ಕನ್ನಡದ ತ್ರಿಬಲ್ 'ಆರ್' ಖ್ಯಾತಿಯ ನಟರಾದ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಹಾಗೂ ರಾಜ್‌ ಬಿ ಶೆಟ್ಟಿ ಮಧ್ಯೆ ರೂಮರ್ ಹಬ್ಬಿರುವಂತೆ ಈಗ ಮನಸ್ತಾಪ ಇದೆಯಾ? ಹೌದು ಎನ್ನುತ್ತಿದ್ದವು ಸೋಷಿಯಲ್ ಮೀಡಿಯಾ ಸುದ್ದಿಗಳು. ಆದರೆ, ಇದಕ್ಕೆ ಇದೀಗ ಸಾಕ್ಷಿ ಸಮೇತ ಉತ್ತರ ಸಿಕ್ಕಿದೆ, ನೋಡಿ..!

ಕನ್ನಡದ ‘ತ್ರಿಮೂರ್ತಿ’ಗಳ ಮಧ್ಯೆ ಮೂಡಿದೆಯಾ ಮನಸ್ತಾಪ?

ಸ್ಯಾಂಡಲ್‌ವುಡ್‌ನ ತ್ರಿಬಲ್ 'R' (RRR) ಖ್ಯಾತಿಯ ನಟರಾದ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಹಾಗೂ ರಾಜ್‌ ಬಿ ಶೆಟ್ಟಿ ಮಧ್ಯೆ ಇತ್ತೀಚೆಗೆ ಎಲ್ಲವೂ ಸರಿಯಿಲ್ಲ, ಅವರು ಈ ಮೊದಲಿನಂತೆ ಒಂದಾಗಿ ಇಲ್ಲ ಎನ್ನುವ ಸುದ್ದಿ ಹಬ್ಬಿತ್ತು. ಈ ಸುದ್ದಿಗೆ ಪುಷ್ಟಿ ಕೊಡುವಂತೆ, ನಟ ರಿಷಬ್ ಶೆಟ್ಟಿಯವರು 'ಕಾಂತಾರ ಚಾಪ್ಟರ್ 1' ಪ್ರೆಸ್‌ಮೀಟ್‌ನಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತ 'ಈ ಕಾಂತಾರ ಚಾಪ್ಟರ್ 1'ನಲ್ಲಿ ರಾಜ್‌ ಬಿ ಶೆಟ್ಟಿ ಅಥವಾ ರಕ್ಷಿತ್ ಕೆಲಸ ಮಾಡಿಲ್ಲ, ಅವರೆಲ್ಲಾ ಅವರವರ ಕೆಲಸಗಳಲ್ಲಿ ಫುಲ್ ಬ್ಯುಸಿ ಇದ್ದಾರೆ' ಎಂದು ಉತ್ತರ ನೀಡಿದ್ದರು. ಆ ಬಳಿಕ, ಅವರ ಮಧ್ಯೆ ಮನಸ್ತಾಪ ಮೂಡಿದೆ ಎಂಬ ಸುದ್ದಿ ಇನ್ನೂ ಹೆಚ್ಚಾಗಿತ್ತು.

ಆದರೆ, ಈಗ ಒಂದೆರಡು ದಿನಗಳ ಹಿಂದೆ ಈ ಬಗ್ಗೆ ಮೂಡಿದ್ದ ಪ್ರಶ್ನೆಗೆ ಸಾಕ್ಷಿ ಸಮೇತ ಉತ್ತರ ಸಿಕ್ಕಿದೆ. '3 ಶೆಟ್ಟರು ಈಗ ಮೊದಲಿನಂತೆ ಒಂದಾಗಿಲ್ಲ, ಅವರುಗಳ ಮಧ್ಯೆ ಮನಸ್ತಾಪ ಮೂಡುಬಿಟ್ಟಿದೆ. ಅದೇ ಕಾರಣಕ್ಕೆ ಕಾಂತಾರ ಚಾಪ್ಟರ್ 1 ಪ್ರೀಮಿಯರ್ ಶೋಗೆ ರಕ್ಷಿತ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿಯಾಗಲೀ ಬಂದಿಲ್ಲ' ಎಂಬ ಸುದ್ದಿ ಕರ್ನಾಟಕದ ಮೂಲೆಮೂಲೆಯನ್ನೂ ತಲುಪಿತ್ತು. ಆದರೆ ಈಗ ನೋಡಿದರೆ ಈ ತ್ರಿಮೂರ್ತಿಗಳ ಮಧ್ಯೆ ಏನೂ ಸಮಸ್ಯೆ ಆಗಿಲ್ಲ, ಈ ಮೂವರ 'ಸ್ನೇಹ' ಮೊದಲಿನಂತೆ ಇದೆ ಎಂಬ ಉತ್ತರ ಸಿಕ್ಕಿದೆ. ಅದಕ್ಕೆ ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟರ ಮಧ್ಯೆ ನಡೆದ 'ಪೋಸ್ಟ್‌' ವಿನಿಮಯ ಸಾಕ್ಷಿಯಾಗಿ ನಿಂತಿದೆ. ಈ ಇಬ್ಬರೂ 'ಮಗಾ' ಎಂದು ಪೋಸ್ಟ್ ಮಾಡುವ ಮೂಲಕ ಹಬ್ಬಿದ್ದ ಸುದ್ದಿಗೆ ತೆರೆ ಎಳೆದಿದ್ದಾರೆ.

