ಆಪರೇಷನ್​ ಸಿಂದೂರದ ಮೂಲಕ ಪಾಕಿಸ್ತಾನಿಗಳ ಎದೆಯನ್ನು ಝಲ್​ ಎನ್ನಿಸಿರೋ ಭಾರತೀಯ ಸೇನೆಯ ವೀರ ಯೋಧರಾದ ಕರ್ನಲ್ ಸೋಫಿಯಾ ಖುರೇಷಿ, ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ಕಮಾಂಡರ್ ಪ್ರೇರಣಾ ದಿಯೋಸ್ಥಾಲಿ ಅವರು ಕೌನ್​ ಬನೇಗಾ ಕರೋಡ್​ಪತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಬಾಲಿವುಡ್​ ಬಿಗ್​-ಬಿ ಅಮಿತಾಭ್​ ಬಚ್ಚನ್​ ಅವರು ನಡೆಸಿಕೊಡುವ ಕೌನ್​ ಬನೇಗಾ ಕರೋಡ್​ಪತಿ ಇದಾಗಲೇ 17ನೇ ಸೀಸನ್​ ತಲುಪಿದೆ. ಇದೀಗ 17ನೇ ಸೀಸನ್​ ಶುರು ಕೂಡ ಆಗಿದೆ. ಸ್ವಾತಂತ್ರ ದಿನದ ಅಂಗವಾಗಿ ವಿಶೇಷ ಎಪಿಸೋಡ್​ ನಡೆಯಲಿದೆ. ಇದರಲ್ಲಿ ಭಾರತ ಕಂಡ ಅಪರೂಪದ ಸೇನಾ ನಾಯಕಿಯರು, ಆಪರೇಷನ್​ ಸಿಂದೂರದ ಸಮಯದಲ್ಲಿ ಪಾಕಿಸ್ತಾನದ ಎದೆ ನಡುಗಿಸಿದ್ದ ಭಾರತದ ವೀರ ವನಿತೆಯರಾಗಿರುವ ಭಾರತೀಯ ಸಶಸ್ತ್ರ ಪಡೆಗಳ ಮೂವರು ಮಹಿಳಾ ಅಧಿಕಾರಿಗಳು - ಕರ್ನಲ್ ಸೋಫಿಯಾ ಖುರೇಷಿ, ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ಕಮಾಂಡರ್ ಪ್ರೇರಣಾ ದಿಯೋಸ್ಥಾಲಿ ಭಾಗವಹಿಸಲಿದ್ದಾರೆ. ಇದರ ಪ್ರೊಮೋ ಅನ್ನು ಬಿಡುಗಡೆ ಮಾಡಲಾಗಿದೆ. ಇವರನ್ನು ಪರಿಚಯಿಸುತ್ತಲೇ ಅಮಿತಾಭ್​ ಬಚ್ಚನ್​ ಅವರು ಭಾರತ್​ ಮಾತಾ ಕೀ ಜೈ ಎಂದಿದ್ದಾರೆ.

ಈಗ ಬಿಡುಗಡೆಯಾಗಿರುವ ಪ್ರೊಮೋದಲ್ಲಿ ಕರ್ನಲ್ ಸೋಫಿಯಾ ಖುರೇಷಿ ಅವರ ಮಾತುಗಳನ್ನು ಕೇಳಬಹುದಾಗಿದೆ. ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನಿ ಭಯೋತ್ಪಾದಕರು ಪ್ರವಾಸಿಗರ ಮೇಲೆ ದಾಳಿ ಮಾಡಿದರು. ಈ ದಾಳಿಯಲ್ಲಿ ಅನೇಕ ಜನರು ಪ್ರಾಣ ಕಳೆದುಕೊಂಡರು. ಭಾರತೀಯ ಸೇನೆ ಮತ್ತು ಕೇಂದ್ರ ಸರ್ಕಾರವು 'ಆಪರೇಷನ್ ಸಿಂದೂರ' ಮೂಲಕ ಪಾಕಿಸ್ತಾನಕ್ಕೆ ತಕ್ಕ ಉತ್ತರವನ್ನು ನೀಡಿತು. ಈ ಬಗ್ಗೆ ಹೇಳಿದ ಸೋಫಿಯಾ ಅವರು, ಪಾಕಿಸ್ತಾನ ಪದೇ ಪದೇ ಇಂತಹ ಕೆಲಸಗಳನ್ನು ಮಾಡುತ್ತಿರುವುದರಿಂದ ಅದರ ವಿರುದ್ಧ ಕ್ರಮ ಕೈಗೊಳ್ಳುವುದು ಅಗತ್ಯವಾಗಿತ್ತು. ಅದಕ್ಕಾಗಿಯೇ ಆಪರೇಷನ್​ ಸಿಂದೂರದ ಮೂಲಕ ಉತ್ತರ ಕೊಡಲಾಗಿದೆ ಎಂದಿದ್ದಾರೆ. ಮಧ್ಯರಾತ್ರಿ 25 ನಿಮಿಷಗಳಲ್ಲಿಯೇ ಪಾಕಿಸ್ತಾನದ ಆಟ ಮುಗಿಸಿದೆವು ಎಂದು ವ್ಯೋಮಿಕಾ ಹೇಳಿದರು.

