ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿ, ಸಾವಿರಾರು ತಂತ್ರಜ್ಞರು ಮತ್ತು ಕಲಾವಿದರ ಶ್ರಮದಿಂದ ತಯಾರಾದ ಚಿತ್ರವು ಹೀಗೆ ಬಿಡುಗಡೆಯಾದ ದಿನವೇ ಪೈರಸಿಗೆ ತುತ್ತಾಗಿರುವುದು ಇಡೀ ಚಿತ್ರರಂಗಕ್ಕೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಚೆನ್ನೈ: ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ಅವರ ಬಹುನಿರೀಕ್ಷಿತ ಆ್ಯಕ್ಷನ್-ಡ್ರಾಮಾ ಚಿತ್ರ 'ಕೂಲಿ' ಇಂದು (ಆಗಸ್ಟ್ 14) ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಅಭಿಮಾನಿಗಳು ಮುಂಜಾನೆಯಿಂದಲೇ ಚಿತ್ರಮಂದಿರಗಳ ಮುಂದೆ ಹಬ್ಬದ ವಾತಾವರಣ ಸೃಷ್ಟಿಸಿದ್ದರೆ, ಚಿತ್ರತಂಡಕ್ಕೆ ಪೈರಸಿ ಭೂತವು ದೊಡ್ಡ ಆಘಾತ ನೀಡಿದೆ. ಸಿನಿಮಾ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ, ಅದರ ಉತ್ತಮ ಗುಣಮಟ್ಟದ ಹಾಗೂ ಕಡಿಮೆ ರೆಸಲ್ಯೂಶನ್‌ನ ಪ್ರತಿಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದು, ಚಿತ್ರತಂಡವನ್ನು ತೀವ್ರ ಆತಂಕಕ್ಕೆ ದೂಡಿದೆ.
ಕುಖ್ಯಾತ ಪೈರಸಿ ತಾಣಗಳಲ್ಲಿ 'ಕೂಲಿ' ಹಾವಳಿ:
ವರದಿಗಳ ಪ್ರಕಾರ, 'ಕೂಲಿ' ಚಿತ್ರದ ಮೊದಲ ಪ್ರದರ್ಶನ ಮುಗಿಯುವುದರೊಳಗೆ ಪೈರಸಿ ಜಾಲತಾಣಗಳು ತಮ್ಮ ಕೃತ್ಯ ಎಸಗಿವೆ. ಮಧ್ಯಾಹ್ನದ ವೇಳೆಗೆ, ತಮಿಳ್‌ರಾಕರ್ಸ್, ಫಿಲ್ಮಿಝಿಲ್ಲಾ, ಮೂವಿರೂಲ್ಜ್, ಮತ್ತು ಮೂವೀಸ್‌ಡಾ ನಂತಹ ಕುಖ್ಯಾತ ಪೈರಸಿ ವೆಬ್‌ಸೈಟ್‌ಗಳಲ್ಲಿ ಚಿತ್ರದ ಸಂಪೂರ್ಣ ಪ್ರತಿಯು ಡೌನ್‌ಲೋಡ್‌ಗೆ ಲಭ್ಯವಾಗಿತ್ತು. ಕೇವಲ ವೆಬ್‌ಸೈಟ್‌ಗಳಲ್ಲದೆ, ಟೆಲಿಗ್ರಾಂನ ಹಲವು ಗ್ರೂಪ್‌ಗಳಲ್ಲಿಯೂ ಚಿತ್ರದ ಲಿಂಕ್‌ಗಳು ವ್ಯಾಪಕವಾಗಿ ಹರಿದಾಡುತ್ತಿವೆ.
