Hattikuni village murder case: ಯಾದಗಿರಿಯ ಹತ್ತಿಕುಣಿ ಗ್ರಾಮದಲ್ಲಿ, ಪತ್ನಿಯ ಅನೈತಿಕ ಸಂಬಂಧವನ್ನು ಶಂಕಿಸಿದ ತಂದೆಯೊಬ್ಬ ತನ್ನ ಮೂವರು ಮಕ್ಕಳ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ. ಈ ಘೋರ ಕೃತ್ಯದಲ್ಲಿ ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವ ಮಗು ಗಂಭೀರವಾಗಿ ಗಾಯಗೊಂಡಿದೆ.
ಯಾದಗಿರಿ (ಸೆ.26): ಪತ್ನಿ ಮೇಲಿನ ಅನೈತಿಕ ಸಂಬಂಧದ ಶಂಕೆಯಿಂದ ಆಕ್ರೋಶಗೊಂಡಿದ್ದ ವ್ಯಕ್ತಿಯೊಬ್ಬ ತನ್ನ ಮೂವರು ಮಕ್ಕಳ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿದ್ದು, ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟು, ಓರ್ವ ಮಗು ಗಂಭೀರವಾಗಿ ಗಾಯಗೊಂಡು ಜೀವನ್ಮರಣದ ಮಧ್ಯೆ ಹೋರಾಡುತ್ತಿರುವ ಭೀಭತ್ಸ ಘಟನೆ ಯಾದಗಿರಿ ಸಮೀಪದ ಹತ್ತಿಕುಣಿ ಗ್ರಾಮದಲ್ಲಿ ನಡೆದಿದೆ.
ಹತ್ತಿಕುಣಿ ನಿವಾಸಿ ಶರಣಪ್ಪ ದುಗನೂರ ಹತ್ಯೆ ಮಾಡಿದ ತಂದೆ. 4 ವರ್ಷದ ಮಗಳು ಸ್ವಾನಿ ಮತ್ತು 3 ವರ್ಷದ ಮಗ ಭಾರ್ಗವ ಎಂಬ ಮಕ್ಕಳು ಹತ್ಯೆಗೀಡಾದವರು. 8 ವರ್ಷದ ಮಗ ಹೇಮಂತ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಕ್ಕಳ ಕೊಲೆಗಳು ನಡೆದಿವೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಮಗಳನ್ನ ತವರುಮನೆಗೆ ಕರೆದೊಯ್ದಿದ್ದಕ್ಕೆ ಅತ್ತೆಯನ್ನೇ ಕೊಂದ ಅಳಿಯ!
ಪತ್ನಿ ಶೌಚಕ್ಕೆ ಹೋದಾಗ ಮಕ್ಕಳ ಕೊಲೆ!
ಗುರುವಾರ ಬೆಳಗ್ಗೆ ಕೊಲೆಗಡುಕ ಶರಣಪ್ಪನ ಹೆಂಡತಿ ನಿಸರ್ಗದ ಕರೆಗೆ ಹೊರಗೆ (ಶೌಚಕ್ಕೆ) ಹೋದಾಗ, ಶರಣಪ್ಪ ಕೊಡಲಿಯಿಂದ ಮಕ್ಕಳ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕೊಲೆಗೈದು ಅಲ್ಲಿಂದ ಪರಾರಿಯಾಗಿದ್ದ. ನಂತರ ಈತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಎಸ್ಪಿ ಪೃಥ್ವಿಕ್ ಶಂಕರ್ ಹಾಗೂ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಹಣಮಂತ ಬಂಕಲಗಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಭಯಾನಕ ಘಟನೆಯಿಂದ ಹತ್ತಿಕುಣಿ ಗ್ರಾಮಸ್ಥರು ನಲುಗಿ, ಕಣ್ಣೀರು ಹಾಕುತ್ತಿದ್ದ ದೃಶ್ಯ ಮನಕುಲುಕುವಂತೆ ಮಾಡಿತ್ತು.
