ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ ಶ್ರೇಷ್ಠಾಳನ್ನು ಮದುವೆಯಾದ ತಪ್ಪಿಗೆ ರಿಯಲ್ ಲೈಫ್ನಲ್ಲಿ ಆಕೆ ಮಾಡಿರೋ ತಿನಿಸು ತಿನ್ನೋ ಪನಿಷ್ಮೆಂಟ್ ತಾಂಡವ್ಗೆ ಸಿಕ್ಕಿದೆ. ಏನದು ನೋಡಿ...
ಕಾಮಿಡಿ ಕಿಚನ್ ಷೋ ಆಗಿರುವ ಕಲರ್ಸ್ ಕನ್ನಡದ ಕ್ವಾಟ್ಲೆ ಕಿಚನ್ನಲ್ಲಿ ಸ್ಪರ್ಧಿಯಾಗಿದ್ದಾರೆ ನಟಿ. ಕಾಮಿಡಿ ಕುಕ್ಕಿಂಗ್ ಷೋ ಆಗಿರುವ ಇದರಲ್ಲಿ, ಅಡುಗೆಯ ಜತೆಗೆ ನಗುವಿನ ಔತಣ ಉಣಬಡಿಸಲಾಗುತ್ತಿದೆ. ಇದಾಗಲೇ ಈ ಷೋ ನೋಡುಗರಿಗೆ ಇದರ ಬಗ್ಗೆ ಗೊತ್ತಿದೆ. ಈ ಜೋಡಿಯಲ್ಲಿ ಒಬ್ಬರಿಗೆ ಅಡುಗೆ ಬರುತ್ತದೆ, ಮತ್ತೊಬ್ಬರಿಗೆ ಸರಿಯಾಗಿ ಗ್ಯಾಸ್ ಕೂಡ ಹಚ್ಚಲು ಬರುವುದಿಲ್ಲ. ಐವರು ನಳಪಾಕ ಪ್ರವೀಣರಿಗೆ ಸಹಾಯಕರಾಗಿ ಮತ್ತೈದು ನಗೆಪಾಕರು ಜತೆಯಾಗಿರುತ್ತಾರೆ. ಕುಕ್ ಹಾಗೂ ಕ್ವಾಟ್ಲೆಗಳು ಸೇರಿ ಅಡುಗೆ ಮಾಡುವಾಗ ಹುಟ್ಟುವ ತಮಾಷೆಯೇ ಈ ಷೋ ಆಗಿದೆ. ಈ ಷೋನಲ್ಲಿ ನಟಿ ಕಾವ್ಯಾ ಗೌಡ ಅರ್ಥಾತ್ ಭಾಗ್ಯಲಕ್ಷ್ಮಿ ಸೀರಿಯಲ್ ಶ್ರೇಷ್ಠಾ ಕೂಡ ಸ್ಪರ್ಧಿಯಾಗಿದ್ದಾರೆ. ಇನ್ನು ಶ್ರೇಷ್ಠಾ ಅಂದ್ರೆ ಸಾಕು ಸೀರಿಯಲ್ ವೀಕ್ಷಕರಿಗೆ ಉರಿ ಹೊತ್ತಿಕೊಂಡು ಬಿಡುತ್ತದೆ. ಇದಕ್ಕೆ ಕಾರಣ, ಬೇರೊಬ್ಬನ ಪತಿಯನ್ನು ಬುಟ್ಟಿಗೆ ಹಾಕಿಕೊಂಡು ಮದುವೆಯಾಗಿದ್ದಾಳೆ ಎನ್ನುವ ಕಾರಣಕ್ಕೆ.
ಇದೀಗ, ಈ ಸೀರಿಯಲ್ನಲ್ಲಿ ಶ್ರೇಷ್ಠಾಳನ್ನು ಮದುವೆಯಾಗಿರೋ ಕಾರಣಕ್ಕೆ ರಿಯಲ್ ಲೈಫ್ನಲ್ಲಿ ತಾಂಡವ್ ಅರ್ಥಾತ್ ಸುದರ್ಶನ್ ರಂಗಪ್ರಸಾದ್ ಅವರು ಪನಿಷ್ಮೆಂಟ್ ಅನುಭವಿಸುವಂತಾಗಿದೆ! ಅಷ್ಟಕ್ಕೂ ಕ್ವಾಟ್ಲೆ ಕಿಚನ್ಗೆ ಸುದರ್ಶನ್ ಅವರು ಬಂದಿದ್ದಾರೆ. ನಟಿ ಕಾವ್ಯಾ ಮಾಡಿರುವ ಅಡುಗೆಯನ್ನು ಅವರು ತಿನ್ನಬೇಕಿದೆ. ಇದನ್ನು ಕೇಳಿ ಅವರು ಸುಸ್ತಾಗಿ ಹೋಗಿದ್ದಾರೆ. ತಿನ್ನೋದು ಇಷ್ಟನೇ, ಆದ್ರೆ ಭಾರಿ ಕಷ್ಟ ಎನ್ನುತ್ತಲೇ ತಮಾಷೆ ಮಾಡಿದ್ದಾರೆ. ಸೀರಿಯಲ್ನಲ್ಲಿ ತಿನ್ನಲ್ವಾ, ಇಲ್ಲೂ ತಿಂದುಬಿಡಿ ಎಂದು ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ.
