ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಹತ್ಯೆ ಮತ್ತು ಇತರ ದೌರ್ಜನ್ಯಗಳಿಗೆ ನ್ಯಾಯ ಕೋರಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ವಿವಿಧ ಸಂಘಟನೆಗಳು ಮತ್ತು ಹೋರಾಟಗಾರರು 'ನ್ಯಾಯ ಸಮಾವೇಶ'ದಲ್ಲಿ ಪಾಲ್ಗೊಂಡು, ಪ್ರಕರಣಗಳ ಮರುತನಿಖೆಗೆ  ಸರ್ಕಾರವನ್ನು ಒತ್ತಾಯಿಸಿದರು.

ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಹತ್ಯೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆಯ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಭಾರೀ ಪ್ರಮಾಣದ ಪ್ರತಿಭಟನೆ ನಡೆಯಿತು. ಈ ಪ್ರತಿಭಟನೆಯಲ್ಲಿ ಎಡಪಂಥೀಯರು, ದಲಿತ ಸಂಘಟನೆಗಳು, ವಿದ್ಯಾರ್ಥಿ ಚಳವಳಿ, ಮಹಿಳಾ ಸಂಘಟನೆಗಳು, ಯುವಜನ ಸಂಘಟನೆಗಳು ಹಾಗೂ ಮಾನವ ಹಕ್ಕು ಹೋರಾಟಗಾರರು ಜಂಟಿಯಾಗಿ ಪಾಲ್ಗೊಂಡು ಧ್ವನಿ ಎತ್ತಿದರು. ನೂರಾರು ಮಂದಿ ಪ್ರತಿಭಟನಾಕಾರರು “ನ್ಯಾಯ ಸಮಾವೇಶ” ಹೆಸರಿನಲ್ಲಿ ಸೇರಿಕೊಂಡು ಧರ್ಮಸ್ಥಳದ ದೌರ್ಜನ್ಯ ವಿರೋಧಿಸಿ ಘೋಷಣೆ ಕೂಗಿದರು.

ಪ್ರಮುಖ ಮುಖಂಡರು ಭಾಗಿ

ಪ್ರತಿಭಟನೆಯಲ್ಲಿ ಧರ್ಮಸ್ಥಳ ವಿರೋಧಿ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್, ಹಿರಿಯ ವಕೀಲ ಬಾಲನ್, ಮಾಜಿ ಸಂಸದೆ ಸುಭಾಷಿಣಿ ಅಲಿ, ಪಿಚ್ಚಳ್ಳಿ ಶ್ರೀನಿವಾಸ್, ಚಿಂತಕಿ ಲೀಲಾ ಸಂಪಿಗೆ ಸೇರಿದಂತೆ ಅನೇಕ ಪ್ರತಿಪಕ್ಷ ಚಿಂತಕರು ಮತ್ತು ಹೋರಾಟಗಾರರು ಭಾಗವಹಿಸಿದರು. ಈ ಸಂದರ್ಭದಲ್ಲಿ “ಧರ್ಮಸ್ಥಳ ದೌರ್ಜನ್ಯಗಳು: ಇತಿಹಾಸ ಮತ್ತು ವರ್ತಮಾನ” ಎಂಬ ಪುಸ್ತಕವನ್ನು ಮಾಜಿ ಸಂಸದೆ ಸುಭಾಷಿಣಿ ಅಲಿ ಅವರು ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ದೌರ್ಜನ್ಯಕ್ಕೊಳಗಾದ ಮಹಿಳೆಯರಾದ ವೇದವಲ್ಲಿ, ಪದ್ಮಾವತಿ ಅವರ ಕುಟುಂಬಸ್ಥರು ಪಾಲ್ಗೊಂಡಿದ್ದರು. ವೇದವಳ್ಳಿ ಅವರ ಸಹೋದರ ವೀರಭದ್ರಪ್ಪ, ಮಗಳು ಸೀಮಾ ಮತ್ತು ಪದ್ಮಾವತಿ ಅವರ ಸಹೋದರಿಯು ಕೂಡ ಹಾಜರಿದ್ದರು. 1957ರಲ್ಲಿ ಕುವೆಂಪು ಬರೆದಿದ್ದ ಧರ್ಮಸ್ಥಳ ಕುರಿತ ಕೃತಿ ಓದುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಬಲಿಯಾದ ಮಹಿಳೆಯರ ಕುಟುಂಬಸ್ಥರು ಕಣ್ಣೀರಿಟ್ಟರು.