ರಕ್ಷಿತ್ ಶೆಟ್ಟಿ ನಿರ್ಮಾಣ ಹಾಗೂ ನಟನೆಯ 'ಚಾರ್ಲಿ 777' ಸಿನಿಮಾದ ನಟನೆಗೆ ರಕ್ಷಿತ್ ಅವರಿಗೆ ರಾಜ್ಯ ಚಲನಚಿತ್ರ 'ಶ್ರೇಷ್ಠ ನಟ' ಪ್ರಶಸ್ತಿ ಲಭಿಸಿದೆ. ಈ ಸಮಯದಲ್ಲಿ ನಟ-ನಿರ್ದೇಶಕ ರಿಷಬ್ ಶೆಟ್ಟಿಯವರು ತಮ್ಮ ಸ್ನೇಹಿತ ರಕ್ಷಿತ್ ಶೆಟ್ಟಿಯವರಿಗೆ ಟ್ವೀಟ್ ಮಾಡಿ ಅಭಿನಂದನೆ ತಿಳಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ರಕ್ಷಿತ್ ಶೆಟ್ಟಿ ಕೂಡ ಥ್ಯಾಂಕ್ಸ್ ಹೇಳಿದ್ದಾರೆ. ರಿಷಬ್ ಶೆಟ್ಟಿಯವರು 'ಅತ್ಯುತ್ತಮ ನಟನಿಗೆ ರಾಜ್ಯದಿಂದ ಗೌರವ, ಅಭಿನಂದನೆ ಮಗಾ' ಎಂದು ಟ್ವೀಟ್ ಮಾಡಿದ್ದರೆ ಅದಕ್ಕೆ ಪ್ರತಿಕ್ರಿಯೆ ನೀಡಿದ ರಕ್ಷಿತ್ 'ಥ್ಯಾಂಕ್ಸ್ ಮಗಾ, ಕಾಂತಾರ ಚಾಪ್ಟರ್ 1 ಚಿತ್ರದ ಅದ್ಭುತ ಯಶಸ್ಸಿಗೆ ಹೃತ್ಪೂರ್ವಕ ಅಭಿನಂದನೆಗಳು' ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಅಲ್ಲಿಗೆ 'ಮನಸ್ತಾಪದ ಸುದ್ದಿ' ಆಲ್‌ಮೋಸ್ಟ್ ನಿಂತಿದೆ. ಆದರೂ ಕೆಲವರಿಗೆ ಸಮಾಧಾನ ಆಗಿಲ್ಲ ಎಂಬುದು ಬೇರೆ ಮಾತು!

