ಭಾರತದಲ್ಲಿ ಯಾರು ಹೆಚ್ಚು ಡಿಗ್ರಿ ಪಡೆದಿದ್ದಾರೆ? ಅವರು ಯಾರು? ಅವರು ದುರಂತ ಕಂಡಿದ್ದು ಹೇಗೆ?
ವಿದ್ಯೆಗೆ ವಯಸ್ಸಿಲ್ಲ. ಇಳಿ ವಯಸ್ಸಿನಲ್ಲಿ ಡಿಗ್ರಿ ಪಡೆದವರು ಇದ್ದಾರೆ, ಮಗನೋ ಅಥವಾ ಮಗಳ ಜೊತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಪಾಸ್ ಆದವರೂ ಇದ್ದಾರೆ. ಕೆಲವರು ಒಂದು ಡಿಗ್ರಿ ಪಡೆಯಲು ಒದ್ದಾಡಿದರೆ ಇನ್ನೂ ಕೆಲವರು ಒಂದಿಷ್ಟು ಡಿಗ್ರಿಗಳನ್ನು ಪಡೆದಿದ್ದಾರೆ. ಹಾಗಾದರೆ ಭಾರತದಲ್ಲಿ ಅತಿ ಹೆಚ್ಚು ಓದಿದವರು ಯಾರು?
ಡಾ. ಶ್ರೀಕಾಂತ್ ಜಿಚ್ಕರ್ ಅವರು 20ಕ್ಕೂ ಹೆಚ್ಚು ಯುನಿವರ್ಸಿಟಿಗಳಿಂದ ಡಿಗ್ರಿಗಳನ್ನು ಪಡೆದಿದ್ದಾರೆ. ಅಷ್ಟೇ ಅಲ್ಲದೆ ಯುಪಿಎಸ್‌ಸಿ ಪರೀಕ್ಷೆಯನ್ನು ಎರಡು ಬಾರಿ ಪಾಸ್ ಮಾಡಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿಯೂ ಅವರು ಮುಖ್ಯ ಹುದ್ದೆಗಳನ್ನು ಏರಿದ್ದರು. ಅಷ್ಟೇ ಅಲ್ಲದೆ ಭಾರತದ ಅತಿ ಹೆಚ್ಚು ಶಿಕ್ಷಣ ಪಡೆದಿದ್ದಾರೆ. ಶಿಕ್ಷಣದ ಬಗ್ಗೆ ಅಪಾರ ಆಸಕ್ತಿಯನ್ನು ಹೊಂದಿದ್ದಾರೆ. ಬಹುಮುಖ ಸಾಧನೆಯನ್ನು ಮಾಡಿದ್ದಾರೆ.
1954 ಸೆಪ್ಟೆಂಬರ್ 14ರಂದು, ಮಹಾರಾಷ್ಟ್ರದ ಕಟೋಲ್ ನಗರದಲ್ಲಿ ಶ್ರೀಕಾಂತ್ ಜಿಚ್ಕರ್ ಅವರು ಮರಾಠಿ ಕುಟುಂಬದಲ್ಲಿ ಹುಟ್ಟಿದ್ದರು. ಚಿಕ್ಕ ವಯಸ್ಸಿನಿಂದಲೂ ಅವರಿಗೆ ಶಿಕ್ಷಣ ಅಂದರೆ ತುಂಬ ಇಷ್ಟ. ಶ್ರೀಕಾಂತ್ ಹಾಗೂ ರಾಜಶ್ರೀ ಜಿಚ್ಕರ್ ದಂಪತಿಗೆ ಇಬ್ಬರು ಮಕ್ಕಳಿದ್ದರು. ದುರದೃಷ್ಟವಶಾತ್ 2004 ಜೂನ್ 2ರಂದು ನಾಗ್‌ಪುರದಿಂದ ಸುಮಾರು 61 ಕಿಮೀ ದೂರದ ಕೊಂಧಾಲಿ ಬಳಿ ರಸ್ತೆ ಅಪಘಾತದಲ್ಲಿ ನಿಧನರಾದರು. ಅವರ ಜೊತೆ ಇದ್ದ ಶ್ರೀರಾಮ್ ಧಾವಡ್ ಕೂಡ ಗಾಯಗೊಂಡಿದ್ದರು.
1973ರಿಂದ 1990ರವರೆಗೆ 20 ಯುನಿವರ್ಸಿಟಿ ಡಿಗ್ರಿಗಳನ್ನು ಪಡೆದಿದ್ದಾರೆ. ಒಟ್ಟಾರೆಯಾಗಿ ಅವರು 42 ಯುನಿವರ್ಸಿಟಿ ಎಕ್ಸಾಮ್ ಬರೆದಿದ್ದಾರೆ. ಅವುಗಳಲ್ಲಿ ಹೆಚ್ಚಿನ ಡಿಗ್ರಿಗಳು ಫಸ್ಟ್ ಮೆರಿಟ್‌ನೊಂದಿಗೆ ಬಂದಿತ್ತು, ಇನ್ನೂ ಕೆಲವು ಚಿನ್ನ ಪದಕ ಬಂದಿತ್ತು. ವೈದ್ಯಕೀಯ, ಪತ್ರಿಕೋದ್ಯಮ, ಕಾನೂನು, ವ್ಯವಹಾರ, ಸಾಹಿತ್ಯ, ಕಲೆ ಮುಂತಾದ ವಿಷಯಗಳ ಮೇಲೆ ಡಿಗ್ರಿ ಪದವಿ ಇದೆ. ಮೊದಲಿಗೆ ಅವರು ಎಂಬಿಬಿಎಸ್ ಡಿಗ್ರಿ ಪಡೆದಿದ್ದಾರೆ.