ಹಿರಿಯ ವಕೀಲ ಬಾಲನ್ ಆರೋಪ

ಅತ್ಯಾ8ಚಾರ, ದೌರ್ಜನ್ಯ ಧರ್ಮಸ್ಥಳದಲ್ಲಿ ಸಾಮಾನ್ಯವಾಗಿದೆ. ಕಳೆದ ಎರಡು ತಿಂಗಳ ಮುಸುಕುದಾರಿ, ಮೂಳೆ ಅಂತ ಸುದ್ದಿಯಾಗಿದೆ. ಮುಸುಕುದಾರಿ ಆಗಿದ್ದಾಗ ಸತ್ಯ ಹೇಳ್ತಿದ್ದ, ಚಿನ್ನಯ್ಯ ಆಗಿ ಮುಖ ತೋರಿಸ್ತಿದ್ದಂತೆ ಸುಳ್ಳು ಹೇಳಲು ಶುರುವಾಗಿದೆ. ಪದ್ಮಲತ, ವೇದವಲ್ಲಿ, ಸೌಜನ್ಯ ಎಲ್ಲರ ಮೇಲೆ ದೌರ್ಜನ್ಯ ಆಯ್ತು. ಸೌಜನ್ಯ ಮನೆ ಬಿಡುವಾಗ, ಮನೆಗೆ ವಾಪಸ್ ಬರುವಾಗ ಒಳ ಉಡುಪು, ಬಟ್ಟೆ ಎಲ್ಲವೂ ಕೂಡ ಇತ್ತು. ಆದ್ರೆ ಅತ್ಯಾ*ಚಾರ ಆದ ಬಳಿಕ ಯಾವುದೇ ಒಳ ಉಡುಪು ಸಹಿತ ಯಾವುದು ಕೂಡ ಇಲ್ಲ. ಪೊಲೀಸ್, ಸಿಬಿಐ, ಡಾಕ್ಟರ್ ಎಲ್ಲರೂ ಕೂಡ ದಿಕ್ಕು ತಪ್ಪಿಸಿದ್ದಾರೆ. ಕೊಲೆ ನಡೆದಿದ್ದ ಜಾಗವೇ ಬೇರೆ, ದೇಹ ಸಿಕ್ಕಿದ್ದೇ ಬೇರೆ ಕಡೆ. ಯಾಕೆ ಅತ್ಯಾ*ಚಾರ ಆದ ಕಡೆ ತನಿಖೆ ಆಗಲಿಲ್ಲ. ಆಗ ಸಿಎಂ ಆಗಿದ್ದವರು ಸದಾನಂದ ಗೌಡ, ಗೃಹ ಸಚಿವರಾಗಿದ್ದವರು ಅಶೋಕ್ . ಆಗ ಸದಾನಂದಗೌಡ, ಅಶೋಕ್ ಗೌಡ, ಸೌಜನ್ಯ ಗೌಡ ಸಂತೋಷ್ ರಾವ್ ಅತ್ಯಾ*ಚಾರ ಮಾಡಿದ್ದು ಅಂತ ಹೇಳ್ತಾರೆ. ವಿಕಾಸ್ ಜೈನ್, ಧೀರಜ್ ಜೈನ್, ಸುರೇಶ್ ಜೈನ್ ಅವನನ್ನ ಹಿಡಿದಿದ್ದು. ಮನೋವೈದ್ಯರು ಹೇಳ್ತಾರೆ ಸಂತೋಷ್ ಅತ್ಯಾ*ಚಾರ ಮಾಡಲು ಆಗಲ್ಲ ಅಂತ. ವೀರೇಂದ್ರ ಜೈನ್ ಹೇಳ್ತಾ‌ನೆ, ಅತ್ಯಾ*ಚಾರ ಆದ ಬಳಿಕ ಅಶೋಕ್ ಗೌಡನಿಗೆ ತನಿಖೆ ಮಾಡಲು ಹೇಳಿದ್ದೇನೆ ಅಂತ. ಸಾಕ್ಷಿ ನಾಶ ಆಗುತ್ತೆ. ಮತ್ತೆ ರೀ ಇನ್ವೆಸ್ಟಿಗೇಷನ್ ಮಾಡಿ ಅಂತ. ಆದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪ್ರಮೋಷನ್ ನೀಡಲಾಗಿದೆ. ಜಡ್ಜ್‌ಗೆ ಕೇಳಿದೆ ರೇಪ್, ಮರ್ಡರ್, ಕಿಡ್ನಾಪ್ ಮಾಡೋಕೆ ಪೇಟೆಂಟ್ ತಗೊಂಡಿದಾರಾ ಅಂತ. ಪದ್ಮಲತಾ ಕೇಸ್ ಮತ್ತೆ ವಾಪಸ್ ತನಿಖೆಗೆ ಬರುತ್ತೆ. ನ್ಯಾಯ ಸಿಗೋವರೆಗೂ ಫೈಯರ್ ಉರಿಯುತ್ತೆ ಎಂದು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು.

