ದೇಶವೇ ಮೆಚ್ಚಿದ ಹನುಮಾನ್ ಪಾತ್ರಧಾರಿಯೊಬ್ಬರು ಮುಸ್ಲಿಂ ನಟಿಯ ಮೇಲೆ ಪ್ರೇಮಾಂಕುರವನ್ನು ಬೆಳೆಸಿಕೊಂಡಿದ್ದರು. ಆದರೆ ದುರದೃಷ್ಟವಶಾತ್, ಅವರ ಪ್ರೇಮ ಯಶಸ್ವಿಯಾಗಲಿಲ್ಲ. ಬಾಲಿವುಡ್‌ನ ಒತ್ತಡದಿಂದಾಗಿ ಅವರ ಪ್ರೇಮ ಬೇರೆಯಾಯಿತು.

ಅವನು ದೇಶವೇ ಮೆಚ್ಚಿದ, ಪ್ರತಿ ಭಾನುವಾರ ಜನರೆಲ್ಲಾ ಪ್ರೀತಿ ಭಕ್ತಿಗಳಿಂದ ಕಾದು ಕುಳಿತು ಎದುರು ನೋಡುತ್ತಿದ್ದ ಧಾರಾವಾಹಿಯಲ್ಲಿ ಹನುಮಾನ್‌ ಪಾತ್ರಧಾರಿ. ಸೀರಿಯಲ್‌ನ ನಿರ್ದೇಶಕರು ಹತ್ತಾರು ಜನರ ಆಡಿಷನ್‌ ಮಾಡಿ, ಅಳೆದೂ ಸುರಿದೂ ಈತನ ಗಾತ್ರ, ಎತ್ತರ, ಮುಖಭಾವ ಎಲ್ಲವನ್ನೂ ನೋಡಿ ಈತನನ್ನು ಆರಿಸಿದ್ದರು. ಇವನು ಅದಕ್ಕೆ ತಕ್ಕಂತೆ ಆ ಪಾತ್ರವನ್ನು ಸೈ ಸೈ ಎನ್ನುವಂತೆ ಮಾಡಿ ಜನರ ಮೆಚ್ಚುಗೆ ಗಳಿಸಿದ. ಅವನು ಬೇರೆ ಯಾರೂ ಅಲ್ಲ, ರಮಾನಂದ ಸಾಗರ್‌ ಅವರ ರಾಮಾಯಣ ಸೀರಿಯಲ್‌ನಲ್ಲಿ ಆಂಜನೇಯನ ಪಾತ್ರ ಮಾಡಿದ ದಾರಾ ಸಿಂಗ್.‌ ಇದು ಅವನ ನಿಜವಾದ ಹೆಸರಲ್ಲವೆನ್ನಿ- ನಿಜ ಹೆಸರು ದೀದಾರ್‌ ಸಿಂಗ್‌ ರಾಂಧವಾ. ಆದರೆ ದಾರಾ ಸಿಂಗ್‌ ಎಂದೇ ಜನಪ್ರಿಯ.

ದಾರಾ ಸಿಂಗ್ ಅವರ ಅತ್ಯುನ್ನತ ವ್ಯಕ್ತಿತ್ವ ಮತ್ತು ಅಪ್ರತಿಮ ದೈಹಿಕ ಶಕ್ತಿ, ಮನರಂಜನಾ ಜಗತ್ತಿನಲ್ಲಿ ಮಾತ್ರವಲ್ಲದೆ ಕುಸ್ತಿ ಕ್ಷೇತ್ರದಲ್ಲೂ ಅವರಿಗೆ ಹೆಸರು ತಂದುಕೊಟ್ಟಿತು. ಈ ನಟ ಹಲವಾರು ಬಾಲಿವುಡ್ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದರು. ಆದರೆ ರಾಮಾನಂದ ಸಾಗರ್ ಅವರ ರಾಮಾಯಣದಲ್ಲಿ ಮಾಡಿದ ಹನುಮಂತನ ಪಾತ್ರ ಇಂದಿಗೂ ಅವರನ್ನು ಜನ ನೆಪಿಡುವಂತೆ ಮಾಡಿದ್ದು.

ಅವರು ಕುಸ್ತಿಪಟುವಿನ ಧೈರ್ಯಶಾಲಿ ವ್ಯಕ್ತಿತ್ವವನ್ನು ಹೊಂದಿದ್ದರೂ, ಅವರ ಹೃದಯ ಶುದ್ಧ ಮತ್ತು ಸೌಮ್ಯವಾಗಿತ್ತು. ದಾರಾ ಸಿಂಗ್ ನಟಿ ಮುಮ್ತಾಜ್ ಅವರನ್ನು ಹುಚ್ಚನಂತೆ ಪ್ರೀತಿಸುತ್ತಿದ್ದರು ಎಂಬುದು ಹಲವರಿಗೆ ತಿಳಿದಿಲ್ಲದಿರಬಹುದು. ಆದರೆ ದುರದೃಷ್ಟವಶಾತ್, ಅವರ ಈ ಪ್ರೇಮ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಏಕೆ ಎಂಬುದು ಇಲ್ಲಿದೆ.

1963ರಲ್ಲಿ ಬಿಡುಗಡೆಯಾದ ತಮ್ಮ ಎರಡನೇ ಚಿತ್ರ ಫೌಲಾದ್‌ನ ಸೆಟ್‌ಗಳಲ್ಲಿ ದಾರಾ ಸಿಂಗ್ ಮೊದಲು ಮುಮ್ತಾಜ್ ಅವರನ್ನು ಭೇಟಿಯಾದರು. ದಾರಾ ಅವರ ಮೊದಲ ಚಿತ್ರ ಯಶಸ್ವಿಯಾದರೂ, ಹಲವಾರು ದೊಡ್ಡ ನಟಿಯರು ಅವರೊಂದಿಗೆ ಕೆಲಸ ಮಾಡಲು ನಿರಾಕರಿಸಿದ್ದರು. ಆ ಸಮಯದಲ್ಲಿ ಪ್ರಮುಖ ನಟಿಯಾಗಿರದ ಮತ್ತು ಚಲನಚಿತ್ರಗಳಲ್ಲಿ ಸಣ್ಣ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಮುಮ್ತಾಜ್, ದಾರಾ ಅವರೊಂದಿಗೆ ನಟಿಸಲು ಒಪ್ಪಿಕೊಂಡರು.

ಚಿತ್ರೀಕರಣ ಪ್ರಾರಂಭವಾದ ಕೂಡಲೇ, ಇವರ ಪರಿಚಯ ಹೆಚ್ಚು ನಿಕಟವಾಯಿತು. ಅವರ ಸಂಬಂಧದ ಬಗ್ಗೆ ಊಹಾಪೋಹಗಳು ಹರಡಲು ಪ್ರಾರಂಭಿಸಿದವು. ಅವರು ಸೆಟ್‌ನಲ್ಲಿ ಒಟ್ಟಿಗೆ ಹೆಚ್ಚಾಗಿ ಸಮಯ ಕಳೆಯುವುದನ್ನು ಸೆರೆಹಿಡಿಯಲಾಯಿತು. ವಿಕಸನಗೊಳ್ಳುತ್ತಿರುವ ಅವರ ಬಾಂಧವ್ಯ ಬಿಸಿಬಿಸಿ ಚರ್ಚೆಯ ಪ್ರಮುಖ ವಿಷಯವಾಯಿತು. ಅವರಿಬ್ಬರ ಆನ್‌ಸ್ಕ್ರೀನ್‌ ಕೆಮಿಸ್ಟ್ರಿ ಈ ಚಿತ್ರದಲ್ಲಿ ಅದ್ಭುತವಾಗಿತ್ತು. ನಂತರ ಇಬ್ಬರೂ ವೀರ್ ಭೀಮ್‌ಸೇನ್ (1964), ಸ್ಯಾಮ್ಸನ್ (1964), ಹರ್ಕ್ಯುಲಸ್ (1964), ಆಂಧಿ ಔರ್ ತೂಫಾನ್ (1964), ಮತ್ತು ಇತರ ಹಲವಾರು ಹಿಟ್ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದರು.

ಫೌಲಾದ್ ಬಿಡುಗಡೆಯಾದ ನಂತರ, ಮುಮ್ತಾಜ್ ಅವರ ವೃತ್ತಿಜೀವನವು ಮತ್ತೊಂದು ಎತ್ತರಕ್ಕೆ ಏರಿತು. ಅವರಿಗೆ ಅನೇಕ ಚಲನಚಿತ್ರ ಆಫರ್‌ಗಳು ಬರಲು ಪ್ರಾರಂಭಿಸಿದವು. ಅದು ದಾರಾ ಸಿಂಗ್ ಅವರೊಂದಿಗಿನ ಅವರ ಸಂಬಂಧದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿತು. ಮುಮ್ತಾಜ್‌ ಅವರ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಈ ಜೋಡಿಗೆ ಒಟ್ಟಿಗೆ ಹೆಚ್ಚು ಸಮಯ ಕಳೆಯಲು ಸಿಗಲಿಲ್ಲ. ಬೆಳೆಯುತ್ತಿದ್ದ ಅವರ ನಡುವಿನ ಅಂತರವು ಅಂತಿಮವಾಗಿ ಬೇರ್ಪಡುವಿಕೆಗೆ ಕಾರಣವಾಯಿತು.

ಇದರಿಂದ ದಾರಾ ಸಿಂಗ್ ಪ್ರೇಮ ಭಗ್ನವಾಯಿತು. ಈ ಪ್ರೇಮವನ್ನು ದೂರೀಕರಿಸಿದ್ದು ಬಾಲಿವುಡ್ ಎಂದು ದಾರಾ ಸಿಂಗ್‌ ದೂಷಿಸಿದರು. ಗ್ಲಾಮರ್, ಖ್ಯಾತಿ ಮತ್ತು ಕೆಲಸದ ಒತ್ತಡ ಅವರಿಬ್ಬರ ಸಂಬಂಧದಲ್ಲಿ ಅಂತರವನ್ನು ಸೃಷ್ಟಿಸಿತು. ಅವರು ಒಟ್ಟಿಗೆ ಇರಲು ಸಾಧ್ಯವಾಗಲಿಲ್ಲ. ನಟನೆ ಮತ್ತು ಕುಸ್ತಿಯ ಹೊರತಾಗಿ, ದಾರಾ ಸಿಂಗ್ ರಾಜಕೀಯಕ್ಕೂ ಕಾಲಿಟ್ಟರು. 1998ರಲ್ಲಿ, ದಾರಾ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದರು. ಕ್ರೀಡಾ ವಿಭಾಗದಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಮೊದಲ ವ್ಯಕ್ತಿಯಾಗಿ ಇತಿಹಾಸ ನಿರ್ಮಿಸಿದರು. ಅವರು 2012ರಲ್ಲಿ ಹೃದಯಾಘಾತದಿಂದ ನಿಧನರಾದರು. ಕೊನೆಗೂ ಮುಮ್ತಾಜ್‌ ಅವರನ್ನು ಖಾಸಾ ಮಾಡಿಕೊಳ್ಳಲು ಅವರಿಗೆ ಸಾಧ್ಯವಾಗಲೇ ಇಲ್ಲ.