ಅತ್ಯುತ್ತಮ ಗುಣಮಟ್ಟದ 1080p HD ಪ್ರಿಂಟ್‌ನಿಂದ ಹಿಡಿದು ಕಡಿಮೆ ಗುಣಮಟ್ಟದ 240p ಪ್ರಿಂಟ್‌ವರೆಗೆ, ಎಲ್ಲಾ ಆವೃತ್ತಿಗಳು ಉಚಿತವಾಗಿ ಡೌನ್‌ಲೋಡ್ ಮಾಡಲು ಲಭ್ಯವಿರುವುದು ಚಿತ್ರದ ಗಲ್ಲಾಪೆಟ್ಟಿಗೆ ಗಳಿಕೆಯ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿ, ಸಾವಿರಾರು ತಂತ್ರಜ್ಞರು ಮತ್ತು ಕಲಾವಿದರ ಶ್ರಮದಿಂದ ತಯಾರಾದ ಚಿತ್ರವು ಹೀಗೆ ಬಿಡುಗಡೆಯಾದ ದಿನವೇ ಪೈರಸಿಗೆ ತುತ್ತಾಗಿರುವುದು ಇಡೀ ಚಿತ್ರರಂಗಕ್ಕೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಲೋಕೇಶ್ ಕನಕರಾಜ್ ನಿರ್ದೇಶನದ ಮಾಸ್ಟರ್‌ಪೀಸ್:
'ವಿಕ್ರಮ್' ಮತ್ತು 'ಲಿಯೋ' ದಂತಹ ಬ್ಲಾಕ್‌ಬಸ್ಟರ್ ಚಿತ್ರಗಳ ನಂತರ ನಿರ್ದೇಶಕ ಲೋಕೇಶ್ ಕನಕರಾಜ್ ಅವರು 'ಕೂಲಿ' ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದರಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಅವರೊಂದಿಗೆ ಟಾಲಿವುಡ್‌ನ ಕಿಂಗ್ ನಾಗಾರ್ಜುನ, ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಮತ್ತು ನಟಿ ಶ್ರುತಿ ಹಾಸನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇಂತಹ ದೊಡ್ಡ ತಾರಾಗಣವಿರುವ ಚಿತ್ರಕ್ಕೆ ಪೈರಸಿ ಕಂಟಕ ಎದುರಾಗಿರುವುದು ಅಭಿಮಾನಿಗಳಲ್ಲಿಯೂ ಬೇಸರ ಮೂಡಿಸಿದೆ.
ಚಿತ್ರದ ಕಥೆಯು ದೇವಾ ಎಂಬ ಮಾಜಿ ಚಿನ್ನದ ಕಳ್ಳಸಾಗಾಣಿಕೆದಾರನ ಸುತ್ತ ಸುತ್ತುತ್ತದೆ. ಹಳೆಯ ಚಿನ್ನದ ಕೈಗಡಿಯಾರಗಳಲ್ಲಿ ಅಡಗಿಸಿಟ್ಟಿರುವ ಕದ್ದ ತಂತ್ರಜ್ಞಾನವನ್ನು ಬಳಸಿ ತನ್ನ ಕಳೆದುಹೋದ ಅಧಿಕಾರವನ್ನು ಮರಳಿ ಪಡೆಯಲು ದೇವಾ ಪ್ರಯತ್ನಿಸುತ್ತಾನೆ. ಈ ಪಯಣವು ಆತನನ್ನು ಅಪಾಯಕಾರಿ ಪರಿಣಾಮಗಳಿಗೆ ದೂಡುತ್ತದೆ. ಚಿತ್ರದ ಆ್ಯಕ್ಷನ್ ಮತ್ತು ರಜನಿಕಾಂತ್ ಅವರ ನಟನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಈ ಪೈರಸಿ ಸುದ್ದಿ ಚಿತ್ರತಂಡಕ್ಕೆ ನುಂಗಲಾರದ ತುತ್ತಾಗಿದೆ.
ಇದೀಗ ಕೂಲಿ ಚಿತ್ರತಂಡವು ತ್ತು ಪೈರಸಿಯನ್ನು ಪ್ರೋತ್ಸಾಹಿಸದೆ ಅಭಿಮಾನಿಗಳು ಚಿತ್ರಮಂದಿರಗಳಲ್ಲಿಯೇ ಸಿನಿಮಾ ವೀಕ್ಷಿಸುವಂತೆ ಮನವಿ ಮಾಡುತ್ತಿದ್ದಾರೆ.
