Gen Z ಪೀಳಿಗೆಯವರು ಸುದ್ದಿ ಸೇವನೆಯಲ್ಲಿ ಹೊಸ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಉತ್ಪಾದಕ AI ಬಳಸಿ ಸುದ್ದಿಗಳನ್ನು ವಿಶ್ಲೇಷಿಸಿ, ಸ್ವತಂತ್ರವಾಗಿ ಪರಿಶೀಲಿಸಿ, ಸ್ಥಳೀಯ ಭಾಷೆಗಳಲ್ಲಿ ಸೇವಿಸುತ್ತಿದ್ದಾರೆ. ಇದು ಮಾಹಿತಿಯ ಸಕ್ರಿಯ ವಿಶ್ಲೇಷಣೆಗೆ ಚಿಂತನೆಗೆ ದಾರಿ ಮಾಡಿಕೊಡುತ್ತಿದೆ.

ಸುದ್ದಿಯನ್ನು ಅರ್ಥಮಾಡಿಕೊಳ್ಳುವುದು ಎಂದರೆ ನಂಬಿಕೆ ಪಡೆದ ನಿರೂಪಕರ ಮಾತು ಆಲಿಸುವುದು ಅಥವಾ ಬೆಳಗಿನ ಪತ್ರಿಕೆಯನ್ನು ಓದುವುದು ಎಂದರ್ಥವಾಗಿತ್ತು. ವಿಶ್ವಾಸ ಮತ್ತು ಸಂದರ್ಭವು ಕೆಲವೇ ಪರಿಚಿತ ಧ್ವನಿಗಳಿಂದ ಬರುತ್ತಿತ್ತು. ಆ ಸಮಯದಲ್ಲಿ ವ್ಯಾಖ್ಯಾನದ ಗಡಿಗಳನ್ನು ಸಂಪಾದಕೀಯ ತೀರ್ಮಾನವೇ ನಿರ್ಧರಿಸುತ್ತಿತ್ತು. ಇಂದಿಗೆ ಅದು ಮರೆಯಾದ ನೆನಪಿನಂತೆ ಕಂಡುಬರುತ್ತಿದೆ.

ಸರ್ಚ್ ಎಂಜಿನ್‌ಗಳು, ಸಾಮಾಜಿಕ ಜಾಲತಾಣಗಳ ಫೀಡ್‌ಗಳು ಮತ್ತು ಬೇಡಿಕೆಯ ಮೇರೆಗೆ ಉತ್ತರಗಳನ್ನು ಪಡೆಯುವ ಯುಗದಲ್ಲಿ ಹುಟ್ಟಿದ Gen Z ಪೀಳಿಗೆ (ಜನರೇಶನ್ ಜೆಡ್‌), ಆ ಹಳೆಯ ಗಡಿಗಳನ್ನು ಮುರಿದು, ತಮ್ಮದೇ ರೀತಿಯ ಸುದ್ದಿಗ್ರಹಣದ ಮಾರ್ಗಗಳನ್ನು ಕಟ್ಟಿಕೊಳ್ಳುತ್ತಿವೆ. ಕೆಲಸದ ಸ್ಥಳದ ಸಂಸ್ಕೃತಿ ಅಥವಾ ಕಲಿಕೆಯ ರೀತಿಯ ವಿಚಾರದಲ್ಲೂ, ಈ ಪೀಳಿಗೆ ವಿಭಿನ್ನತೆಯನ್ನು ತಂದುಕೊಂಡಿದೆ.

ಇತ್ತೀಚಿನ Google–Kantar ಅಧ್ಯಯನದ ಪ್ರಕಾರ, Gen Z ಪೀಳಿಗೆಯ 84% ಜನರು ತಮಗೆ ಬೇಕಾದ ಸುದ್ದಿಗಳನ್ನು ಅರ್ಥಮಾಡಿಕೊಳ್ಳಲು ಉತ್ಪಾದಕ AI (Generative AI) ಬಳಸುತ್ತಾರೆ. ಇದು ಕೇವಲ ಹೊಸ ತಂತ್ರಜ್ಞಾನದ ಕುತೂಹಲವಲ್ಲ; ಇದು ಉದ್ದೇಶಪೂರ್ವಕ, ಸಹಜವಾದ ಪ್ರಯತ್ನ. ಕಚ್ಚಾ ವರದಿಗಳನ್ನು ಬುದ್ಧಿವಂತ ವ್ಯವಸ್ಥೆಯ ಮೂಲಕ ಫಿಲ್ಟರ್ ಮಾಡಿ, ಅರ್ಥ ಮಾಡಿಕೊಂಡು ಸರಳೀಕರಿಸಿಕೊಂಡು ಭಾಷಾ ಅಂತರವನ್ನು ಕಡಿಮೆ ಮಾಡುವುದು.