ಇನ್ನು ಕಾವ್ಯಾ ಗೌಡ ಕುರಿತು ಹೇಳುವುದಾದರೆ, ಇವರು ಐದು ವರ್ಷ ತೆಲುಗು ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ.ಬೆಂಗಳೂರು ಮೂಲದ ಕಾವ್ಯಾ, ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ವಿಲನ್ ರೋಲ್ ಮೂಲಕ ಮನೆ ಮಾತಾಗಿದ್ದಾರೆ. 3 ವರ್ಷಗಳ ಹಿಂದೆ ಉದಯ ಟಿವಿಯಲ್ಲಿ ಮೂಡಿ ಬಂದ ದೇವಯಾನಿ ಧಾರಾವಾಹಿಯಲ್ಲಿ ನಟಿಸಿದ್ದರು. ವಿಜಯ್ ರಾಘವೇಂದ್ರ ನಟನೆಯ ರಿಂಗ ರಿಂಗ ರೋಸ್ ಎಂಬ ಸಿನಿಮಾಗೂ ಇವರು ನಟಿಸಿದ್ದಾರೆ. ಇದಕ್ಕೂ ಮುನ್ನ ಜೀ ಕನ್ನಡ ವಾಹಿನಿಯ 'ಮಿಸ್ಟರ್ & ಮಿಸ್‌ಸ್ ರಂಗೇಗೌಡ' ಧಾರಾವಾಹಿಯಲ್ಲಿ ಲೀಡ್ ಆಗಿ 100 ಎಪಿಸೋಡ್‌ಲ್ಲಿ ನಟಿಸಿದ್ದರು. ಆಮೇಲೆ ಸೀರಿಯಲ್ ಬಿಟ್ಟಿದ್ದರು. ಈಗ ಶ್ರೇಷ್ಠಾ ಆಗಿ ನೆಗೆಟಿವ್ ಶೇಡ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇನ್ನು ತಾಂಡವ್ ಅರ್ಥಾತ್ ಸುದರ್ಶನ್ ಅವರ ರಿಯಲ್ ಲೈಫ್ ಕುರಿತು ಹೇಳುವುದಾದರೆ, ಇವರ ಮದುವೆಯಾಗಿ ಒಂಬತ್ತು ವರ್ಷಗಳಾಗಿವೆ. ಪತ್ನಿ ಸಂಗೀತಾ ಭಟ್ ನಟಿಯಾಗಿ, ಮಾಡೆಲ್ ಆಗಿ ಗುರುತಿಸಿಕೊಂಡಿದ್ದಾರೆ. ತಮಿಳು ಸಿನಿಮಾ ಮೂಲಕ ಸಂಗೀತ ಭಟ್ ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದ್ದಾರೆ. ಕನ್ನಡದಲ್ಲಿ ಕೆಲವೊಂದು ಸಿನಿಮಾಗಳಲ್ಲಿ ನಟಿಸಿದ್ದ ಸಂಗೀತಾ ಭಟ್ ಸ್ವಲ್ಪ ಕಾಲ ಸಿನಿ ಪಯಣದಿಂದ ದೂರವೇ ಉಳಿದು 2 ವರ್ಷಗಳ ನಂತರ ಮತ್ತೆ ಸಿನಿಮಾಗಳಲ್ಲಿ ನಟಿಸಿದ್ದರು. ನಟನೆಯಿಂದ ದೂರ ಉಳಿದ ನಂತರ ಸಂಗೀತಾ ಅವರು ಕೆಲವು ದಿನಗಳ ಕಾಲ ಜರ್ಮನಿಯಲ್ಲಿದ್ದರು. ಕಳೆದ ವರ್ಷ ಬಿಡುಗಡೆಯಾದ '48 ಅವರ್ಸ್' ಸಿನಿಮಾ ಅವರ ಕೊನೆಯ ಚಿತ್ರ.
