ. ಇಲಿ ಹಾಗೂ ಗಣಪತಿ ಎರಡೂ ನಿಮ್ಮ ಕನಸಿನಲ್ಲಿ ಬಂದ್ರೆ ನಿಮ್ಮ ಕೆಲಸದಲ್ಲಿ ಯಶಸ್ಸು ಸಿಗಲಿದೆ, ಸಂಪತ್ತು ಹೆಚ್ಚಾಗಲಿದೆ ಎಂಬುದನ್ನು ಇದು ಸೂಚಿಸುತ್ತದೆ.

ಯಾವ ಕನಸು ಕಂಡ್ರೆ ಅಶುಭ ?: ಗಣಪತಿ ನಿಮ್ಮ ಕನಸಿನಲ್ಲಿ ಬರುವುದು ಸ್ವಪ್ನ ಶಾಸ್ತ್ರದ ಪ್ರಕಾರ ಅತ್ಯಂತ ಶುಭಕರ. ಆದ್ರೆ ಕನಸಿನಲ್ಲಿ ಗಣೇಶನ ವಿಸರ್ಜನೆ ಕಾಣಿಸಿದ್ರೆ ಅದನ್ನು ಅಶುಭ ಎನ್ನಲಾಗುತ್ತದೆ. ಸ್ವಪ್ನ ಶಾಸ್ತ್ರದಲ್ಲಿ, ಇದನ್ನು ಜೀವನದಲ್ಲಿ ದುಃಖ, ತೊಂದರೆ ಅಥವಾ ಆರ್ಥಿಕ ಬಿಕ್ಕಟ್ಟಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮುಂದಿನ ಜೀವನ ಕಷ್ಟಕರವಾಗಿರಲಿದೆ ಎಂಬುದನ್ನು ಇದು ಸೂಚಿಸುತ್ತದೆ.