ಸುದ್ದಿ ಸಿದ್ಧ ಉತ್ಪನ್ನವಲ್ಲ, ಕಚ್ಚಾ ವಸ್ತು

1997 ಮತ್ತು 2012ರ ನಡುವೆ ಜನಿಸಿದ Gen Z ಪೀಳಿಗೆಯು ಇತಿಹಾಸದಲ್ಲೇ ಅತ್ಯಂತ ಸಂಪರ್ಕ ಹೊಂದಿದ ಪೀಳಿಗೆಯಾಗಿದೆ. ಸ್ಮಾರ್ಟ್‌ಫೋನ್‌ಗಳು ಮತ್ತು ಇಂಟರ್ನೆಟ್‌ನೊಂದಿಗೆ ಬೆಳೆದ ಈ ಪೀಳಿಗೆ, ಹಿಂದಿನ ಪೀಳಿಗೆಯಂತೆ ಕೇವಲ ಪ್ರಸ್ತುತಪಡಿಸಿದ ಮಾಹಿತಿಯನ್ನು ನಂಬುವುದು ಎನ್ನುವುದಿಲ್ಲ. ಬದಲಿಗೆ, ಅವರು ಮೂಲವರೆಗೂ ತಲುಪಿ, ಆಳವಾಗಿ ಅಧ್ಯಯನ ಮಾಡುತ್ತಾರೆ.

ಅಧ್ಯಯನ ಪ್ರಕಾರ

  • 38% ಜನರು ಜ್ಞಾನ ಪಡೆದುಕೊಳ್ಳಲು AI ಬಳಸುತ್ತಾರೆ.
  • 43% ಜನರು ತ್ವರಿತ ಸ್ಪಷ್ಟತೆಗಾಗಿ ಬಳಸುತ್ತಾರೆ.
  • 36% ಜನರು ವಿಷಯವನ್ನು ಭಾಷಾಂತರಿಸಲು ಬಳಸುತ್ತಾರೆ.

ಇದು ಮನಸ್ಥಿತಿಯಲ್ಲಿ ಬಂದಿರುವ ಮಹತ್ತರ ಬದಲಾವಣೆಯ ಸೂಚನೆ. ಸುದ್ದಿ ಇನ್ನು ಮುಂದೆ ಸ್ಥಿರ ಉತ್ಪನ್ನವಲ್ಲ; ಅದು ಒಂದು ಚಲನೆಯಲ್ಲಿರುವ ಡೇಟಾ ಸೆಟ್, ಓದುಗರ ಅಗತ್ಯಕ್ಕೆ ತಕ್ಕಂತೆ ವಿಭಜಿಸಿ, ಮರುಪ್ಯಾಕ್ ಮಾಡಿ, ವೈಯಕ್ತಿಕಗೊಳಿಸಬಹುದಾದದ್ದು.

ಕುರುಡು ನಂಬಿಕೆಗೆ ಎಚ್ಚರಿಕೆಯಿಂದಿರುವ ಪೀಳಿಗೆ

ಯುವ ಪೀಳಿಗೆಯು ಆನ್‌ಲೈನ್ ಮೂಲಗಳನ್ನು ಅಂಧನಂಬಿಕೆಯಿಂದ ನಂಬುತ್ತದೆ ಎಂಬ ಅಭಿಪ್ರಾಯಗಳಿದ್ದರೂ, ಅಂಕಿಅಂಶಗಳು ಬೇರೆಯದೇ ಹೇಳುತ್ತವೆ.

  • 50% ಜನರು ಪರಿಶೀಲಿಸದ ವರದಿಗಳನ್ನು ನಂಬುವುದಿಲ್ಲ.
  • 43% ಜನರು ಸಂದೇಶಗಳನ್ನು ಹಂಚುವ ಮೊದಲು ಪರಿಶೀಲಿಸುತ್ತಾರೆ.
  • ಆರೋಗ್ಯ, ಸುರಕ್ಷತೆ, ಹಣಕಾಸು ಕುರಿತ ಸುದ್ದಿಗಳಲ್ಲಿ 39% ಜನರು ತೀವ್ರ ಪರಿಶೀಲನೆ ನಡೆಸುತ್ತಾರೆ, 36% ಜನರು ಹೆಚ್ಚುವರಿ ಪುರಾವೆಗಳನ್ನು ಹುಡುಕುತ್ತಾರೆ.
  • ಆಸಕ್ತಿದಾಯಕವಾಗಿ, ಮೆಟ್ರೋ ನಗರಗಳ ಹೊರಗೆ ಸತ್ಯಪರಿಶೀಲನೆಯ ಅಭ್ಯಾಸ ಹೆಚ್ಚು. ಮೆಟ್ರೋ ಹೊರಗಿನ 42% ಜನರು ಸೂಕ್ಷ್ಮ ವಿಷಯಗಳನ್ನು ಪರಿಶೀಲಿಸುತ್ತಾರೆ, ಮೆಟ್ರೋಗಳಲ್ಲಿ ಇದು 37%.
  • ಸೃಷ್ಟಿಕರ್ತರು, ವೇದಿಕೆಗಳು ಮತ್ತು ನಂಬಿಕೆ