ಇನ್ನು ಕರ್ನಲ್ ಸೋಫಿಯಾ ಖುರೇಷಿ ಕುರಿತು ಚಿಕ್ಕದಾಗಿ ಹೇಳುವುದಾದರೆ, 2006 ರಲ್ಲಿ, ಕರ್ನಲ್ ಸೋಫಿಯಾ ಖುರೇಷಿ ಯುಎನ್ ಶಾಂತಿಪಾಲನಾ ಕಾರ್ಯಾಚರಣೆಯ ಭಾಗವಾಗಿ ಕಾಂಗೋಗೆ ನಿಯೋಜಿಸಲ್ಪಟ್ಟರು. ಶಾಂತಿಯನ್ನು ಕಾಪಾಡುವ ಈ ಜಾಗತಿಕ ಕಾರ್ಯಾಚರಣೆಯಲ್ಲಿ ಅವರು 6 ವರ್ಷಗಳಿಗೂ ಹೆಚ್ಚು ಕಾಲ ಕೆಲಸ ಮಾಡಿದರು. ಅವರನ್ನು ಭಾರತದ ಶಾಂತಿಪಾಲನಾ ತರಬೇತಿ ಗುಂಪಿನಿಂದ ಆಯ್ಕೆ ಮಾಡಲಾಯಿತು, ಅಲ್ಲಿಂದ ಅಂತರರಾಷ್ಟ್ರೀಯ ಕಾರ್ಯಾಚರಣೆಗಳಿಗೆ ಅತ್ಯುತ್ತಮ ಅಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತದೆ. 2016 ರಲ್ಲಿ ನಡೆದ ವ್ಯಾಯಾಮ ಪಡೆ 18 ರಲ್ಲಿ ಭಾರತದ ಪರವಾಗಿ ಕರ್ನಲ್ ಸೋಫಿಯಾ ಖುರೇಷಿ ಭಾಗವಹಿಸಿದ್ದರು, ಅಲ್ಲಿ ಅವರಿಗೆ 18 ದೇಶಗಳ ಜಂಟಿ ಮಿಲಿಟರಿ ಕವಾಯತಿನಲ್ಲಿ ಭಾರತೀಯ ತುಕಡಿಯ ಕಮಾಂಡರ್ ಆಗಿ ನೇಮಕಗೊಂಡರು. ಇಷ್ಟು ದೊಡ್ಡ ಅಂತರರಾಷ್ಟ್ರೀಯ ಸಮರಾಭ್ಯಾಸದಲ್ಲಿ ಒಂದು ದೇಶದ ಸೇನಾ ತುಕಡಿಯನ್ನು ಮಹಿಳೆಯೊಬ್ಬರು ಮುನ್ನಡೆಸಿದ್ದು ಇದೇ ಮೊದಲು.

ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರು ಭಾರತೀಯ ವಾಯುಪಡೆಯಲ್ಲಿ (IAF) ಹೆಲಿಕಾಪ್ಟರ್ ಪೈಲಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ತಮ್ಮ ಧೈರ್ಯ, ಶಿಸ್ತು ಮತ್ತು ಶ್ರೇಷ್ಠತೆಗೆ ಹೆಸರುವಾಸಿಯಾಗಿದ್ದಾರೆ, ಮತ್ತು ಭಾರತೀಯ ಸಶಸ್ತ್ರ ಪಡೆಗಳಲ್ಲಿ ಮಹಿಳೆಯರ ಪಾತ್ರವನ್ನು ವಿಕಸನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆಪರೇಷನ್​ ಸಿಂದೂರದಲ್ಲಿ ಇವರಿಗೆ ಸಾಥ್​ ನೀಡಿದವರು ಕಮಾಂಡರ್ ಪ್ರೇರಣಾ ದಿಯೋಸ್ಥಾಲಿ. ಈ ಮೂವರೂ ಸ್ವತಂತ್ರ ದಿನದ ವಿಶೇಷ ಸಂಚಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

View post on Instagram