ಮಹಿಳಾ ಸಂಘಟನೆಗಳ ಆಗ್ರಹ

ಜನವಾದಿ ಮಹಿಳಾ ಸಂಘಟನೆಯ ವಿಮಲಾ ಮಾತನಾಡಿ, “2005ರಿಂದ 2025ರವರೆಗೆ ನಡೆದಿರುವ ಎಲ್ಲ ಮಹಿಳಾ ಹತ್ಯೆಗಳು ಮತ್ತು ದೌರ್ಜನ್ಯಗಳ ಕುರಿತು ಮರುತನಿಖೆ ನಡೆಯಬೇಕು. ಸೌಜನ್ಯ, ಪದ್ಮಲತಾ, ವೇದವಲ್ಲಿ, ಆನೆಮಾವುತ ಕುಟುಂಬಕ್ಕೆ ನ್ಯಾಯ ಸಿಗಬೇಕಿದೆ. SIT ತನಿಖೆ ಇನ್ನಷ್ಟು ಕಠಿಣವಾಗಬೇಕು ಮತ್ತು ಶೀಘ್ರವಾಗಿ ವರದಿ ನೀಡಬೇಕು,” ಎಂದು ಆಗ್ರಹಿಸಿದರು.

ಸುಭಾಷಿಣಿ ಅಲಿ ಭಾಷಣ

ಮಾಜಿ ಸಂಸದೆ ಸುಭಾಷಿಣಿ ಅಲಿ ಮಾತನಾಡಿ, “ಪ್ರಜ್ವಲ್ ರೇವಣ್ಣ ವಿರುದ್ಧ ಹಾಸನದಲ್ಲಿ ಹೋರಾಟ ಮಾಡಿದ ಪರಿಣಾಮವಾಗಿ ಅವನು ಜೈಲಿಗೆ ಸೇರಿದ್ದಾನೆ. ಅದೇ ರೀತಿ ಧರ್ಮಸ್ಥಳದಲ್ಲಿಯೂ ಮನುವಾದ ಸಿಸ್ಟಮ್ ನಡೆಯುತ್ತಿದೆ. ಹಣಬಲ, ತೋಳಬಲ, ಜನಬಲದ ಆಧಾರದಲ್ಲಿ ದೌರ್ಜನ್ಯ ನಡೆಯುತ್ತಿದೆ. ದಲಿತರನ್ನು ತುಳಿದು ಅವರ ಜಮೀನು ಕಬಳಿಸಲಾಗುತ್ತಿದೆ. ಮಹಿಳೆಯರನ್ನು ಹತ್ಯೆ ಮಾಡಲಾಗುತ್ತಿದೆ. ಇದು 50–60 ವರ್ಷಗಳ ಹಿಂದಿನ ಕಥೆಯಲ್ಲ, ಇಂದಿನ ವಾಸ್ತವ. ಹೀಗಾಗಿ ಇದರ ವಿರುದ್ಧ ಹೋರಾಟ ತೀವ್ರಗೊಳ್ಳಬೇಕು,” ಎಂದು ಕಿಡಿಕಾರಿದರು.

ಅವರು ಇನ್ನೂ ಮುಂದುವರಿದು, “ಧರ್ಮಸ್ಥಳ ಇಂದು ಅಧರ್ಮದ ಕೇಂದ್ರವಾಗಿದೆ. ರಾಜ್ಯ ಸರ್ಕಾರ ಅದನ್ನು ‘ರೆಡ್ ಅಲರ್ಟ್’ ಪ್ರದೇಶವೆಂದು ಘೋಷಿಸಬೇಕು. ಇಡೀ ದೇಶದಲ್ಲಿ ಮನುವಾದಿ ಆಡಳಿತ ಜಾರಿಯಾಗುತ್ತಿದೆ. ಇದರ ವಿರುದ್ಧ ಹೋರಾಡಿ ನ್ಯಾಯ ಪಡೆಯಬೇಕು,” ಎಂದು ಹೇಳಿದರು.