ಸುದ್ದಿ ಪ್ರವೇಶಕ್ಕಾಗಿ

  • 91% ಜನರಿಗೆ ಸಾಮಾಜಿಕ ಮಾಧ್ಯಮವೇ ಪ್ರಾಥಮಿಕ ಮೂಲ.
  • 88% ಜನರು ವೀಡಿಯೊ ಪ್ಲಾಟ್‌ಫಾರ್ಮ್‌ಗಳನ್ನು ಬಳುಕುತ್ತಾರೆ.
  • 48% ಜನರು ಕಂಟೆಂಟ್ ಕ್ರಿಯೇಟರ್‌ಗಳನ್ನು ಅನುಸರಿಸುತ್ತಾರೆ.
  • 43% ಜನರು ಸ್ಥಾಪಿತ ಸುದ್ದಿಮೂಲಗಳನ್ನು ಆರಿಸುತ್ತಾರೆ.

ಆದರೆ ನಂಬಿಕೆಯ ವಿಷಯದಲ್ಲಿ ಪರಂಪರೆಯ ಮಾಧ್ಯಮಗಳು ಇನ್ನೂ ಮುಂಚೂಣಿಯಲ್ಲಿವೆ – 47% ನಂಬಿಕೆ, ಸೃಷ್ಟಿಕರ್ತರ ವಿಷಯಕ್ಕೆ 38–39% ಮಾತ್ರ.

ಸಂಪರ್ಕದ ಭಾಷೆ

ಓದುವ ಭಾಷೆಯಲ್ಲಿ 42% ಜನರಿಗೆ ಇಂಗ್ಲಿಷ್ ಆದ್ಯತೆ. ಆದರೆ ಆಡಿಯೋ/ವೀಡಿಯೊ ವಿಷಯದಲ್ಲಿ 57% ಜನರಿಗೆ ಸ್ಥಳೀಯ ಭಾಷೆಗಳ ಮೆಲುಕು. ಸುಲಭ ತಿಳುವಳಿಕೆ, ಭಾವನಾತ್ಮಕ ಬಾಂಧವ್ಯ ಮತ್ತು ಹಂಚಿಕೆಗೆ ಅನುಕೂಲತೆ ಇದರ ಪ್ರಮುಖ ಕಾರಣಗಳು.

ಇಂದಿನ ಕಲಿಯುವವರ ಸ್ವಭಾವ

Gen Z ಪೀಳಿಗೆ ಮಾಹಿತಿಯ ನಿಷ್ಕ್ರಿಯ ಸ್ವೀಕರಿಸುವವರಲ್ಲ. ಅವರು ಸಕ್ರಿಯ ವಿಶ್ಲೇಷಕರು, ಪರಿಶೀಲಕರು. ಇದು ತರಗತಿಗಳಲ್ಲಿ ವಿಮರ್ಶಾತ್ಮಕ ಚಿಂತನೆಗೆ ಉತ್ತೇಜನ ನೀಡುತ್ತದೆ, ಸಮಾಜದಲ್ಲಿ ವಿವೇಚನಾಶೀಲ ನಾಗರಿಕರನ್ನು ಬೆಳೆಸುತ್ತದೆ.

ಆದರೆ ಪ್ರಶ್ನೆ ಉಳಿದೇ ಇರುತ್ತದೆ. AI ಮೇಲೆ ಅವಲಂಬನೆಯಿಂದ ಮಾನವ ತೀರ್ಪು ಬಲವಾಗುತ್ತದೆಯಾ ಅಥವಾ ಕ್ಷೀಣಿಸುತ್ತದೆಯಾ? ಯಂತ್ರದ ವೇಗವಾದ ಸ್ಪಷ್ಟತೆ, ಸ್ವತಂತ್ರ ಚಿಂತನೆಯ ನಿಧಾನ, ಕೆಲವೊಮ್ಮೆ ಗೊಂದಲಮಯ ಪ್ರಕ್ರಿಯೆಯನ್ನು ಮಸುಕಾಗಿಸುತ್ತದೆಯಾ?

ಇದು ಎಲ್ಲವೂ ತಂತ್ರಜ್ಞಾನವನ್ನು ಹೇಗೆ ಬಳಸಲಾಗುತ್ತದೆ ಮತ್ತು ಅದನ್ನು ಜೀವನದಲ್ಲಿ ಹೇಗೆ ಒಳಗೊಳ್ಳಲಾಗುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ. ಅದು ಪೀಳಿಗೆಯನ್ನು ಬಲಪಡಿಸಬಹುದು ಅಥವಾ ದುರ್ಬಲಗೊಳಿಸಬಹುದು ಆಯ್ಕೆ ಅವರ ಕೈಯಲ್ಲಿದೆ.