'ಕಾಂತಾರ ಚಾಪ್ಟರ್ 1' ಸಿನಿಮಾ ಪ್ರಪಂಚದಾದ್ಯಂತ ಯಶಸ್ವೀ ಪ್ರದರ್ಶನ

ಅದೇನೇ ಆಗಿರಲಿ, ಸದ್ಯ ರಿಷಬ್ ಶೆಟ್ಟಿಯವರ ನಟನೆ-ನಿರ್ದೇಶನದ 'ಕಾಂತಾರ ಚಾಪ್ಟರ್ 1' ಸಿನಿಮಾ ಪ್ರಪಂಚದಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಅಷ್ಟೇ ಅಲ್ಲ, ಬಿಡುಗಡೆಯಾದ ಎಲ್ಲಾ ಕಡೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವ 'ಕಾಂತಾರ-1' ಗಳಿಕೆ ಕೇವಲ 4ನೇ ದಿನದ ಹೊತ್ತಿಗೆ ರೂ. 235 ಕೋಟಿ ದಾಟಿದೆ ಎಂಬ ಸುದ್ದಿಯಿದೆ. ಇದು, ಕಾಂತಾರ ಸಿನಿಮಾ ನಿರ್ಮಿಸಿರುವ 'ಹೊಂಬಾಳೆ ಫಿಲಂ' ಅಧಿಕೃತವಾಗಿ ಹೇಳಿದ್ದಲ್ಲ. ಆದರೆ, ಮೊದಲನೇ ದಿನವೇ 100 ಕೋಟಿ ದಾಟಿ, 3ನೇ ದಿನದ ಅಂತ್ಯದ ಹೊತ್ತಿಗೆ 235 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಕಾಂತಾರ-1 ಎಂಬ ಸುದ್ದಿ ವೈರಲ್ ಆಗಿದೆ. ಗಳಿಕೆ ವಿಷ್ಯ ಏನೇ ಆದರೂ ಈ ಸಿನಿಮಾದ ಹವಾ ಇಡೀ ಜಗತ್ತನ್ನು ವ್ಯಾಪಿಸಿದೆ ಹಾಗೂ ಸಿನಿಮಾ ಈಗಾಗಲೇ ನೂರಾರು ಕೋಟಿ ರೂಗಳ ಲಾಭದಲ್ಲಿದೆ ಎಂಬ ಮಾತಂತೂ ಸತ್ಯ.

ಮುಂದಿನ ಪ್ರಾಜೆಕ್ಟ್‌ಗಳು:-

ಇನ್ನು, ನಟ-ನಿರ್ದೇಶಕ ರಾಜ್ ಬಿ ಶೆಟ್ಟಿಯವರು 'ಸು ಫ್ರಂ ಸೋ' ಬಳಿಕ ಹೊಸದೊಂದು ಪ್ರಾಜೆಕ್ಟ್‌ಗೆ ಕೈ ಹಾಕಿದ್ದು, ಅದರ ಬರವಣಿಗೆ ಹಾಗೂ ಪ್ರೀ-ಪ್ರೊಡಕ್ಷನ್ ಕೆಲಸಗಳಲ್ಲಿ ನಿರತರಾಗಿದ್ದಾರೆ. ಅದು ಸ್ಸಪೆನ್ಸ್-ಥ್ರಿಲ್ಲರ್ ಸಬ್ಜೆಕ್ಟ್ ಆಗಿದ್ದು ಇನ್ನು ಸ್ವಲ್ಪ ಕಾಲದ ಬಳಿಕ ಶೂಟಿಂಗ್ ಶುರುವಾಗಲಿದೆ. ರಕ್ಷಿತ್ ಶೆಟ್ಟಿಯವರು ಈ ಮೊದಲು ತೆರೆಗೆ ಬಂದಿದ್ದ 'ಉಳಿದವರು ಕಂಡಂತೆ' ಸಿನಿಮಾದ ಪ್ರೀಕ್ವೆಲ್ 'ರಿಚರ್ಡ್ ಆಂಟನಿ'ಯ ಪ್ರೀ-ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದಾರೆ. ದೀಪಾವಳಿಯ ಬಳಿಕ ಈ ಸಿನಿಮಾದ ಶೂಟಿಂಗ್ ಶುರುವಾಗಲಿದೆ ಎನ್ನಲಾಗುತ್ತಿದೆ. 'ಪುಣ್ಯಕೋಟಿ' ಸೇರಿದಂತೆ ರಕ್ಷಿತ್ ಕೈನಲ್ಲಿ ಇನ್ನೂ ಕೆಲವು ಸಿನಿಮಾಗಳಿವೆ. ಸದ್ಯಕ್ಕೆ ಇಷ್ಟು ಸಾಕು, ಮುಂದಿನ ಸುದ್ದಿ ಮುಂದೆ ಬರುತ್ತೆ.. ಕಾಯುತ್ತಾ ಇರಿ..!