1978ರಲ್ಲಿ ಯುಪಿಎಸ್‌ಸಿ ಪರೀಕ್ಷೆಯನ್ನು ಬರೆದು, ಪಾಸ್ ಆಗಿ, ಇಂಡಿಯನ್ ಪೊಲೀಸ್ ಸರ್ವೀಸ್‌ಗೆ ಆಯ್ಕೆಯಾದರು. ಆದರೆ ರಾಜಕೀಯಕ್ಕೆ ಬರಬೇಕು ಎಂಬ ಉದ್ದೇಶದಿಂದ ರಾಜೀನಾಮೆ ನೀಡಿದರು. 1980ರಲ್ಲಿ ಮತ್ತೆ ಪಾಸ್ ಆಗಿ ಇಂಡಿಯನ್ ಅಡ್ಮಿನಿಸ್ಟ್ರೇಟಿವ್ ಸರ್ವೀಸ್‌ಗೆ ಸೇರಿದರು. ಆದರೆ ನಾಲ್ಕು ತಿಂಗಳಲ್ಲಿ ರಾಜೀನಾಮೆ ನೀಡಿ ರಾಜಕೀಯ ಫಾಲೋ ಮಾಡಿದರು.
ವೃತ್ತಿ ಮತ್ತು ರಾಜಕೀಯ ಜೀವನ
26 ವರ್ಷ ವಯಸ್ಸಿನಲ್ಲಿ ಮಹಾರಾಷ್ಟ್ರ ವಿಧಾನಸಭೆಗೆ ಚುನಾಯಿತರಾಗಿ, ದೇಶದ ಅತ್ಯಂತ ಯುವ ಶಾಸಕ ಎಂಬ ದಾಖಲೆ ಬರೆದರು.
1980-1985ರವರೆಗೆ ಮಹಾರಾಷ್ಟ್ರ ವಿಧಾನಸಭಾ ಸದಸ್ಯ
1986-1992ರವರೆಗೆ ವಿಧಾನಪರಿಷತ್ ಸದಸ್ಯ
ಮಹಾರಾಷ್ಟ್ರ ಸರ್ಕಾರದಲ್ಲಿ ರಾಜ್ಯ ಸಚಿವರಾಗಿ 14 ಪೋರ್ಟ್‌ಫೋಲಿಯೋಗಳನ್ನು ನಿಭಾಯಿಸಿದ್ದಾರೆ.
1992-1998ರವರೆಗೆ ರಾಜ್ಯಸಭಾ ಸದಸ್ಯ
1998ರಲಿ ಬಂಧಾರಾ-ಗೊಂಡಿಯಾ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು, 2004ರಲ್ಲಿ ರಾಮ್‌ಟೆಕ್ ಕ್ಷೇತ್ರದಿಂದ ಸ್ಪರ್ಧಿಸಿ ಕೆಲವು ಮತಗಳ ಅಂತರದಿಂದ ಸೋತರು.
ಶಿಕ್ಷಣವನ್ನು ನಂಬುವುದಲ್ಲದೆ ವೈದ್ಯ, ವ್ಯವಹಾರ ಪ್ರಶಾಸಕ, ವಕೀಲ, ಪತ್ರಕರ್ತ, ರಾಜಕಾರಣಿಯಾಗಿ ಕೆಲಸ ಮಾಡಿದ್ದಾರೆ. 1993ರಲ್ಲಿ ನಾಗ್‌ಪುರದಲ್ಲಿ ಶ್ರೀಕಾಂತ್ ಜಿಚ್ಕರ್ ಅವರು ಸಾಂದಿಪನಿ ಶಾಲೆಯನ್ನು ಸ್ಥಾಪನೆ ಮಾಡಿದ್ದಾರೆ. ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ, ಬಡ ಮಕ್ಕಳಿಗೆ ಸಹಾಯ ಮಾಡಿದ್ದಾರೆ. ಇವರ ನಿಧನದ ಬಳಿಕ, ಮಕ್ಕಳು ಝೀರೋ ಗ್ರ್ಯಾವಿಟಿ ಫೌಂಡೇಷನ್ ಮೂಲಕ ಈ ಕೆಲಸಗಳನ್ನು ಮುಂದುವರೆಸಿಕೊಂಡು ಬಂದಿದ್ದಾರೆ.