ಇತರ ಹೋರಾಟಗಾರರ ಅಭಿಪ್ರಾಯ

  • ಹೆಚ್.ಟಿ. ಸಿದ್ದರಾಮೇಶ್ವರ (ಚಿಂತಕ ಮತ್ತು ಹೋರಾಟಗಾರ): “ಧರ್ಮಸ್ಥಳದಲ್ಲಿ ನಡೆಯುತ್ತಿರುವ ದೌರ್ಜನ್ಯ, ಅಧರ್ಮವೇ ಧರ್ಮಸ್ಥಳದ ನಿಜಸ್ವರೂಪ. ಸರ್ಕಾರ ಹಾಗೂ ಧರ್ಮಾಧಿಕಾರಿಗಳು ಉತ್ತರ ಕೊಡಬೇಕು. ನಮ್ಮ ಹೋರಾಟ ಉತ್ತರ ಸಿಗುವವರೆಗೂ ನಿಲ್ಲುವುದಿಲ್ಲ,” ಎಂದರು.
  • ಮೂಡ್ನಾಕೂಡು ಚಿನ್ನಸ್ವಾಮಿ: “ಧರ್ಮಸ್ಥಳ ದೇವಾಲಯವಲ್ಲ, ಚಾರಿಟಬಲ್ ಟ್ರಸ್ಟ್. ಅಲ್ಲಿ ಭಕ್ತರಿಗಿಂತ ಆದಾಯ ಮುಖ್ಯ. ಧರ್ಮಸ್ಥಳದಲ್ಲಿ ಗ್ಯಾಂಗ್ ವ್ಯವಸ್ಥೆ ಇದೆ. ಪದ್ಮಲತಾ, ವೇದವಲ್ಲಿ, ಸೌಜನ್ಯ, ಮಾವುತ ನಾರಾಯಣಗೆ ನ್ಯಾಯ ಸಿಗಲೇಬೇಕು,” ಎಂದು ಬೇಡಿಕೊಂಡರು.
  • ಮಾವಳ್ಳಿ ಶಂಕರ್ (ದಲಿತ ಮುಖಂಡ): “ಧರ್ಮಸ್ಥಳದಲ್ಲಿ ಅಟ್ಟಾಡಿಸಿ ಹೊಡೆಯುವ, ಬೆದರಿಸುವ ಪರಿಸ್ಥಿತಿ ಇದೆ. ಸೌಜನ್ಯ ಮನೆಗೆ ಭೇಟಿ ನೀಡಿದಾಗಲೂ ಬೆದರಿಕೆ ಅನುಭವಿಸಿದ್ದೇವೆ. ಜಾತಿಯ ಹೆಸರಿನಲ್ಲಿ ಮಠಾಧೀಶರು ಆಡಳಿತ ನಡೆಸುತ್ತಿದ್ದಾರೆ. ಇಂತಹ ವ್ಯವಸ್ಥೆ ಹೋಗಲೇಬೇಕು,” ಎಂದು ಹೇಳಿದರು.

ಹೋರಾಟ ಮುಂದುವರಿಯಲಿದೆ

ಪ್ರತಿಭಟನೆಯಲ್ಲಿ ಭಾಗವಹಿಸಿದ ಎಲ್ಲರೂ ಒಂದೇ ಧ್ವನಿಯಲ್ಲಿ — “ನ್ಯಾಯ ದೊರೆಯುವವರೆಗೂ ಹೋರಾಟ ಮುಂದುವರಿಯುತ್ತದೆ” ಎಂದು ಘೋಷಿಸಿದರು. ಧರ್ಮಸ್ಥಳದಲ್ಲಿ ನಡೆದಿರುವ ದೌರ್ಜನ್ಯ ಮತ್ತು ಮಹಿಳೆಯರ ಮೇಲಿನ ಹಿಂಸೆ ವಿರುದ್ಧದ ಈ ಹೋರಾಟ ಇದೀಗ ಮತ್ತಷ್ಟು ತೀವ್ರಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ.