Veerendra Heggade on Controversy Why So Much Hatred Towards Us ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಆರೋಪದ ಕುರಿತು ಎಸ್‌ಐಟಿ ರಚಿಸಿದ್ದಕ್ಕೆ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಧರ್ಮಸ್ಥಳ (ಸೆ.26): ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿಟ್ಟಿದ್ದಾರೆ ಎನ್ನುವ ಪ್ರಕರಣದಲ್ಲಿ ಸರ್ಕಾರ ರಚಿಸಿದ ಎಸ್‌ಐಟಿಗೆ ಕೃತಜ್ಞತೆ ಸಲ್ಲಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, 'ಎಸ್‌ಐಟಿ ಮಾಡಿದ ಕಾರಣಕ್ಕೆ ಸತ್ಯ ಹೊರಗೆ ಬರುತ್ತಿದೆ. ಈಗಲೂ ನನಗೆ ಅರ್ಥವಾಗದ ಒಂದು ವಿಚಾರ ಏನೆಂದರೆ, ನಮ್ಮ ಮೇಲೆ ಯಾಕಿಷ್ಟು ದ್ವೇಷ, ನಾವು ಇಲ್ಲಿ ನಿಮಿತ್ತ ಮಾತ್ರ' ಎಂದು ಹೇಳಿದ್ದಾರೆ. ಕೋವಿಡ್ ನಂತರದ ದಿನಗಳಲ್ಲಿ ನಾನು ಅನೇಕ ಪುಸ್ತಕಗಳನ್ನು ಓದುತ್ತಿದ್ದೇನೆ. ಸಿದ್ದಗಂಗಾ ಶ್ರೀಗಳ ಹಲವು ಪುಸ್ತಕವನ್ನು ನಾನು ಓದಿದ್ದೇನೆ. ನಮ್ಮನ್ನ ಹೊಗಳಿದ್ದೀರಿ. ಆದರೆ, ನಮ್ಮ ಸೇವೆ, ಧರ್ಮ ನಮಗೆ ಮುಖ್ಯ ಅಂತಾ ಇದೆ. ಸಿದ್ದಗಂಗಾ ಶ್ರೀಗಳು 108 ವರ್ಷ ಬದುಕಿದವರು ಹೇಳಿದ ಮಾತು ಇದು. ಶತ್ರುತ್ವ ಯಾಕೆ ಬಂತು ಅಂತ ನಮಗೆ ಗೊತ್ತಿಲ್ಲ. ಇಷ್ಟು ಹಗೆತನ, ಅಪವಾದ ಯಾಕೆ ಬಂತು ಅಂತನೂ ಗೊತ್ತಿಲ್ಲ. ನಾವು ಸೇವೆ ಮಾಡ್ತೇವೆ, ಆದರೆ ಸೇವೆ ಪ್ರಚಾರದ ವಸ್ತುವಲ್ಲ ಎಂದು ಹೇಳಿದ್ದಾರೆ.
ಇಷ್ಟು ವರ್ಷ ನಾವು ಆರೋಗ್ಯವಾಗಿರಲು ನಮ್ಮ ನಿಸ್ವಾರ್ಥ ಸೇವೆಯೇ ಕಾರಣ. ನಮ್ಮ ಎಲ್ಲಾ ಕಾರ್ಯಕ್ರಮಗಳನ್ನು ನೀವು ಎಲ್ಲರೂ ಗಮನಿಸಿದ್ದೀರಿ. ನಾವು ಇಲ್ಲಿ ನಿಮಿತ್ತ ಮಾತ್ರ. ಆದರೆ ಮುಂದುವರೆಸಿಕೊಂಡು ಹೋಗಿದ್ದು ಅದಕ್ಕೆ ಸಂಬಂಧಪಟ್ಟ ಇಲಾಖೆಯವರು. ಕೆಲವರು ಪ್ರೀತಿಯಲ್ಲಿ ಟೀಕೆ ಮಾಡಿದ್ದರು. ಇವರ ಹಾಗೆ ಟೀಕೆ ಮಾಡಿಲ್ಲ. ನಿಮಗೆ ನಾನು ಎಷ್ಟು ಕೃತಜ್ಞತೆ ಸಲ್ಲಿಸಿದ್ರೂ ಕಡಿಮೆಯೇ. ಧರ್ಮಸ್ಥಳ ಬೇರೆ, ಧರ್ಮಸ್ಥಳದ ಊರಿನವರು ಬೇರೆ ಅಲ್ಲ. ಎಷ್ಟು ನಿಷ್ಠುರವಾಗಿ ನಮ್ಮ ಮೇಲೆ ದಬ್ಬಾಳಿಕೆ ನಡೆದಿದೆ ಅಂತ ನೀವು ನೋಡಿದ್ದೀರಿ. ಯಾಕೆ ಇಷ್ಟು ದ್ವೇಷ ನನ್ನ ಮೇಲೆ ಇದೆ ಅಂತ ನನಗೆ ಗೊತ್ತಾಗಿಲ್ಲ. ಈಗ ಮನಸ್ಸು ಸ್ವಲ್ಪ ಹಗುರವಾಗಿದೆ, ಎತ್ತರದ ಬೆಟ್ಟದಿಂದ ನೀರು ಹರಿದಿದೆ ಎಂದು ಭಾವುಕವಾಗಿ ಮಾತನಾಡಿದ್ದಾರೆ.
ನಿಮ್ಮ ಧರ್ಮ ಸೋತರೆ, ನಮ್ಮ ಧರ್ಮ ಸೋತ ಹಾಗೆ
ನಮ್ಮ ಮೇಲೆ ದೃಢವಾದ ನಂಬಿಕೆ ಇಟ್ಟ ಎಲ್ಲರಿಗೂ ನಾನು ಆಭಾರಿ. ಈಗಾಗಲೇ ಲಕ್ಷಾಂತರ ಜನರು ಇಲ್ಲಿಗೆ ಬಂದು ಹೋಗಿದ್ದಾರೆ ನಿಮ್ಮ ಧರ್ಮ ಸೋತರೆ, ನಮ್ಮ ಧರ್ಮ ಸೋತ ಹಾಗೆ ಅಂತ ಹೇಳಿದ್ದಾರೆ. ಈ ಶತ್ರುತ್ವ ಯಾಕೆ ಅಂತ ಕೇಳ್ತಾರೆ, ನನಗೂ ಈ ದ್ವೇಷ ಯಾಕೆ ಬೇಕು? ನಾವು ಯಾರನ್ನೂ ಹೀಯಾಳಿಸಿಲ್ಲ. ದ್ವೇಷ ಕೂಡ ಮಾಡಿಲ್ಲ. ನಾವು ತಪ್ಪು ಮಾಡದ ಕಾರಣ ನಮಗೆ ಆತ್ಮವಿಶ್ವಾಸ ಇದೆ. ಬೆಂಗಳೂರು ಆಥವಾ ಎಲ್ಲೋ ಕೂತು ಟೀಕೆ ಮಾಡೋರು ನಮಗೆ ಬೇಡ. ನಮಗೆ ನಮ್ಮವರು ಬೇಕು, ನಮ್ಮ ಜೊತೆ ನಿಲ್ಲೋರು ಬೇಕು. ನಮ್ಮ ಮೇಲೆ ಪ್ರೀತಿ ತೋರಿದ ಎಲ್ಲಾ ಹೆಣ್ಮಕ್ಕಳಿಗೂ ನಾನು ಆಭಾರಿ ಎಂದಿದ್ದಾರೆ.
ನಮ್ಮ ಹೊಳಪು ಹಾಗೇ ಉಳಿದಿದೆ
'ಎಸ್ಐಟಿ ವರದಿ ಅರ್ಧ ಬಂದ ಕಾರಣ ನಾನು ಇಷ್ಟು ಧೈರ್ಯವಾಗಿ ಮಾತನಾಡುತ್ತಾ ಇದ್ದೇನೆ. ಸರ್ಕಾರಕ್ಕೆ ನಾನು ಆಭಾರಿ, ಎಸ್ಐಟಿ ಮಾಡಿದ ಕಾರಣ ಸತ್ಯ ಹೊರಗೆ ಬರುತ್ತಿದ. ನಮ್ಮ ಹೊಳಪು ಹಾಗೇ ಉಳಿದಿದೆ, ಇದಕ್ಕೆ ನಾನು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿ ಮಂದಿನದನ್ನು ನೋಡಿಕೊಳ್ಳುತ್ತಾರೆ. ನಾವು ಸತ್ಯದಿಂದ ಇದ್ದೇವೆ, ಹಾಗೆಯೇ ಮುಂದೆಯೂ ಇರುತ್ತೇವೆ. ಮುಂದಿನ ದಿನಗಳು ಉತ್ತಮವಾಗಿರಲಿ ಎಂದು ವಿರೇಂದ್ರ ಹೆಗ್ಗಡೆ ಹೇಳಿದ್ದಾರೆ.
